ಹಾವೇರಿ(thenewzmirror.com): ಹಾವೇರಿ ಜಿಲ್ಲೆ ಸವಣೂರ ಪಟ್ಟಣದಲ್ಲಿ ಸರಕಾರಿ ಆಯುರ್ವೇದಿಕ್ ಮಹಾವಿದ್ಯಾಲಯ ಹಾಗೂ ಆಸ್ಪತ್ರೆ ಈಗಾಗಲೇ ಮಂಜೂರಾಗಿದ್ದು, ಈ ಕಟ್ಟಡದಲ್ಲಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯನ್ನು ಸ್ಥಳಾಂತರಿಸಬೇಕೆಂದು ಇಲಾಖೆ ತೀರ್ಮಾನಿಸುತ್ತಿರುವುದನ್ನು ಕೈಬಿಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಪತ್ರ ಬರೆದಿರುವ ಅವರು, ಹಾವೇರಿ ಜಿಲ್ಲೆ ಸವಣೂರ ಪಟ್ಟಣದಲ್ಲಿ ಸರಕಾರಿ ಆಯುರ್ವೇದಿಕ್ ಮಹಾವಿದ್ಯಾಲಯ ಹಾಗೂ ಆಸ್ಪತ್ರೆ ಈಗಾಗಲೇ ಮಂಜೂರಾಗಿದ್ದು, ರೂ. 44.00 ಕೋಟಿಗಳ ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಪ್ರಗತಿಯಲ್ಲಿದೆ. ಈ ಮಹಾವಿದ್ಯಾಲಯ ಹಾಗೂ ಆಸ್ಪತ್ರೆಯನ್ನು ರದ್ದುಪಡಿಸಿ, ಈ ಕಟ್ಟಡದಲ್ಲಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯನ್ನು ಸ್ಥಳಾಂತರಿಸಬೇಕೆಂದು ಇಲಾಖೆ ತೀರ್ಮಾನಿಸುತ್ತಿರುವುದು ತಿಳಿದುಬಂದಿದೆ. ಈ ಕಟ್ಟಡವು ಸವಣೂರ ಪಟ್ಟಣದಿಂದ ದೂರದಲ್ಲಿದ್ದು, ಈ ಸ್ಥಳಾಂತರದಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತದೆ. ಆದ್ದರಿಂದ ಸ್ಥಳಾಂತರ ನಿರ್ಧಾರವನ್ನು ಕೈಬಿಟ್ಟು ಆಯುರ್ವೇದಿಕ್ ಮಹಾ ವಿದ್ಯಾಲಯ ಹಾಗೂ ಆಸ್ಪತ್ರೆಯನ್ನು ಇದೆ ಕಟ್ಟಡದಲ್ಲಿಯೇ ಪ್ರಾರಂಭಿಸುವುದಲ್ಲದೇ ಈ ಕಟ್ಟಡಕ್ಕೆ ಇನ್ನೂ ಅವಶ್ಯವಿರುವ ಅನುದಾನವನ್ನು ಕೂಡಲೇ ಬಿಡುಗಡೆಗೊಳಿಸಬೇಕೆಂದು ಕೋರಿದ್ದಾರೆ.
ತಾಲೂಕಾ ಸಾರ್ವಜನಿಕ ಆಸ್ಪತ್ರೆಯನ್ನು ಸಧ್ಯ ಕಾರ್ಯನಿರ್ವಹಿಸುತ್ತಿರುವ ಸ್ಥಳದಲ್ಲಿಯೇ ಮುಂದುವರೆಸುವುದಲ್ಲದೇ ಈ ಕಟ್ಟಡಕ್ಕೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಲು ಅನುದಾನ ಮಂಜೂರಾತಿ ನೀಡಬೇಕೆಂದು ಮನವಿ ಮಾಡಿದ್ದಾರೆ.


ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ಅನುದಾನ ಬಿಡುಗಡೆ:
ಉತ್ತರ ಕರ್ನಾಟಕ ಭಾಗದ ಪ್ರಸಿದ್ಧ ಯಾತ್ರಾ ಸ್ಥಳ ಸವದತ್ತಿ ಯಲ್ಲಮ್ಮನ ಗುಡ್ಡದ ಅಭಿವೃದ್ಧಿಗೆ ಕೇಂದ್ರ ಸರ್ಕಾರ 100 ಕೋಟಿ ರೂ. ಮಂಜೂರು ಮಾಡಿರುವುದಕ್ಕೆ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರಸಿಂಗ್ ಶೇಖಾವತ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.
ಈ ಕುರಿತು ಎಕ್ಸ್ ಮಾಡಿರುವ ಅವರು, ಕೇಂದ್ರದ ಪ್ರಸಾದ ಯೋಜನೆ ಅಡಿಯಲ್ಲಿ ಸವದತ್ತಿ ಎಲ್ಲಮ್ಮ ದೇವಸ್ಥಾನದ ಅಭಿವೃದ್ಧಿಗೆ 100 ಕೋಟಿ ಅನುದಾನ ಬಿಡುಗಡೆ ಮಾಡಿರುವುದರಿಂದ ಈ ದೇವಸ್ಥಾನಕ್ಕೆ ಬರುವ ಸಾವಿರಾರು ಭಕ್ತರಿಗೆ ಆಧುನಿಕ ಸೌಲಭ್ಯಗಳು ದೊರೆಯುವಂತಾಗಲಿದೆ. ಭಕ್ತರಲ್ಲಿ ದೇವಸ್ಥಾನದ ಬಗ್ಗೆ ಸಕಾರಾತ್ಮಕ ಭಾವನೆ ಮೂಡುವ ವಿಶ್ವಾಸ ಇದೆ ಎಂದು ತಿಳಿಸಿದ್ದಾರೆ.