ಬೆಂಗಳೂರು(www.thenewzmirror.com): ರಾಜ್ಯದಲ್ಲಿ ಹೆಣ್ಣು ಭ್ರೂಣ ಹತ್ಯೆ ತಡೆಗಟ್ಟಲು ಆರೋಗ್ಯ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದ್ದು, ಇನ್ನು ಮುಂದೆ ಗರ್ಭಿಣಿಯರ ನೋಂದಣಿಯನ್ನು (ANC) 12 ವಾರಗಳ ಬದಲಿಗೆ 10ನೇ ವಾರದಲ್ಲೇ ಕಡ್ಡಾಯವಾಗಿ ಮಾಡಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ವಿಧಾನ ಪರಿಷತ್ತಿನಲ್ಲಿ ಸದಸ್ಯೆ ಉಮಾಶ್ರೀ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ಹೆಣ್ಣು ಭ್ರೂಣ ಹತ್ಯೆಯಂತಹ ಸಾಮಾಜಿಕ ಪಿಡುಗನ್ನು ಬೇರುಸಹಿತ ಕಿತ್ತೆಸೆಯಲು ಆರೋಗ್ಯ ಇಲಾಖೆ ತಾಂತ್ರಿಕ ಬದಲಾವಣೆ ತಂದಿದೆ. ಸಾಮಾನ್ಯವಾಗಿ ಗರ್ಭಧಾರಣೆಯ 12 ವಾರಗಳ ನಂತರ ಲಿಂಗ ಪತ್ತೆ ಮಾಡುವ ಸಾಧ್ಯತೆ ಇರುವುದರಿಂದ, ಮುನ್ನೆಚ್ಚರಿಕಾ ಕ್ರಮವಾಗಿ ಇನ್ನು ಮುಂದೆ 10ನೇ ವಾರದಲ್ಲಿಯೇ ಗರ್ಭಿಣಿಯರ ಕಡ್ಡಾಯ ನೋಂದಣಿ (ANC Registration) ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಕಠಿಣ ಕಾನೂನು ಮತ್ತು ದಂಡ
ಪಿಎನ್‌ಡಿಟಿ (PNDT) ಕಾಯ್ದೆಯನ್ನು ರಾಜ್ಯದಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತಿದ್ದು, ‘ಬಾಲಿಕಾ’ ಸಾಫ್ಟ್‌ವೇರ್ ಮೂಲಕ ಸ್ಕ್ಯಾನಿಂಗ್ ಸೆಂಟರ್‌ಗಳ ಮೇಲೆ ನಿರಂತರ ನಿಗಾ ಇಡಲಾಗುತ್ತಿದೆ. ನಿಯಮ ಉಲ್ಲಂಘಿಸಿದ 80 ಕೇಂದ್ರಗಳಿಗೆ ದಂಡ ವಿಧಿಸಲಾಗಿದ್ದು, 70 ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿವೆ. ಕರ್ತವ್ಯ ಲೋಪ ಎಸಗಿದ ಮೂವರು ವೈದ್ಯರು ಹಾಗೂ ಐವರು ನರ್ಸ್‌ಗಳ ವಿರುದ್ಧ ಈಗಾಗಲೇ ಎಫ್‌ಐಆರ್ ದಾಖಲಿಸಿ ಶಿಸ್ತುಕ್ರಮ ಜರುಗಿಸಲಾಗಿದೆ.
ಅಧಿಕಾರಿಗಳ ಕಣ್ಗಾವಲು ಮತ್ತು ಬಹುಮಾನ
ಅಕ್ರಮಗಳನ್ನು ಪತ್ತೆಹಚ್ಚಲು ಇಲಾಖೆಯ ಅಧಿಕಾರಿಗಳು ಗುಪ್ತ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಭ್ರೂಣ ಹತ್ಯೆ ಮಾಡುವ ಕೇಂದ್ರಗಳ ಬಗ್ಗೆ ಖಚಿತ ಮಾಹಿತಿ ನೀಡುವ ಸಾರ್ವಜನಿಕರಿಗೆ 1 ಲಕ್ಷ ರೂ. ಬಹುಮಾನ ಘೋಷಿಸಲಾಗಿದ್ದು, ಈಗಾಗಲೇ ಮೂವರು ಈ ಬಹುಮಾನ ಪಡೆದಿದ್ದಾರೆ. ಬೆಂಗಳೂರಿನಲ್ಲಿ ಹೆಚ್ಚಿನ ಸ್ಕ್ಯಾನಿಂಗ್ ಸೆಂಟರ್‌ಗಳಿರುವುದರಿಂದ ಐವರು ನೋಡಲ್ ಅಧಿಕಾರಿಗಳನ್ನು ಹಾಗೂ ಪ್ರತಿ ಜಿಲ್ಲೆಗೆ ಒಬ್ಬರು ಹಿರಿಯ ವೈದ್ಯರನ್ನು ನಿಗಾ ಇಡಲು ನೇಮಿಸಲಾಗಿದೆ.
ಸಾಮಾಜಿಕ ಬದಲಾವಣೆಗೆ ಆದ್ಯತೆ
ಕೇವಲ ಕಾನೂನು ಕ್ರಮಗಳಿಂದ ಮಾತ್ರ ಈ ಪಿಡುಗನ್ನು ತಡೆಯಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟ ಸಚಿವರು, ಸಮಾಜದಲ್ಲಿ ಹೆಣ್ಣು ಮಕ್ಕಳ ಕುರಿತು ಸಕಾರಾತ್ಮಕ ಭಾವನೆ ಮೂಡಿಸುವುದು ಅಗತ್ಯ ಎಂದರು. ಸರ್ಕಾರದ ಭಾಗ್ಯಲಕ್ಷ್ಮಿ ಬಾಂಡ್, ಗೃಹಲಕ್ಷ್ಮಿ ಹಾಗೂ ಮಹಿಳೆಯರಿಗೆ ಉಚಿತ ಶಿಕ್ಷಣದಂತಹ ಯೋಜನೆಗಳು ಮಹಿಳಾ ಸಬಲೀಕರಣಕ್ಕೆ ಮತ್ತು ಸಮಾನತೆಯ ಮನೋಭಾವ ಬೆಳೆಸಲು ಪೂರಕವಾಗಿವೆ ಎಂದು ಅವರು ಉಮಾಶ್ರೀಯವರ ಪ್ರಶ್ನೆಗೆ ಉತ್ತರಿಸಿದರು.






