ಬಿಜೆಪಿಗೆ ಕಾಂಗ್ರೆಸ್ ಸರಕಾರವನ್ನು ಬುಡಸಮೇತ ಕಿತ್ತು ಹಾಕುವ ಶಕ್ತಿ ಇದೆ:ವಿಜಯೇಂದ್ರ

RELATED POSTS

ಮಂಗಳೂರು(www.thenewzmirror.com): ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸರಕಾರವನ್ನು ಬುಡಸಮೇತ ಕಿತ್ತು ಹಾಕುವ ಶಕ್ತಿ ಬಿಜೆಪಿಗೆ ಇದೆ ಎಂಬ ಸಂದೇಶವನ್ನು 83 ವರ್ಷದ ಮಹಿಳೆ ವತ್ಸಲಾ ಕಾಮತ್ ಅವರು ಸಾಂಕೇತಿಕವಾಗಿ ತೋರಿಸಿಕೊಟ್ಟಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ  ಅವರು ವಿಶ್ವಾಸದಿಂದ ಹೇಳಿದರು.

ಬಿಜೆಪಿ ಜನಾಕ್ರೋಶ ಯಾತ್ರೆಯ ಮೂರನೇ ದಿನವಾದ ಇಂದು ಇಲ್ಲಿ ಏರ್ಪಡಿಸಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಹಿಂದೂಗಳಿಗೆ ಅಪಮಾನ ಮಾಡುವ ಕೆಲಸವನ್ನು ಮುಖ್ಯಮಂತ್ರಿಗಳು ಮಾಡುತ್ತಿದ್ದಾರೆ. ಮಾನ್ಯ ಸಿದ್ದರಾಮಯ್ಯನವರೇ, ಹಿಂದೂಗಳಿಗೆ ಅಪಮಾನ ಮಾಡುವ ಕೆಲಸವನ್ನು ರಾಜ್ಯದ ಮುಖ್ಯಮಂತ್ರಿಗಳಾಗಿ ನೀವು ಮಾಡುತ್ತಿದ್ದೀರಿ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸರಕಾರವನ್ನು ಬುಡಸಮೇತ ಕಿತ್ತು ಹಾಕುವ ಶಕ್ತಿ ಬಿಜೆಪಿ ಕಾರ್ಯಕರ್ತರಿಗೆ ಇದೆ ಎಂಬ ಸಂದೇಶ ಇದಾಗಿದೆ ಎಂದು ಎಚ್ಚರಿಸಿದರು.

ಲಜ್ಜೆಗೆಟ್ಟ ಕಾಂಗ್ರೆಸ್ ಪಕ್ಷವು ಇವತ್ತು ರಾಜ್ಯದಲ್ಲಿ ಆಡಳಿತ ನಡೆಸುತ್ತಿದೆ ಎಂದು ಆರೋಪಿಸಿದ ಅವರು, ನಾನು ಪತ್ರಿಕೆಯಲ್ಲಿ ನೋಡಿದ್ದೇನೆ. ಪ್ರವೀಣ್ ನೆಟ್ಟಾರ್ ಅವರನ್ನು ಕೊಲೆ ಮಾಡಿದ ದೇಶದ್ರೋಹಿಯನ್ನು ನಿನ್ನೆ ಕೋರ್ಟಿಗೆ ಕರೆದುಕೊಂಡು ಬರಲಾಗುತ್ತಿತ್ತು. ಒಬ್ಬ ದೇಶದ್ರೋಹಿ ಬಂದು ಇನ್ನೊಬ್ಬ ದೇಶದ್ರೋಹಿಗೆ ಮುತ್ತಿಕ್ಕಿದ್ದಾನೆ. ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿ ಇದ್ದಿದ್ದರೆ, ಯಡಿಯೂರಪ್ಪ ಅವರಂಥವರು ಮುಖ್ಯಮಂತ್ರಿಯಾಗಿದ್ದರೆ ಆ ದೇಶದ್ರೋಹಿಯ ಮೇಲೆ ಅಲ್ಲೇ ಗುಂಡು ಹಾರಿಸುವ ಕೆಲಸವನ್ನು ಬಿಜೆಪಿ ಸರಕಾರ ಮಾಡುತ್ತಿತ್ತು ಎಂದರು.

ಕುಶಾಲನಗರದಲ್ಲಿ ಬಿಜೆಪಿ ಕಾರ್ಯಕರ್ತ ಅಲ್ಲಿನ ಆಸ್ಪತ್ರೆ ವ್ಯವಸ್ಥೆ, ಶೌಚಾಲಯ ಸರಿ ಇಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದರೆ, ಅವರ ವಿರುದ್ಧ ಕೇಸ್ ಹಾಕಿ ಪೊಲೀಸರ ಮೂಲಕ ದಬ್ಬಾಳಿಕೆ ಮಾಡುವ ಕೆಲಸ ಮಾಡಿದ್ದಾರೆ. ಅವರಿಗೆ ಕೋರ್ಟಿನಲ್ಲಿ ತಡೆಯಾಜ್ಞೆ, ಜಾಮೀನು ಸಿಕ್ಕಿದರೂ ಸಹ ಇವತ್ತು ಆತ್ಮಹತ್ಯೆ ಮಾಡಿಕೊಳ್ಳುವಂಥ ಪುಂಡತನವನ್ನು ಕಾಂಗ್ರೆಸ್ ಸರಕಾರ ತೋರಿಸಿದೆ ಎಂದು ಟೀಕಿಸಿದರು.ಇಂಥ ಹಿಂದೂ ವಿರೋಧಿ ಸರಕಾರಕ್ಕೆ ನಾವು ತಕ್ಕ ಉತ್ತರ ನೀಡಬೇಕಿದೆ ಎಂದು ಮನವಿ ಮಾಡಿದರು. ರಾಜ್ಯ ಸರಕಾರ ಮತ್ತು ಸಿದ್ದರಾಮಯ್ಯನವರು ಸರಕಾರಿ ಕಾಮಗಾರಿಗಳಲ್ಲಿ ಮುಸಲ್ಮಾನರಿಗೆ ಶೇ 4ರಷ್ಟು ಮೀಸಲಾತಿ ನೀಡಿದ್ದಾರೆ ಎಂದರಲ್ಲದೆ, ಯಾಕೆ ಹಿಂದೂಗಳು ಬದುಕಿಲ್ಲವೇ ಸಿದ್ದರಾಮಯ್ಯನವರೇ ಎಂದು ಪ್ರಶ್ನಿಸಿದರು.

ಮುಸಲ್ಮಾನ ಹೆಣ್ಮಕ್ಕಳಿಗೆ ಆತ್ಮರಕ್ಷಣೆಗಾಗಿ ನೂರಾರು ಕೋಟಿ ಕೊಡುತ್ತಿದ್ದಾರೆ. ಸಿದ್ದರಾಮಯ್ಯನವರಿಗೆ ನಾಚಿಕೆ ಆಗಬೇಕು ಎಂದು ಟೀಕಿಸಿದರು. ಹಿಂದೂ ಹುಡುಗಿಯರು ಇವತ್ತು ಲವ್ ಜಿಹಾದ್‍ಗೆ ಬಲಿ ಆಗುತ್ತಿದ್ದಾರೆ. ಅವರ ಆತ್ಮರಕ್ಷಣೆ ತರಬೇತಿಗಾಗಿ ಹಣ ಕೊಡುವ ಬದಲು ಮುಸಲ್ಮಾನರಿಗೆ ಕೊಡುತ್ತಾರಂತೆ ಎಂದು ಆಕ್ಷೇಪಿಸಿದರು. ಮುಸಲ್ಮಾನ ಯುವಜನರು ಹೊರದೇಶಕ್ಕೆ ಉನ್ನತ ಶಿಕ್ಷಣಕ್ಕೆ ಹೋಗುವುದಾದರೆ 20 ಲಕ್ಷ ಕೊಡುತ್ತಿದ್ದು, ಅದನ್ನು 30 ಲಕ್ಷಕ್ಕೆ ಏರಿಸುವುದಾಗಿ ಸಿದ್ದರಾಮಯ್ಯನವರು ಘೋಷಿಸಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಇಂಥ ಹಿಂದೂ ವಿರೋಧಿ ಕಾಂಗ್ರೆಸ್ ಸರಕಾರವನ್ನು ಬುಡಸಮೇತ ಕಿತ್ತು ಹಾಕುವ ಶಕ್ತಿ ಬಿಜೆಪಿ ಕಾರ್ಯಕರ್ತರಿಗೆ ಇದೆ ಎಂದು ಪುನರುಚ್ಚರಿಸಿದರು.

ಈ ಪುಣ್ಯಾತ್ಮ ರಾಜ್ಯದ ಮುಖ್ಯಮಂತ್ರಿಯಾದ ಮೇಲೆ 50ಕ್ಕೂ ಹೆಚ್ಚು ವಸ್ತುಗಳ ಬೆಲೆ ಏರಿಕೆ ಆಗಿದೆ. ಪೌಷ್ಟಿಕ ಆಹಾರ ಹಾಲಿಗೆ ಇದುವರೆಗೆ 9 ರೂ. ಹೆಚ್ಚಿಸಿದ್ದಾರೆ. ಪೆಟ್ರೋಲ್, ಡೀಸೆಲ್ ದರವನ್ನು ಸಿದ್ದರಾಮಯ್ಯನವರ ಸರಕಾರ ಏಳೂವರೆ ರೂ. ಹೆಚ್ಚಿಸಿದೆ ಎಂದು ಆಕ್ಷೇಪಿಸಿದರು.

ಈ ಜನವಿರೋಧಿ ಸರಕಾgದ ಸಚಿವರು ಮಾತೆತ್ತಿದರೆ ಕೇಂದ್ರವನ್ನು ದೂರುತ್ತಾರೆ. ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲ ವರು ಮೊನ್ನೆ ಬಜೆಟ್ ಮಂಡಿಸುವಾಗ ನಮ್ಮ ಪ್ರಧಾನಮಂತ್ರಿ ಮೋದಿಜೀ ಅವರನ್ನು ಶ್ಲಾಘಿಸಿದ್ದಾರೆ. ಜಮ್ಮು ಕಾಶ್ಮೀರದ ಸರ್ವತೋಮುಖ ಅಭಿವೃದ್ಧಿಗೆ ನೆರವಾದ ಮೋದಿಜೀ ಅವರನ್ನು ಅಭಿನಂದಿಸಿದ್ದಾರೆ ಎಂದು ಸಿದ್ದರಾಮಯ್ಯನವರ ಗಮನ ಸೆಳೆದರು.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist