Bharath Rathna | ಡಾ. ಶ್ರೀ ಶಿವಕುಮಾರ ಸ್ವಾಮೀಜಿಗಳಿಗೆ ಭಾರತ ರತ್ನ ನೀಡಲು ಕೇಂದ್ರಕ್ಕೆ ಮನವಿ; ಡಿಸಿಎಂ ಡಿ.ಕೆ. ಶಿವಕುಮಾರ

Request to the Center to confer Bharat Ratna on Dr. Shri Shivakumar Swamiji; DCM D.K. Shivakumar

ತುಮಕೂರು, (www.thenewzmirror.com);

“ಜಾತಿ ಧರ್ಮಗಳ ತಾರತಮ್ಯವಿಲ್ಲದೆ ಅನ್ನ, ಅಕ್ಷರ, ಆಶ್ರಯ ನೀಡುವ ಮೂಲಕ ಸಮಾಜಕ್ಕೆ ಸಾವಿರಾರು ಮುತ್ತುರತ್ನಗಳನ್ನು ನೀಡಿರುವ ಶ್ರೀ ಶಿವಕುಮಾರ ಸ್ವಾಮೀಜಿಗಳಿಗೆ “ಭಾರತ ರತ್ನ” ಪುರಸ್ಕಾರ ನೀಡಿ ಗೌರವಿಸಬೇಕು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್, ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ಅವರ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು.

RELATED POSTS

ತುಮಕೂರಿನ ಸಿದ್ದಗಂಗಾ ಮಠದಲ್ಲಿ ಮಂಗಳವಾರ ನಡೆದ ಶಿವೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಗಳ 118 ನೇ ಜಯಂತಿ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾತನಾಡಿದರು.

ಶ್ರೀ ಶಿವಕುಮಾರ ಸ್ವಾಮೀಜಿಗಳು ಈ ಮಠದ ದಾಸೋಹ ಪರಿಕಲ್ಪನೆ ಮೂಲಕ ಅನೇಕ ಸಾಧಕರನ್ನು ಸಮಾಜಕ್ಕೆ ನೀಡಿದ ಪರಮ ಪೂಜ್ಯರು ಹಾಗೂ ಸಿದ್ದಗಂಗಾ ಮಠ ಪವಿತ್ರ ಸ್ಥಳ. ಇಂಥ ಸ್ಥಳ ನಿರ್ಮಾಣಕ್ಕೆ ಕಾರಣರಾದ ಶ್ರೀ ಶಿವಕುಮಾರ ಸ್ವಾಮೀಜಿಗಳಿಗೆ ಭಾರತ ರತ್ನ ನೀಡುವಂತೆ ಪ್ರಧಾನಿಗಳ ಗಮನಕ್ಕೆ ತರುವಂತೆ ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ಡಿಸಿಎಂ ಕೋರಿಕೊಂಡರು.

“ಗುರುವಿನಿಂದ ನಮ್ಮ ಬಂಧುಗಳು, ಗುರುವಿನಿಂದ ನಮ್ಮ ದೈವಗಳು, ಗುರುವಿನಿಂದ ಪುಣ್ಯ ಜಗಕ್ಕೆಲ್ಲ, ಗುರುವಿನಿಂದಲೇ ಮುಕ್ತಿ ಎಂದು ಸರ್ವಜ್ಞ ಹೇಳಿದ್ದಾರೆ. ನಾನು ಶ್ರೀಗಳ ಕೊನೆ ದಿನಗಳಲ್ಲಿ ಅವರನ್ನು ಚೆನ್ನೈ ಆಸ್ಪತ್ರೆಯಲ್ಲಿ ಭೇಟಿ ಮಾಡುವ ಅವಕಾಶ ಸಿಕ್ಕಿತ್ತು. ಶಿವಕುಮಾರಸ್ವಾಮಿಗಳು ನಮ್ಮ ಜಿಲ್ಲೆಯವರು. ನಮ್ಮ ತಂದೆ ತಾಯಿಗಳು ನನಗೂ ಶಿವಕುಮಾರ ಎಂದು ಹೆಸರಿಟ್ಟಿರುವುದು ನನ್ನ ಭಾಗ್ಯ. ಶ್ರೀಗಳನ್ನು ದಿನವೂ ಸ್ಮರಿಸುವ ಪುಣ್ಯ ನನ್ನದು ಎಂದು ನಾನು ಭಾವಿಸುತ್ತೇನೆ” ಎಂದರು.

“ನಾವೆಲ್ಲರೂ ದೇವರ ಸ್ವರೂಪಿಯನ್ನು ಸ್ಮರಿಸುತ್ತಿದ್ದೇವೆ. ನಮ್ಮ ದೇಹಕ್ಕೆ ಹಸಿವಾದರೆ ಪ್ರಸಾದ ಬೇಕು. ಮನಸ್ಸಿಗೆ ಹಸಿವಾದರೆ ಪ್ರಾರ್ಥನೆ ಮಾಡಬೇಕು. ಮನುಷ್ಯನ ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲವಾಗುವುದಿಲ್ಲ ಎಂಬುದು ನನ್ನ ನಂಬಿಕೆ. ನಾನು ಧರ್ಮ, ದೇವರ ಮೇಲೆ ನಂಬಿಕೆ ಇಟ್ಟುಕೊಂಡಿರುವವನು. ಧರ್ಮ ಯಾವುದಾದರೂ ತತ್ವವೊಂದೇ, ನಾಮ ನೂರಾದರೂ ದೈವವೊಂದೇ, ಪೂಜೆ ಯಾವುದಾದರೂ ಭಕ್ತಿಯೊಂದೇ, ಕರ್ಮ ಹಲವಾದರೂ ನಿಷ್ಠೆಯೊಂದೆ, ದೇವನೊಬ್ಬ ನಾಮ ಹಲವು. ನಮ್ಮ ಮನಸ್ಸಿಗೆ ಶಾಂತಿ ಸಿಗಬೇಕು ಎಂದು ನಾವು ಈ ಮಠಕ್ಕೆ ಆಗಮಿಸಿ ಶ್ರೀಗಳನ್ನು ಸ್ಮರಿಸುತ್ತಿದ್ದೇವೆ” ಎಂದು ಹೇಳಿದರು.

“ಶ್ರೀಗಳು ಹಾಕಿಕೊಟ್ಟ ಹಾದಿ, ಅವರ ಆಚಾರ ವಿಚಾರ, ಅವರ ನುಡಿಮುತ್ತುಗಳು ನಮ್ಮ ಬದುಕಿಗೆ ಶಕ್ತಿ ತುಂಬುತ್ತವೆ. ಎಸ್.ಎಂ. ಕೃಷ್ಣ ಅವರ ಸರ್ಕಾರದಲ್ಲಿ ನಾನು ಸಚಿವನಾಗಿದ್ದಾಗ ಈ ಮಠಕ್ಕೆ ಆಗಮಿಸಿದ್ದೆ. ಇಲ್ಲಿನ ಅನ್ನದಾಸೋಹ ಕಾರ್ಯಕ್ರಮ ನೋಡಿ ಎಸ್.ಎಂ. ಕೃಷ್ಣ ಅವರು ವಾಪಸ್ ತೆರಳುವಾಗ ಮಹತ್ವದ ನಿರ್ಧಾರ ಮಾಡಿದರು. ಸಿದ್ದಗಂಗಾ ಮಠದ ಅನ್ನದಾಸೋಹ ಕಾರ್ಯಕ್ರಮ ನಮ್ಮ ಸರ್ಕಾರದ ಕಾರ್ಯಕ್ರಮವಾಗಿ ಪರಿವರ್ತನೆ ಆಗಬೇಕು ಎಂದು ರಾಜ್ಯಾದ್ಯಂತ ಎಲ್ಲಾ ಸರ್ಕಾರಿ ಶಾಲೆಗಳ ಮಕ್ಕಳಿಗೆ ʼಮಧ್ಯಾಹ್ನದ ಬಿಸಿಯೂಟ ಯೋಜನೆʼ ಆರಂಭಿಸಿದರು” ಎಂದು ಸ್ಮರಿಸಿದ ಡಿಸಿಎಂ, “ನಾವು ತಿನ್ನುವ ಅನ್ನ, ಬೇಯಿಸುವ ನೀರು, ನಮ್ಮ ದುಡಿಮೆಯ ಬೆವರಾಗಬೇಕೇ ಹೊರತು, ಬೇರೆಯವರ ಕಣ್ಣೀರಾಗಬಾರದು ಎಂದು ಶಿವಕುಮಾರಸ್ವಾಮೀಜಿ ಅವರು ಹೇಳಿದ್ದರು. ನಾನು ಅವರ ಅನೇಕ ಭಾಷಣ ಕೇಳಿದ್ದೇನೆ. ಅವರ ಪ್ರತಿಯೊಂದು ಮಾತು ಅರ್ಥಗರ್ಭಿತವಾಗಿವೆ. ಶ್ರೀಗಳು ಬಸವಣ್ಣನವರ ಅನುಯಾಯಿಯಾಗಿ ಜಾತಿ, ಧರ್ಮದ ತಾರತಮ್ಯವಿಲ್ಲದೇ, ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗಿ ಎಲ್ಲಾ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿದ್ದಾರೆ. ಮಠದ ಸುತ್ತ ಕಲ್ಲು ಬಂಡೆಗಳಿವೆ. ಕಲ್ಲು ಪ್ರಕೃತಿ, ಕಡೆದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ.” ಎಂದರು.

“ಅನ್ನ ಕೊಟ್ಟು, ಅಕ್ಷರ ಕಲಿಸಿದ ಮಹಾಚೇತನರಿಗೆ ನಾವು ಇಂದು ನಮಿಸಲು ಬಂದಿದ್ದೇವೆ. ನಾನು ಶಾಲೆಯಲ್ಲಿದ್ದಾಗ ನಮ್ಮ ಶಿಕ್ಷಕರು ನನಗೆ ಒಂದು ಕತೆ ಹೇಳಿದ್ದರು. ಅಲೆಕ್ಸಾಂಡರ್ ಭಾರತವನ್ನು ಗೆಲ್ಲಲು ಆಕ್ರಮಣ ಮಾಡುವ ಮುನ್ನ ಗುರುಗಳನ್ನು ಭೇಟಿ ಮಾಡಲು ಹೋದಾಗ, ಅವರ ಗುರು ಒಂದು ಮಾತು ಹೇಳಿದರು. ಭಾರತದಿಂದ ನೀನು ಬರುವಾಗ ರಾಮಾಯಣ, ಮಹಾಭಾರತ ಗ್ರಂಥ, ಕೃಷ್ಣನ ಕೊಳಲು, ಗಂಗಾ ಜಲ ಹಾಗೂ ತತ್ವಜ್ಞಾನಿಯನ್ನು ನಿನ್ನ ಜತೆ ತೆಗೆದುಕೊಂಡು ಬಾ, ಈ ಐದು ವಸ್ತುಗಳನ್ನು ನೀನು ತಂದರೆ ಇಡೀ ಭಾರತವನ್ನು ಗೆದ್ದುಕೊಂಡು ಬಂದಂತೆ ಎಂದು ಹೇಳಿದರು. ಅದೇ ರೀತಿ ನಮ್ಮ ಸಂಸ್ಕೃತಿ ಈ ದೇಶದ ಆಸ್ತಿ. ಇಡೀ ವಿಶ್ವದ ಜನ ನಮ್ಮ ಆಚಾರ ವಿಚಾರಗಳನ್ನು ನಂಬಿ ಶರಣಾಗಿದ್ದಾರೆ” ಎಂದರು.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist