ವಿಧಾನಸೌಧದ ಆಡಳಿತ ವಯನಾಡ್ ಗೆ ಶಿಫ್ಟ್ ; ಅಶೋಕ್ ಟೀಕೆ

r ashoka

RELATED POSTS

ಬೆಂಗಳೂರು(www.thenewzmirror.com) : ಸಿದ್ದರಾಮಯ್ಯ ಸರ್ಕಾರದ ಆಡಳಿತಯಂತ್ರ ಕುಸಿದುಬಿದ್ದಿದ್ದು, ಭ್ರಷ್ಟಾಚಾರ ಮೇರೆ ಮೀರಿರುವುದಕ್ಕೆ ರಾಜ್ಯಾದ್ಯಂತ ವ್ಯಕ್ತವಾಗುತ್ತಿರುವ “ಜನಾಕ್ರೋಶ” ವೇ ಸಾಕ್ಷಿ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಹೇಳಿದ್ದಾರೆ.

ಭ್ರಷ್ಟಾಚಾರದಲ್ಲಿ ಕರ್ನಾಟಕ ನಂಬರ್ ಒನ್ ಎಂದು ಸಿಎಂ ಅವರ ಆರ್ಥಿಕ ಸಲಹೆಗಾರ ಬಸವರಾಜ್ ರಾಯರೆಡ್ಡಿ ನೀಡಿರುವ ಸರ್ಟಿಫಿಕೇಟ್ ಮತ್ತು 20 ತಿಂಗಳ ಬಳಿಕ  ಸರ್ಕಾರ ಟೇಕಾಫ್ ಆಗುತ್ತಿದೆ ಎಂದು ಸಚಿವ ಡಿ.ಸುಧಾಕರ್ ನೀಡಿರುವ ಹೇಳಿಕೆ ಸರ್ಕಾರದ ಕಾರ್ಯವೈಖರಿಗೆ ಕನ್ನಡಿ ಹಿಡಿದಿವೆ ಎಂದು ಟೀಕಿಸಿದ್ದಾರೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ಈ ಸರ್ಕಾರದ ಬಗ್ಗೆ ರಾಜ್ಯಾದ್ಯಂತ ಜನರಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಪಕ್ಷದ ಜನಾಕ್ರೋಶ ಯಾತ್ರೆಗೆ ಸಿಗುತ್ತಿರುವ ಬೆಂಬಲ ಮತ್ತು ಭೇಟಿ ನೀಡುತ್ತಿರುವ ಜಿಲ್ಲೆಗಳಲ್ಲಿ ಜನರು ವ್ಯಕ್ತಪಡಿಸುತ್ತಿರುವ ಅನಿಸಿಕೆಗಳು ಇದಕ್ಕೆ ಪೂರಕವಾಗಿವೆ ಎಂದು ತಿಳಿಸಿದ್ದಾರೆ.

ಲಂಚ ಮೇರೆ ಮೀರಿದೆ:

ಈ ಹಿಂದೆ ಅಧಿವೇಶನದಲ್ಲಿ ತಾವು ತಿಳಿಸಿದ್ದಂತೆ ಇದೊಂದು ವಂಚಕ ಸರ್ಕಾರ,  ಕೆಟ್ಟ ಆಡಳಿತ ನೀಡುತ್ತಿದೆ. ಅದನ್ನು ಮರೆಮಾಚಲು ನಡೆಸಿದ ಕಸರತ್ತು ವಿಫಲವಾಗಿವೆ.  20 ತಿಂಗಳಲ್ಲಿ ಸಿದ್ದರಾಮಯ್ಯ ಸರ್ಕಾರದ ಬಣ್ಣ ಬಯಲಾಗಿದೆ. ಅವೈಜ್ಞಾನಿಕ ಗ್ಯಾರಂಟಿ ಯೋಜನೆ ಜಾರಿಯಿಂದ ಬೊಕ್ಕಸ ಬರಿದಾಗಿ, ಸರ್ಕಾರ ದಿವಾಳಿಯಾಗಿದೆ. ಒಂದೇ ಒಂದು ಅಭಿವೃದ್ಧಿ ಕಾರ್ಯಕ್ರಮ ಅನುಷ್ಠಾನ ಆಗುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಈ ಕಾರಣದಿಂದಲೇ ಸಿಎಂ ಮತ್ತು ಸಚಿವರು ಎಲ್ಲಿಯೂ ಪ್ರವಾಸ ನಡೆಸುತ್ತಿಲ್ಲ. ಭೇಟಿ ನೀಡಿದ ಕಡೆ ಜನರ ಆಕ್ರೋಶಕ್ಕೆ ಗುರಿಯಾಗಬೇಕಾಗುತ್ತದೆ ಎಂದು ಬೆಂಗಳೂರಿನಲ್ಲಿ ಕುಳಿತು ಕಾಲಾಹರಣ ಮಾಡುತ್ತಿದ್ದಾರೆ. ಒಂದು ಕಡೆ ದರ ಏರಿಕೆ ಬರೆ, ಮತ್ತೊಂದು ಕಡೆ ಯಾವ ಕಚೇರಿಗೆ ಹೋದರು ಲಂಚದ ಹಾವಳಿಯಿಂದ ಜನ ಹೈರಾಣ ಆಗಿದ್ದಾರೆ ಎಂದು ಹರಿಹಾಯ್ದಿದ್ದಾರೆ.

ಈ ವಾಸ್ತವ ಸಂಗತಿಯನ್ನು ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರೇ ಹಾದಿ ಬೀದಿಗಳಲ್ಲಿ ಟೀಕಿಸುತ್ತಿದ್ದಾರೆ. ಹೆಚ್ಚು ದಿನ ಸುಳ್ಳು ಹೇಳಿ ಕಾಲಾಹರಣ ಮಾಡಲು ಆಗುವುದಿಲ್ಲ. ಹೀಗಾಗಿ ಆ  ಸತ್ಯವನ್ನು ರಾಯರೆಡ್ಡಿ ಮತ್ತು ಸಚಿವ ಡಿ. ಸುಧಾಕರ್ ಬಹಿರಂಗವಾಗಿ ಹೇಳಿದ್ದಾರೆ. ಇದಕ್ಕಿಂತ ಈ ಸರ್ಕಾರಕ್ಕೆ ದೊಡ್ಡ ಸರ್ಟಿಫಿಕೇಟ್ ಬೇಕೆ ಎಂದು ಅಶೋಕ್ ವ್ಯಂಗ್ಯವಾಡಿದ್ದಾರೆ.

 ಸಚಿವರು ಸಿಎಂ ಮಾತು ಕೇಳುತ್ತಿಲ್ಲ:

ಕೆಲ ತಿಂಗಳ ಹಿಂದೆ ವಿಧಾನಸೌಧದ ಮುಂದೆ ದಿನವಿಡೀ ಜನತಾ ದರ್ಶನ ಕಾರ್ಯಕ್ರಮ ನಡೆಸಿದ್ದ ಸಿದ್ದರಾಮಯ್ಯನವರು, ಇನ್ನು ಮುಂದೆ ಜಿಲ್ಲಾ ಉಸ್ತುವಾರಿ ಸಚಿವರು ಪ್ರತಿ ತಿಂಗಳು ಕಡ್ಡಾಯವಾಗಿ ಜಿಲ್ಲಾ ಕೇಂದ್ರಗಳಲ್ಲಿ ಜನತಾ ದರ್ಶನ ಮಾಡಬೇಕು ಎಂದು ಸೂಚನೆ ನೀಡಿದರು. ಸಿಎಂ ಮಾತಿಗೆ ಯಾವ ಸಚಿವರು ಕೇರ್ ಮಾಡಲಿಲ್ಲ. ಎಲ್ಲಿಯೂ ಜನತಾ ದರ್ಶನ ನಡೆಯಲಿಲ್ಲ. ಇದು ಸರ್ಕಾರದ ಕಾರ್ಯವೈಖರಿಗೆ ಚಿಕ್ಕ ಸ್ಯಾಂಪಲ್ ಎಂದು ಆರೋಪಿಸಿದ್ದಾರೆ.

ಸಿದ್ದರಾಮಯ್ಯನವರು ಇನ್ನೆಷ್ಟು ದಿನ ಇರುತ್ತಾರೆ? ಬದಲಾಗುತ್ತಾರೆ ಎಂಬ ಉಡಾಫೆ ಸಚಿವರಲ್ಲಿದೆ. ಇದರಿಂದ ಜನರ ಅಹವಾಲು ಕೇಳುವವರು ದಿಕ್ಕಿಲ್ಲದಂತಾಗಿದೆ. ಅಧಿಕಾರಿಗಳು ಕೂಡ ಮಾತು ಕೇಳುತ್ತಿಲ್ಲ, ಕಚೇರಿಗೂ ಬರುತ್ತಿಲ್ಲ. ಹೀಗಾಗಿ ಆಡಳಿತ ಹಳಿ ತಪ್ಪಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಾಯಕತ್ವ ಬದಲಾವಣೆ ರಾದ್ಧಾಂತ, ಭ್ರಷ್ಟಾಚಾರ, ಲೂಟಿಯಲ್ಲೇ ಇಡೀ ಸರ್ಕಾರ ಮುಳುಗಿ ಹೋಗಿದೆ. ದರ ಏರಿಕೆ ಬರೆ ಮೂಲಕ ಜನ ಸಾಮಾನ್ಯರನ್ನು ರಣ ಹದ್ದುಗಳಂತೆ ಕುಕ್ಕಿ ತಿನ್ನುತಿದ್ದಾರೆ. ರಾಜ್ಯದಲ್ಲಿ ಅರಾಜಕತೆ ತಾಂಡವವಾಡುತ್ತಿದೆ ಎಂದು ಅಶೋಕ್ ಆರೋಪಿಸಿದ್ದಾರೆ.

 ವಯನಾಡು ಕೇಂದ್ರ ಕಚೇರಿ:

ಈಗ ವಿಧಾನಸೌಧದ ಆಡಳಿತ ಕೇರಳದ ವಯನಾಡಿಗೆ ಶಿಫ್ಟ್ ಆಗಿದೆ. ಅಲ್ಲಿಂದ ಬರುವ ಸೂಚನೆಯನ್ನು ಇಲ್ಲಿ ಪಾಲಿಸಲಾಗುತ್ತಿದೆ. ಹುಲಿ ಯೋಜನೆ ಪ್ರದೇಶದ ಹಿಮವದ್ ಗೋಪಾಲಸ್ವಾಮಿ ಬೆಟ್ಟ ಪ್ರದೇಶದಲ್ಲಿ ಮಲಯಾಳಂ ಚಲನಚಿತ್ರ ಚಿತ್ರೀಕರಣ ಮಾಡಲು ಅವಕಾಶ ನೀಡಿರುವುದೇ ಇದಕ್ಕೆ ಸಾಕ್ಷಿ. ನಿರ್ಬಂಧಿತ ಪ್ರದೇಶದಲ್ಲಿ ಶೂಟಿಂಗ್ ಮಾಡಲು ಸ್ಥಳೀಯ ಅಧಿಕಾರಿಗಳು ಅವಕಾಶ ನೀಡಿಲ್ಲ. ಸರ್ಕಾರದ ಮಟ್ಟದಲ್ಲೇ ಶೂಟಿಂಗ್ ನಡೆಸಲು ಅವಕಾಶ ನೀಡಲಾಗಿದೆ ಎಂದು ಸ್ಥಳೀಯ ಎಸಿಎಫ್ ಹೇಳಿಕೆ ನೀಡಿದ್ದಾರೆ. ಸರ್ಕಾರದ ಮಟ್ಟದಲ್ಲಿ ಅಂದರೆ ಯಾರು? ಈ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಬೇಕಿದೆ. ಈ ಹಿಂದೆ ವಯನಾಡು ಆನೆ ದಾಳಿಗೆ ರಾಜ್ಯ ಸರ್ಕಾರ ಪರಿಹಾರ ನೀಡುವಂತೆ ರಾಹುಲ್ ಗಾಂಧಿ ಪತ್ರ ಬರೆದಿದ್ದರು. ಈಗಲೂ ಅದೇ ರೀತಿ ಸೂಚನೆ ಏನಾದರೂ ವಯನಾಡ್ ನಿಂದ ಬಂದಿದೆಯೇ? ಎಂದು ಅಶೋಕ್ ಪ್ರಶ್ನಿಸಿದ್ದಾರೆ.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist