ಬೆಂಗಳೂರು(thenewzmirror.com): ಕೈಮಗ್ಗ ನೇಕಾರರ ಆತ್ಮಹತ್ಯೆ ಪ್ರಕರಣಗಳಲ್ಲಿ ಮೃತರ ಕುಟುಂಬದವರಿಗೆ ರೂ 5 ಲಕ್ಷ ಪರಿಹಾರ ವಿತರಿಸುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚೆ ಮಾಡಲಾಗುವುದು ಎಂದು ಜವಳಿ ಸಚಿವ ಶಿವಾನಂದ ಪಾಟೀಲ ಅವರು ವಿಧಾನಪರಿಷತ್ತಿಗೆ ಭರವಸೆ ನೀಡಿದ್ದಾರೆ.
ಮಂಗಳವಾರ ಪ್ರಶ್ನೋತ್ತರ ವೇಳೆಯಲ್ಲಿ ಶಾಸಕರಾದ ಉಮಾಶ್ರೀ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೇಂದ್ರ ಸರ್ಕಾರದಿಂದ ಪ್ರಧಾನ ಮಂತ್ರಿ ಭಿಮಾ ಯೋಜನೆಯಲ್ಲಿ ರೂ 2 ಲಕ್ಷ ಪರಿಹಾರ ವಿತರಣೆ ಯೋಜನೆ ಜಾರಿಯಲ್ಲಿದ್ದು, ಈ ಯೋಜನೆಯ ವಿಮಾ ಕಂತನ್ನು ರಾಜ್ಯ ಸರ್ಕಾರವೇ ಭರಿಸುತ್ತಿದೆ. ಈ ರೂ 2 ಲಕ್ಷ ಗಳೊಂದಿಗೆ, ಮುಖ್ಯಮಂತ್ರಿ ಪರಿಹಾರ ನಿಧಿಯಿಂದಲೂ ರೂ 3 ಲಕ್ಷ ಪರಿಹಾರ ವಿತರಣೆ ಮಾಡುವ ಬಗ್ಗೆ ಮುಖ್ಯಮಂತ್ರಿ ಜತೆ ಚರ್ಚಿಸುತ್ತೇನೆ ಎಂದು ಹೇಳಿದರು.
ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ಪರಿಹಾರ ವಿತರಣೆ ಮಾಡುವ ಯೋಜನೆ ಜಾರಿಯಲ್ಲಿ ಇರಲಿಲ್ಲ. ಆದರೆ ಕೋವಿಡ್ ಅವಧಿಯಲ್ಲಿ 25 ಮೃತ ನೇಕಾರರ ಕುಟುಂಬಗಳಿಗೆ ತಲಾ ರೂ 5 ಲಕ್ಷಗಳಂತೆ ರೂ 1.25 ಕೋಟಿ ಪರಿಹಾರ ವಿತರಿಸಲಾಗಿದೆ. ಈ ಪರಿಹಾರ ವಿತರಣೆ ಯೋಜನೆ ಮುಂದುವರಿಕೆಗೆ ಆರ್ಥಿಕ ಇಲಾಖೆ ಅನುಮೋದನೆಗೆ ಪ್ರಯತ್ನಿಸಲಾಗುವುದು ಎಂದರು.
ಆತ್ಮಹತ್ಯೆ ಮಾಡಿಕೊಂಡ ನೇಕಾರನ ಪತ್ನಿಗೆ ಪಿಂಚಣಿ ಅಥವಾ ಮೃತರ ಮಕ್ಕಳಿಗೆ ಉಚಿತಿ ಶಿಕ್ಷಣ ನೀಡುವ ಯೋಜನೆ ಇಲ್ಲ. ಆದರೆ ರೂ 2,500ಗಳಿಂದ ರೂ 11,000ಗಳವರೆಗೆ ವಿದ್ಯಾರ್ಥಿವೇತನ ನೀಡಲಾಗುತ್ತಿದೆ. 2022-23ನೇ ಸಾಲಿನಲ್ಲಿ 3,664 ವಿದ್ಯಾರ್ಥಿಗಳಿಗೆ ರೂ 1.63 ಕೋಟಿ ಹಾಗೂ 2023-24ನೇ ಸಾಲಿನಲ್ಲಿ 3,689 ವಿದ್ಯಾರ್ಥಿಗಳಿಗೆ ರೂ 1.99 ಕೋಟಿ ವಿದ್ಯಾರ್ಥಿ ವೇತನವನ್ನು ಡಿಬಿಟಿ ಮೂಲಕ ವರ್ಗಾವಣೆ ಮಾಡಲಾಗಿದೆ ಎಂದು ವಿವರಿಸಿದರು.
ನಾಲ್ಕು ಕೃಷಿ ಉತ್ಪನ್ನ ಯಶವಂತಪುರದಿಂದ ಶಿಫ್ಟ್:
ಯಶವಂತಪುರ ಕೃಷಿ ಉತ್ಪನ್ನ ಮಾರುಕಟ್ಟೆಯಿಂದ ನಾಲ್ಕು ಉತ್ಪನ್ನಗಳ ವಹಿವಾಟನ್ನು ದಾಸನಪುರ ಉಪ ಮಾರುಕಟ್ಟೆಗೆ ಸ್ಥಳಾಂತರ ಮಾಡಲಾಗುವುದು ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರು ವಿಧಾನಪರಿಷತ್ತಿಗೆ ತಿಳಿಸಿದರು.
ಪ್ರಶ್ನೋತ್ತರ ವೇಳೆಯಲ್ಲಿ ಎಂ.ನಾಗರಾಜು ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈರುಳ್ಳಿ, ಬೆಳ್ಳುಳ್ಳಿ, ಆಲೂಗಡ್ಡೆ ಮತ್ತು ಶುಂಠಿಯನ್ನು ಯಶವಂತಪುರ ಮುಖ್ಯ ಮಾರುಕಟ್ಟೆ ಪ್ರಾಂಗಣದಿಂದ ದಾಸನಪುರ ಉಪ ಮಾರುಕಟ್ಟೆಗೆ ಸ್ಥಳಾಂತರ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.
ನಾಲ್ಕು ಉತ್ಪನ್ನಗಳನ್ನು ದಾಸನಪುರ ಉಪ ಮಾರುಕಟ್ಟೆಗೆ ಸ್ಥಳಾಂತರ ಮಾಡಿರುವ ಸರ್ಕಾರದ ಕ್ರಮವನ್ನು ಕೆಲವು ವರ್ತಕರು ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಿದ್ದರು.
ನ್ಯಾಯಾಲಯ ಸರ್ಕಾರದ ಆದೇಶವನ್ನು ಎತ್ತಿಹಿಡಿದಿದ್ದು, ಸರ್ಕಾರ ಈರುಳ್ಳಿ, ಬೆಳ್ಳುಳ್ಳಿ, ಆಲೂಗಡ್ಡೆ ಮತ್ತು ಶುಂಠಿ ವರ್ತಕರಿಗೆ ಉಪ ಮಾರುಕಟ್ಟೆ ಪ್ರಾಂಗಣದಲ್ಲಿ ಮಳಿಗೆ ಹಂಚಿಕೆ ಮಾಡಲಿದೆ ಎಂದು ತಿಳಿಸಿದರು. ಯಶವಂತಪುರ ಎಪಿಎಂಸಿಯಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆಯನ್ನು ನಿಯಂತ್ರಣ ಹಾಗೂ ರೈತರ ಹಿತದೃಷ್ಟಿಯಿಂದ ದಾಸನಪುರದಲ್ಲಿ 67.25 ಎಕರೆ ಸರ್ಕಾರಿ ಭೂಮಿಯನ್ನು ಮಂಜೂರು ಮಾಡಲಾಗಿದೆ. ಈ ಪ್ರದೇಶದಲ್ಲಿ ರೂ 306.50 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಮಾರುಕಟ್ಟೆ ಅಭಿವೃದ್ಧಿಪಡಿಸಲಾಗಿದೆ.
ಎಪಿಎಂಸಿಗಳನ್ನು ಹೊರತುಪಡಿಸಿ ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಕಾಯ್ದೆ ಅಡಿ ವಿವಿಧ ಅವಕಾಶ ಕಲ್ಪಿಸಿ 4 ಖಾಸಗಿ ಮಾರುಕಟ್ಟೆ ಹಾಘೂ 65 ನೇರ ಖರೀದಿ ಕೇಂದ್ರಗಳನ್ನು ನಡೆಸಲು ಲೈಸೆನ್ಸ್ ನೀಡಲಾಗಿದೆ ಎಂದರು.