ಬೆಂಗಳೂರು(www.thenewzmirror.com):ಸ್ಮಾರ್ಟ್ ಮೀಟರ್ ವಿಷಯದಲ್ಲಿ ಹತ್ತಾರು ಅವ್ಯವಹಾರದ ದೂರುಗಳಿದ್ದು, ಲೋಕಾಯುಕ್ತರ ಗಮನಕ್ಕೆ ತಂದಿದ್ದೇವೆ ಎಂದು ರಾಜ್ಯದ ಮಾಜಿ ಉಪ ಮುಖ್ಯಮಂತ್ರಿಗಳಾದ ಡಾ. ಸಿ.ಎನ್. ಅಶ್ವತನಾರಾಯಣ್ ಅವರು ತಿಳಿಸಿದರು.
ಲೋಕಾಯುಕ್ತಕ್ಕೆ ದೂರು ನೀಡಿದ ಬಳಿಕ ಮಾಧ್ಯಮಗಳ ಜೊತೆ ಇಂದು ಮಾತನಾಡಿದ ಅವರು, ಭ್ರಷ್ಟಾಚಾರದ ಕುರಿತು ಲೋಕಾಯುಕ್ತರಿಗೂ ಸವಿಸ್ತಾರವಾಗಿ ತಿಳಿಸಿದ್ದೇವೆ. ನೇರವಾಗಿ ಲೋಕಾಯುಕ್ತ ಎಸ್ಪಿಗೆ ದೂರು ನೀಡಿದ್ದೇವೆ. ಕ್ರಮ ವಹಿಸಿ ತಾರ್ಕಿಕ ಅಂತ್ಯ ಕೊಡಬೇಕೆಂದು ಕೋರಿದ್ದಾಗಿ ತಿಳಿಸಿದರು. ಭ್ರಷ್ಟಾಚಾರ ತಡೆಗಾಗಿ ಈ ದೂರು ನೀಡಿದ್ದೇವೆ. ಯುದ್ಧ ಪ್ರಾರಂಭವಾಗಿದೆ ಎಂದು ಹೇಳಿದರು.
ಸಚಿವ ಕೆ.ಜೆ.ಜಾರ್ಜ್ ಅವರು 9 ಸುಳ್ಳು ಹೇಳಿದ್ದಾರೆ. ಇದನ್ನು ಪತ್ರಿಕಾಗೋಷ್ಠಿಯಲ್ಲೂ ತಿಳಿಸಿದ್ದೇವೆ. ಬೇನಾಮಿ, ದುರ್ಬಳಕೆ ನಡೆದಿರುವುದು, ಗ್ರಾಹಕರಿಗೆ ಕಡ್ಡಾಯ ಮಾಡಲು ಅವಕಾಶ ಇಲ್ಲದಿದ್ದರೂ ಮಾಡುತ್ತಿದ್ದಾರೆ ಎಂದು ಪ್ರಶ್ನೆಗೆ ಉತ್ತರಿಸಿದರು.
ಇಂಧನ ಸಚಿವ ಕೆ.ಜೆ.ಜಾರ್ಜ್, ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತ, ಬೆಸ್ಕಾಂ ಎಂ.ಡಿ. ಮಹಂತೇಶ್, ತಾಂತ್ರಿಕ ನಿರ್ದೇಶಕರಾದ ರಮೇಶ್, ಬಾಲಾಜಿ ಮತ್ತಿತರರ ವಿರುದ್ಧ ದೂರು ಕೊಟ್ಟಿದ್ದೇವೆ. ಅಧಿಕಾರ ದುರ್ಬಳಕೆ ಮಾಡಿ ರಾಜಶ್ರೀ ಎಂಬ ಪ್ಲಂಬರ್ ತಯಾರಿಕೆ ಮಾಡುವ ವ್ಯಕ್ತಿಗೆ ಗುತ್ತಿಗೆ ಕೊಡಲು ಎಲ್ಲ ಕಾನೂನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದರು.
ಸ್ಮಾರ್ಟ್ ಮೀಟರನ್ನು ಗ್ರಾಹಕರಿಗೆ ಕಡ್ಡಾಯ ಮಾಡಲು ಕಾನೂನಿನಲ್ಲಿ ಅವಕಾಶ ಇಲ್ಲ. ಆದರೂ ಕಡ್ಡಾಯ ಮಾಡಿದ್ದಾರೆ. ಇದಿಷ್ಟೇ ಅಲ್ಲ; ಬ್ಲ್ಯಾಕ್ ಲಿಸ್ಟ್ ಆದ ಕಂಪನಿ ಜೊತೆ ಒಡಂಬಡಿಕೆ ಮಾಡಿಕೊಂಡಿದ್ದಾರೆ ಎಂದು ದೂರಿದರು.
ಶಾಸಕ ಎಸ್.ಆರ್.ವಿಶ್ವನಾಥ್, ಬಿಜೆಪಿ ಯುವ ಮೋರ್ಚಾ ರಾಜ್ಯ ಅಧ್ಯಕ್ಷ ಮತ್ತು ಶಾಸಕ ಧೀರಜ್ ಮುನಿರಾಜು, ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಮತ್ತು ಶಾಸಕ ಸಿ.ಕೆ.ರಾಮಮೂರ್ತಿ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್.ಹರೀಶ್ ಮತ್ತು ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ ಅವರು ಇದ್ದರು.