ಕಲಬುರಗಿ(www.thenewzmirror.com): ಕರ್ನಾಟಕ ಮಾಹಿತಿ ಆಯೋಗದ ಕಲಬುರಗಿ ಪೀಠವು ಕಳೆದ ಐದು ತಿಂಗಳಲ್ಲಿ ಮಹತ್ವದ ಸಾಧನೆ ಮಾಡಿದ್ದು, ಕೇವಲ 71 ದಿನಗಳ ಕಲಾಪದಲ್ಲಿ 1,079 ಪ್ರಕರಣಗಳನ್ನು ವಿಲೇವಾರಿ ಮಾಡಿದೆ ಎಂದು ರಾಜ್ಯ ಮಾಹಿತಿ ಆಯುಕ್ತ ಬಿ. ವೆಂಕಟ ಸಿಂಗ್ ತಿಳಿಸಿದ್ದಾರೆ.
ನವೆಂಬರ್ 24 ರಿಂದ ಮಾರ್ಚ್ ಅಂತ್ಯದವರೆಗೆ ಒಟ್ಟು 2,520 ಪ್ರಕರಣಗಳನ್ನು ವಿಚಾರಣೆಗೆ ಎತ್ತಿಕೊಳ್ಳಲಾಗಿತ್ತು. ಇದರಲ್ಲಿ ದಶಕಗಳಿಂದ ಬಾಕಿ ಉಳಿದಿದ್ದ ಹಳೆಯ ಪ್ರಕರಣಗಳಿಗೆ ಹೆಚ್ಚಿನ ಆದ್ಯತೆ ನೀಡಿ ಇತ್ಯರ್ಥಪಡಿಸಲಾಗಿದೆ. ಮಾಹಿತಿ ನೀಡಲು ವಿಳಂಬ ಮಾಡಿ ಅರ್ಜಿದಾರರ ಸಮಯ ಹಾಗೂ ಹಣ ವ್ಯರ್ಥ ಮಾಡಿದ ಅಧಿಕಾರಿಗಳಿಗೆ ಒಟ್ಟು 2.28 ಲಕ್ಷ ರೂ. ದಂಡ ವಿಧಿಸಲಾಗಿದೆ. ಅಲ್ಲದೆ, ಸಂಕಷ್ಟಕ್ಕೀಡಾದ ಅರ್ಜಿದಾರರಿಗೆ 34 ಸಾವಿರ ರೂ. ಪರಿಹಾರ ನೀಡುವಂತೆ ಆಯುಕ್ತರು ಆದೇಶಿಸಿದ್ದಾರೆ.
ಮುಂಬರುವ ದಿನಗಳಲ್ಲಿ ಹೊಸ ಪ್ರಕರಣಗಳನ್ನು ತ್ವರಿತವಾಗಿ ಕೈಗೆತ್ತಿಕೊಂಡು ಸಾರ್ವಜನಿಕರಿಗೆ ಶೀಘ್ರವಾಗಿ ಮಾಹಿತಿ ಕೊಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ಭರವಸೆ ನೀಡಿದ್ದಾರೆ







