ಬೆಂಗಳೂರು(thenewsmirror.com) : ಪಿಎಂ – ಉಷಾ ಯೋಜನೆ ಅಡಿಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ಜ್ಞಾನಭಾರತಿ ಆವರಣದಲ್ಲಿ ನಿರ್ಮಾಣವಾಗುತ್ತಿರುವ ಶೈಕ್ಷಣಿಕ ಭವನ ಮತ್ತು ಸಂಶೋಧನಾ ಭವನದ ಶಂಕುಸ್ಥಾಪನೆಯನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ನೆರವೇರಿಸಿದರು.
ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಉಪಮುಖ್ಯಮಂತ್ರಿ ಡಿಸಿಎಂ ಡಿ.ಕೆ.ಶಿವಕುಮಾರ್ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನದ ಪಿಎಂ ಉಷಾ ಯೋಜನೆಯಡಿಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಶೈಕ್ಷಣಿಕ ಭವನ ಮತ್ತು ಸಂಶೋಧನಾ ಭವನ ನಿರ್ಮಾಣವಾಗುತ್ತಿದೆ. ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ್ದೇನೆ. ಕಟ್ಟಡ ವಿನ್ಯಾಸದಲ್ಲಿ ಸ್ವಲ್ಪ ಬದಲಾವಣೆ ಮಾಡಲು ಸಲಹೆ ನೀಡಿದ್ದೇನೆ.ಬೆಂಗಳೂರು ವಿಶ್ವವಿದ್ಯಾಲಯ ವಿಶ್ವದೆಲ್ಲೆಡೆ ಅಪಾರ ಹೆಸರು ಗಳಿಸಿದೆ,ಈ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಇಂದು ಸಾಕಷ್ಟು ಉನ್ನತ ಹುದ್ದೆಗಳಲ್ಲಿದ್ದಾರೆ,ಹಿಂದೆ ನಾನು ಕೂಡ ಈ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯನಾಗಿದ್ದೆ,ಇಂದು ಭೂಮಿ ಪೂಜೆ ನೆರವೇರಿಸಿರುವುದು ಸಾಕಷ್ಟು ಸಂತಸ ತಂದಿದೆ” ಎಂದು ತಿಳಿಸಿದರು.
ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಶಾಸಕ ಮುನಿರತ್ನ,ಬೆಂವಿವಿ ಕುಲಪತಿ ಡಾ.ಜಯಕರ ಎಸ್.ಎಂ, ಕುಲಸಚಿವ ಶೇಕ್ ಲತೀಫ್, ಕುಲಸಚಿವ ಮೌಲ್ಯಮಾಪನ ಶ್ರೀನಿವಾಸ್ ಸಿ,ಸಿಂಡಿಕೇಟ್ ಸದಸ್ಯರಾದ ಬಿ.ಡಿ.ಗಂಗರಾಜು,ರಮೇಶ್ ಬಾಬು,
ದಂಡಿಕೆರೆ ನಾಗರಾಜ್,ಮಹದೇವ ನಾಯ್ಕ್,ಕೆ.ಷರೀಫಾ,ಜಯಶ್ರೀ ಹೆಗ್ಡೆ ಉಪಸ್ಥಿತರಿದ್ದರು.
ಶೈಕ್ಷಣಿಕ ಭವನದ ಉದ್ದೇಶ:
ಕೇಂದ್ರ ಸರ್ಕಾರ ಪಿಎಂ ಉಷಾ ಯೋಜನೆಯಡಿಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯಕ್ಕೆ 100 ಕೋಟಿ ಅನುದಾನ ಘೋಷಿಸಲಾಗಿತ್ತು.ಈ ಅನುದಾನದಲ್ಲಿ ಶೇ.60% ಕೇಂದ್ರ ಸರ್ಕಾರ ಮತ್ತು ಶೇ.40 % ರಷ್ಟು ರಾಜ್ಯ ಸರ್ಕಾರವು ಭರಿಸುತ್ತದೆ.ಯೋಜನೆಯಡಿಯಲ್ಲಿ ಮೂಲಸೌಕರ್ಯ ನಿರ್ಮಾಣದಡಿಯಲ್ಲಿ ಶೈಕ್ಷಣಿಕ ಭವನ ಮತ್ತು ಸಂಶೋಧನಾ ಭವನವನ್ನು ಅಂದಾಜು ವೆಚ್ಚ 58 ಕೋಟಿ ರೂ.ಗಳಲ್ಲಿ ನಿರ್ಮಿಸಲಾಗುತ್ತಿದೆ.
ಶೈಕ್ಷಣಿಕ ಭವನವು 107376 ಚ.ಅಡಿಗಳ ವಿಸ್ತೀರ್ಣ ಹೊಂದಿದ್ದು ಮೂರು ಮಹಡಿಗಳನ್ನು ಒಳಗೊಂಡಿರುತ್ತದೆ.ಈ ಶೈಕ್ಷಣಿಕ ಕಟ್ಟಡದಲ್ಲಿ ಡಿಜಿಟಲ್ ಶಿಕ್ಷಣ, ದೂರಶಿಕ್ಷಣ,ವಿಜ್ಞಾನ, ತಂತ್ರಜ್ಞಾನ, ಗಣಿತ ಶಾಸ್ತ್ರ ಸೇರಿದಂತೆ ಆಧುನಿಕ ವಿಷಯಗಳ ಕುರಿತು ಅಧ್ಯಯನ ನಡೆಸಲು ಬಳಸಲಾಗುತ್ತದೆ.ಇನ್ನೂ ಸಂಶೋಧನಾ ಭವನವು 16163 ಚ.ಅಡಿಗಳ ವಿಸ್ತೀರ್ಣವಿದ್ದು ಎರಡು ಮಹಡಿಗಳನ್ನು ಒಳಗೊಂಡಿದೆ.ಈ ಸಂಶೋಧನಾ ಭವನದಲ್ಲಿ ಆರ್ಥಿಕ ಅಭಿವೃದ್ಧಿ, ಸಾಮಾಜಿಕ ಸಮಾನತೆ,ಪರಿಸರ ಸಂರಕ್ಷಣೆ, ಸುಸ್ಥಿರ ಅಭಿವೃದ್ಧಿ,ಹವಾಮಾನ ಬದಲಾವಣೆ, ಮಾನವ ಬುದ್ದಿಮತ್ತೆ ಸೇರಿದಂತೆ ಆಧುನಿಕ ಶಿಕ್ಷಣ ವ್ಯವಸ್ಥೆಗೆ ಪೂರಕವಾಗುವ ವಿಷಯಗಳ ಕುರಿತು ಸುಧೀರ್ಘ ಸಂಶೋಧನೆ ನಡೆಸಲಾಗುವುದು ಮತ್ತು ವಿದ್ಯಾರ್ಥಿಗಳಿಗೆ ಐಪಿಆರ್,ಪೇಟೆಂಟ್,ಸಂಶೋಧನಾ ಪ್ರಕಟಣೆಗಳಿಗೆ ಮಾಹಿತಿ ಒದಗಿಸಲಾಗುವುದು.
ಪರಿಶೀಲನೆ:
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ರಾಜ್ಯ ಸರ್ಕಾರದ ಅನುದಾನದಲ್ಲಿ ನಿರ್ಮಾಣವಾಗುತ್ತಿರುವ ಕೆಂಪೇಗೌಡ ಅಧ್ಯಯನ ಕೇಂದ್ರಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭೇಟಿ ನೀಡಿ ಕಾಮಗಾರಿ ವಿಳಂಬದ ಕುರಿತು ಪರಿಶೀಲನೆ ನಡೆಸಿದರು.ಕಾಮಗಾರಿ ತ್ವರಿತವಾಗಿ ಮುಕ್ತಾಯಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿನ ಟ್ರಾಫಿಕ್ ಸಮಸ್ಯೆ ಕುರಿತು ಮಾಹಿತಿ ಪಡೆದು ಚರ್ಚೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.