ಶಿವಮೊಗ್ಗ(www.thenewzmirror.com): ಮಲೆನಾಡಿನಲ್ಲಿ ಮಳೆ ಮುಂದುವರೆದಿದ್ದು,ಲಿಂಗನಮಕ್ಕಿ ಜಲಾಶಯದಿಂದ ಶರಾವತಿ ನದಿಗೆ ನೀರು ಬಿಡುತ್ತಿರುವುದರಿಂದ ವಿಶ್ವವಿಖ್ಯಾತ ಜೋಗ ಜಲಪಾತಕ್ಕೆ ಕಳೆ ಹೆಚ್ಚಾಗಿದ್ದು, ಜಲಪಾತ ಹಾಲ್ನೊರೆಯಂತೆ ದುಮ್ಮಿಕ್ಕುತ್ತಾ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.
ಕಳೆದ ಒಂದು ವಾರದಿಂದ ಶರಾವತಿ ಕೊಳ್ಳದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಲಿಂಗನಮಕ್ಕಿ ಜಲಾಶಯಕ್ಕೆ ಒಳ ಹರಿವು ಹೆಚ್ಚಾಗಿದೆ. ಕಳೆದ 24 ಗಂಟೆಯಲ್ಲಿ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ 0.40 ಅಡಿ ಏರಿಕೆಯಾಗಿದೆ. 1819 ಅಡಿ ಗರಿಷ್ಠ ನೀರಿನ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ ನೀರಿನ ಮಟ್ಟ 1817.70 ಅಡಿಯಷ್ಟಿದ್ದು,47 ಸಾವಿರ ಕ್ಯೂಸೆಕ್ ಒಳಹರಿವಿದೆ.ಜಲಾಶಯದ ಭದ್ರತಾ ದೃಷ್ಟಿಯಿಂದ ಮುಂಜಾಗೃತಾ ಕ್ರಮವಾಗಿ ಜಲಾಶಯದ ಎಲ್ಲ 11 ರೇಡಿಯಲ್ ಗೇಟುಗಳನ್ನು ಮೇಲೆತ್ತಿ 32,138 ಕ್ಯೂಸೆಕ್ ನೀರನ್ನು ಹೊರಗೆ ಬಿಡಲಾಗುತ್ತಿದೆ.
ಒಂದು ಕಡೆ ನಿರಂತರವಾಗಿ ಸುರಿಯುತ್ತಿರುವ ಮಳೆ ಮತ್ತೊಂದು ಕಡೆ ಲಿಂಗನಮಕ್ಕಿ ಜಲಾಶಯದಿಂದ ಭಾರಿ ಪ್ರಮಾಣದ ನೀರು ಹೊರಗೆ ಬಿಡುತ್ತಿರುವುದರಿಂದ ಜೋಗ ಜಲಪಾತದ ಎಲ್ಲ ಜಲಧಾರೆಗಳು ಮೈದುಂಬಿ ಧುಮ್ಮಿಕ್ಕುತ್ತಿವೆ. ಹಾಲ್ನೊರೆಯಂತೆ ದುಮ್ಮಿಕ್ಕುತ್ತಾ ಪ್ರವಾಸಿಗರನ್ನ ಕೈಬೀಸಿ ಕರೆಯುತ್ತಿದೆ.







