ಬೆಂಗಳೂರು(thenewzmirror.com): ನಮ್ಮ ಭಾರತೀಯ ನೆಲದಲ್ಲಿ ಅಧ್ಯಾತ್ಮ ಪರಂಪರೆ ಅತ್ಯಂತ ಶ್ರೀಮಂತವಾಗಿದೆ. ದೈಹಿಕ ಶುಚಿತ್ವದಷ್ಟೇ ಮಾನಸಿಕ ಶುಚಿತ್ವಕ್ಕೆ ಅಗತ್ಯವಾದ ಧ್ಯಾನ, ತಪ, ಜಪಗಳನ್ನು ಮೈಗೂಡಿಸಿಕೊಂಡ ದೇಶ ನಮ್ಮದು ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ಎಸ್ ತಂಗಡಗಿ ಅಭಿಪ್ರಾಯ ಪಟ್ಟರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಶ್ರೀ ರೇಣುಕಾ ಶಿವಾಚಾರ್ಯ ಅವರ ದಿವ್ಯ ಸಾನಿಧ್ಯದಲ್ಲಿ ಆಯೋಜಿಸಿದ್ದ ಶ್ರೀ ಜಗದ್ಗುರು ರೇಣುಕಾಚಾರ್ಯರ ಜಯಂತಿಯ ಯುಗಮಾನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಾಮಾನ್ಯವಾಗಿ ಹುಟ್ಟಿದ ಮಾನವನು ತನ್ನ ಸಾಧನೆಯಿಂದಲೇ ಉನ್ನತ ಹಂತವನ್ನು ತಲುಪುವ ಪುಣ್ಯಭೂಮಿಯಿದು. ನಮ್ಮ ನಾಡಿನಲ್ಲಿ ಅನೇಕ ಸಂತರು, ಸಾಧುಗಳು, ಶರಣರು ಆಗಿಹೋಗಿದ್ದಾರೆ. ಇಂತಹ ದಾರ್ಶನಿಕ ಲೋಕದಲ್ಲಿ ಅಗ್ರಗಣ್ಯರಾದವರು ಜಗದ್ಗುರು ರೇಣುಕಾಚಾರ್ಯರು ಎಂದರು.
ಜಗತ್ತಿನ ಎಲ್ಲರಿಗೂ ಅನುಸರಿಸಲು ಸುಲಭವಾಗುವಂತಹ ಅನೇಕ ಆಗಮ ಸೂತ್ರಗಳನ್ನು ಇವರು ರಚಿಸಿದರು. ತಾವು ಜನಿಸಿದ ಇಂದಿನ ತೆಲಂಗಾಣಕ್ಕೆ ಸೇರಿದ ಕೊಲ್ಲಿಪಾಕಿ ಎಂಬ ಗ್ರಾಮದಲ್ಲಿ 18 ಮಠಗಳನ್ನು ಸ್ಥಾಪಿಸಿ, ಅಲ್ಲಿ ಎಲ್ಲರಿಗೂ ಅನ್ನ ಮತ್ತು ವಿದ್ಯೆಯ ದಾಸೋಹ ನಡೆಸಿದರು. ಅಲ್ಲಿಂದ ಕರ್ನಾಟಕದ ಮಲೆನಾಡಿನ ಭದ್ರಾನದಿ ದಂಡೆಯಲ್ಲಿರುವ ಇಂದಿನ ಚಿಕ್ಕಮಗಳೂರು ಜಿಲ್ಲೆಯ ಕಳಸ ಎಂಬ ಗ್ರಾಮಕ್ಕೆ ಬಂದು ಅಲ್ಲಿ ನೆಲೆಯೂರಿದರು. ಅಲ್ಲಿಂದ ಅಗಸ್ತ್ಯ ಮಹರ್ಷಿಗಳ ಆಶ್ರಮಕ್ಕೆ ಭೇಟಿ ನೀಡಿ, ಅನೇಕ ಆಧ್ಯಾತ್ಮಿಕ ವಿಷಯಗಳನ್ನು ಅವರೊಂದಿಗೆ ಚರ್ಚಿಸಿ, ಜನಸಾಮಾನ್ಯರಿಗೆ ಅವುಗಳನ್ನು ವಿವರಿಸಲು ಅನುಕೂಲವಾಗುವಂತೆ ಬಾಳೇಹೊನ್ನೂರಿನಲ್ಲಿ ಶ್ರೀ ರಂಭಾಪುರಿ ಪೀಠವನ್ನು ಸ್ಥಾಪಿಸಿದರು ಎಂದು ತಿಳಿಸಿದರು.
ಹೆಣ್ಣು ಮಕ್ಕಳಿಗೆ ದೀಕ್ಷೆ ಕೊಟ್ಟ ಮೊದಲಿಗರು:
ವೀರಶೈವ ಧರ್ಮಕ್ಕೆ ಜೀವ ನೀಡಿದ ಮಹಾನ್ ವ್ಯಕ್ತಿ ರೇಣುಕಾಚಾರ್ಯರು. ಜಾತಿಬೇಧವನ್ನು ತೋರದೆ ಎಲ್ಲರಿಗೂ ಲಿಂಗದೀಕ್ಷೆಯನ್ನು ನೀಡುವ ಮೂಲಕ ವೀರಶೈವ ತತ್ವವನ್ನು ಬೋಧಿಸಿದರು. ಬಹಳ ಪ್ರಮುಖವಾಗಿ ಹೆಣ್ಣುಮಕ್ಕಳಿಗೂ ಲಿಂಗದೀಕ್ಷೆ ನೀಡಿ, ಧರ್ಮಗುರುವಿನ ಪೀಠದಲ್ಲಿ ಕೂರಿಸುವ ಬಹುದೊಡ್ಡ ನಿರ್ಧಾರವನ್ನು ಅವರು ಮಾಡಿದ್ದರು. ಅನೇಕ ಧರ್ಮಗ್ರಂಥಗಳನ್ನು ರಚಿಸಿರುವ ಇವರು ಶಕ್ತಿವಿಶಿಷ್ಟಾದ್ವೈತ ಎಂಬ ತತ್ವವನ್ನು ಬೋಧಿಸಿದರು. 28 ಶಿವಾಗಮಗಳು, ಶ್ರೀ ಸಿದ್ಧಾಂತ ಶಿಖಾಮಣಿ ಇತ್ಯಾದಿ ಅನೇಕ ಗ್ರಂಥಗಳನ್ನು ರಚಿಸಿದ್ದಾರೆ. ಕನ್ನಡದಲ್ಲಿಯೂ ಕೂಡಾ ಇವರ ಚರಿತ್ರೆಯನ್ನು ಹೇಳುವ ಹಲವಾರು ಗ್ರಂಥಗಳಿವೆ. ಇಂತಹ ಶರಣರು ಮತ್ತು ದಾರ್ಶನಿಕರು ಯಾವುದೇ ಒಂದು ಸಮಾಜಕ್ಕೆ ಸೀಮಿತವಾದವರಲ್ಲ. ಬದಲಿಗೆ ಎಲ್ಲಾ ವರ್ಗಕ್ಕೆ ಸಲ್ಲುವಂತ ವ್ಯಕ್ತಿತ್ವ ಇವರದ್ದು. ಇಂತಹ ಮಹನೀಯರ ಜಯಂತಿಗಳನ್ನ ಆಚರಣೆ ಮಾಡುವ ಮೂಲಕ ಯುವ ಪೀಳಿಗೆಗೆ ಇವರ ಆದರ್ಶಗಳನ್ನು ಪರಿಚಯಿಸುವಂತ ಕೆಲಸ ಮಾಡುತ್ತಿರುವುದು ನಮ್ಮ ಹೆಮ್ಮೆ ಎಂದು ತಿಳಿಸಿದರು.
ತಾವು ಮಾಡುವ ಕೆಲಸದಲ್ಲಿ ಶ್ರದ್ಧೆ ವಹಿಸುವ, ಹಾಗೂ ಮನುಕುಲದ ಏಳಿಗೆಗಾಗಿ ಸದಾ ಚಿಂತಿಸುವ ಜಗದ್ಗುರು ರೇಣುಕಾಚಾರ್ಯರಂತಹ ಮಹಾತ್ಮರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದು ಸಚಿವರು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ, ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್, ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನ ಮರದ, ಮಾಜಿ ಮೇಯರ್ ಗಂಗಾಂಬಿಕಾ ಮಲ್ಲಿಕಾರ್ಜುನ್, ಇಲಾಖಾ ಕಾರ್ಯದರ್ಶಿ ಡಾ. ಎನ್.ಮಂಜುಳಾ, ನಿರ್ದೇಶಕಿ ಕೆ.ಎಂ.ಗಾಯಿತ್ರಿ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.