5 ವರ್ಷಗಳಲ್ಲಿ 60 ಲಕ್ಷ ಮನೆಗಳಿಗೆ ಗ್ಯಾಸ್ ಪೈಪ್ ಲೈನ್ ಸಂಪರ್ಕ: ಎಂ ಬಿ ಪಾಟೀಲ

RELATED POSTS

ಬೆಂಗಳೂರು(thenewzmirror.com): ರಾಜ್ಯದಲ್ಲಿ ಬೇರೆ ಬೇರೆ ಸ್ಥಳೀಯ ಆಡಳಿತ ಸಂಸ್ಥೆಗಳಲ್ಲಿ ಒಂದೊಂದು ದರ ಇದ್ದಿದ್ದರಿಂದ ಮನೆಮನೆಗೆ ಗ್ಯಾಸ್ ಸಂಪರ್ಕ ಒದಗಿಸಲು ವಿಳಂಬವಾಗಿದೆ. ಈಗ ಈ ಸಮಸ್ಯೆ ಬಗೆಹರಿದಿದ್ದು, 2030ರೊಳಗೆ ಮಿಕ್ಕಿರುವ 60 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ಪೈಪ್-ಲೈನ್ ಮೂಲಕ ಅಡುಗೆ ಅನಿಲ ಪೂರೈಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.

ವಿಧಾನ ಪರಿಷತ್ತಿನಲ್ಲಿ ಬಿಜೆಪಿ ಸದಸ್ಯ ಡಿ ಎಸ್ ಅರುಣ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಗ್ಯಾಸ್ ಪೂರೈಕೆ ಕೊಳವೆ ಅಳವಡಿಸಲು ದೇಶದ ವಿವಿಧ ರಾಜ್ಯಗಳಲ್ಲಿ ಇರುವ ನಗರ ಅನಿಲ ಸರಬರಾಜು ನೀತಿಯ ಪ್ರಕಾರ ಮೀಟರ್ ಗೆ ಒಂದು ರೂಪಾಯಿ ನಿಗದಿಪಡಿಸಲಾಗಿದೆ. ಉತ್ತರಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿನ ಉತ್ತಮ ಉಪಕ್ರಮಗಳ ಬಗ್ಗೆಯೂ ಕೇಂದ್ರ ಸರ್ಕಾರವೇ ರಾಜ್ಯಕ್ಕೆ ಪತ್ರ ಬರೆದು ತಿಳಿಸಿದೆ. ಆ ಸಂದರ್ಭದಲ್ಲಿ ಬಸವರಾಜ್ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರ ಅಧಿಕಾರದಲ್ಲಿತ್ತು. ಸಾರ್ವಜನಿಕ ಹಿತ ಮತ್ತು ಪರಿಸರಸ್ನೇಹಿ ಕ್ರಮ ಎಂದು ನಾವೂ ಇದನ್ನು ಒಪ್ಪಿಕೊಂಡಿದ್ದೇವೆ. ಇದರಂತೆ ರಾಜ್ಯದಲ್ಲಿ ಒಟ್ಟು 66.25 ಲಕ್ಷ ಮನೆಗಳಿಗೆ ಸಂಪರ್ಕ ಕಲ್ಪಿಸುವ ಮತ್ತು 1,022 ಸಿಎನ್ ಜಿ ಮರುಪೂರಣ ಕೇಂದ್ರಗಳನ್ನು ತೆರೆಯುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

2015ರಲ್ಲಿ ಈ ಯೋಜನೆ ಆರಂಭವಾಗಿದ್ದು, ಬೆಂಗಳೂರಿನಲ್ಲಿ ಭಾರತೀಯ ಅನಿಲ ಪ್ರಾಧಿಕಾರ (ಗೈಲ್) ಇದರ ಕಾಮಗಾರಿಯನ್ನು ಕೈಗೆತ್ತಿಕೊಂಡಿತು. 2023ರವರೆಗೆ 4.07 ಲಕ್ಷ ಮನೆಗಳಿಗೆ ಗ್ಯಾಸ್ ಪೂರೈಕೆ ಸಂಪರ್ಕ ಕೊಟ್ಟಿದ್ದು, 320 ಸಿಎನ್ ಜಿ ಕೇಂದ್ರಗಳನ್ನು ತೆರೆಯಲಾಗಿದೆ. ಇದರ ಆಮೆಗತಿಯ ಪ್ರಗತಿ‌ ನೋಡಿ ಹೊಸ‌ ನೀತಿ ರೂಪಿಸಲಾಯಿತು. ಅದರ ನಂತರ ಇನ್ನೂ 1.01 ಲಕ್ಷ ಮನೆಗಳಿಗೆ ಈ ಅನುಕೂಲ ಒದಗಿಸಿದ್ದು, 154 ಸಿಎನ್ ಜಿ ಕೇಂದ್ರಗಳನ್ನು ಆರಂಭಿಸಲಾಗಿದೆ. ಈಗ ಮತ್ತಷ್ಟು ವೇಗ ನೀಡಲು ಸ್ಥಳೀಯ ನಗರ ಸಂಸ್ಥೆಗಳ ಜತೆಗೂ‌ ಸಮನ್ವಯದ ಸಭೆಗಳನ್ನು ಮಾಡಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಈ ಯೋಜನೆಯಲ್ಲಿ ಇದುವರೆಗೂ ಒಟ್ಟು 5.10 ಲಕ್ಷ ಮನೆಗಳಿಗೆ ಸೌಲಭ್ಯ ಸಿಕ್ಕಿದ್ದು, 474 ಸಿಎನ್ಜಿ ಕೇಂದ್ರಗಳು ಕಾರ್ಯಾರಂಭ ಮಾಡಿವೆ. ಮುಂದಿನ ಐದು ವರ್ಷಗಳಲ್ಲಿ ಬಾಕಿ ಇರುವ ಗುರಿಯನ್ನು ತಲುಪಲಾಗುವುದು. ಇದಕ್ಕೆ ಸಂಬಂಧಿಸಿದಂತೆ 2024ರ ಜುಲೈನಲ್ಲಿ ಸ್ಥಳೀಯ ಸಂಸ್ಥೆಗಳು ಮತ್ತು ಲೋಕೋಪಯೋಗಿ ಇಲಾಖೆಗಳ ಅನುಮತಿ ಕೊಡಲಾಗಿದೆ ಎಂದು ಪಾಟೀಲ ಹೇಳಿದ್ದಾರೆ.

ಲಾಭ ವರ್ಗ: ಕೇಂದ್ರ ಸರ್ಕಾರದ ಸೂಚನೆ‌ ಪ್ರಕಾರ ಮೀಟರ್ ಗೆ ಒಂದು ರೂಪಾಯಿ ನಿಗದಿಪಡಿಸಿದ್ದು, ಇದರಿಂದ ಆಗುವ ಲಾಭವನ್ನು ಅನಿಲ ಸರಬರಾಜು ಕಂಪನಿಗಳು ನಂತರದ ದಿನಗಳಲ್ಲಿ ಗ್ರಾಹಕರಿಗೆ ವರ್ಗಾಯಿಸಬೇಕು ಎಂದು ಹೇಳಿ ಸಂಬಂಧಪಟ್ಟವರಿಂದ ಮುಚ್ಚಳಿಕೆ ಬರೆಸಿಕೊಳ್ಳಾಗಿದೆ. ಈ ಅಂಶವನ್ನು ಹೊಸ ನೀತಿಯಲ್ಲೂ ಅಳವಡಿಸಲಾಗಿದೆ ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist