ಲೋಕಸಭಾ ಕ್ಷೇತ್ರ ಮರುವಿಂಗಡಣೆ ವಿರುದ್ಧ ಹೋರಾಟದ ಬಗ್ಗೆ ಹೈಕಮಾಂಡ್ ಜತೆ ಚರ್ಚೆ: ಡಿಸಿಎಂ ಡಿ.ಕೆ. ಶಿವಕುಮಾರ್

RELATED POSTS

ಬೆಂಗಳೂರು(thenewzmirror.com):“ಲೋಕಸಭಾ ಕ್ಷೇತ್ರ ಮರುವಿಂಗಡಣೆ ವಿರುದ್ಧದ ಹೋರಾಟಕ್ಕೆ ತಮಿಳುನಾಡು ಸರ್ಕಾರದ ಆಹ್ವಾನದ ಕುರಿತು ಪಕ್ಷದ ಹೈಕಮಾಂಡ್ ನಾಯಕರ ಜತೆ ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳುತ್ತೇವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು. 

ತಮಿಳುನಾಡಿನ ಅರಣ್ಯ ಸಚಿವ ಪೊನ್ನುಮುಡಿ, ರಾಜ್ಯಸಭೆ ಸದಸ್ಯ ಎಂ ಎಂ ಅಬ್ದುಲ್ಲ ಅವರು ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ವಿಧಾನಸೌಧದಲ್ಲಿ ಬುಧವಾರ ಭೇಟಿ ಮಾಡಿ, ಕೇಂದ್ರ ಸರಕಾರದ ಉದ್ದೇಶಿತ ಲೋಕಸಭೆ ಕ್ಷೇತ್ರಗಳ ಮರುವಿಂಗಡಣೆ  ಕುರಿತು ಮುಂದೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲು ತಮಿಳುನಾಡು ಸಿಎಂ ಸ್ಟಾಲಿನ್ ಅವರು ಚನ್ನೈನಲ್ಲಿ ಇದೇ 22 ರಂದು ಏರ್ಪಡಿಸಿರುವ ದಕ್ಷಿಣ ಭಾರತ ರಾಜ್ಯಗಳ  ಪ್ರತಿನಿಧಿಗಳ ಸಭೆಯಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಿದರು.

ನಂತರ ಮಾಧ್ಯಮಗಳಿಗೆ ಮಾಹಿತಿ ನೀಡಿದ ಶಿವಕುಮಾರ್ ಅವರು, “ಲೋಕಸಭೆ ಕ್ಷೇತ್ರಗಳ ಮರುವಿಂಗಡಣೆ ಹೆಸರಲ್ಲಿ ದಕ್ಷಿಣ ಭಾರತದ ರಾಜ್ಯಗಳಾದ ತಮಿಳುನಾಡು, ಕರ್ನಾಟಕ, ಕೇರಳ, ಆಂಧ್ರಪ್ರದೇಶ, ತೆಲಂಗಾಣ ಲೋಕಸಭೆ ಕ್ಷೇತ್ರಗಳ ಕಡಿಮೆ ಮಾಡುವ ಷಡ್ಯಂತ್ರ ವಿರುದ್ಧ ಹೋರಾಡಲು ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಅವರು ಜಂಟಿ ಹೋರಾಟ ಸಮಿತಿ ರಚನೆಗೆ ಮುಂದಾಗಿದ್ದಾರೆ. ಹೀಗಾಗಿ ತಮಿಳುನಾಡಿನ ಮುಖ್ಯಮಂತ್ರಿಗಳ ಪರವಾಗಿ ಅಲ್ಲಿನ ಅರಣ್ಯ ಸಚಿವ ಪೊನ್ನುಮುಡಿ, ರಾಜ್ಯಸಭೆ ಸದಸ್ಯ ಎಂ.ಎಂ ಅಬ್ದುಲ್ಲ ಅವರು ನನ್ನನ್ನು ಹಾಗೂ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದಾರೆ. ಇದೇ ತಿಂಗಳು 22ರಂದು ಚೆನ್ನೈನಲ್ಲಿ ನಡೆಯಲಿರುವ ಸಭೆಯಲ್ಲಿ ಭಾಗವಹಿಸಲು ಆಹ್ವಾನ ನೀಡಿದ್ದಾರೆ. ಕ್ಷೇತ್ರ ಮರುವಿಂಗಡಣೆ ವಿರೋಧಿಸಿ ತಮಿಳುನಾಡಿನಲ್ಲಿ ಸರ್ವಪಕ್ಷ ಸಭೆ ಮಾಡಿ ಚರ್ಚೆ ಮಾಡಿದ್ದು, ಅಲ್ಲಿ ಪಕ್ಷಾತೀತವಾಗಿ ಒಗ್ಗಟ್ಟು ಪ್ರದರ್ಶಿಸಿದ್ದಾರೆ” ಎಂದು ತಿಳಿಸಿದರು.

“ತಮಿಳುನಾಡಿನ ಆಡಳಿತ ಪಕ್ಷ ಡಿಎಂಕೆ ನಮ್ಮ ಮೈತ್ರಿ ಪಕ್ಷ ಕೂಡ ಆಗಿದ್ದು, ಈ ವಿಚಾರವಾಗಿ ಅವರ ನಿಲುವು ನಮಗೆ ಸಮಾಧಾನವಿದೆ. ಆದರೂ ನಮ್ಮದು ರಾಷ್ಟ್ರೀಯ ಪಕ್ಷವಾಗಿರುವ ಹಿನ್ನೆಲೆಯಲ್ಲಿ, ನಮ್ಮ ಪಕ್ಷದ ವರಿಷ್ಠರ ಜತೆ ಚರ್ಚೆ ಮಾಡಬೇಕು. ಅವರ ಮಾರ್ಗದರ್ಶನ ಪಡೆದ ನಂತರ ಮುಂದಿನ ತೀರ್ಮಾನ ಮಾಡುತ್ತೇವೆ ಎಂದು ಅವರಿಗೆ ತಿಳಿಸಿದ್ದೇವೆ. ತಮಿಳುನಾಡಿನ ಸಚಿವರು ಇಂದು ಭಾಷಾ ವಿಚಾರ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ನಮ್ಮೊಂದಿಗೆ ಚರ್ಚೆ ಮಾಡಿದ್ದಾರೆ. ನಾವು ನಮ್ಮ ಗೌರವ ಹಾಗೂ ಸ್ವಾಭಿಮಾನ ಉಳಿಸಿಕೊಳ್ಳುವ ಕೆಲಸ ಮಾಡಬೇಕಿದೆ” ಎಂದರು.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist