ದಾವಣಗೆರೆ(www.thenewzmirror.com): “ನಾನು ಹರಿಹರ ಪಂಚಮಸಾಲಿ ಪೀಠದ ಪೀಠಾಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡ ದಿನದಿಂದ ಇಂದಿನವರೆಗೆ ಮಠದ ಹಣಕಾಸಿನ ವ್ಯವಹಾರದ ಒಂದೇ ಒಂದು ಚೆಕ್‌ಗೂ ಸಹಿ ಮಾಡಿಲ್ಲ. ಮಠದ ಪೈಸೆ ಪೈಸೆಯನ್ನೂ ನಾನು ಸ್ವಂತಕ್ಕೆ ಬಳಸಿಲ್ಲ” ಎಂದು ವಚನಾನಂದ ಶ್ರೀಗಳು ಸ್ಪಷ್ಟಪಡಿಸಿದರು.
ಮಠದ ಲೆಕ್ಕಪತ್ರ ಹಾಗೂ ಹಣಕಾಸಿನ ದುರುಪಯೋಗದ ಆರೋಪಗಳ ಹಿನ್ನೆಲೆಯಲ್ಲಿ ಹರಿಹರದಲ್ಲಿ ನಡೆದ ತುರ್ತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ಮೇಲಿನ ಎಲ್ಲಾ ಆರೋಪಗಳನ್ನು ತಳ್ಳಿಹಾಕಿದರು.
“ಮಠದ ಆಡಳಿತ ಮಂಡಳಿ ಮತ್ತು ಟ್ರಸ್ಟಿಗಳೇ ಹಣಕಾಸಿನ ಸಂಪೂರ್ಣ ನಿರ್ವಹಣೆ ಮಾಡುತ್ತಾರೆ. ಬ್ಯಾಂಕ್ ಖಾತೆಗಳ ನಿರ್ವಹಣೆ ಅಥವಾ ಹಣ ಬಿಡುಗಡೆ ಮಾಡುವ ಅಧಿಕಾರ ನನಗಿಲ್ಲ. ಹೀಗಿರುವಾಗ ನನ್ನ ಮೇಲೆ ಹಣಕಾಸಿನ ಅವ್ಯವಹಾರದ ಆರೋಪ ಹೊರಿಸುವುದು ಎಷ್ಟು ಸರಿ?” ಎಂದು ಶ್ರೀಗಳು ಪ್ರಶ್ನಿಸಿದರು. “ನಾನು ಕೇವಲ ಸಮಾಜದ ಸಂಘಟನೆ ಮತ್ತು ಆಧ್ಯಾತ್ಮಿಕ ಕಾರ್ಯಗಳಿಗಾಗಿ ನನ್ನನ್ನು ಅರ್ಪಿಸಿಕೊಂಡಿದ್ದೇನೆ ಹೊರತು, ಮಠದ ಹಣದ ಮೇಲೆ ಕಣ್ಣಿಟ್ಟಿಲ್ಲ” ಎಂದು ಆವೇಶದಿಂದ ನುಡಿದರು.
ಸೇವಾ ಮನೋಭಾವವೇ ನನ್ನ ಆಸ್ತಿ:
“ನಾನು ಪೀಠಕ್ಕೆ ಬರುವಾಗ ಏನನ್ನೂ ತಂದಿಲ್ಲ, ಹೋಗುವಾಗಲೂ ಏನನ್ನೂ ಕೊಂಡೊಯ್ಯುವುದಿಲ್ಲ. ಭಕ್ತರು ನೀಡುವ ದೇಣಿಗೆಯು ಮಠದ ಅಭಿವೃದ್ಧಿಗೆ ಮತ್ತು ಸಮಾಜದ ಹಿತಕ್ಕೆ ಬಳಕೆಯಾಗಬೇಕು. ನನ್ನ ವೈಯಕ್ತಿಕ ಹೆಸರಿನಲ್ಲಿ ಮಠದ ಯಾವುದೇ ಆಸ್ತಿ ಇಲ್ಲ. ಯಾರಾದರೂ ಸಾಬೀತುಪಡಿಸಿದರೆ ನಾನು ಯಾವುದಕ್ಕೂ ಸಿದ್ಧ” ಎಂದು ಸವಾಲು ಹಾಕಿದರು.
ಷಡ್ಯಂತ್ರದ ವಿರುದ್ಧ ಕಿಡಿ:
ಲೆಕ್ಕ ಕೇಳಿದ ಭಕ್ತರ ಪರವಾಗಿ ನಿಂತಿದ್ದಕ್ಕೆ ತಮ್ಮನ್ನೇ ಗುರಿಯಾಗಿಸಿಕೊಂಡು ಕೆಲವರು ಷಡ್ಯಂತ್ರ ನಡೆಸುತ್ತಿದ್ದಾರೆ. ಭಕ್ತರು ಮತ್ತು ಮಠದ ನಡುವೆ ಕಿಚ್ಚು ಹಚ್ಚುವ ಕೆಲಸವಾಗುತ್ತಿದೆ. 2008 ರಿಂದ ಮಠದಲ್ಲಿ ನಡೆದಿರುವ ಆರ್ಥಿಕ ವ್ಯವಹಾರಗಳ ಬಗ್ಗೆ ಟ್ರಸ್ಟಿಗಳೇ ಪಾರದರ್ಶಕವಾಗಿ ಲೆಕ್ಕ ನೀಡಬೇಕು ಎಂದು ಅವರು ಈ ಸಂದರ್ಭದಲ್ಲಿ ಆಗ್ರಹಿಸಿದರು.
ಇದೇ ವೇಳೆ ಮಠದ ಆವರಣದಲ್ಲಿ ಜಮಾಯಿಸಿದ್ದ ನೂರಾರು ಭಕ್ತರು ಶ್ರೀಗಳ ಪರವಾಗಿ ಘೋಷಣೆ ಕೂಗುತ್ತಾ, ಟ್ರಸ್ಟಿಗಳು ಕೂಡಲೇ ಲೆಕ್ಕ ಒಪ್ಪಿಸಬೇಕೆಂದು ಪಟ್ಟು ಹಿಡಿದರು.







