ಬೆಂಗಳೂರು(www.thenewzmirror.com):ಕರ್ನಾಟಕ ಹಾಲು ಮಹಾಮಂಡಳಿ (KMF) ನೀಡಿದ ದೂರಿನ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿರುವ ವೈದ್ಯೆ ಡಾ. ಶರಣ್ಯ ಪದ್ಮಾ ಅವರು ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ. ನಂದಿನಿ ಉತ್ಪನ್ನಗಳ ಬಗ್ಗೆ ತಾವು ನೀಡಿದ್ದ ಹೇಳಿಕೆಗೆ ಬದ್ಧರಾಗಿದ್ದು, ಯಾವುದೇ ಕಾನೂನು ಕ್ರಮಕ್ಕೆ ಹೆದರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ಇತ್ತೀಚೆಗೆ ಡಾ. ಶರಣ್ಯ ಅವರು ನಂದಿನಿಯ ಫ್ಲೇವರ್ಡ್ ಮಿಲ್ಕ್ ಮತ್ತು ಬನ್ ಉತ್ಪನ್ನಗಳಲ್ಲಿ ಬಳಸುವ ಘಟಕಾಂಶಗಳು ಆರೋಗ್ಯಕ್ಕೆ ಪೂರಕವಲ್ಲ ಎಂದು ವಿಡಿಯೋ ಮಾಡಿದ್ದರು. ಇದನ್ನು ಸಂಸ್ಥೆಯ ಮಾನಹಾನಿ ಎಂದು ಪರಿಗಣಿಸಿದ KMF ಅಧಿಕಾರಿಗಳು ಬೆಂಗಳೂರಿನ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ವೈದ್ಯೆಯ ಮರುಪ್ರತಿಕ್ರಿಯೆ:
ದೂರು ದಾಖಲಾದ ಬೆನ್ನಲ್ಲೇ ವಿಡಿಯೋ ಬಿಡುಗಡೆ ಮಾಡಿದ ಡಾ. ಶರಣ್ಯ ಅವರು, “ನಾನು ಸಮಾಜದ ಮತ್ತು ಮುಂದಿನ ಪೀಳಿಗೆಯ ಆರೋಗ್ಯದ ಹಿತದೃಷ್ಟಿಯಿಂದ ಮಾತನಾಡುತ್ತಿದ್ದೇನೆ. ಸಂಸ್ಕರಿಸಿದ ಆಹಾರಗಳ ಕುರಿತು ಜನರಲ್ಲಿ ಅರಿವು ಮೂಡಿಸುವುದು ನನ್ನ ಉದ್ದೇಶ. ಕೇವಲ ಒಂದು ಕಂಪನಿಯನ್ನು ಗುರಿ ಮಾಡುವುದು ನನ್ನ ಉದ್ದೇಶವಲ್ಲ,” ಎಂದು ಸ್ಪಷ್ಟಪಡಿಸಿದ್ದಾರೆ.
“ನನ್ನ ವಿರುದ್ಧ FIR ದಾಖಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಪೊಲೀಸರು ಕೇವಲ ದೂರು ಸ್ವೀಕರಿಸಿರುವುದಾಗಿ ತಿಳಿಸಿದ್ದಾರೆ. ಒಂದು ವೇಳೆ FIR ದಾಖಲಾದರೂ ನಾನು ಕಾನೂನುಬದ್ಧವಾಗಿ ಎದುರಿಸಲು ಸಿದ್ಧಳಿದ್ದೇನೆ. ಮಕ್ಕಳ ಆರೋಗ್ಯಕ್ಕಾಗಿ ಧ್ವನಿ ಎತ್ತಲು ಯಾರ ಅನುಮತಿಯೂ ಬೇಕಿಲ್ಲ” ಎಂದು ಅವರು ಕಿಡಿಕಾರಿದ್ದಾರೆ.
KMF ನಿಲುವು:
ನಂದಿನಿ ಉತ್ಪನ್ನಗಳು ದಶಕಗಳಿಂದ ಜನರ ನಂಬಿಕೆ ಗಳಿಸಿವೆ ಮತ್ತು FSSAI ಮಾನದಂಡಗಳಿಗೆ ಅನುಗುಣವಾಗಿವೆ. ಯಾವುದೇ ಆಧಾರವಿಲ್ಲದೆ ಉತ್ಪನ್ನಗಳನ್ನು ‘ವಿಷಕಾರಿ’ ಎಂದು ಕರೆದಿರುವುದು ಕಾನೂನು ಬಾಹಿರ ಎಂದು KMF ತನ್ನ ದೂರಿನಲ್ಲಿ ಉಲ್ಲೇಖಿಸಿದೆ.
ಸದ್ಯ ಈ ಪ್ರಕರಣವು ಸಾರ್ವಜನಿಕ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದ್ದು, ಸಂಸ್ಕರಿಸಿದ ಆಹಾರಗಳ ಸುರಕ್ಷತೆಯ ಬಗ್ಗೆ ಪರ-ವಿರೋಧದ ಚರ್ಚೆಗಳು ಆರಂಭವಾಗಿವೆ.







