ಬೆಂಗಳೂರು(www.thenewzmirror.com):ಕರ್ನಾಟಕವನ್ನು ನಾವೀನ್ಯತೆ ಮತ್ತು ಉದ್ಯಮಶೀಲತೆ ವಲಯದಲ್ಲಿ ಜಾಗತಿಕ ನಾಯಕನ್ನಾಗಿಸುವಲ್ಲಿ ಎಲಿವೇಟ್- 2024 ಮಹತ್ವದ ಮೈಲಿಗಲ್ಲು ಸೃಷ್ಟಿಸಿದೆ. ಒಂದು ಬಿಲಿಯನ್ ವ್ಯವಹಾರವನ್ನು ದಾಟಿದ 45 ಯುನಿಕಾರ್ನಗಳು ಮತ್ತು 161 ಬಿಲಿಯನ್ ಯುಎಸ್ ಡಿ ಯೊಂದಿಗೆ ಜಾಗತಿಕ ಆರಂಭಿಕ ಕ್ರಾಂತಿಯಲ್ಲಿ ಬೆಂಗಳೂರು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಕರ್ನಾಟಕ ಸರ್ಕಾರದ ಮಾಹಿತಿ ತಂತ್ರಜ್ಞಾನ ಇಲಾಖೆ ಏರ್ಪಡಿಸಿದ್ದ ʼಎಲಿವೇಟ್-2024ʼ ಕಾರ್ಯಕ್ರಮದಡಿ ವಿಜೇತರಾದ 101 ನವೋದ್ಯಮಗಳನ್ನು ಅಭಿನಂದಿಸಿ ಮಾತನಾಡಿದ ಅವರು, ಕರ್ನಾಟಕ ಸರ್ಕಾರ ನವೋದ್ಯಮಗಳಿಗೆ ಬೆಂಬಲ ನೀಡುತ್ತಾ ಬಂದಿದ್ದು, ಇದುವರೆವಿಗೂ 1084 ನವೋದ್ಯಮಗಳಿಗೆ 249 ಕೋಟಿ ರೂ. ಆರ್ಥಿಕ ನೆರವು ವಿತರಿಸಲಾಗಿದೆ, ಈ ನವೋದ್ಯಮಗಳಲ್ಲಿ ಶೇ. 25ರಷ್ಟು ಮಹಿಳಾ ನೇತೃತ್ವದ ಉದ್ಯಮಿಗಳಾಗಿದ್ದು, ಶೇ. 30ರಷ್ಟು ಬೆಂಗಳೂರನ್ನು ಹೊರತು ಪಡಿಸಿದ ರಾಜ್ಯದ ಇತರ ಸ್ಥಳಗಳ ಉದ್ಯಮಿಗಳು ಎಂದರು.
ಎಲಿವೇಟ್ 2024ರಲ್ಲಿನ 101 ವಿಜೇತ ನವೋದ್ಯಮಿಗಳಲ್ಲಿ 42 ಮಹಿಳೆಯರಿದ್ದು ರಾಜ್ಯದ ವಿವಿಧ ಸ್ಥಳಗಳ 36 ಮಂದಿ ಇದ್ದಾರೆ, ಇವುಗಳು 25 ಕೋಟಿ ರೂ. ಆರ್ಥಿಕ ನೆರವು ಪಡೆಯಲು ಅರ್ಹವಾಗಿವೆ ಎಂದೂ ಸಚಿವರು ಮಾಹಿತಿ ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಮಾಹಿತಿ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಡಾ. ಏಕ್ರೂಪ್ ಕೌರ್ ಹಾಗೂ 2017ರ ನವೋದ್ಯಮಗಳ ವಿಜೇತರಾದ ಗೀತಾ ಹಾಗೂ ಸುಮಂತ್ ಪಾಲ್ಗೊಂಡಿದ್ದರು.