ಬೆಂಗಳೂರು, (www.thenewzmirror.com) ;
ಗ್ಯಾರಂಟಿಗಳನ್ನ ಕೊಟ್ಟು ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರದಲ್ಲಿ ಮತ್ತೊಂದು ಬೃಹತ್ ಹಗರಣ ನಡೆದಿರುವ ಆರೋಪ ಕೇಳಿ ಬಂದಿದ್ದು, ಕೇಂದ್ರ ಸರ್ಕಾರ ನೀಡಿದ್ದ ಅನುದಾನ ದುರ್ಬಳಕೆ ಆಗಿದೆ ಎಂದು ಆರೋಪಿಸಿ ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ,
ಕೇಂದ್ರ ಸರ್ಕಾರ ನೀಡಿರುವ ಅನುದಾನದಲ್ಲಿ ನಡೆದಿದೆ ಎನ್ನಲಾದ ಅಕ್ರಮಕ್ಕೆ ಸಂಬಂಧಪಟ್ಟಂತೆ ಸಂಪೂರ್ಣ ದಾಖಲೆಯನ್ನು ಬಿಜೆಪಿ ಮುಖಂಡ ಎನ್. ಆರ್. ರಮೇಶ್ ಲೋಕಾಯುಕ್ತ ಹಾಗೂ ಜಾರಿ ನಿರ್ದೇಶನಾಲಯಕ್ಕೆ ನೀಡಿದ್ದು, ಸಚಿವರಾದ ಬೈರತಿ ಸುರೇಶ್, ರಹೀಂ ಖಾನ್, ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ ಕೆಲ ಅಧಿಕಾರಿಗಳ ವಿರುದ್ಧವೂ ದೂರು ಕೊಟ್ಟಿದ್ದಾರೆ. ಅಷ್ಟೇ ಅಲ್ದೇ ಈ ಬೃಹತ್ ಹಗರಣಕ್ಕೆ ಸಂಬಂಧಿಸಿದ 7,281 ಪುಟಗಳ ಸಂಪೂರ್ಣ ದಾಖಲೆಗಳ ಸಹಿತ ಪ್ರಕರಣ ದಾಖಲು ಮಾಡಿದ್ದಾರೆ.





ಏನಿದು AMRUT ಯೋಜನೆ?
ದೇಶದ ಮಹಾನಗರಗಳನ್ನು ಹೊರತುಪಡಿಸಿ, ಇನ್ನುಳಿದ ನಗರಸಭೆ ಮತ್ತು ಪುರಸಭೆಗಳ ವ್ಯಾಪ್ತಿಯಲ್ಲಿ ಕುಡಿಯುವ ನೀರು, ಒಳ ಚರಂಡಿ ಮತ್ತು ಕೊಳಚೆ ನಿರ್ವಹಣೆ, ಬೃಹತ್ ನೀರುಗಾಲುವೆಗಳ ನಿರ್ಮಾಣ, ಮರು ಜೋಡಣೆ ಮತ್ತು ಪುನಶ್ಚೇತನ ಕಾರ್ಯಗಳು ಹಾಗೂ ಹಸಿರು ವಲಯಗಳು ಮತ್ತು ಉದ್ಯಾನವನಗಳ ನಿರ್ಮಾಣ – ಅಲ್ಲದೇ ನಗರ ಸಾರಿಗೆಗೆ ಸುಸಜ್ಜಿತ ಮಾರ್ಗಗಳ ನಿರ್ಮಾಣಗಳಂತಹ ಕಾರ್ಯಗಳನ್ನು ಮಾಡುವ ಮೂಲಕ ಆ ಭಾಗಗಳ ನಾಗರಿಕರಿಗೆ ಅವಶ್ಯಕತೆ ಇರುವಂತಹ ಗುಣಮಟ್ಟದ ಜೀವನವನ್ನು ಕಲ್ಪಿಸಿಕೊಡುವ ಉದ್ದೇಶದಿಂದ ಕೇಂದ್ರ ಸರ್ಕಾರವು AMRUT (Atal Mission for Rejuvenation & Urban Transportation) ಯೋಜನೆಯನ್ನ 2015 ರಂದು ಆರಂಭಮಾಡಿತ್ತು. ಈ ಯೋಜನೆಯಡಿ ದೇಶದ 500 ಕ್ಕೂ ಹೆಚ್ಚು ನಗರಸಭೆ ಮತ್ತು ಪುರಸಭೆಗಳ ವ್ಯಾಪ್ತಿಯಲ್ಲಿ ಪ್ರತೀ ವರ್ಷ ಸರಾಸರಿ ಒಂದು ಲಕ್ಷ ಕೋಟಿ ರೂಪಾಯಿಗಳ ಅನುದಾನವನ್ನು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಮೂಲಕ ಬಿಡುಗಡೆ ಮಾಡಲಾಗುತ್ತಿದೆ.
ಹೀಗೆ ಬಿಡುಗಡೆಯಾದ ಅನುದಾನದಲ್ಲಿ ಎರಡೂ ಇಲಾಖೆಗಳು 2024-25 ರ ಸಾಲಿನಲ್ಲಿ ಬಿಡುಗಡೆ ಆಗಿರುವ ₹ 8,989.66 ಕೋಟಿ ರೂಪಾಯಿಗಳ ಪೈಕಿ, ₹ 5,799.98 ಕೋಟಿ ಮೊತ್ತದ 137 ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಗಳು ಮುಗಿದು ಕಾಮಗಾರಿಗಳು ಪ್ರಗತಿಯ ಹಂತದಲ್ಲಿದ್ದು, ಒಟ್ಟು ₹ 3,189.68 ಕೋಟಿ ಮೊತ್ತದ 93 ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಗಳು ಮುಗಿದಿದ್ದು ಕಾಮಗಾರಿಗಳು ಇನ್ನಷ್ಟೇ ಪ್ರಾರಂಭಿಸಬೇಕಿದೆ ಎಂಬ ಮಾಹಿತಿ ನೀಡಿವೆ. ಅದೇ ರೀತಿ 2023-24 ರ ಸಾಲಿನಲ್ಲಿ ಒಟ್ಟು ₹ 8,000 ಕೋಟಿ ಮೊತ್ತದ ಅನುದಾನ ಬಿಡುಗಡೆ ಆಗಿದ್ದು, ಶೇ. 100% ರಷ್ಟು ಯೋಜನೆ ಅನುಷ್ಠಾನಗೊಂಡಿದೆ ಎಂಬ ಮಾಹಿತಿಯನ್ನೂ ಸಹ ಈ ಎರಡೂ ಇಲಾಖೆಗಳು ನೀಡಿವೆ. ಆದರೆ ವಾಸ್ತವದಲ್ಲಿ ಕಾಮಗಾರಿಗಳನ್ನ ನಡೆಸದೇ ಅMದರೆ ಶೇಕಡಾ 50 ರಷ್ಟು ಮೊತ್ತವನ್ನ ದುರ್ಬಳಕೆ ಮಾಡಿಕೊಂಡಿವೆ ಎಂಬ ಆರೋಪವನ್ನ ಬಿಜೆಪಿ ಮುಖಂಡ ಎನ್. ಆರ್. ರಮೇಶ್ ಮಾಡುತ್ತಿದ್ದಾರೆ.



ಟೆಂಡರ್ ಅನುಮೋದನೆ ಕಾರ್ಯಕ್ಕೂ ಮೊದಲೇ ಪೂರ್ವ ನಿಗದಿತ ಗುತ್ತಿಗೆದಾರರಿಂದ ಸಚಿವ ಭೈರತಿ ಸುರೇಶ್ ಮತ್ತು ರಹೀಂ ಖಾನ್ ಶೇ. 15% ಹಾಗೂ ಶಾಸಕ ವಿನಯ್ ಕುಲಕರ್ಣಿ ಅವರು ಶೇ. 3% ರಷ್ಟು ಮೊತ್ತವನ್ನು ಕಮಿಷನ್ ಹೆಸರಿನಲ್ಲಿ ಪಡೆದಿದ್ದಾರೆ ಎಂಬ ಗಂಭೀರ ಆರೋಪ ಮಾಡಿರುವ ರಮೇಶ್, ಇದಕ್ಕೆ ಪೂರಕವಾದ ದಾಖಲೆಗಳನ್ನೂ ನೀಡಿದ್ದಾರೆ.
ಅಕ್ರಮ ನಡೆದಿರುವುದು ಹೇಗೆ?
- ಕಾಮಗಾರಿಗಳನ್ನು ನಿರ್ವಹಿಸದೆಯೇ ಹಣ ಬಿಡುಗಡೆ ಮಾಡಿರುವುದು
- ಕಾಮಗಾರಿಗಳ ಅಂದಾಜು ಪಟ್ಟಿಯಲ್ಲಿರುವ ಅರ್ಧದಷ್ಟು ಕಾರ್ಯಗಳನ್ನೂ ಮಾಡದೆ ಹಣ ಬಿಡುಗಡೆ ಮಾಡಿರುವುದು
- ಒಂದೇ ಕಾಮಗಾರಿಗೆ ಸಂಬಂಧಿಸಿದ 03 ಹಂತಗಳ ಛಾಯಾಚಿತ್ರಗಳನ್ನೇ ಹಲವಾರು ಕಾಮಗಾರಿಗಳ Work Completion Certificate ಗಳಿಗೆ ಜೋಡಿಸಿರುವುದು
- ಹಣ ಲಪಟಾಯಿಸುವ ದುರುದ್ದೇಶದಿಂದ ಪೂರ್ವ ನಿಗದಿತ ಗುತ್ತಿಗೆದಾರರಿಗೆ ಮಾತ್ರವೇ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಗಳಲ್ಲಿ ಭಾಗವಹಿಸುವ ಅವಕಾಶ ದೊರಕಿಸಿಕೊಟ್ಟಿರುವುದು
- AMRUT ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆಯೆಂದು KUWS & DB ಮತ್ತು DMA ಇಲಾಖೆಗಳು ಹೇಳುತ್ತಿರುವ ರಾಜ್ಯದ 27 ನಗರಸಭೆ / ಪುರಸಭೆಗಳ ವ್ಯಾಪ್ತಿಗಳಲ್ಲಿ ಕಳೆದ ಒಂದೂವರೆ ವರ್ಷಗಳಲ್ಲಿ ನಡೆದಿರುವ ಕಾಮಗಾರಿಗಳನ್ನು ಖುದ್ದಾಗಿ ಪರಿಶೀಲನೆ ಮಾಡಿದಲ್ಲಿ, ಬಿಡುಗಡೆಯಾಗಿರುವ ಒಟ್ಟು ಮೊತ್ತದ ಶೇ. 50% ರಷ್ಟು ಮೊತ್ತದ ಕಾಮಗಾರಿಗಳೂ ಸಹ ನಮ್ಮ ಕಣ್ಣಿಗೆ ಕಾಣಸಿಗುವುದಿಲ್ಲ.
ವಂಚನೆ, ಭ್ರಷ್ಟಾಚಾರ, ಅಧಿಕಾರ ದುರುಪಯೋಗ, ನಕಲಿ ದಾಖಲೆ ತಯಾರಿಕೆ ಮತ್ತು ಸರ್ಕಾರಿ ಹಣ ದುರ್ಬಳಕೆ ಪ್ರಕರಣಗಳು ಹಾಗೂ ಅಕ್ರಮ ಹಣ ವರ್ಗಾವಣೆ ಕಾಯ್ದೆ, 2002 (PMLA) ರ ಅಡಿಯಲ್ಲಿ ಸಚಿವರಾದ ಭೈರತಿ ಸುರೇಶ್, ರಹೀಂ ಖಾನ್ ಮತ್ತು ಶಾಸಕ ವಿನಯ್ ಕುಲಕರ್ಣಿ ಹಾಗೂ “ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ” (KUWS & DB) ಯ ಮುಖ್ಯ ಅಭಿಯಂತರರುಗಳಾದ V. L. ಚಂದ್ರಪ್ಪ ಮತ್ತು T. N. ಮುದ್ದುರಾಜಣ್ಣ ಅವರುಗಳ ವಿರುದ್ಧ ಹಾಗೂ “ಪೌರಾಡಳಿತ ಇಲಾಖೆ” (DMA) ಯ ನಿರ್ದೇಶಕರಾದ ಪ್ರಭುಲಿಂಗ ಕಾವಲಿಕಟ್ಟಿ, ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಹಾಗೆನೇ ಜನ ಪ್ರತಿನಿಧಿಗಳ ವಿರುದ್ಧ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲು Prosecution Permission ನೀಡುವಂತೆ ರಾಜ್ಯದ ಘನತೆವೆತ್ತ ರಾಜ್ಯಪಾಲರಿಗೆ N. R. ರಮೇಶ್ ಇದೇ ವೇಳೆ ಮನವಿ ಮಾಡಿದ್ದಾರೆ.
ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ ಆಗಿರುವುದರಿಂದ ಸಾವಿರಾರು ಕೋಟಿ ರೂಪಾಯಿಗಳಷ್ಟು ಅನುದಾನಗಳನ್ನು ದುರ್ಬಳಕೆ ಮಾಡಿಕೊಂಡಿರುವ ಬೃಹತ್ ಹಗರಣವನ್ನು CBI ತನಿಖೆಗೆ ವಹಿಸುವಂತೆ ಪ್ರಧಾನ ಮಂತ್ರಿ ಹಾಗೂ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಇಲಾಖೆ ಸಚಿವ ಮನೋಹರ್ ಲಾಲ್ ಖಟ್ಟರ್ ಅವರನ್ನು N. R. ರಮೇಶ್ ಕೋರಿಕೊಂಡಿದ್ದಾರೆ. ಹಾಗೆನೇ AMRUT ಯೋಜನೆಯ ಅಪಾರ ಪ್ರಮಾಣದ ಅನುದಾನಗಳನ್ನು ದುರ್ಬಳಕೆ ಮಾಡಿಕೊಂಡಿರುವ ಹಗರಣವನ್ನ ಉನ್ನತ ಮಟ್ಟದ ನ್ಯಾಯಾಂಗ ತನಿಖೆಗೆ ವಹಿಸುವಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನು ಇದೇ ವೇಳೆ ಆಗ್ರಹಿಸಿದ್ದಾರೆ.