ಬೆಳಗಾವಿ(www.thenewzmirror.com):ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಾಲಕ ಬಾಲಚಂದ್ರ ತುಕ್ಕೊಜಿ ಆತ್ಮಹತ್ಯೆಗೆ ಸಂಸ್ಥೆಯ ಯಾವುದೇ ಅಧಿಕಾರಿಯ ಕಿರುಕುಳ ಕಾರಣವಲ್ಲ ಎಂದು ಬೆಳಗಾವಿ ಘಟಕದ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿಗಳು ಸ್ಪಷ್ಟೀಕರಣ ನೀಡಿದ್ದು ಕೌಟುಂಬಿಕ ಕಲಹದ ದೂರು ದಾಖಲಾಗಿರುವ ಮಾಹಿತಿ ನೀಡಿದ್ದಾರೆ.
ದಿನಾಂಕ 2-4-2025 ರಂದು ಬೆಳಗಾವಿ 2ನೇ ಘಟಕದಲ್ಲಿ ಚಾಲಕ ಬಾಲಚಂದ್ರ ತುಕ್ಕೊಜಿ ಬೆಳಗಾವಿ ಘಟಕದಲ್ಲಿ ಸುಮಾರು 19 ವರ್ಷಗಳಿಂದ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಿದ್ದು, ಅವರಿಗೆ ರಜೆ ಅಥವಾ ಯಾವುದೇ ವಿಷಯದಲ್ಲಿ ಘಟಕ ವ್ಯವಸ್ಥಾಪಕರಿಂದಾಗಲೀ ಅಥವಾ ಸಂಸ್ಥೆಯ ಯಾವುದೇ ಅಧಿಕಾರಿಗಳಿಂದಾಗಲಿ ಯಾವುದೇ ರೀತಿಯ ತೊಂದರೆ ಅಥವಾ ಕಿರುಕುಳ ಆಗಿರುವುದಿಲ್ಲ ಎಂದು ಪತ್ರಿಕಾ ಹೇಳಿಕೆ ಮೂಲಕ ಬೆಳಗಾವಿ ಘಟಕದ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
ಮೃತರ ತಾಯಿಯಾದ ಯಲ್ಲವ್ವ ಇವರು ಮಾರ್ಕೆಟ್ ಪೊಲಿಸ್ ಠಾಣೆ ಬೆಳಗಾವಿಯಲ್ಲಿ ಸದರಿಯವರ ಆತ್ಮಹತ್ಯೆಗೆ ಅವನ ಹೆಂಡತಿಯಾದ ಶಿಲ್ಪಾ ಇವರ ಕಿರುಕುಳವೇ ಕಾರಣ ಎಂದು ದೂರು ನೀಡಿದ್ದು, ಶಿಲ್ಪಾ ಮತ್ತು ಅವರ ತಾಯಿಯಾದ ಶಕುಂತಲಾ ಸಾ! ಸುರೇಬಾನ ಇವರುಗಳ ಮೇಲೆ ಎಫ್.ಐ.ಆರ್ 0071/2025 ಕಲಂ BNS 2023 us 106 ರಡಿಯಲ್ಲಿ ಪ್ರಕರಣ ದಾಖಲಾಗಿದೆ. ಸದರಿಯವರ ಪಾರ್ಥಿವ ಶರೀರದ ಜೊತೆಗೆ ಯಾವುದೇ ಡೆತ್ ನೋಟ್ ಇತ್ಯಾದಿಗಳು ದೊರೆತಿರುವುದಿಲ್ಲ ಎಂದು ಪೊಲಿಸರು ಮಾಹಿತಿ ನೀಡಿರುತ್ತಾರೆ. ಈ ಕುರಿತು ಪೊಲಿಸ್ ಅಧಿಕಾರಿಗಳು ಮುಂದಿನ ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.