ಎಸ್ಐಟಿಗೆ ಚುನಾವಣಾ ಆಯೋಗದಿಂದ ಸಹಕಾರ ಸಿಗುತ್ತಿಲ್ಲ: ಡಿಕೆ ಶಿವಕುಮಾರ್

RELATED POSTS

ಬೆಂಗಳೂರು(www.thenewzmirror.com):ಆಳಂದದಲ್ಲಿ ಮತಗಳ್ಳತನ ಆರೋಪದ ದೂರಿನನ್ವಯ ನಮ್ಮ ಸರ್ಕಾರ ಎಸ್ಐಟಿ ರಚಿಸಿದ್ದು, ಆ ಎಸ್ ಐಟಿ ತನಿಖೆಗೂ ಚುನಾವಣಾ ಆಯೋಗ ಅಗತ್ಯ ಮಾಹಿತಿ ನೀಡದೇ ಸಹಕಾರ ನೀಡುತ್ತಿಲ್ಲ. ಬಿಜೆಪಿ ಏಜೆಂಟರಂತೆ ಆಯೋಗ ಕೆಲಸ ಮಾಡುತ್ತಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಆರೋಪಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಆಳಂದ ಕ್ಷೇತ್ರದ  ಆಳಂದದಲ್ಲಿ ಬೆಳಗಿನ ಜಾವ ನಾಲ್ಕು ಗಂಟೆಗೆ ಮತದಾರಪಟ್ಟಿಯಿಂದ ಹೆಸರು ಕೈ ಬಿಡುವಂತೆ ನಕಲಿ ಅರ್ಜಿ ಸಲ್ಲಿಸಲಾಗಿತ್ತು. ಕೇವಲ 17 ನಿಮಿಷಗಳಲ್ಲಿ 14 ಮತಗಳನ್ನು ಬೆಳಗಿನ ಜಾವದಲ್ಲಿ ತೆಗೆದುಹಾಕಲಾಗಿರುತ್ತದೆ. ಈ ರೀತಿ 6 ಸಾವಿರ ಮತ ತೆಗೆಯಲು ಪ್ರಯತ್ನಿಸುತ್ತಾರೆ. ಈ ವಿಚಾರವಾಗಿ ಎಸ್ ಐಟಿ ತನಿಖೆ ನಡೆಯುತ್ತಿದ್ದು, ಈ ತನಿಖೆ ಮೂಲಕ ಹೊರ ರಾಜ್ಯದವರು ಹಾಗೂ ಅವರ ದೂರವಾಣಿ ಸಂಖ್ಯೆ ಮೂಲಕ ಮತಗಳನ್ನು ತೆಗೆಸಲು ಷಡ್ಯಂತ್ರ ಮಾಡಲಾಗಿತ್ತು ಎನ್ನುವುದು ತಿಳಿದುಬಂದಿದೆ. ಆಯೋಗ ಸಹಕಾರ ನೀಡದೇ ಇದ್ದರೂ ಈ ಪ್ರಕರಣದ ತನಿಖಾ ವರದಿ ಶೀಘ್ರದಲ್ಲೇ ಬರಲಿದೆ ಎಂದರು.

ಮಾತೆತ್ತಿದರೆ ಬಿಜೆಪಿ ನಾಯಕರು ಅಫಿಡವಿಟ್ ಸಲ್ಲಿಸಿಲ್ಲಿ ಯಾಕೆ ಎಂದು ಕೇಳುತ್ತಿದ್ದಾರೆ ಆಯೋಗದವರು ಮೊದಲು ದಾಖಲೆ ನೀಡಲಿ. ಆಮೇಲೆ ನಾವು ಅಫಿಡವಿಟ್ ಸಲ್ಲಿಸುತ್ತೇವೆ. ಮಹದೇವಪುರದಲ್ಲಿ ನಡೆದಿರುವ ಅಕ್ರಮದ ಬಗ್ಗೆ ಆರೋಪ ಮಾಡಿದ ಬಳಿಕ ಕೆಲ ಮಾಧ್ಯಮದವರು ಅದೇ ವಿಳಾಸಕ್ಕೆ ಹೋಗಿ ಪರಿಶೀಲನೆ ನಡೆಸಿದರು. ಒಂದು ಕೊಠಡಿಯಲ್ಲಿ 84 ಮತಗಳಿರುವುದು ಅವರ ವರದಿಯಲ್ಲೂ ಸಾಬೀತಾಯಿತು. ಮತ್ತೊಂದು ಬಾರ್ ನಲ್ಲಿ 56 ಮತಗಳಿದ್ದವು. ಈ ವಿಚಾರವಾಗಿ ಚುನಾವಣಾ ಆಯೋಗ ಯಾವ ಕ್ರಮ ಕೈಗೊಂಡಿದೆ ಎಂದು ವೋಟ್ ಚೋರಿ ಆರೋಪವನ್ನು ಸಮರ್ಥಿಸಿಕೊಂಡರು.

ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಹಾಗೂ ಮತದಾನದ ಹಕ್ಕು ಕಾಪಾಡುವುದು ನಮ್ಮ ಉದ್ದೇಶ. ನಾವು ಹೋರಾಟ ಆರಂಭಿಸಿದ ನಂತರ ಚುನಾವಣಾ ಆಯೋಗ ಎಫ್ಐಆರ್ ಮಾಡುವುದಾಗಿ ಹೇಳುತ್ತಿದೆ. ನಾವು ಈ ವಿಚಾರವಾಗಿ ಯಾಕೆ ನ್ಯಾಯಾಲಯದ ಮೆಟ್ಟಿಲೇರಬೇಕು? ಆಯೋಗ ಸಂವಿಧಾನಿಕ ಸಂಸ್ಥೆ” ಎಂದು ಕೋರ್ಟ್ ಗೆ ಹೋಗದ ನಿರ್ಧಾರವನ್ನೂ ಸಮರ್ಥಿಸಿಕೊಂಡರು.

ನಾನು ನಮ್ಮ ರಾಜ್ಯದಲ್ಲಿ 15 ಲಕ್ಷ ಮತದಾರರನ್ನು ಹೇಗೆ ಕಾಪಾಡಿಕೊಂಡಿದ್ದೇವೆ ಎಂದು ನನಗೆ ಮಾತ್ರ ಗೊತ್ತಿದೆ. ಆ ವಿಚಾರವನ್ನು ಬಹಿರಂಗಪಡಿಸುವುದಿಲ್ಲ, ಬಹಿರಂಗಪಡಿಸಿದರೆ ದೊಡ್ಡ ಸುದ್ದಿಯಾಗುತ್ತದೆ. ಇದೆಲ್ಲವನ್ನು ನಿಯಂತ್ರಿಸಲು ಎಲ್ಲಾ ಬೂತ್ ಗಳಲ್ಲಿ ಬಿಎಲ್ಎಗಳನ್ನು ನೇಮಿಸುತ್ತಿದ್ದೇವೆ ಎಂದು ತಿಳಿಸಿದರು.

ಸಂವಿಧಾನದಲ್ಲಿ ಗೌಪ್ಯ ಮತದಾನ ಎಂದು ಇರುವಾಗ ಮತಗಟ್ಟೆಗಳ ಸಿಸಿಟಿವಿ ದೃಶ್ಯಗಳನ್ನು ನೀಡಬೇಕು ಎಂದು ರಾಹುಲ್ ಗಾಂಧಿ ಅವರು ಹೇಗೆ ಕೇಳುತ್ತಾರೆ ಎಂದು ಕೇಳಿದಾಗ, “ಮತದಾರ ಯಾರಿಗೆ ಮತಹಾಕಿದ ಎಂದು ತೋರಿಸದಿದ್ದರೂ, ಮತಗಟ್ಟೆಯೊಳಗೆ ಎಷ್ಟು ಮತದಾರರು ಹೋದರು, ಯಾವ ಸಮಯದಲ್ಲಿ ಹೋದರು ಎಂಬ ಮಾಹಿತಿ ನೀಡಲು ಸಮಸ್ಯೆ ಏನು? ಮಹಾರಾಷ್ಟ್ರದಲ್ಲಿ ಕೊನೆ ಒಂದು ಗಂಟೆ ಅವಧಿಯಲ್ಲಿ ಲಕ್ಷಾಂತರ ಮತ ಚಲಾವಣೆಯಾಗಿದೆ. ಈ ಮತಗಳನ್ನು ಯಾರು ಹಾಕಿದರು ಎಂಬುದು ದಾಖಲೆ ಬೇಕಲ್ಲವೇ? ಇದು ದೇಶದ ಮುಂದಿರುವ ಸವಾಲು” ಎಂದರು.

ಮಹದೇವಪುರ ಕ್ಷೇತ್ರದಲ್ಲಿನ ಅಕ್ರಮದ ಬಗ್ಗೆ ತನಿಖೆ ಮಾಡಿಸುತ್ತೀರಾ ಎಂದು ಕೇಳಿದಾಗ, “ಈ ತನಿಖೆಯನ್ನು ಸರ್ಕಾರವೇ ಮಾಡಬೇಕಿಲ್ಲ. ಚುನಾವಣೆ ಪ್ರಕ್ರಿಯೆ ವೇಳೆ ಸಂಪೂರ್ಣ ನಿಯಂತ್ರಣ ಚುನಾವಣಾ ಆಯೋಗದ ಕೈಯಲ್ಲಿರುತ್ತದೆ. ಹೀಗಾಗಿ ರಾಜಕೀಯ ಪಕ್ಷವಾಗಿ ನಾವೇ ತನಿಖೆ ಮಾಡಿ ಅಕ್ರಮಗಳನ್ನು ದಾಖಲೆ ಸಮೇತ ಬಹಿರಂಗಪಡಿಸಿದ್ದೇವೆ. ಮಾಧ್ಯಮಗಳು ಕೂಡ ತನಿಖೆ ಮಾಡಿ ಈ ಆರೋಪ ನಿಜ ಎಂದು ವರದಿ ಮಾಡಿವೆ” ಎಂದು ತಿಳಿಸಿದರು.

ಒಂದು ವಾರದಲ್ಲಿ ನಿಗಮ ಮಂಡಳಿ ಸದಸ್ಯರ ನೇಮಕ:

ಕಾರ್ಯಕರ್ತರಿಗೆ ನಿಗಮ ಮಂಡಳಿ ಸದಸ್ಯತ್ವ ನೀಡಿಲ್ಲ ಯಾಕೆ ಎಂದು ಕೇಳಿದಾಗ, “ಈಗಾಗಲೇ 3 ಸಾವಿರ ಕಾರ್ಯಕರ್ತರಿಗೆ ಅಧಿಕಾರ ನೀಡಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 15 ಜನರಿಗೆ ಗ್ಯಾರಂಟಿ ಸಮಿತಿ ಜವಾಬ್ದಾರಿ ನೀಡಿದ್ದೇವೆ. ಪ್ರತಿ ಕ್ಷೇತ್ರಗಳಲ್ಲಿ 60 ಜನರನ್ನು ನಾಮನಿರ್ದೇಶನ ಮಾಡಿದ್ದೇವೆ. ರಾಜ್ಯ ಮಟ್ಟದಲ್ಲಿ ನಿಗಮ ಮಂಡಳಿಗಳಲ್ಲಿ 600 ಸ್ಥಾನಗಳಿವೆ. ಇವುಗಳನ್ನು ಇನ್ನೊಂದು ವಾರದಲ್ಲಿ ಪ್ರಕಟಿಸುತ್ತೇವೆ” ಎಂದು ತಿಳಿಸಿದರು.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist