ಗೃಹಲಕ್ಷ್ಮಿ ಹಣಕ್ಕೆ ವಿರೋಧವಿಲ್ಲ, ಆದ್ರೆ ಸಾಲದ ಸುಳಿಗೆ ರಾಜ್ಯವನ್ನ ತಳ್ಳಬೇಡಿ”: ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ

RELATED POSTS

ಮೈಸೂರು(www.thenewzmirror.com): ರಾಜ್ಯ ಸರ್ಕಾರದ ಪ್ರಸಕ್ತ ಸಾಲಿನ ಬಜೆಟ್ ಕೇವಲ ಅಂಕಿ-ಅಂಶಗಳ ಕಸರತ್ತಾಗಿದ್ದು, ಜನಸಾಮಾನ್ಯರ ಆಶೋತ್ತರಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಾಲೂಕಿನ ಮಾದಹಳ್ಳಿಯ ಶ್ರೀ ಉಕ್ಕಿನಕಂತೆ ಮಠದಲ್ಲಿ ನಡೆದ ಶ್ರೀ ಗುರು ಬೂದಿಸ್ವಾಮಿಗಳ ಆರಾಧನಾ ಮಹೋತ್ಸವ ಹಾಗೂ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು,”ಬಜೆಟ್ ಪುಸ್ತಕದಲ್ಲಿ ಬರೀ ಅಂಕಿ-ಅಂಶಗಳನ್ನು ಮುದ್ರಿಸಿದರೆ ಪ್ರಯೋಜನವಿಲ್ಲ. ರಾಜ್ಯದ ಒಟ್ಟು ಸಾಲ ಈಗ 8.24 ಲಕ್ಷ ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ. ಈ ವರ್ಷ ಮತ್ತೆ 1.32 ಲಕ್ಷ ಕೋಟಿ ರೂ. ಸಾಲ ಪಡೆಯಲಾಗುತ್ತಿದೆ. ಈ ಹಣ ಎಲ್ಲಿಗೆ ಹೋಗುತ್ತಿದೆ? ಯಾವುದೇ ಬಂಡವಾಳ ವೆಚ್ಚವಾಗುತ್ತಿಲ್ಲ, ಹೊಸ ಆಸ್ತಿಗಳೂ ಸೃಷ್ಟಿಯಾಗುತ್ತಿಲ್ಲ” ಎಂದು ಪ್ರಶ್ನಿಸಿದರು.

ಹೆಬ್ಬಾಳ್ಕರ್ ಮೂಲಕ ಸಿಎಂಗೆ ಸಂದೇಶ:

ವೇದಿಕೆಯಲ್ಲಿದ್ದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರತ್ತ ತಿರುಗಿ ಮಾತನಾಡಿದ ಕುಮಾರಸ್ವಾಮಿ, “ನನ್ನ ಸಹೋದರಿ ಲಕ್ಷ್ಮಿ ಅವರಿಗೆ ಒಂದು ಮಾತು ಹೇಳಲು ಬಯಸುತ್ತೇನೆ. ಗೃಹಲಕ್ಷ್ಮಿ ಯೋಜನೆಯಡಿ ಮಹಿಳೆಯರಿಗೆ ನೀಡುವ 2000 ರೂಪಾಯಿಗಳಿಗೆ ನನ್ನ ವಿರೋಧವಿಲ್ಲ. ಆದರೆ ಈ ಹಣ ಎಲ್ಲಿಂದ ಬರುತ್ತಿದೆ? ರಾಜ್ಯದ ಆರ್ಥಿಕ ಪರಿಸ್ಥಿತಿ ದಯನೀಯ ಹಂತಕ್ಕೆ ತಲುಪುವ ಮುನ್ನ ನಿಮ್ಮ ಮುಖ್ಯಮಂತ್ರಿಗಳಿಗೆ ಸ್ವಲ್ಪ ತಿಳಿವಳಿಕೆ ಹೇಳಿ. ಮುಂದಿನ ದಿನಗಳು ಕರಾಳವಾಗಿರಲಿವೆ, ಎಚ್ಚರಿಕೆಯಿಂದ ನಿರ್ಧಾರ ತಗೊಳ್ಳಿ ಎಂದು ಅವರಿಗೆ ಎಚ್ಚರಿಸಿ” ಎಂದರು.

ನನ್ನ ಅವಧಿಯಲ್ಲಿ ಸಾಲ ಮಾಡಿರಲಿಲ್ಲ:

ತಮ್ಮ ಅಧಿಕಾರಾವಧಿಯನ್ನು ಸ್ಮರಿಸಿದ ಅವರು, “ನಾನು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದಾಗ ಸಾಲ ಮನ್ನಾ ಮಾಡುವುದಾಗಿ ಘೋಷಿಸಿದ್ದೆ. ಆಗ ಹಲವರು ಹಣ ಎಲ್ಲಿದೆ ಎಂದು ಟೀಕಿಸಿದ್ದರು. ಆದರೆ ನಾನು ಹೆಚ್ಚುವರಿ ಸಾಲ ಮಾಡದೆಯೇ ಕೊಟ್ಟ ಮಾತಿನಂತೆ ರೈತರ ಸಾಲ ಮನ್ನಾ ಮಾಡಿ ತೋರಿಸಿದ್ದೆ” ಎಂದು ಹೆಮ್ಮೆಯಿಂದ ನುಡಿದರು.

ಶ್ರೀ ಸುತ್ತೂರು ಮಹಾಸಂಸ್ಥಾನದ ಶ್ರೀ ಡಾ. ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಅವರು, ಶ್ರೀ ಸಿದ್ದಗಂಗಾ ಮಠದ ಶ್ರೀ ಡಾ. ಸಿದ್ದಲಿಂಗ ಮಹಾಸ್ವಾಮೀಜಿ ಅವರು, ಉಕ್ಕಿನಕಂತೆ ಮಠದ ಶ್ರೀ ಸಾಂಬಸದಾಶಿವ ಸ್ವಾಮೀಜಿ ಅವರು ಸೇರಿದಂತೆ ಅನೇಕ ಪರಮಪೂಜ್ಯರು ದಿವ್ಯಸಾನ್ನಿಧ್ಯ ವಹಿಸಿದ್ದರು.

ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ಮಾಜಿ ಮಂತ್ರಿಗಳಾದ ಸಾ.ರಾ. ಮಹೇಶ್ ಅವರು, ಶಾಸಕರಾದ ಜಿ.ಡಿ. ಹರೀಶ್ ಗೌಡರು, ಮಾಜಿ ಶಾಸಕರು ಹಾಗೂ ಮೈಸೂರು ಗ್ರಾಮಾಂತರ ಜಿಲ್ಲಾ ಜೆಡಿಎಸ್ ಅಧ್ಯಕ್ಷರಾದ ಅಶ್ವಿನ್ ಕುಮಾರ್, ವಿಧಾನ ಪರಿಷತ್ ಸದಸ್ಯರಾದ ಸಿ.ಎನ್. ಮಂಜೇಗೌಡ ಸೇರಿದಂತೆ ಅನೇಕ ಪ್ರಮುಖರು ಉಪಸ್ಥಿತರಿದ್ದರು.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist