ಬೆಂಗಳೂರು(thenewzmirror.com) : ಧಾರ್ಮಿಕ ಹೆಸರಿನಲ್ಲಿ ಶೈಕ್ಷಣಿಕ ಪ್ರವಾಸಕ್ಕೆ ವಿಶೇಷ ಒತ್ತು ನೀಡಲಾಗಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿನ ದೇವಸ್ಥಾನಗಳಿಗೆ ಮೂಲಭೂತ ಅಭಿವೃದ್ಧಿಗೆ ಸಂಬಂಧಿಸಿದಂತೆ ಕೇಂದ್ರ ಪ್ರಾಸೋದ್ಯಮ ಇಲಾಖೆಯ ಪ್ರಸಾದ್ ಯೋಜನೆಯಡಿಯಲ್ಲಿ ಭರಿಸಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಇಲಾಖೆಯ ಸಚಿವರಾದ ಎಚ್. ಕೆ. ಪಾಟೀಲ್ ತಿಳಿಸಿದರು.
ಇಂದು ವಿಧಾನ ಪರಿಷತ್ತಿನ ಕಲಾಪದ ವೇಳೆ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪವಿತ್ರ ಕ್ಷೇತ್ರಗಳಿಗೆ ಮೂಲಭೂತ ಸೌಕರ್ಯಗಳಾದ ಶೌಚಾಲಯ, ಕ್ಲೊಕ್ ರೂಮ್, ವಿಶ್ರಾಂತಿ ಕೊಠಡಿ, ಮಾಹಿತಿ ಫಲಕಗಳು ಸೈನೇಜ್ಗಳು, ಪ್ರವಾಸಿ ಮಾಹಿತಿ ಕೇಂದ್ರ, ಇಂಟರ್ಪ್ರಿಟೇಷನ್ ಕೇಂದ್ರಗಳು, ರಸ್ತೆಬದಿ ಸೌಲಭ್ಯ, ವಾಹನಗಳ ಪಾರ್ಕಿಂಗ್ ಸೌಲಭ್ಯ, ನೀರಿನ ಕಾರಂಜಿ, ಫೆನ್ ಸಿಂಗ್, ಲೈಟಿಂಗ್ಸ್, ಪಾಥ್ ವೇ, ಆಸನಗಳು, ಕುಡಿಯುವ ನೀರಿನ ಸೌಲಭ್ಯ ಕಸದ ಬುಟ್ಟಿಗಳು ಪ್ರಥಮ ಚಿಕಿತ್ಸಾ ಕೇಂದ್ರ, ಕಾವಲು ಗೋಪುರ, ಧ್ವನಿ ಮತ್ತು ಬೆಳಕು ರಂಗಮಂದಿರ, ಕರ ಕುಶಲ ಕೇಂದ್ರ, ಕ್ಯಾಫೇಟೇರಿಯಾ, ಹೆಲಿಪ್ಯಾಡ್, ಸಿಸಿಟಿವಿ, ಹೆರಿಟೇಜ್ ವಾಕ್ ಕೌಶಲ್ಯಾಭಿವೃದ್ಧಿ ತರಬೇತಿ ಮೊಬೈಲ್ ಅಪ್ಲಿಕೇಷನ್ ಅಭಿವೃದ್ಧಿ ಮುಂತಾದುವುಗಳನ್ನು ಅಭಿವೃದ್ಧಿü ಪಡಿಸುವ ಸಲುವಾಗಿ ಕೇಂದ್ರ ಸರ್ಕಾರದ ಪ್ರಸಾದ ಯೋಜನೆಯಡಿ ಮಂಜೂರು ಮಾಡಲು 16 ಪ್ರಸ್ತಾವನೆಗಳನ್ನು ಸಲ್ಲಿಸಲಾಗಿತ್ತು. ಆದರೆ ಬೆಳಗಾವಿಯ ಸವದತ್ತಿ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನಕ್ಕೆ ರೂ 18.00 ಕೋಟಿ ಬೀದರ್ ನ ಪಾಪನಾಶಂಗೆ ರೂ 20.00 ಕೋಟಿ ಹಾಗೂ ಚಾಮುಂಡಿ ದೇವಸ್ಥಾನಕ್ಕೆ ರೂ 45.00 ಕೋಟಿಗಳು ಸೇರಿದಂತೆ ಒಟ್ಟು 3 ಪ್ರಸ್ತಾವನೆಗಳು ಪ್ರಸಾದ್ ಯೋಜನೆಯಡಿ ಮಂಜುರಾಗಿವೆ ಎಂದು ಸದನದಲ್ಲಿ ತಿಳಿಸಿದರು.
ಸರ್ಕಾರಕ್ಕೂ ಪವಿತ್ರ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸುವ ಯೋಚನೆ ಇದೆ. ಪ್ರವಾಸಿ ಕ್ಷೇತ್ರಗಳು ಅಭಿವೃದ್ಧಿಯಾದರೆ ರಾಜ್ಯದ ಪ್ರಗತಿಯೂ ಸಹ ಹೆಚ್ಚುತ್ತದೆ. ಈ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕೈಜೋಡಿಸಿ ಕಾರ್ಯ ನಿರ್ವಹಿಸುವುದು ಅಗತ್ಯ ಎಂದು ತಿಳಿಸಿದರು.
ಕೊಡವ ಹೆರಿಟೇಜ್ ಕೇಂದ್ರವನ್ನು ಪಿ.ಪಿ.ಪಿ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲು ಕ್ರಮ:
ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ಕೊಡವ ಹೆರಿಟೇಜ್ ಕೇಂದ್ರದ ಕಾಮಗಾರಿಯನ್ನು ಪಿಪಿಪಿ ಮಾದರಿಯಲ್ಲಿ ಅಭಿವೃದ್ಧಿಪಡಿಸಿ ಬರುವ ಆರ್ಥಿಕ ವರ್ಷದೊಳಗಾಗಿ ಪೂರ್ಣಗೊಳಿಸಲಾಗುವುದು ಎಂದು ಕಾನೂನು, ನ್ಯಾಯ, ಮಾನವ ಹಕ್ಕುಗಳು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಇಲಾಖೆಯ ಸಚಿವರಾದ ಎಚ್. ಕೆ. ಪಾಟೀಲ್ ತಿಳಿಸಿದರು.
ಇಂದು ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ಕುಶಾಲಪ್ಪ ಎಂ.ಪಿ (ಸುಜಾ) ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, 2013-14ನೇ ಸಾಲಿನಲ್ಲಿ ಕೊಡವ ಹೆರಿಟೇಜ್ ಕೇಂದ್ರದ ಕಾಮಗಾರಿಯನ್ನು 268.04 ಲಕ್ಷಗಳ ಅಂದಾಜು ವೆಚ್ಚದಲ್ಲಿ ಪ್ರಾರಂಭಿಸಲಾಯಿತು. ನಂತರ ಈ ಕಾಮಗಾರಿಯನ್ನು ರೂ 330.45 ಲಕ್ಷಗಳಲ್ಲಿ ಮುಗಿಸಲು ಆಡಳಿತಾತ್ಮಕ ಅನುಮೋದನೆಯನ್ನು ಮಡೆದುಕೊಂಡು 6 ಕಂತುಗಳಲ್ಲಿ ಹಣ ಬಿಡುಗಡೆ ಮಾಡಲಾಗಿದೆ. ಆದರೆ ಇನ್ನೂ ಈ ಕಾಮಗಾರಿ ಪೂರ್ಣಗೊಂಡಿರುವುದಿಲ್ಲ. ಸಿ.ಎಸ್.ಆರ್. ಅನುದಾನದಡಿಯಲ್ಲಿ ಕಾಮಗಾರಿಯನ್ನು ಮಾಡಲು ಕೊಡಗು ಜಿಲ್ಲಾಧಿಕಾರಿಗಳಿಗೆ ಪ್ರವಾಸೋದ್ಯಮ ಇಲಾಖೆಯಿಂದ ಕೋರಲಾಗಿತ್ತು. ಆದರೆ ಜಿಲ್ಲಾಧಿಕಾರಿಗಳು ಹಾಗೂ ಕೊಡಗು ಜಿಲ್ಲೆಯ ಮಡಕೇರಿಯ ಅಧ್ಯಕ್ಷರು ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ, ಅವರು ಕಾಮಗಾರಿಯನ್ನು ಸಿಎಸ್.ಆರ್. ಅನುದಾನದಲ್ಲಿ ಕೈಗೊಂಡು ನಿರ್ವಹಣೆ ಮಾಡಲು ಕಷ್ಟಸಾಧ್ಯ ಎಂದು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸದರಿ ಕಾಮಗಾರಿಯನ್ನು ಪಿ.ಪಿ.ಪಿ ಮಾದರಿಯಲ್ಲಿ ಪೂರ್ಣಗೊಳಿಸಿ ನಿರ್ವಹಣೆ ಹಾಗೂ ಕಾರ್ಯಚರಣೆ ಮಾಡುವ ಬಗ್ಗೆ ಮಾರ್ಗದರ್ಶನ ಕೋರಿ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕರಿಗೆ ಪ್ರಸ್ತಾವನೆ ಸಲ್ಲಿಸಿರುತ್ತಾರೆ. ಈ ಬಗ್ಗೆ ನಿಯಮಾನುಸಾರ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಮಾತಾ ಮಾಣಿಕೇಶ್ವರಿ ದೇವಸ್ಥಾನವನ್ನು ಪ್ರವಾಸಿ ತಾಣವಾಗಿ ಮಾಡಲು ಅಗತ್ಯ ಕ್ರಮವಹಿಸಲಾಗುವುದು:
ಗುರಮಿಟಕಲ್ಲಿನ ಯಾಣಗುಂದಿಯಲ್ಲಿರುವ ಮಾತಾ ಮಾಣಿಕೇಶ್ವರಿ ದೇವಸ್ಥಾನವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಲು ಸರ್ಕಾರದಿಂದ ಅಗತ್ಯ ಕ್ರಮ ವಹಿಸಲಾಗುವುದು ಎಂದು ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಇಲಾಖೆಯ ಸಚಿವರಾದ ಎಚ್. ಕೆ. ಪಾಟೀಲ್ ತಿಳಿಸಿದರು.
ಇಂದು ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು ಇದು ಗುಡಿ ಅಲ್ಲ, ಮಠ ಅಲ್ಲ, ದೇವಸ್ಥಾನವಲ್ಲ ಇದೊಂದು ಸುಂದರವಾದ ಸ್ಥಳ. ಓರ್ವ ಯೋಗಿನಿ ಅನ್ನ ನೀರು ಇಲ್ಲದೆ ಸುಮಾರು 40 ವರ್ಷಗಳ ಕಾಲ ಬದುಕಿದ್ದಾರೆ. ಅವರೇ ಮಾತಾ ಮಾಣೀಕೇಶ್ವರಿ. ಒಂದೇ ದಿನ ಯಾಣಗುಂದಿಯಲ್ಲೇ ಇದ್ದು, ಶೀಶೈಲ ಯಾಣಗುಂದಿಯಲ್ಲಿ ಇವರ ದರ್ಶನ ನೀಡುತ್ತಿದ್ದ ಮಾತೆ. ಶಕ್ತಿ ಸ್ವರೂಪಿಣಿ. ಇವರು ದೈವಾಧೀನರಾಗಿ ಎರಡು ಮೂರು ವರ್ಷಗಳಾಗಿವೆ. ಇಂತಹ ಮಹತ್ವದ ದೇವಸ್ಥಾನ ಇನ್ನೂ ನಿರೀಕ್ಷೆಗೆ ತಕ್ಕಂತೆ ಅಭಿವೃದ್ಧಿ ಆಗಿಲ್ಲ. ಇದಕ್ಕೆ ವಿಶೇಷ ಒತ್ತು ನೀಡಿ ಮುಂದಿನ ದಿನಗಳಲ್ಲಿ ಈ ಸ್ಥಳವನ್ನು ಪ್ರವಾಸಿ ತಾಣವಾಗಿ ರೂಪಿಸಲು ಎಲ್ಲಾ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಅಲ್ಲದೆ ಸರ್ಕಾರದಿಂದ ಸೂಕ್ತ ಹಣಕಾಸಿನ ನೆರವನ್ನು ಸಹ ಒದಗಿಸಲಾಗುವುದು ಎಂದು ತಿಳಿಸಿದರು.