ಬೆಂಗಳೂರು(www.thenewzmirror.com):ಉತ್ತಮ ಶಿಕ್ಷಣ ಆಯಾಯ ಊರಿನಲ್ಲಿಯೇ ದೊರೆಯಬೇಕು ಅದಕ್ಕಾಗಿ ಗ್ರಾಮೀಣ ಭಾಗದಲ್ಲಿ ಮೂರು ಪಂಚಾಯತಿಗಳು ಸೇರಿದಂತೆ ಒಂದು ಕೆಪಿಎಸ್ ಶಾಲೆ ನಿರ್ಮಾಣ ಮಾಡಲಾಗುತ್ತದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಕೆಪಿಸಿಸಿ ಕಚೇರಿಯ ಭಾರತ ಜೋಡೋ ಸಭಾಂಗಣದಲ್ಲಿ ಶುಕ್ರವಾರ ನಡೆದ ಶಿಕ್ಷಕರ ದಿನ ಕಾರ್ಯಕ್ರಮದಲ್ಲಿ ಶಿಕ್ಷಕರನ್ನು ಸನ್ಮಾನಿಸಿ ಮಾತನಾಡಿದ ಅವರು,”ಮುಂದಿನ ಸಚಿವ ಸಂಪುಟದಲ್ಲಿ ಸಿಎಸ್ ಆರ್ ಅನುದಾನದಿಂದ ಶಾಲೆಗಳ ನಿರ್ಮಾಣದ ಬಗ್ಗೆ ಮಹತ್ವದ ತೀರ್ಮಾನ ಮಾಡಲಾಗುವುದು. ಯಾರು ಶಾಲೆ ನಿರ್ಮಾಣ ಮಾಡುತ್ತಾರೋ ಅವರ ಕಂಪೆನಿಯ ಹೆಸರನ್ನೇ ಇಟ್ಟುಕೊಳ್ಳಬಹುದು ಎಂದು ಹೇಳಿದ್ದೇವೆ. ಆದರೆ ಅತ್ಯುತ್ತಮ ಕಟ್ಟಡ ನಿರ್ಮಾಣ ಮಾಡಬೇಕು ಹಾಗೂ ನಗರ ಮಾದರಿಯಲ್ಲಿ ಸಿಬಿಎಸ್ ಇ ಶಿಕ್ಷಣ ದೊರೆಯಬೇಕು ಎಂಬುದು ನಮ್ಮ ಆಶಯ. ಈಗಾಗಲೇ ಒಂದಷ್ಟು ಶಾಲೆಗಳು ಪ್ರಾರಂಭವಾಗಿವೆ. ಸುಮಾರು 2 ಸಾವಿರ ಶಾಲೆ ನಿರ್ಮಾಣ ನಮ್ಮ ಗುರಿ” ಎಂದರು.
ನಮ್ಮ ರಾಜ್ಯದಲ್ಲಿ 7,800 ಕೋಟಿಯಷ್ಟು ಹಣವನ್ನು ಸಿಎಸ್ ಆರ್ ಹಣ ಲಭ್ಯವಿದೆ ಎಂದು ವರದಿಗಳು ಹೇಳುತ್ತವೆ. ಒಂದಷ್ಟು ಜನ ಉದ್ಯಮಿಗಳು ಇನ್ನೂ ಮನಸು ಮಾಡಿಲ್ಲ. ನನ್ನ ಕ್ಷೇತ್ರದಲ್ಲಿ ಕೆಪಿಎಸ್ ಶಾಲೆಗಳ ವಿಚಾರದಲ್ಲಿ ಅತ್ಯುತ್ತಮ ಕೆಲಸವಾಗಿದೆ. ನನ್ನ ಕ್ಷೇತ್ರದಲ್ಲಿ ಟೊಯೋಟಾ ಕಂಪೆನಿಯವರು ತಲಾ 10 ಕೋಟಿ ವೆಚ್ಚದಲ್ಲಿ 7 ಕೆಪಿಎಸ್ ಶಾಲೆ ನಿರ್ಮಾಣ ಮಾಡುತ್ತಿದ್ದಾರೆ ಎಂದರು.
“ಉತ್ತಮ ಶಿಕ್ಷಣ ಆಯಾಯ ಊರಿನಲ್ಲಿಯೇ ದೊರೆಯಬೇಕು. ಇಲ್ಲದಿದ್ದರೆ ವಲಸೆ ತಡೆಯಲು ಆಗುವುದಿಲ್ಲ. ನನ್ನನ್ನು ಶಿಕ್ಷಣಕ್ಕಾಗಿ ಬೆಂಗಳೂರಿಗೆ ನಮ್ಮ ತಂದೆ ತಾಯಿ ಕಳಿಸಿದರು. ನಾನು ಮರಳಿ ಊರಿಗೆ ಹೋಗಲೇ ಇಲ್ಲ. ಅದಕ್ಕೆ ಗ್ರಾಮೀಣ ಭಾಗದಲ್ಲಿ ಮೂರು ಪಂಚಾಯತಿಗಳು ಸೇರಿದಂತೆ ಒಂದು ಕೆಪಿಎಸ್ ಶಾಲೆ ನಿರ್ಮಾಣ ಮಾಡಲಾಗುತ್ತದೆ. ನಾನು ನಮ್ಮ ಊರಿನಲ್ಲಿ ಮೂರು ಶಾಲೆಗಳನ್ನು ದತ್ತು ತೆಗೆದುಕೋ ಎಂದು ಮಗಳಿಗೆ ಸೂಚನೆ ನೀಡಿದ್ದೇನೆ” ಎಂದರು.
“ರಾಜೀವ್ ಗಾಂಧಿ ಅವರು ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತಂದು ದೇಶದ ಶೈಕ್ಷಣಿಕ ಬೆಳವಣಿಗೆಗೆ ಸಾಕಷ್ಟು ಕೊಡುಗೆ ನೀಡಿದರು. ‘ಆಪರೇಷನ್ ಬ್ಲಾಕ್’ ಬೋರ್ಡ್ ಅಭಿಯಾನದ ಮೂಲಕ ಶಿಕ್ಷಣ ಕ್ರಾಂತಿ ಮಾಡಿದರು. ಅನೇಕ ರಾಜ್ಯಗಳು ಶೇ.30 ರಷ್ಟು ಹಣವನ್ನು ಶಿಕ್ಷಣಕ್ಕೆ ವೆಚ್ಚ ಮಾಡುತ್ತಿವೆ” ಎಂದರು.
ನಾನು ರಾಜಕಾರಣಿಯಾದರೂ ಶಿಕ್ಷಣ ಪ್ರೇಮಿ:
“ನಾನು ರಾಜಕಾರಣಿ ಇರಬಹುದು, ಜೊತೆಗೆ ಶಿಕ್ಷಣ ಪ್ರೇಮಿ. ನಾನು ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಣದ ಕಡೆಗೆ ಹೆಚ್ಚು ಗಮನ ಹರಿಸಲಿಲ್ಲ. ಓದುವಾಗಲೇ ರಾಜಕೀಯದ ಕಡೆಗೆ ಆಕರ್ಷಿತನಾದೆ. ನಾನು ಚುನಾವಣೆಯಲ್ಲಿ ಗೆದ್ದು ವಿಧಾನಸಭೆಗೆ ಬಂಗಾರಪ್ಪನವರು, ಕೆ.ಎಚ್.ರಂಗನಾಥರು, ವೀರಪ್ಪ ಮೊಯಿಲಿ, ರಾಮಕೃಷ್ಣ ಹೆಗಡೆ ಅವರುಗಳ ಭಾಷಣ, ವಿಚಾರಧಾರೆ ನೋಡಿದ ನಂತರ ನಾನು ಶಿಕ್ಷಣಕ್ಕೆ ಆದ್ಯತೆ ನೀಡಲಿಲ್ಲ ಎಂದು ಅರಿವಾಯಿತು. 47ನೇ ವಯಸ್ಸಿನಲ್ಲಿ ಪದವಿ ಮಾಡಿದೆ. ನಾನು ಯಾವುದೇ ಸಚಿವನಾದಾಗ ಆಗದ ಸಂತೋಷ ಪದವಿ ಪ್ರಮಾಣ ಪತ್ರ ಪಡೆದಾಗ ಆಯಿತು” ಎಂದರು.
ಕಲಿಯುಗದಲ್ಲಿ ವಂದಿಸಿ ಕಲಿಸಬೇಕಿದೆ:
“ತ್ರೇತಾಯುಗದಲ್ಲಿ ಗುರು ಶಿಷ್ಯನಿಗೆ ಜಂಗಿಸಿ ವಿದ್ಯೆ ಕಲಿಸಿದರೆ ಮಹಾ ಪ್ರಸಾದವೆಂದನಯ್ಯ, ದ್ವಾಪರದಲ್ಲಿ ಶಿಷ್ಯನಿಗೆ ದಂಡಿಸಿ ವಿದ್ಯೆ ಕಲಿಸಿದ, ಕಲಿಯುಗದಲ್ಲಿ ವಂದಿಸಿ ವಿದ್ಯೆ ಕಲಿಸಬೇಕಾಗಿದೆ. ಇತ್ತೀಚೆಗೆ ನಮ್ಮ ಶಾಲೆಯಲ್ಲಿ ಓದುವ ಮಗುವಿನ ತಾಯಿಯೊಬ್ಬರು ತಮ್ಮ ಮಗುವಿಗೆ ಸರಿಯಾಗಿ ಓದುತ್ತಿಲ್ಲ ಮನೆ ಬಿಟ್ಟು ಹೋಗು ಎಂದಿದ್ದಾರೆ. ಅಷ್ಟಕ್ಕೆ ಶಾಲೆಯಿಂದ ಹೊರಟ ಮಗು ಮನೆಗೆ ಹೋಗಿಲ್ಲ. ಆನಂತರ ಕೇಳಿದಾಗ ನೀನು ಮನೆ ಬಿಟ್ಟು ಹೋಗು ಎಂದಿದ್ದಕ್ಕೆ ಹೋದೆ ಎಂದಿದೆ. ಮಕ್ಕಳು ಸೂಕ್ಷ್ಮವಾಗಿ ಬೆಳೆಯುತ್ತಿದ್ದಾರೆ” ಎಂದರು.
ಶಿಕ್ಷಕರ ಕ್ಷೇತ್ರದ ಚುನಾವಣೆ ಮೇಲೆ ಈಗಿನಿಂದಲೇ ಗಮನ ಹರಿಸಿ:
“ಶಿಕ್ಷಣ ಕ್ಷೇತ್ರದ ಪರಿಷತ್ ಚುನಾವಣೆ ಮುಂದಿನ ವರ್ಷ ನಡೆಯಲಿದ್ದು, ಈ ತಿಂಗಳ ಒಳಗಾಗಿ ಅರ್ಜಿ ಕರೆಯಲಾಗುವುದು. ನಂತರ ಅಭ್ಯರ್ಥಿ ಆಯ್ಕೆ ಮಾಡಲಾಗುವುದು. ಜಿ.ಸಿ.ಚಂದ್ರಶೇಖರ್ ಅವರಿಗೆ ಇದರ ಜವಾಬ್ದಾರಿ ನೀಡಲಾಗಿದೆ. ನಾಲ್ಕು ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು ಇದರ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಇತ್ತೀಚೆಗೆ ಪುಟ್ಟಣ್ಣ ಸೇರಿದಂತೆ ಅನೇಕರು ಗೆದ್ದಿದ್ದಾರೆ” ಎಂದರು.




