ಬೆಂಗಳೂರು, (www.thenewzmirror.com);
ಗ್ಯಾರಂಟಿ ಕೊಟ್ಟಿರೋ ಸರ್ಕಾರ ಹಾಲು, ಬಸ್ ಪ್ರಯಾಣ ದರ, ಮೆಟ್ರೋ ದರ ಬಳಿಕ ಹಾಲು, ವಿದ್ಯುತ್ ದರ ಏರಿಸಿ ಶಾಕ್ ಕೊಟ್ಟಿತ್ತು. ಇದರ ಜತೆಗೆ ಡೀಸೆಲ್ ಬೆಲೆಯನ್ನ 2 ರೂ ಹೆಚ್ಚಳ ಮಾಡಿ ಮತ್ತೆ ಶಾಕ್ ಕೊಟ್ಟಿತ್ತು. ಸರ್ಕಾರದ ಈ ಒಂದು ನಿರ್ಧಾರ ಇದೀಗ ಪೋಷಕರ ಜೇಬಿಗೆ ಕತ್ತರಿ ಬೀಳುತ್ತಾ ಅನ್ನೋ ಆತಂಕ ಶುರುವಾಗಿದೆ.
ಡೀಸೆಲ್ ಬೆಲೆ ಹೆಚ್ಚಳದ ಹೊರೆಯನ್ನು ಪೋಷಕರ ಹೆಗಲಿಗೆ ಹಾಕಲು ಖಾಸಗಿ ಶಾಲಾ ವಾಹನ ಸಂಘ ನಿರ್ಧಾರ ಕೈಗೊಂಡಿದೆ ಎನ್ನುವ ಮಾಹಿತಿ ಕೇಳಿ ಬರುತ್ತಿದೆ. ಪ್ರತಿ ಲೀಟರ್ ಡೀಸೆಲ್ ದರ 2 ರೂ. ಏರಿಕೆಯಾದ ಹಿನ್ನೆಲೆಯಲ್ಲಿ ಶಾಲಾ ವಾಹನದ ಶುಲ್ಕವನ್ನು ಹೆಚ್ಚಿಸಲು ಸಂಘ ತೀರ್ಮಾನ ಮಾಡೋಕೆ ಮುಂದಾಗಿದೆ ಎನ್ನುವ ಮಾಹಿತಿ ಹರಿದಾಡುತ್ತಿದೆ. ಸದ್ಯ ತಿಂಗಳಿಗೆ 2 ರಿಂದ 3 ಸಾವಿರ ಇದ್ದ ಶುಲ್ಕ 2,500 ರಿಂದ 3,500 ರೂ. ಗೆ ಏರಿಕೆಯಾಗುವ ಸಾಧ್ಯತೆಯಿದೆ. ಪ್ರಸ್ತುತ ಶೈಕ್ಷಣಿಕ ವರ್ಷದಿಂದಲೇ ಹೆಚ್ಚಳ ದರ ಜಾರಿಗೆ ಬರಲಿದೆ ಅಂತಾನೇ ಹೇಳಾಗುತ್ತಿದ್ದು, ಬೆಂಗಳೂರಿನಲ್ಲಿರೋ 7 ಸಾವಿರಕ್ಕೂ ಹೆಚ್ಚು ಖಾಸಗಿ ಶಾಲಾ ವಾಹನಗಳಿಂದ ಪೋಷಕರ ಜೇಬಿಗೆ ಕತ್ತರಿ ಬೀಳುತ್ತೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ಖಾಸಗಿ ಶಾಲಾ ವಾಹನಗಳ ಸಂಘದ ಈ ತೀರ್ಮಾನ ಬಡ ಮತ್ತು ಮಧ್ಯಮ ವರ್ಗದ ಪೋಷಕರಿಗೆ ಹೊರೆ ಆಗಲಿದೆ ಎಂದು ಹೇಳಲಾಗುತ್ತಿದೆ. ಈ ಕುರಿತು ಪೋಷಕರು ಆಕ್ರೋಶ ಹೊರಹಾಕಿದ್ದು, ಶಾಲೆಯ ಶುಲ್ಕ ಹೆಚ್ಚಾಯ್ತು, ಬುಕ್ಸ್ ದರ ಕೂಡ ಹೆಚ್ಚಾಗಿದೆ. ಈಗ ಶಾಲಾ ವಾಹನದ ಶುಲ್ಕ ಏರಿಕೆ ಯಾಕೆ ಎಂದು ಪೋಷಕರು ವಿರೋಧ ವ್ಯಕ್ತಪಡಿಸಿದ್ದಾರೆ.
ದರ ಹೆಚ್ಚಳ ಇಲ್ಲ ಎಂದ ಸಂಘ
ಡಿಸೇಲ್ ದರ ಹೆಚ್ಚಳದ ಬೆನ್ನಲ್ಲೇ ಶಾಲಾ ವಾಹನದ ಶುಲ್ಕವನ್ನ ಹೆಚ್ಚಳ ಮಾಡಲಾಗುತ್ತಿದೆ ಎನ್ನುವ ಸುದ್ದಿ ಹರಿದಾಡುತ್ತಿದ್ದಂತೆ ಖಾಸಗಿ ಶಾಲಾ ವಾಹನ ಸಂಘ ಸ್ಪಷ್ಟನೆ ಕೊಟ್ಟಿದೆ. ಯಾವುದೇ ಕಾರಣಕ್ಕೂ ನಾವು ಶುಲ್ಕ ಹೆಚ್ಚಳ ಮಾಡೋದಿಲ್ಲ. ಇದೆಲ್ಲಾ ಸತ್ಯಕ್ಕೆ ದೂರವಾದ ವಿಚಾರ. ನಾವು ಯಾವತ್ತೂ ಪೊಷಕರ ಪರವಾಗಿಯೇ ಇದ್ದೇವೆ, ದರ ಹೆಚ್ಚಳ ಮಾಡುವ ಪ್ರಸ್ತಾವನೆ ನಮ್ಮ ಮುಂದಿಲ್ಲ ಅಂತ ಖಾಸಗಿ ಶಾಲಾ ವಾಹನ ಸಂಘ ಅಧ್ಯಕ್ಷ ರವಿ ಕುಮಾರ್ ಸ್ಪಷ್ಟನೆ ಕೊಟ್ಟಿದ್ದಾರೆ.