ಹಿಂದಿ ರದ್ದತಿ, ಮಕ್ಕಳ ಭವಿಷ್ಯದ ಜೊತೆ ಕಾಂಗ್ರೆಸ್ ಚೆಲ್ಲಾಟ: ಆರ್. ಅಶೋಕ ವಾಗ್ದಾಳಿ

RELATED POSTS

ಬೆಂಗಳೂರು(www.thenewzmirror.com): ಶಿಕ್ಷಣ ಇಲಾಖೆಯು ಏಕಾಏಕಿ ತೃತೀಯ ಭಾಷೆಯಾಗಿ ಹಿಂದಿಯನ್ನು ರದ್ದು ಮಾಡುವ ಮೂಲಕ ಕಾಂಗ್ರೆಸ್ ಸರ್ಕಾರ ವಿದ್ಯಾರ್ಥಿಗಳ ಬದುಕಿಗೆ ಕಲ್ಲು ಹಾಕಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ ತೀವ್ರವಾಗಿ ಟೀಕಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸರ್ಕಾರದ ಈ ನಿರ್ಧಾರದ ವಿರುದ್ಧ ಹರಿಹಾಯ್ದರು. “ಕನ್ನಡದ ಮೇಲಿನ ಪ್ರೀತಿಯಿಂದ ಸರ್ಕಾರ ಈ ತೀರ್ಮಾನ ಮಾಡಿಲ್ಲ, ಇದು ಕೇವಲ ರಾಜಕೀಯ ಪ್ರೇರಿತ ನಿರ್ಧಾರ. ಪರೀಕ್ಷೆಗಳು ನಡೆಯುತ್ತಿರುವ ಇಂತಹ ಸಂದರ್ಭದಲ್ಲಿ ದಿಢೀರನೆ ಹಿಂದಿ ಭಾಷೆಯನ್ನು ತೆಗೆದುಹಾಕಿರುವುದು ಲಕ್ಷಾಂತರ ವಿದ್ಯಾರ್ಥಿಗಳಲ್ಲಿ ಆತಂಕ ಮೂಡಿಸಿದೆ,” ಎಂದರು.

ಗಾಂಧೀಜಿಗೆ ಮಾಡಿದ ಅಪಮಾನ:

“೧೯೧೮ರಲ್ಲಿ ಮಹಾತ್ಮ ಗಾಂಧೀಜಿಯವರೇ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯನ್ನು ಆರಂಭಿಸಿದ್ದರು. ಅದರ ಇತಿಹಾಸ ಅರಿಯದ ಕಾಂಗ್ರೆಸ್ ನಾಯಕರು ಇಂದು ಹಿಂದಿಯನ್ನು ರದ್ದು ಮಾಡಿ ಗಾಂಧೀಜಿಯವರಿಗೆ ಅಪಮಾನ ಮಾಡುತ್ತಿದ್ದಾರೆ. ನೆಹರೂ ಮತ್ತು ಇಂದಿರಾ ಗಾಂಧಿಯವರು ಒತ್ತು ನೀಡಿದ್ದ ತ್ರಿಭಾಷಾ ಸೂತ್ರಕ್ಕೆ ಈಗಿನ ಕಾಂಗ್ರೆಸ್ ಸರ್ಕಾರವೇ ಎಳ್ಳು ನೀರು ಬಿಡುತ್ತಿದೆ,” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮತ ಬ್ಯಾಂಕ್ ರಾಜಕಾರಣ:

“ಕನ್ನಡದ ಮಕ್ಕಳು ಮುಂದೆ ಐಎಎಸ್, ಐಪಿಎಸ್ ಅಧಿಕಾರಿಗಳಾಗಿ ಬೇರೆ ರಾಜ್ಯಗಳಿಗೆ ಹೋದಾಗ ಭಾಷೆಯ ಸಮಸ್ಯೆ ಎದುರಿಸಬೇಕಾಗುತ್ತದೆ. ಪ್ರಧಾನಿ ನರೇಂದ್ರ ಮೋದಿಯವರ ಮೇಲಿನ ದ್ವೇಷಕ್ಕಾಗಿ ಮಕ್ಕಳ ಭವಿಷ್ಯವನ್ನು ಬಲಿ ಕೊಡಲಾಗುತ್ತಿದೆ. ಇದು ಕೇವಲ ಮತ ಬ್ಯಾಂಕ್ ರಾಜಕಾರಣಕ್ಕಾಗಿ ಮಾಡುತ್ತಿರುವ ಕೆಲಸ,” ಎಂದು ಅಶೋಕ ದೂರಿದರು.

ಇದೇ ವೇಳೆ ನೆರೆ ರಾಜ್ಯಗಳ ಭಾಷಾ ಪ್ರೇಮವನ್ನು ಉಲ್ಲೇಖಿಸಿದ ಅವರು, “ತಮಿಳುನಾಡು ಮತ್ತು ಕೇರಳದ ಮುಸ್ಲಿಮರು ಆಯಾ ರಾಜ್ಯದ ಭಾಷೆಯನ್ನು ಸ್ಪಷ್ಟವಾಗಿ ಮಾತನಾಡುತ್ತಾರೆ. ಆದರೆ ಕರ್ನಾಟಕದಲ್ಲಿ ಅಂತಹ ವಾತಾವರಣ ನಿರ್ಮಿಸುವ ಬದಲು ಸರ್ಕಾರ ವಿಭಜಕ ನೀತಿ ಅನುಸರಿಸುತ್ತಿದೆ. ಮುಂದೆ ಬಿಜೆಪಿ ಅಧಿಕಾರಕ್ಕೆ ಬಂದಾಗ ರಾಷ್ಟ್ರೀಯ ಶಿಕ್ಷಣ ನೀತಿಯಡಿ ಭಾಷಾ ಆಯ್ಕೆಯ ಸ್ವಾತಂತ್ರ್ಯವನ್ನು ಮರುಸ್ಥಾಪಿಸಲಾಗುವುದು,” ಎಂದು ಅವರು ತಿಳಿಸಿದರು.

ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ನಿಶ್ಚಿತ: ದಾವಣಗೆರೆ ಹಾಗೂ ಬಾಗಲಕೋಟೆ ವಿಧಾನಸಭಾ ಉಪಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಭರ್ಜರಿ ಜಯ ದಾಖಲಿಸಲಿದ್ದಾರೆ ಎಂದು ಆರ್. ಅಶೋಕ ವಿಶ್ವಾಸ ವ್ಯಕ್ತಪಡಿಸಿದರು. ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಜನಾಕ್ರೋಶ ವ್ಯಕ್ತವಾಗುತ್ತಿದೆ ಎಂದರು. “ದಾವಣಗೆರೆಯಲ್ಲಿ ಮುಸ್ಲಿಂ ಸಮುದಾಯದವರು ಕಾಂಗ್ರೆಸ್ ವಿರುದ್ಧವಿದ್ದಾರೆ. ಬಾಗಲಕೋಟೆಯಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಸಿದ್ದರಾಮಯ್ಯ ಅವರಿಗೆ ತಮ್ಮ ಕುರ್ಚಿ ಹೋಗುವ ಭಯ ಶುರುವಾಗಿದೆ, ಅದಕ್ಕಾಗಿಯೇ ಅವರು ಖುದ್ದಾಗಿ ಪ್ರಚಾರಕ್ಕೆ ಇಳಿದಿದ್ದಾರೆ. ಸಚಿವ ಜಮೀರ್ ಅಹ್ಮದ್ ಪ್ರಚಾರದಿಂದ ದೂರ ಉಳಿದಿರುವುದು ಹಾಗೂ ಡಿ.ಕೆ. ಶಿವಕುಮಾರ್ ಅವರಲ್ಲಿನ ಆತಂಕ ಕಾಂಗ್ರೆಸ್‌ನ ಸೋಲನ್ನು ಸಾರುತ್ತಿದೆ,” ಎಂದು ಲೇವಡಿ ಮಾಡಿದರು.

ಟಿಕೆಟ್ ಹಂಚಿಕೆ ಮತ್ತು ಸಾಲದ ಸುಳಿ:

“ಶಾಮನೂರು ಶಿವಶಂಕರಪ್ಪ ಅವರು ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡುವ ಭರವಸೆ ನೀಡಿದ್ದರು. ಆದರೆ ಕೊನೆಗೆ ತಮ್ಮ ಕುಟುಂಬದವರಿಗೇ ಟಿಕೆಟ್ ನೀಡುವ ಮೂಲಕ ವಂಶಪಾರಂಪರ್ಯ ರಾಜಕಾರಣ ಮಾಡಿದ್ದಾರೆ. ರಾಜ್ಯ ಸರ್ಕಾರವು ಅಭಿವೃದ್ಧಿ ಹೆಸರಿನಲ್ಲಿ ಪ್ರತಿ ವರ್ಷ ಭಾರಿ ಸಾಲ ಮಾಡುತ್ತಿದೆ, ಆದರೆ ಬಡವರಿಗೆ ಯಾವುದೇ ಸೌಲಭ್ಯಗಳು ಸಿಗುತ್ತಿಲ್ಲ,” ಎಂದು ಆರೋಪಿಸಿದರು.

ಬಾಂಬ್ ಸ್ಫೋಟ ಸಂಚು – ಕಾಂಗ್ರೆಸ್ ವಿರುದ್ಧ ವಾಗ್ದಾಳಿ:

ಧರ್ಮಸ್ಥಳ ಮತ್ತು ಕದ್ರಿ ದೇವಸ್ಥಾನಗಳಲ್ಲಿ ಕುಕ್ಕರ್ ಬಾಂಬ್ ಸ್ಫೋಟಿಸಲು ಸಂಚು ರೂಪಿಸಿದ್ದ ಭಯೋತ್ಪಾದಕ ತನ್ನ ತಪ್ಪನ್ನು ಒಪ್ಪಿಕೊಂಡಿರುವ ವಿಚಾರವನ್ನು ಪ್ರಸ್ತಾಪಿಸಿದ ಅಶೋಕ, “ಹಿಂದೆ ಡಿ.ಕೆ. ಶಿವಕುಮಾರ್ ಅವರು ಈತನನ್ನು ‘ನನ್ನ ಸಹೋದರ’ (My Brother) ಎಂದು ಕರೆದಿದ್ದರು. ದೇಶದ ವಿರುದ್ಧ ಸಂಚು ಮಾಡುವವರನ್ನು ಬ್ರದರ್ ಎನ್ನುವ ಕಾಂಗ್ರೆಸ್ಸಿಗರಿಗೆ ಮಂಜುನಾಥ ಸ್ವಾಮಿ ಎಂದರೆ ಆಗುವುದಿಲ್ಲವೇ? ಮತಕ್ಕಾಗಿ ದೇಶದ್ರೋಹಿಗಳನ್ನು ಬೆಂಬಲಿಸುವ ಕಾಂಗ್ರೆಸ್ ಈಗ ಜನತೆಗೆ ಸ್ಪಷ್ಟನೆ ನೀಡಲಿ,” ಎಂದು ಆಗ್ರಹಿಸಿದರು.

ಕಾಂಗ್ರೆಸ್ ಮುಕ್ತ ಭಾರತ:

“ಇಂಡಿ (I.N.D.I.A) ಒಕ್ಕೂಟದ ಹಂಗಿನಲ್ಲಿ ಕಾಂಗ್ರೆಸ್ ಇಂದು ಅಸ್ತಿತ್ವ ಉಳಿಸಿಕೊಂಡಿದೆ. ಆದರೆ ಮುಂದಿನ ದಿನಗಳಲ್ಲಿ ದೇಶವು ಕಾಂಗ್ರೆಸ್ ಮುಕ್ತವಾಗಲಿದೆ. ಪ್ರಧಾನಿ ನರೇಂದ್ರ ಮೋದಿಯವರ ರಾಜತಾಂತ್ರಿಕ ಚತುರತೆಯಿಂದ ಇರಾನ್‌ನಿಂದ ತೈಲ ಹಡಗುಗಳು ಭಾರತಕ್ಕೆ ಬರುವಂತಾಗಿದೆ. ದೇಶದ ಆರ್ಥಿಕ ಸಮಸ್ಯೆಗಳು ಶೀಘ್ರದಲ್ಲೇ ಬಗೆಹರಿಯಲಿವೆ,” ಎಂದು ಅವರು ತಿಳಿಸಿದರು.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist