ಬೆಂಗಳೂರು(www.thenewzmirror.com): ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಭೂಸ್ವಾಧೀನ ಪ್ರಕ್ರಿಯೆ ಮತ್ತು ಪರಿಹಾರ ವಿತರಣೆಗೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಸರ್ಕಾರವು ಕೇಂದ್ರಕ್ಕೆ ಆಕ್ಷೇಪಣೆ ಸಲ್ಲಿಸಿರುವುದನ್ನು ಖಂಡಿಸಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಈ ಕುರಿತು ದೆಹಲಿಯಲ್ಲಿ ರಾಜ್ಯದ ಸಂಸದರ ಮನವೊಲಿಸಲು ಮುಂದಾಗಿರುವುದಾಗಿ ತಿಳಿಸಿದ್ದಾರೆ.
ವಿಧಾನ ಪರಿಷತ್ತಿನಲ್ಲಿ ಮಂಗಳವಾರ ನಿಯಮ 330ರ ಅಡಿಯಲ್ಲಿ ಹನುಮಂತ ರುದ್ರಪ್ಪ ನಿರಾಣಿ ಅವರು ಎತ್ತಿದ ಕೃಷ್ಣಾ ಮೇಲ್ದಂಡೆ ಯೋಜನೆಯ 20 ಮುಳುಗಡೆ ಗ್ರಾಮಗಳ ಪುನರ್ವಸತಿ ಪ್ರಶ್ನೆಗೆ ಉತ್ತರಿಸಿದ ಅವರು, ಯೋಜನೆಯ ಹಿತದೃಷ್ಟಿಯಿಂದ ರಾಜ್ಯದ ನಿಯೋಗ ದೆಹಲಿಗೆ ತೆರಳಲಿದೆ ಎಂದರು.
ದೆಹಲಿ ಪ್ರವಾಸದ ಉದ್ದೇಶ:
“ಆಂಧ್ರಪ್ರದೇಶ ಸರ್ಕಾರವು ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ಭೂಸ್ವಾಧೀನ ಮಾಡಬಾರದು ಮತ್ತು ಪರಿಹಾರ ನೀಡಬಾರದು ಎಂದು ಕೇಂದ್ರಕ್ಕೆ ಆಕ್ಷೇಪಣೆ ಸಲ್ಲಿಸಿದೆ. ಈ ವಿಚಾರದಲ್ಲಿ ಬಿಜೆಪಿ ನಾಯಕರು ಮೌನ ವಹಿಸಿರುವುದು ಸರಿಯಲ್ಲ. ನಾನು, ಸಚಿವರಾದ ಹೆಚ್.ಕೆ. ಪಾಟೀಲ್ ಮತ್ತು ಎಂ.ಬಿ. ಪಾಟೀಲ್ ಅವರು ಮಂಗಳವಾರ ದೆಹಲಿಗೆ ತೆರಳಿ, ರಾಜ್ಯದ ಎಲ್ಲಾ ಸಂಸದರನ್ನು ಭೇಟಿ ಮಾಡಿ ಒಮ್ಮತದ ಧ್ವನಿ ಎತ್ತಲಿದ್ದೇವೆ,” ಎಂದು ಡಿಸಿಎಂ ತಿಳಿಸಿದರು.
ಪರಿಹಾರ ವಿತರಣೆಯಲ್ಲಿನ ಸವಾಲು:
ಯೋಜನೆಯಡಿ ಜಮೀನು ಕಳೆದುಕೊಂಡ ರೈತರಿಗೆ ವೈಜ್ಞಾನಿಕವಾಗಿ ಪರಿಹಾರ ನೀಡಲು ಸರ್ಕಾರ ಬದ್ಧವಾಗಿದೆ. ಆದರೆ, ಕೆಲವು ತಾಂತ್ರಿಕ ಮತ್ತು ಕಾನೂನಾತ್ಮಕ ತೊಡಕುಗಳು ಎದುರಾಗಿವೆ. “ಕೆಲವು ಭೂಮಾಲೀಕರು ನ್ಯಾಯಾಲಯದ ಮೊರೆ ಹೋಗಿ ಎಕರೆಗೆ 13 ರಿಂದ 14 ಕೋಟಿ ರೂ. ಪರಿಹಾರ ನೀಡಬೇಕೆಂಬ ಆದೇಶ ತಂದಿದ್ದಾರೆ. ಇಷ್ಟು ದೊಡ್ಡ ಮೊತ್ತದ ಪರಿಹಾರದ ಜೊತೆಗೆ ಪುನರ್ವಸತಿ ಕಲ್ಪಿಸುವುದು ವ್ಯವಸ್ಥಿತವಾಗಿ ಗೊಂದಲಕ್ಕೆ ದಾರಿ ಮಾಡಿಕೊಡುತ್ತಿದೆ. ಹೀಗಾಗಿ, ಪುನರ್ವಸತಿ ಬದಲು ನೇರವಾಗಿ ಹಣವನ್ನೇ ನೀಡುವ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತಿಸುತ್ತಿದೆ,” ಎಂದು ಅವರು ವಿವರಿಸಿದರು.
ಹಗರಣಕ್ಕೆ ಅವಕಾಶವಿಲ್ಲ:
ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಯಾವುದೇ ರೀತಿಯ ಅವ್ಯವಹಾರ ಅಥವಾ ಹಗರಣಗಳಿಗೆ ಅವಕಾಶ ನೀಡಬಾರದು ಎಂಬುದು ಸರ್ಕಾರದ ಆಶಯವಾಗಿದೆ. ಕೇಂದ್ರ ಸರ್ಕಾರವು ಕೂಡಲೇ ಈ ಯೋಜನೆಗೆ ಸಂಬಂಧಿಸಿದ ಅಧಿಸೂಚನೆಯನ್ನು ಹೊರಡಿಸಬೇಕು. ಅಧಿಸೂಚನೆ ಹೊರಬಿದ್ದ ತಕ್ಷಣ ಸಂತ್ರಸ್ತರಿಗೆ ನ್ಯಾಯಬದ್ಧವಾಗಿ ಪರಿಹಾರ ವಿತರಿಸಲಾಗುವುದು ಎಂದು ಅವರು ಭರವಸೆ ನೀಡಿದರು. ವಿರೋಧ ಪಕ್ಷದ ಸದಸ್ಯರ ಕಾಳಜಿಯನ್ನು ಶ್ಲಾಘಿಸಿದ ಅವರು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಸದನಕ್ಕೆ ತಿಳಿಸಿದರು.
ರಾಜ್ಯದ ಹಿತದೃಷ್ಟಿಯಿಂದ ನ್ಯಾಯಾಲಯದಲ್ಲಿ 2 ಐತಿಹಾಸಿಕ ತೀರ್ಪು:
ಪ್ರಶೋತ್ತರ ವೇಳೆಯಲ್ಲಿ ಕಾಂಗ್ರೆಸ್ ಸದಸ್ಯರಾದ ತಿಪ್ಪಣಪ್ಪಕಮಕನೂರು ಅವರು ನ್ಯಾಯಾಲಯದ ತೀರ್ಪಿನಿಂದ ಸರ್ಕಾರಕ್ಕೆ ಸುಮಾರು 10 ಸಾವಿರ ಕೋಟಿ ರೂ. ಉಳಿತಾಯವಾಗಿದ್ದು, ಇದನ್ನು ಎತ್ತಿನಹೊಳೆ, ಕೃಷ್ಣಾ ಮೇಲ್ದಂಡೆ ಯೋಜನೆಗೆ ವಿನಿಯೋಗಿಸುವ ಪ್ರಸ್ತಾವನೆ ಸರ್ಕಾರದ ಮುಂದಿದೆಯೇ ಎಂದು ಕೇಳಿದಾಗ, “ಈ ಅವಧಿಯಲ್ಲಿ ನಾನು ನೀರಾವರಿ ಸಚಿವನಾದ ಬಳಿಕ ರಾಜ್ಯದ ಹಿತದೃಷ್ಟಿಯಿಂದ ನ್ಯಾಯಾಲಯದಲ್ಲಿ ಎರಡು ಪ್ರಮುಖ ತೀರ್ಪುಗಳು ಸಿಕ್ಕಿವೆ. ನಮ್ಮ ಒತ್ತಡ ಹಾಗೂ ತಂತ್ರಗಾರಿಕೆ ಮೇಲೆ ಮೇಕೆದಾಟು ಯೋಜನೆ ವಿಚಾರವಾಗಿ ಕೇಂದ್ರ ಸರ್ಕಾರ ಪರಿಶೀಲನೆ ಮಾಡಿ ತೀರ್ಮಾನ ಮಾಡಬೇಕು ಎಂದು ತೀರ್ಪು ನೀಡಿದೆ. ತಮಿಳುನಾಡಿಗೆ 177 ಟಿಎಂಸಿ ನೀರು ನೀಡಬೇಕು ಎಂದು ಹೇಳಿರುವುದು ನಮ್ಮ ದೊಡ್ಡ ಸಾಧನೆ. ಇನ್ನು ಭೂ ಪರಿಹಾರ ವಿಚಾರವಾಗಿ ಸಿಕ್ಕಿರುವ ತೀರ್ಪು ಎರಡನೆಯದು. ಈ ಎರಡು ತೀರ್ಪು ನೀಡಿರುವ ಸುಪ್ರೀಂ ಕೋರ್ಟಿಗೆ ಇಲ್ಲಿಂದಲೇ ನಮ್ಮ ಸರ್ಕಾರ ತಲೆಬಾಗುತ್ತದೆ. 20 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರುವ ಸಂದರ್ಭವಿತ್ತು. ನಮ್ಮ ನಾಯಕರ ಒತ್ತಡದ ಮೇರೆಗೆ ನಮ್ಮ ಸರ್ಕಾರ ಭೂಸಂತ್ರಸ್ತರಿಗೆ 35-40 ಲಕ್ಷ ಪ್ರತಿ ಎಕರೆಗೆ ಪರಿಹಾರ ನಿಗದಿಪಡಿಸಿದೆ. ಅನೇಕ ಪ್ರಕರಣಗಳಲ್ಲಿ ವಕೀಲರು, ಅಧಿಕಾರಿಗಳು ಒಳ ಒಪ್ಪಂದ ಮಾಡಿಕೊಂಡು ಪ್ರಕರಣ ದಾಖಲಿಸಿ ಕೋಟಿಗಟ್ಟಲೆ ಹಣ ನೀಡುವಂತೆ ಆದೇಶ ತಂದಿದ್ದರು. ಆದರೆ ಸುಪ್ರೀಂ ಕೋರ್ಟ್ ಇಡೀ ದೇಶಕ್ಕೆ ನೀಡಿರುವ ತೀರ್ಪು ನೀಡಿದೆ. 120 ದಿನಗಳ ನಂತರ ಎಂಎಫ್ಎ ವಾಪಸ್ ಕಳುಹಿಸಿದೆ. ಇದರಿಂದ ಕೆಎನ್ಎನ್ಎಲ್ ನಲ್ಲಿ 900 ಪ್ರಕರಣ, ಕೆಬಿಜೆಎನ್ಎಲ್ ನಲ್ಲಿ 380 ಪ್ರಕರಣಗಳು ಒಂದೇ ದಿನ ವಾಪಸ್ ಬಂದಿವೆ. ಈ ಪ್ರಕರಣದಲ್ಲಿ ನಾವು 365 ಕೋಟಿ ಹಣವನ್ನು ನ್ಯಾಯಾಲಯಕ್ಕೆ ಠೇವಣಿ ಇಡಬೇಕಾಗಿತ್ತು. ಇನ್ನು ಮುಂದೆ ಇದಕ್ಕೆ ಕಾನೂನು ಸಚಿವರ ನೇತೃತ್ವದಲ್ಲಿ ಪ್ರತ್ಯೇಕ ತಂಡ ರಚಿಸಲಾಗುವುದು, ನಾನು, ಹೆಚ್.ಕೆ ಪಾಟೀಲ್ ಹಾಗೂ ಎಂ.ಬಿ ಪಾಟೀಲ್ ಅವರು ಮಂಗಳವಾರ ದೆಹಲಿಗೆ ಹೋಗುತ್ತಿದ್ದು, ಎಲ್ಲಾ ಸಂಸದರನ್ನು ಭೇಟಿ ಮಾಡಿ ನಮ್ಮ ರಾಜ್ಯದ ವಿಚಾರಗಳನ್ನು ಪ್ರಸ್ತಾಪಿಸುತ್ತೇನೆ. ಕೃಷ್ಣಾ ಮೇಲ್ದಂಡೆ ಯೋಜನೆ ಬಗ್ಗೆ ನಮ್ಮ ಸಚಿವ ಸಂಪುಟ ಸಭೆ ತೀರ್ಮಾನಕ್ಕೆ ಆಂಧ್ರ ಪ್ರದೇಶದವರು ಆಕ್ಷೇಪಣೆ ಮಾಡಿದ್ದಾರೆ. ಈ ಎಲ್ಲಾ ವಿಚಾರವಾಗಿ ನಾವು ಚರ್ಚೆ ಮಾಡುತ್ತೇವೆ. ಈ ತೀರ್ಪು ನಮ್ಮ ರಾಜ್ಯ ಮಾತ್ರವಲ್ಲ, ದೇಶಕ್ಕೆ ಹೊಸ ರೂಪ ನೀಡಿದೆ” ಎಂದು ತಿಳಿಸಿದರು.
ಈ ತೀರ್ಪಿನ ಆಧಾರವಾಗಿ ಬೇರೆ ಇಲಾಖೆಗಳಲ್ಲಿ ಇರುವ ಬಾಕಿ ಅರ್ಜಿಗಳ ವಿಲೇವಾರಿ ಮಾಡಬೇಕು ಎಂಬ ಮನವಿಗೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಅವರು, “ನಾವು ಕಾನೂನಾತ್ಮಕವಾಗಿ ಪರಿಶೀಲನೆ ಮಾಡುತ್ತಿದ್ದೇವೆ. ರೈತರ ವಿಚಾರದಲ್ಲಿ ಮುಂದಿನ ದಿನಗಳಲ್ಲಿ ಭೂ ಪರಿಹಾರ ನೀಡಲಾಗುವುದು. ನಾವು ಬಾಗಲಕೋಟೆಗೆ ಹೋದಾಗ ಈ ವಿಚಾರವಾಗಿ ಚೆಕ್ ವಿತರಣೆ ಮಾಡಲಾಗುವುದು” ಎಂದು ತಿಳಿಸಿದರು.
ಪಿ.ಹೆಚ್ ಪೂಜಾರ್ ಅವರು ಬಾಗಲಕೋಟೆಯಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ಭೂಮಿ ಕಳೆದುಕೊಳ್ಳುತ್ತಿರುವವರನ್ನು ಹೀನಾಯವಾಗಿ ನಡೆಸಿಕೊಳ್ಳುತ್ತಿದ್ದಾರೆ, ಇ ಖಾತಾ ದಾಖಲೆಯಿಂದ ಇತರೆ ದಾಖಲೆಗಳ ಪಡೆಯುವ ಅರ್ಜಿಗಳು ವಿಲೇವಾರಿಯಾಗದೇ ಉಳಿದಿವೆ. ಬಿಟಿಡಿಎನಲ್ಲಿ ದಾಖಲೆ ತಿದ್ದಿ ಅವ್ಯವಹಾರ ನಡೆದಿರುವ ಶಂಕೆ ಇದೆ ಎಂದು ಕೇಳಿದಾಗ, “ಮಾನ್ಯ ಸದಸ್ಯರು ಪ್ರಸ್ತಾಪಿಸಿರುವ ವಿಚಾರವಾಗಿ ಒಮ್ಮೆ ಅಲ್ಲಿಗೆ ಹೋಗಿ ಪರಿಶೀಲನೆ ಮಾಡುತ್ತೇನೆ” ಎಂದು ಭರವಸೆ ನೀಡಿದರು..







