ಬೆಂಗಳೂರು(www.thenewzmirror.com): ರಾಜ್ಯ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರ ಕಚೇರಿಯು ಸಾರ್ವಜನಿಕ ಸ್ನೇಹಿ ಆಡಳಿತಕ್ಕೆ ಮಾದರಿಯಾಗಿದ್ದು, ಪ್ರಸಕ್ತ ಸಾಲಿನಲ್ಲೂ (2025-26) ಶೇ. 100 ರಷ್ಟು ಕಡತ ವಿಲೇವಾರಿ ಮಾಡುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದೆ.
ವಿಕಾಸಸೌಧದಲ್ಲಿರುವ ಸಚಿವರ ಕಚೇರಿಗೆ ಬರುವ ಸಾರ್ವಜನಿಕರ ಅರ್ಜಿಗಳಿಗೆ ಹಾಗೂ ಇಲಾಖೆಯ ಕೆಲಸಗಳಿಗೆ ವೇಗ ನೀಡುವ ನಿಟ್ಟಿನಲ್ಲಿ ಸಚಿವರ ಆಪ್ತ ಸಿಬ್ಬಂದಿ ವರ್ಗವು ಬಾಕಿ ಇದ್ದ ಎಲ್ಲಾ ಕಡತಗಳನ್ನು ಸಮಗ್ರವಾಗಿ ಪರಿಶೀಲಿಸಿ, ಸಮಯಬದ್ಧವಾಗಿ ವಿಲೇವಾರಿ ಮಾಡಿದೆ. ಆಡಳಿತದಲ್ಲಿ ದಕ್ಷತೆ ಮತ್ತು ಪಾರದರ್ಶಕತೆಯನ್ನು ಹೆಚ್ಚಿಸುವ ಸಚಿವರ ಆಶಯಕ್ಕೆ ಈ ಸಾಧನೆ ಕನ್ನಡಿ ಹಿಡಿದಿದೆ.
ಸಂಖ್ಯೆಗಳಲ್ಲಿ ಸಾಧನೆಯ ವಿವರ:
ಕಡತಗಳ ವಿಲೇವಾರಿ: 2025-26ನೇ ಸಾಲಿನಲ್ಲಿ ಒಟ್ಟು 909 ಕಡತಗಳನ್ನು ಪರಿಶೀಲಿಸಿ ನಿಯಮಾನುಸಾರ ವಿಲೇವಾರಿ ಮಾಡಲಾಗಿದೆ.
ಸಾರ್ವಜನಿಕ ಪತ್ರಗಳು: ಮಾರ್ಚ್ ಅಂತ್ಯದ ವೇಳೆಗೆ ಸ್ವೀಕರಿಸಲಾದ ಒಟ್ಟು 4,201 ಪತ್ರಗಳನ್ನು ವಿಲೇವಾರಿ ಮಾಡಿ ಜನಸಾಮಾನ್ಯರ ಅಹವಾಲುಗಳಿಗೆ ಸ್ಪಂದಿಸಲಾಗಿದೆ.
ಶಾಸನಸಭೆಯ ಪ್ರಶ್ನೆಗಳು: ವಿಧಾನಸಭೆ ಹಾಗೂ ವಿಧಾನಪರಿಷತ್ ಸದಸ್ಯರು ಕೃಷಿ ಇಲಾಖೆಗೆ ಸಂಬಂಧಿಸಿದಂತೆ ಕೇಳಿದ್ದ ಒಟ್ಟು 352 ಪ್ರಶ್ನೆಗಳಿಗೆ ನಿಖರವಾದ ಉತ್ತರಗಳನ್ನು ನೀಡಲಾಗಿದೆ.
ಕಳೆದ ಮೂರು ವರ್ಷಗಳಿಂದಲೂ ಕೃಷಿ ಸಚಿವರ ಕಚೇರಿಯು ನೂರು ಶೇಕಡಾ ಪ್ರಗತಿಯನ್ನು ಕಾಯ್ದುಕೊಂಡು ಬರುತ್ತಿರುವುದು ವಿಶೇಷ. ಸಚಿವರ ಮಾರ್ಗದರ್ಶನ ಹಾಗೂ ಸಿಬ್ಬಂದಿಯ ಸಂಘಟಿತ ಪ್ರಯತ್ನದಿಂದಾಗಿ ಸಾರ್ವಜನಿಕ ಸೇವೆಗಳು ವಿಳಂಬವಿಲ್ಲದೆ ತಲುಪುತ್ತಿವೆ.
ಈ ಅಭೂತಪೂರ್ವ ಯಶಸ್ಸಿಗೆ ಕಾರಣರಾದ ಆಪ್ತ ಕಾರ್ಯದರ್ಶಿಗಳು ಹಾಗೂ ಕಚೇರಿಯ ಎಲ್ಲಾ ಸಿಬ್ಬಂದಿಯ ಕಾರ್ಯಕ್ಷಮತೆಯನ್ನು ಸಚಿವ ಎನ್. ಚಲುವರಾಯಸ್ವಾಮಿ ಅವರು ಶ್ಲಾಘಿಸಿದ್ದಾರೆ. ಮುಂದಿನ ದಿನಗಳಲ್ಲೂ ಇದೇ ರೀತಿಯ ಜನಸ್ನೇಹಿ ಆಡಳಿತವನ್ನು ಮುಂದುವರಿಸುವಂತೆ ಅವರು ಸೂಚನೆ ನೀಡಿದ್ದಾರೆ.







