2ನೇ ವಿಮಾನ ನಿಲ್ದಾಣ:ಕನಕಪುರ ರಸ್ತೆ ಎರಡು ತಾಣ ವೀಕ್ಷಿಸಿದ ಎಎಐ ತಂಡ

RELATED POSTS

ಬೆಂಗಳೂರು(www.thenewzmirror.com): ನಗರದಲ್ಲಿ ಉದ್ದೇಶಿತ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರಾಜ್ಯ ಸರಕಾರವು ಗುರುತಿಸಿರುವ ಮೂರು ಸ್ಥಳಗಳ ಪೈಕಿ ಕನಕಪುರ ರಸ್ತೆಯಲ್ಲಿರುವ ಎರಡು ತಾಣಗಳ ಪರಿಶೀಲನೆಯನ್ನು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ (ಎಎಐ) ಉನ್ನತ ಮಟ್ಟದ ತಂಡವು ಮಂಗಳವಾರ ನಡೆಸಿತು. ನಂತರ ತಂಡದ ಸದಸ್ಯರು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ ಬಿ ಪಾಟೀಲ ಅವರನ್ನು ಭೇಟಿಯಾಗಿ ವಿಚಾರ ವಿನಿಮಯ ನಡೆಸಿದರು.

ಈ ಸಂದರ್ಭದಲ್ಲಿ ಸಚಿವರು ಕೂಡ ಉದ್ದೇಶಿತ ವಿಮಾನ ನಿಲ್ದಾಣದ ಅಗತ್ಯ, ಬೆಂಗಳೂರಿನ ನಾಗರಿಕ ಮತ್ತು ಕೈಗಾರಿಕಾ ಅಗತ್ಯ ಇತ್ಯಾದಿಗಳನ್ನು ತಂಡದ ಸದಸ್ಯರಿಗೆ ವಿವರಿಸಿ, ಪ್ರಾತ್ಯಕ್ಷಿಕೆ ಪ್ರದರ್ಶಿಸಿದರು. ಅತ್ಯಂತ ಪಾರದರ್ಶಕವಾಗಿ ಸ್ಥಳ ಗುರುತಿಸುವ ಕೆಲಸ ಆಗಲಿ ಎಂದು ತಂಡಕ್ಕೆ ಸಲಹೆ ನೀಡಿದರು.

ನಾಳೆಯೂ ಈ ತಂಡ ನೆಲಮಂಗಲ- ಕುಣಿಗಲ್ ರಸ್ತೆಯ ಸ್ಥಳ ಪರಿಶೀಲನೆ ನಡೆಸಲಿದೆ.

ಉದ್ದೇಶಿತ ಎರಡನೆಯ ವಿಮಾನ ನಿಲ್ದಾಣವನ್ನು ಬೆಂಗಳೂರಿನ ಅಗತ್ಯಗಳನ್ನು ಗಮನದಲ್ಲಿ ಇಟ್ಟುಕೊಂಡು ನಿರ್ಮಿಸಲು ಸರಕಾರ ತೀರ್ಮಾನಿಸಿದೆ.ಸ್ಥಳ ಪರಿಶೀಲನೆಯ ಬಳಿಕ ಪ್ರಾಧಿಕಾರದ ಅಭಿಪ್ರಾಯ ಏನೆಂಬುದನ್ನು ತಿಳಿದುಕೊಂಡು, ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

ಪ್ರಾಧಿಕಾರದ ತಂಡದಲ್ಲಿ ಜನರಲ್ ಮ್ಯಾನೇಜರ್ ವಿಕ್ರಮ್ ಸಿಂಗ್, ಜಂಟಿ ಜನರಲ್ ಮ್ಯಾನೇಜರ್ ಕೆ. ಶ್ರೀನಿವಾಸರಾವ್, ಸಹಾಯಕ ಜನರಲ್ ಮ್ಯಾನೇಜರ್ ಮನುಜ್ ಭಾರದ್ವಾಜ್, ಪ್ರಧಾನ ಕಚೇರಿಯ ಅಧಿಕಾರಿಗಳಾದ ಸಚ್ಚಿದಾನಂದ್, ಸಂತೋಷಕುಮಾರ್ ಭಾರತಿ, ಅಮನ್ ಚಿಪಾ ಇದ್ದರು.

ಸರಕಾರದ ಪರವಾಗಿ ಮೂಲಸೌಕರ್ಯ ಇಲಾಖೆ ಕಾರ್ಯದರ್ಶಿ ಎನ್.ಮಂಜುಳಾ, ಹೆಚ್ಚುವರಿ ಕಾರ್ಯದರ್ಶಿ ಹೆಪ್ಸಿಬಾ ರಾಣಿ, ಕರ್ನಾಟಕ ಕೈಗಾರಿಕಾ ಮೂಲಸೌಕರ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಖುಷ್ಬೂ ಗೋಯಲ್, ಸಚಿವರ ತಾಂತ್ರಿಕ ಸಲಹೆಗಾರ ಅರವಿಂದ ಗಲಗಲಿ ಹಾಜರಿದ್ದರು.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist