ಅಂಬೇಡ್ಕರ್,ಜಗಜೀವನ್ ರಾಮ್ ದೇಶದ ಎರಡು ಕಣ್ಣುಗಳು:ಡಿಕೆ ಶಿವಕುಮಾರ್

RELATED POSTS

ಬೆಂಗಳೂರು(www.thenewzmirror.com):“ಹಿಂದುಳಿದವರು, ಪರಿಶಿಷ್ಟ ಸಮುದಾಯ, ಅಲ್ಪಸಂಖ್ಯಾತರು ಸೇರಿದಂತೆ ಶೋಷಿತ ವರ್ಗಕ್ಕೆ ಸೇರಿದ ಜನರು ಎಂದಿಗೂ ದುರ್ಬಲರು ಎನ್ನುವ ಭಾವನೆ ಇಟ್ಟುಕೊಳ್ಳಬಾರದು. ಇಂತಹ ಮನೋಭಾವವನ್ನು ಮನಸ್ಸಿನಿಂದ ತೆಗೆದುಹಾಕಬೇಕು. ಬಾಬು ಜಗಜೀವನ್ ರಾಮ್ ಅವರು ಸಂತ ರವಿದಾಸರು ಹೇಳುವಂತೆ ʼನನ್ನ ಭಕ್ತಿಯೇ ನನ್ನ ಜಾತಿ, ನನ್ನ ಕರ್ಮವೇ ನನ್ನ ಧರ್ಮʼಎಂದು ರಾಜಕಾರಣ ಮಾಡಿದ್ದಾರೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಅಭಿಪ್ರಾಯಪಟ್ಟರು.

ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಹಾಗೂ ವಿಧಾನಸೌಧದ ಆವರಣದಲ್ಲಿ ಶನಿವಾರ ನಡೆದ ಬಾಬು ಜಗಜೀವನ್ ರಾಮ್ ಅವರ 118 ನೇ ಜನ್ಮದಿನ ಕಾರ್ಯಕ್ರಮದಲ್ಲಿ  ಮಾತನಾಡಿದ ಅವರು,.“ಮಾನವೀಯತೆ ಮೇಲೆ ನಾವು ಕೆಲಸ ಮಾಡಬೇಕು. ನಮ್ಮ ಆಲೋಚನೆಗಳೇ ನಮ್ಮನ್ನು ರೂಪಿಸುತ್ತವೆ. ಎಲ್ಲರಿಗೂ ತಮ್ಮದೇ ಆದ ಸಾಮರ್ಥ್ಯವಿರುತ್ತದೆ. ವಿದ್ಯಾರ್ಥಿ ನಾಯಕ ನಾಯಕರಾಗಿ ಬೆಳೆದು ದೇಶದ ಇತಿಹಾಸದಲ್ಲಿ ಅತಿ ಹೆಚ್ಚು ವರ್ಷಗಳ ಕಾಲ ಸಚಿವರಾಗಿ ಕಾರ್ಯನಿರ್ವಹಿಸಿದ ಹೆಗ್ಗಳಿಕೆ ಬಾಬು ಜಗಜೀವನ್ ರಾಮ್ ಅವರದ್ದು”ಎಂದರು.

“ಆಡು ಮುಟ್ಟದ ಸೊಪ್ಪಿಲ್ಲ ಜಗಜೀವನ ರಾಮ್ ಅವರು ನಿರ್ವಹಿಸದೇ ಇರುವ ಖಾತೆಗಳಿಲ್ಲ. ಕೃಷಿ, ರಕ್ಷಣಾ ಸಚಿವರಾಗಿ ತೆಗೆದುಕೊಂಡ ದಿಟ್ಟ ನಿರ್ಧಾರಗಳು ಇತಿಹಾಸದಲ್ಲಿ ದಾಖಲಾಗಿವೆ. ಒಬ್ಬ ವ್ಯಕ್ತಿ ಹುಟ್ಟಿನಿಂದ ದೊಡ್ಡವನಾಗುವುದಿಲ್ಲ. ಕೆಲಸ ಹಾಗೂ ಗುಣಗಳಿಂದ ದೊಡ್ಡವನಾಗುತ್ತಾನೆ ಎಂಬುದಕ್ಕೆ ಬಾಬೂ ಜಗಜೀವನರಾಮ್ ಅವರೇ ದೊಡ್ಡ ಉದಾಹರಣೆ. ದನಿ ಇಲ್ಲದವರಿಗೆ ದನಿ ನೀಡಿದ ನಾಯಕ. ತುರ್ತು ಪರಿಸ್ಥಿತಿ ಕಾಲದಲ್ಲಿ ಇಂದಿರಾಗಾಂಧಿ ಅವರೊಟ್ಟಿಗೆ ಭಿನ್ನಾಭಿಪ್ರಾಯ ಮೂಡಿತು. ನಂತರ ಮೂರಾರ್ಜಿ ದೇಸಾಯಿ ಅವರ ಸಂಪುಟಕ್ಕೂ ರಾಜೀನಾಮೆ ನೀಡಿದರು” ಎಂದರು.

“ದೆಹಲಿಯಲ್ಲಿ ಯುವ ಕಾಂಗ್ರೆಸ್ ಸಮಾವೇಶ ನಡೆಯುತ್ತಿತ್ತು. ಆಗ ರಾಜೀವ್ ಗಾಂಧಿ ಅವರನ್ನು ಭೇಟಿ ಮಾಡಲು ತೆರಳಿದಾಗ ಹಿರಿಯ ನಾಯಕರೊಬ್ಬರು ಅಲ್ಲಿಗೆ ದಿಢೀರ್ ಬಂದರು. ಆಗ ಅವರ ಬಳಿಗೆ ರಾಜೀವ್ ಗಾಂಧಿ ಅವರು ಓಡೋಡಿ ಬಂದರು. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಮಾತನಾಡಿದರು. ನಾನು ಏನು ಎಂದು ರಾಜೀವ್ ಗಾಂಧಿ ಅವರ ಬಳಿ ಕೇಳಿದೆ. ಅವರು ಬಾಬು ಜಗಜೀವನ್ ರಾಮ್. ಅವರಿಗೆ ನನ್ನ ಆಪ್ತ ಸಹಾಯಕರು ಭೇಟಿಗೆ ಸಮಯ ನೀಡಿರಲಿಲ್ಲ. ಅವರು ಹಿರಿಯರು ನಮ್ಮ ತಾಯಿಯವರ ಜೊತೆ ಕೆಲಸ ಮಾಡಿದವರು. ಅನೇಕ ಭಿನ್ನಾಭಿಪ್ರಾಯದಿಂದ ಪಕ್ಷ ತೊರೆದಿದ್ದರು. ಈಗ ಕೊನೆಯದಾಗಿ ಕಾಂಗ್ರೆಸ್ಸಿಗನಾಗಿ ಸಾಯಬೇಕು ಎನ್ನುವ ಅಭಿಲಾಷೆ ವ್ಯಕ್ತಪಡಿಸಿದರು. ಇದನ್ನು ಕೇಳಿ ನಾನು ಕಣ್ಣಲ್ಲಿ ನೀರು ತುಂಬಿಕೊಂಡೆ. ಈ ಘಟನೆ ನೆನಪಿಗೆ ಅಂದಿನ ಫೋಟೋವನ್ನು ಇಟ್ಟುಕೊಂಡಿದ್ದೇನೆ” ಎಂದು ಹಳೆಯ ಘಟನೆಯನ್ನು ಮೆಲುಕು ಹಾಕಿದರು.

“ದುರ್ಬಲರು ಎಂಬ ಭಾವನೆ ನಿಮ್ಮಲ್ಲಿ ಬರಬಾರದು. ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಮ್ ಅವರು ಈ ದೇಶದ ಎರಡು ಕಣ್ಣುಗಳು. ಈ ದೇಶದಲ್ಲಿ ಬದಲಾವಣೆ ತಂದ ಧೀಮಂತ ನಾಯಕರು. ಈ ಇಬ್ಬರೂ ನಾಯಕರು ಒಂದೇ ತಿಂಗಳಲ್ಲಿ ಜನಿಸಿದ್ದು, ಅನೇಕ ಸಾಕ್ಷಿಗುಡ್ಡೆ ಬಿಟ್ಟು ಹೋಗಿದ್ದಾರೆ. ಅವರ ಮಾರ್ಗದರ್ಶನದಲ್ಲಿ ನಾವು, ನೀವು ಬದುಕು ಸಾಗಿಸೋಣ. ನೀವೆಲ್ಲರೂ ಧೈರ್ಯವಾಗಿರಿ, ನಮ್ಮ ಸರ್ಕಾರ ಈ ಹಿಂದೆಯೂ ನಿಮ್ಮ ಪರವಾಗಿ ನಿಂತಿದೆ. ಈಗಲೂ ನಿಲ್ಲಲಿದೆ, ಮುಂದೆಯೂ ನಿಲ್ಲಲಿದೆ” ಎಂದು ತಿಳಿಸಿದರು.

“ಈ ಇಬ್ಬರು ಮಹಾನ್ ವ್ಯಕ್ತಿಗಳು ಕೇವಲ ಶೋಷಿತ ಸಮುದಾಯಗಳ ಆಸ್ತಿಗಳಲ್ಲ. ಎಲ್ಲಾ ವರ್ಗಕ್ಕೆ ಸೇರಿದ ನಾಯಕರು. ಸಮಾಜದಲ್ಲಿ ನೊಂದವರ ಪರವಾಗಿ ಹೋರಾಟ ರೂಪಿಸಿದವರು. ಜಾತಿ ಮೇಲೆ ರಾಜಕಾರಣ ಮಾಡದೇ ನೀತಿ ಮೇಲೆ ನಿಂತವರು. ಹಸಿರು ಕ್ರಾಂತಿ ಮೂಲಕ ಇಡೀ ದೇಶದ ಹೊಟ್ಟೆ ತುಂಬಿಸಿದವರು” ಎಂದರು.

“ಹಸಿರುಕ್ರಾಂತಿ ವೇಳೆ ಚೆನ್ನಾಗಿ ಬೆಳೆ ಬೆಳೆದ ರೈತರಿಗೆ ಬಹುಮಾನ ನೀಡುತ್ತಿದ್ದರು. ನಮ್ಮ ತಂದೆ, ತಾತ ಈ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಜೋಳದ ಮೂಲಕ ಉಪ್ಪಿಟ್ಟು ಮಾಡಿ ನೀಡುತ್ತಿದ್ದರು. ಇದರಿಂದ ಆಹಾರ ಧಾನ್ಯಗಳ ರಫ್ತು ಹೆಚ್ಚಾಗಿದೆ, ಆಮದು ಕಡಿಮೆಯಾಗಿದೆ. ಮೂರು ದಿನಗಳ ಹಿಂದೆ ದೆಹಲಿಯಲ್ಲಿ ಒಬ್ಬರು 15 ಕೆ.ಜಿ ಅಕ್ಕಿ ನೀಡಿದರು. ಅದರ ಬೆಲೆ ಕೆ.ಜಿಗೆ ರೂ.300 ಅಂತೆ. ನಮ್ಮ ದೇಶದಲ್ಲಿ 500 ಕ್ಕೂ ಹೆಚ್ಚು ತಳಿಯ ಭತ್ತಗಳಿವೆಯಂತೆ. ನಮ್ಮ ರಾಜ್ಯದಲ್ಲಿ 40 ತಳಿಯ ಅಕ್ಕಿ ಬೆಳೆಯುತ್ತಿದ್ದೇವೆ” ಎಂದರು.

ಬಿಜೆಪಿಯವರು ದಿನಾ ಧರಣಿ ಮಾಡಲಿ:

“ಈ ದೇಶದಲ್ಲಿ ಬಂದಿರುವ ಅನೇಕ ಜನಪರ ಯೋಜನೆಗಳೆಲ್ಲವನ್ನು ನೀಡಿರುವುದು ಕಾಂಗ್ರೆಸ್. ಆಹಾರ ಭದ್ರತಾ ಕಾಯ್ದೆ ಸೇರಿದಂತೆ ಈ ರೀತಿಯ ಒಂದಾದರೂ ಯೋಜನೆಗಳನ್ನು ಬಿಜೆಪಿಯವರು ನೀಡಿದ್ದಾರೆಯೇ? ಅವರ ಕಾಲದಲ್ಲಿ ಆಗಿರುವ ಬೆಲೆ ಏರಿಕೆ ಬಗ್ಗೆ ಅವರು ಮಾತನಾಡದೇ, ಈಗ ರೈತರಿಗೆ ಅನುಕೂಲವಾಗಲಿ ಎಂದು ಹಾಲಿನ ಬೆಲೆ ಏರಿಕೆ ಮಾಡಿದರೆ ಅದನ್ನು ವಿರೋಧಿಸಿ ಪ್ರತಿಭಟನೆ ಮಾಡುತ್ತಿದ್ದಾರೆ. ಅಹೋರಾತ್ರಿ ಧರಣಿ ಮಾಡುತ್ತಾರಂತೆ, ಅದಕ್ಕೆ ಪೊಲೀಸರಿಗೆ ಚೆನ್ನಾಗಿ ವ್ಯವಸ್ಥೆ ಮಾಡಲು ಹೇಳಿದ್ದೇವೆ. ದಿನಾ ಪ್ರತಿಭಟನೆ ಮಾಡಲಿ. ವಿಧಾನಸೌಧದಲ್ಲಿ ಮಾಡುತ್ತೇವೆ ಎಂದವರು ಯಾಕೋ ಕೈ ಬಿಟ್ಟರು” ಎಂದರು. 

“ಟೋಲ್, ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳ ಮಾಡಿದವರು ಯಾರು? ಚಿನ್ನದ ಬೆಲೆ ಗ್ರಾಂಗೆ ರೂ.4 ಸಾವಿರವಿತ್ತು. ಈಗ 9-10 ಸಾವಿರ ಮುಟ್ಟಿದೆ. ಹೆಣ್ಣು ಮಕ್ಕಳು ತಾಳಿ ತೆಗೆದುಕೊಳ್ಳಲು ಆಗುತ್ತಿಲ್ಲ. ಇದಕ್ಕೆಲ್ಲಾ ಕಾರಣ ಯಾರು” ಎಂದರು.

“ಏ.14 ರಂದು ಅಂಬೇಡ್ಕರ್ ಜಯಂತಿಯನ್ನು ಭಾರತ್ ಜೋಡೋ ಭವನದಲ್ಲಿ ಹಮ್ಮಿಕೊಳ್ಳಲಾಗುವುದು. ಪಕ್ಷದ ಎಲ್ಲಾ ಘಟಕಗಳು ಇದರ ಬಗ್ಗೆ ಕೆಲಸ ಮಾಡಬೇಕು. ನಾನು ಕೆಪಿಸಿಸಿ ಅಧ್ಯಕ್ಷನಾಗಿ ಅಧಿಕಾರವಹಿಸಿಕೊಂಡ ಮೇಲೆ ಹಿರಿಯ ನಾಯಕರಾದ ರೆಹಮಾನ್ ಖಾನ್ ಅವರಿಂದ ಸಂವಿಧಾನದ ಪೀಠಿಕೆ ಓದಿಸಿದ್ದೆ. ಮುಂದೆ ಸರ್ಕಾರದಿಂದ ಇದನ್ನು ಕಾರ್ಯಕ್ರಮವಾಗಿ ರೂಪಿಸಲಾಯಿತು” ಎಂದರು.

ನಿಜಲಿಂಗಪ್ಪ ಅವರ ಮನೆಯನ್ನು ಮಾರಾಟ ಮಾಡಿದೆ:

“ನನ್ನ ವಿದ್ಯಾರ್ಥಿ ಜೀವನದಲ್ಲಿ ರಾಚಯ್ಯ ಅವರ ಮನೆಯೇ ನಮಗೆ ಕಾಂಗ್ರೆಸ್ ಕಚೇರಿಯಾಗಿತ್ತು. ಕೆಂಗಲ್ ಹನುಮಂತಯ್ಯ ಅವರ ಮನೆಯ ಬಳಿಯದ್ದು. ಅಲ್ಲಿ ಬಿ.ಡಿ.ಜತ್ತಿ, ವೀರೇಂದ್ರ ಪಾಟೀಲ್ ಅವರು, ನಿಜಲಿಂಗಪ್ಪ ಅವರ ಮನೆಗಳೂ ಹತ್ತಿರದಲ್ಲಿಯೇ ಇದ್ದವು. ಕೆ.ಟಿ.ಬಾಷ್ಯಂ ಅವರು ಸಹ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಕೊಡುಗೆ ನೀಡಿದವರು. ನನಗೆ ನಿಜಲಿಂಗಪ್ಪ ಅವರ ಮನೆಯನ್ನು ತೆಗೆದುಕೊಳ್ಳುವ ಅದೃಷ್ಟ ಬಂದಿತ್ತು. ಆದರೆ ಕಷ್ಟ ಕಾಲದಲ್ಲಿ ನಾನು ಅದನ್ನು ಮಾರಾಟ ಮಾಡಿದೆ” ಎಂದರು. 

“ನೂರು ಕಾಂಗ್ರೆಸ್ ಕಚೇರಿಗಳನ್ನು ನಿರ್ಮಾಣ ಮಾಡುವ ಜವಾಬ್ದಾರಿಯನ್ನು ಮಲ್ಲಿಕಾರ್ಜುನ ಖರ್ಗೆ ಅವರು ನನಗೆ ನೀಡಿದ್ದಾರೆ. ಈಗ ಒಂದೊಂದೇ ನಿವೇಶನಗಳನ್ನು ರಿಜಿಸ್ಟರ್ ಮಾಡಲಾಗುತ್ತಿದೆ. ಕಾಂಗ್ರೆಸ್ ನಡೆದು ಬಂದ ದಾರಿಯ ಬಗ್ಗೆ ವಸ್ತುಪ್ರದರ್ಶನ ಏರ್ಪಡಿಸುವಂತೆಯೂ ಖರ್ಗೆ ಅವರು ಸೂಚನೆ ನೀಡಿದ್ದಾರೆ. ಇದನ್ನು ಕಾರ್ಯಗತಗೊಳಿಸಲು ಸಮಿತಿ ರಚನೆ ಮಾಡಲಾಗುವುದು. ಹತ್ತು ಸಾವಿರ ಅಡಿ ಪ್ರದೇಶದಲ್ಲಿ ನಮ್ಮ ಇತಿಹಾಸ ಬಿಂಬಿಸುವ ಕೆಲಸ ಮಾಡಲಾಗುವುದು. ಮುಂದಿನ ಪೀಳಿಗೆಗೆ ನಮ್ಮ ಇತಿಹಾಸ ತಿಳಿಯಬೇಕು” ಎಂದರು.

“ಮಹಾತ್ಮ ಗಾಂಧಿ ಅವರು ಕುಳಿತ ಜಾಗದಲ್ಲಿ ಕನ್ನಡಿಗರಾದ ಮಲ್ಲಿಕಾರ್ಜುನ ಖರ್ಗೆ ಅವರು ಕುಳಿತಿದ್ದಾರೆ. ಈ ವೇಳೆ ಇತಿಹಾಸ ನಿರ್ಮಾಣ ಮಾಡಬೇಕು ಎನ್ನುವುದು ನಮ್ಮ ಅಭಿಲಾಷೆ. ಬೆಳಗಾವಿಯಲ್ಲಿ ʼಜೈ ಬಾಪು,ಜೈ ಭೀಮ್, ಜೈ ಸಂವಿಧಾನʼ ಎನ್ನುವ ಘೋಷಣೆ ಮಾಡಲಾಯಿತು. ಇದು ದೇಶದ ದೊಡ್ಡ ಅಡಿಪಾಯ” ಎಂದು ತಿಳಿಸಿದರು. 

ರಾಮಲಿಂಗಾರೆಡ್ಡಿ ಹಳೇ ಹುಲಿ:

ಕಾಂಗ್ರೆಸ್ ಇತಿಹಾಸದ ಬಗ್ಗೆ ವಸ್ತುಪ್ರದರ್ಶನ ಏರ್ಪಡಿಸುವ ಬಗೆಗಿನ ಸಮಿತಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಜವಾಬ್ದಾರಿವಹಿಸಿಕೊಳ್ಳುವಿರಾ ಎಂದು ಡಿಸಿಎಂ ಅವರು ವೇದಿಕೆಯಲ್ಲಿಯೇ ಕೇಳಿದರು. ಆಗ “ಇವರು ನಮ್ಮ ಹಳೇ ಹುಲಿʼ ಎಂದು ಹಾಸ್ಯ ಚಟಾಕಿ ಹಾರಿಸಿದರು.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist