BLR Logistics Park | ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಶ್ವದರ್ಜೆಯ ಲಾಜಿಸ್ಟಿಕ್ಸ್ ಪಾರ್ಕ್ ಉದ್ಘಾಟನೆ

World-class logistics park inaugurated at Kempegowda International Airport in Bengaluru

ಬೆಂಗಳೂರು, ( www.thenewzmirror.com) ;

ಭಾರತದ ಪ್ರಮುಖ ವಿಮಾನ ನಿಲ್ದಾಣ ಸೇವಾ ನಿರ್ವಹಣಾ ಕಂಪನಿಯಾದ ಏರ್ ಇಂಡಿಯಾ ಸ್ಯಾಟ್ಸ್ ಏರ್‌ಪೋರ್ಟ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ (ಎಐಸ್ಯಾಟ್ಸ್) ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಥಾಪಿಸಿರುವ ಎಐಸ್ಯಾಟ್ಸ್ ಬೆಂಗಳೂರು ಲಾಜಿಸ್ಟಿಕ್ಸ್ ಪಾರ್ಕ್‌ ಉದ್ಘಾಟನೆಗೊಂಡಿದೆ. ದಕ್ಷಿಣ ಭಾರತದ ಅತಿದೊಡ್ಡ ವಿಮಾನ ನಿಲ್ದಾಣ ಲಾಜಿಸ್ಟಿಕ್ಸ್ ಪಾರ್ಕ್‌ ಗಳಲ್ಲಿ ಒಂದಾದ ಈ ಅತ್ಯಾಧುನಿಕ ಪಾರ್ಕ್ ಅನ್ನು INR 200 ಕೋಟಿ ಹೂಡಿಕೆಯೊಂದಿಗೆ ನಿರ್ಮಿಸಲಾಗಿದೆ.

RELATED POSTS

ಈ ಪಾರ್ಕ್ ಭಾರತದ ಸರಕು ಸಾಗಾಣಿಕಾ ವ್ಯವಸ್ಥೆ ಮತ್ತು ಸರಕು ಮೂಲಸೌಕರ್ಯವನ್ನು ಬಲಪಡಿಸುವಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ. ಬೆಂಗಳೂರು ವಿಮಾನ ನಿಲ್ದಾಣ ಭಾರತದಲ್ಲಿ ಅತ್ಯಂತ ಬಿಡುವಿಲ್ಲದ ಮೂರನೇ ವಿಮಾನ ನಿಲ್ದಾಣವಾಗಿದ್ದು, ದಕ್ಷಿಣ ಭಾರತದ ಒಟ್ಟು ವಾಯು ಸರಕು (ಏರ್ ಕಾರ್ಗೋ) ಪ್ರಮಾಣದ ಶೇ.40 ರಷ್ಟನ್ನು ನಿಭಾಯಿಸುತ್ತದೆ. ಆರ್ಥಿಕ ವರ್ಷ25ರಲ್ಲಿ ನಿಲ್ದಾಣವು 502,480 ಮೆಟ್ರಿಕ್ ಟನ್‌ ಗಳಷ್ಟು ಗರಿಷ್ಠ ವಾರ್ಷಿಕ ಸರಕು ಟನ್ನೇಜ್ ಅನ್ನು ನಿರ್ವಹಣೆ ಮಾಡಿದ ಸಾಧನೆ ಮಾಡಿದೆ ಮತ್ತು 2030ರ ವೇಳೆಗೆ 1 ಮಿಲಿಯನ್ ಮೆಟ್ರಿಕ್ ಟನ್ ಸರಕು ಸಂಸ್ಕರಣೆಯ ಗುರಿಯನ್ನು ಹೊಂದಿದೆ.

ಎಐಸ್ಯಾಟ್ಸ್ ಬೆಂಗಳೂರು ಲಾಜಿಸ್ಟಿಕ್ಸ್ ಪಾರ್ಕ್‌ ನ ಉದ್ಘಾಟನೆಯು ಸರಕು ಸಂಸ್ಕರಣಾ ಸಾಮರ್ಥ್ಯವನ್ನು ಹೆಚ್ಚಿಸುವ, ಕಾರ್ಯಾಚರಣೆಯ ದಕ್ಷತೆಯನ್ನು ಉತ್ತಮಗೊಳಿಸುವ ಮತ್ತು ವೇಗವಾದ, ಸುಗಮ ಹಾಗೂ ಹೆಚ್ಚು ಸುಸ್ಥಿರ ಸರಕು ಸರಬರಾಜು ಸರಪಳಿಗೆ ಇರುವ ಬೇಡಿಕೆಯನ್ನು ಪೂರೈಸುವ ನಿಟ್ಟಿನಲ್ಲಿ ಒಂದು ಬಹಳ ಮುಖ್ಯ ಹೆಜ್ಜೆಯಾಗಿದೆ. ವಿಮಾನ ನಿಲ್ದಾಣದ ಆವರಣದೊಳಗೆ ಸ್ಥಾಪಿತವಾದ ಈ ಗೋದಾಮು ಸೌಲಭ್ಯವು ರಫ್ತುದಾರರು, ಆಮದುದಾರರು, ಸರಕು ಸಾಗಣೆದಾರರು ಮತ್ತು ಲಾಜಿಸ್ಟಿಕ್ಸ್ ಪೂರೈಕೆದಾರರಿಗೆ ಬೆಂಬಲ ನೀಡಲಿದ್ದು, ಉತ್ತಮ ರೀತಿಯಲ್ಲಿ ಸರಕು ಸಾಗಿಸಲು ಮತ್ತು ಈ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಒದಗಿಸಲು ನೆರವಾಗಲಿದೆ.

ತ್ವರಿತವಾಗಿ ಬೆಳೆಯುತ್ತಿರುವ ಬೆಂಗಳೂರಿನ ಈ ವಿಮಾನ ನಿಲ್ದಾಣದ 8 ಎಕರೆ ವಿಸ್ತೀರ್ಣದಲ್ಲಿ ಹರಡಿರುವ ಎಐಸ್ಯಾಟ್ಸ್ ಬೆಂಗಳೂರು ಲಾಜಿಸ್ಟಿಕ್ಸ್ ಪಾರ್ಕ್ ಇಲ್ಲಿನ ಪ್ರಾದೇಶಿಕ ಉದ್ಯಮ ಕ್ಷೇತ್ರಕ್ಕೆ ಬಹಳ ನೆರವನ್ನು ಒದಗಿಸಲಿದೆ. ಈ ಲಾಜಿಸ್ಟಿಕ್ಸ್ ಪಾರ್ಕ್ ಮೂರು ವಿಭಿನ್ನ ಕಟ್ಟಡಗಳ ಸಮೂಹವಾಗಿದ್ದು, ಸರಕು ಸಾಗಾಣಿಕಾ ವಿಭಾಗಕ್ಕೆ ಉತ್ತಮ ಸೇವೆ ಸಲ್ಲಿಸಲಿದೆ. ಆಧುನಿಕವಾಗಿರುವ ಎರಡು- ಹಂತದ ಮುಖ್ಯ ಗೋದಾಮು 240,000 ಚದರ ಅಡಿಗಿಂತಲೂ ಹೆಚ್ಚಿನ ವಿಸ್ತಾರ ಹೊಂದಿರುವ ಗ್ರೇಡ್ ಎ ಗೋದಾಮು ಸ್ಥಳವಾಗಿದ್ದು, ಸರಕು ಸಾಗಣೆದಾರರು, ಎಕ್ಸ್‌ ಪ್ರೆಸ್ ಕೊರಿಯರ್ ಆಪರೇಟರ್‌ಗಳು ಮತ್ತು ಪ್ರಮುಖ ಲಾಜಿಸ್ಟಿಕ್ಸ್ ಸಂಸ್ಥೆಗಳಿಗೆ ಸೂಕ್ತ ಸೇವೆ ಒದಗಿಸಲು ವಿನ್ಯಾಸಗೊಂಡಿದೆ.

ಈ ಮುಖ್ಯ ಗೋದಾಮು ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಬೇಕಾಗುವ ಸಾಮಾನ್ಯ ಗೋದಾಮು ಸ್ಥಳ ಮತ್ತು ಪೇ ಪರ್ ಯೂಸ್ ವ್ಯವಸ್ಥೆ ಲಭ್ಯವಿರುವ ಕೋಲ್ಡ್ ಸ್ಟೋರೇಜ್ ಸ್ಥಳವನ್ನು ಒಳಗೊಂಡಿದೆ. ಈ ವ್ಯವಸ್ಥೆಯು ಲಾಜಿಸ್ಟಿಕ್ಸ್ ವ್ಯವಸ್ಥೆಯಲ್ಲಿ ಎಲ್ಲರನ್ನೂ ಒಳಗೊಳ್ಳುವಂತಹ ಕೆಲಸ ಮಾಡಲು ನೆರವಾಗಲಿದೆ. ಇದರ ಜೊತೆಗೆ ಆಮದುದಾರರು ಮತ್ತು ಓಇಎಂಗಳು ಕಸ್ಟಮ್ಸ್ ಬಾಂಡ್ ಅಡಿಯಲ್ಲಿ ತಮ್ಮ ಸರಕುಗಳನ್ನು ಸುರಕ್ಷಿತವಾಗಿ ಇರಿಸಲು, ಸಂಗ್ರಹಿಸಲು ಮತ್ತು ನಿರ್ವಹಿಸಲು 11,000 ಚದರ ಅಡಿಯ ಪಬ್ಲಿಕ್ ಬಾಂಡೆಡ್ ವೇರ್ ಹೌಸ್ ಲಭ್ಯವಿದೆ. ಲಾಜಿಸ್ಟಿಕ್ಸ್ ಪಾರ್ಕ್ 24,000 ಚದರ ಅಡಿಯ ಆಫೀಸ್ ಬ್ಲಾಕ್ ಅನ್ನು ಸಹ ಹೊಂದಿದ್ದು, ಇಲ್ಲಿ ಕಸ್ಟಮ್ಸ್ ಹೌಸ್ ಏಜೆಂಟ್‌ ಗಳು, ಲಾಜಿಸ್ಟಿಕ್ಸ್ ಕಂಪನಿಗಳು ಮತ್ತು ಬೆಂಬಲ ಸೇವೆ ಒದಗಿಸುವ ಮಂದಿ ಕಾರ್ಯ ನಿರ್ವಹಿಸಬಹುದು.

ಎಐಸ್ಯಾಟ್ಸ್ ಲಾಜಿಸ್ಟಿಕ್ಸ್ ಪಾರ್ಕ್ ಮತ್ತು ಬೆಂಗಳೂರು ವಿಮಾನ ನಿಲ್ದಾಣದ ಸರಕು ಟರ್ಮಿನಲ್‌ಗಳ ನಡುವೆ ವೇಗವಾಗಿ, ಕಡಿಮೆ ಖರ್ಚಿನಲ್ಲಿ ಮತ್ತು ಸುಗಮವಾಗಿ ಸರಕುಗಳ ಸಾಗಣೆ ಮಾಡುವುದು ಸಾಧ್ಯವಾಗಲು ಟ್ರಕ್ಕಿಂಗ್ ಸೇವೆಗಳನ್ನು ಸಹ ಒದಗಿಸಲಾಗುತ್ತದೆ. ಸುಸ್ಥಿರತೆಯು ಎಲ್ಲಾ ಕೆಲಸಗಳ ಕೇಂದ್ರ ಸ್ಥಾನದಲ್ಲಿದ್ದು, ಅದಕ್ಕೆ ಪೂರಕವಾಗಿ ಇಲ್ಲಿ ಮಳೆನೀರು ಕೊಯ್ಲು ವ್ಯವಸ್ಥೆ, ನೈಸರ್ಗಿಕ ಬೆಳಕಿನ ಬಳಕೆ, ಇಡೀ ಘಟಕದಲ್ಲಿ ಶಕ್ತಿ ದಕ್ಷ ಎಲ್ ಇ ಡಿ ಲೈಟಿಂಗ್ ವ್ಯವಸ್ಥೆ ಮತ್ತು ರೆಡ್ಯೂಸ್, ರೀಯೂಸ್, ರೀಸೈಕಲ್ ಎಂಬ ತತ್ವವನ್ನು ಆಧರಿಸಿದ ತ್ಯಾಜ್ಯ ನಿರ್ವಹಣಾ ವ್ಯವಸ್ಥೆ ಸೇರಿದಂತೆ ಹಲವಾರು ಪರಿಸರ ಸ್ನೇಹಿ ಯೋಜನೆಗಳನ್ನು ಹೊಂದಲಾಗಿದೆ.

ಎಐಸ್ಯಾಟ್ಸ್ ಬೆಂಗಳೂರು ಲಾಜಿಸ್ಟಿಕ್ಸ್ ಪಾರ್ಕ್ ಭಾರತದ ಮೂಲಸೌಕರ್ಯ ಆಧರಿತ ಆರ್ಥಿಕ ಅಭಿವೃದ್ಧಿ ಸಾಧಿಸುವ ದೃಷ್ಟಿಕೋನಕ್ಕೆ ಪೂರಕವಾಗಿ ಒಂದು ಐತಿಹಾಸಿಕ ಸಾಧನೆಯಾಗಿದೆ. ಈ ವಿಶ್ವದರ್ಜೆಯ ಸೌಲಭ್ಯವು ಪ್ರಾದೇಶಿಕ ಆರ್ಥಿಕ ಸಮೃದ್ಧಿಯನ್ನು ಹೆಚ್ಚಿಸುವುದಲ್ಲದೆ, ಬೆಂಗಳೂರು ಮತ್ತು ಕರ್ನಾಟಕವನ್ನು ಲಾಜಿಸ್ಟಿಕ್ಸ್ ಆವಿಷ್ಕಾರ ಮತ್ತು ಉದ್ಯಮ ಶ್ರೇಷ್ಠತೆಯ ಪ್ರಮುಖ ಕೇಂದ್ರವಾಗಿ ರೂಪಿಸಲಿದೆ. ಈ ಪಾರ್ಕ್ ಭಾರತದಾದ್ಯಂತ ಸುಗಮವಾದ ಸರಕು ಸಂಪರ್ಕ ವ್ಯವಸ್ಥೆಯನ್ನು ಒದಗಿಸುವ ಮತ್ತು ದೇಶದಲ್ಲಿ ಅಭಿವೃದ್ಧಿ ಹೊಂದುತ್ತಿರುವ ಸರಕು ಮತ್ತು ಲಾಜಿಸ್ಟಿಕ್ಸ್ ಕ್ಷೇತ್ರವನ್ನು ಉನ್ನತೀಕರಿಸುವ ಏರ್ ಇಂಡಿಯಾದ ದೃಷ್ಟಿಕೋನ ಮತ್ತು ಬದ್ಧತೆಗೆ ಅನುಗುಣಾಗಿ ಮೂಡಿಬಂದಿದೆ” ಎಂದು ಎಐಸ್ಯಾಟ್ಸ್ ಚೇರ್ ಮನ್ ನಿಪುಣ್ ಅಗರವಾಲ್ ತಿಳಿಸಿದರು.

ಸ್ಯಾಟ್ಸ್ ನ ಎಪಿಎಸಿ ಗೇಟ್‌ವೇ ಸರ್ವೀಸಸ್‌ ನ ಸಿಇಓ ಬಾಬ್ ಚಿ ಮಾತನಾಡಿ, “ಎಐಸ್ಯಾಟ್ಸ್ ಬೆಂಗಳೂರು ಲಾಜಿಸ್ಟಿಕ್ಸ್ ಪಾರ್ಕ್ ಬೆಂಗಳೂರಿನ ವಾಯು ಸರಕು (ಏರ್ ಕಾರ್ಗೋ) ಸಾಮರ್ಥ್ಯವನ್ನು ಬಲಪಡಿಸುವಲ್ಲಿ, ಉದ್ಯಮಗಳಿಗೆ ನೆರವಾಗುವಲ್ಲಿ ಮತ್ತು ಕೈಗಾರಿಕೆ ಹಾಗೂ ಆರ್ಥಿಕ ಅಭಿವೃದ್ಧಿಯಲ್ಲಿ ಭಾರತದ ಮುಂಚೂಣಿ ಸ್ಥಾನವನ್ನು ಮತ್ತಷ್ಟು ಬಲಪಡಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ. ಈ ಅತ್ಯಾಧುನಿಕ ಪಾರ್ಕ್ ಸ್ಯಾಟ್ಸ್ ನ ಜಾಗತಿಕ ಜಾಲದಲ್ಲಿ ಸ್ಯಾಟ್ಸ್ ನ ಕೇಂದ್ರ ನಿರ್ವಹಣಾ ಸಾಮರ್ಥ್ಯವನ್ನು ವೇಗವಾಗಿ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಈ ಪ್ರಮುಖ ಗೇಟ್‌ವೇ ಮೂಲಕ ಸರಕು ಸಾಗಣೆಯನ್ನು ಸುಗಮಗೊಳಿಸುವ ಮೂಲಕ ಮತ್ತು ದಕ್ಷತೆಯನ್ನು ಹೆಚ್ಚಿಸುವ ಮೂಲಕ, ಸ್ಯಾಟ್ಸ್ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಉಪಸ್ಥಿತಿಯನ್ನು ಬಲಪಡಿಸುವುದಲ್ಲದೆ, ಜಾಗತಿಕವಾಗಿ ಸರಕುಗಳನ್ನು ಸುಗಮವಾಗಿ ಸಾಗಿಸುವ ಮೂಲಕ ಜಾಗತಿಕ ಪೂರೈಕೆ ಸರಪಳಿಗಳನ್ನು ಮತ್ತಷ್ಟು ಬಲಪಡಿಸುತ್ತಿದೆ” ಎಂದು ತಿಳಿಸಿದರು.

ಎಐಸ್ಯಾಟ್ಸ್ ನ ಸಿಇಓ ರಾಮನಾಥನ್ ರಾಜಮಣಿ ಅವರು ಮಾತನಾಡಿ, “ಎಐಸ್ಯಾಟ್ಸ್ ಬೆಂಗಳೂರು ಲಾಜಿಸ್ಟಿಕ್ಸ್ ಪಾರ್ಕ್ ಭಾರತದ ಲಾಜಿಸ್ಟಿಕ್ಸ್ ವ್ಯವಸ್ಥೆಯನ್ನು ಉತ್ತಮವಾಗಿ ನಿರ್ವಹಿಸುವ ಎಐಸ್ಯಾಟ್ಸ್ ನ ಅಚಲ ಬದ್ಧತೆಯನ್ನು ಸಾರುತ್ತದೆ. ವಿಶ್ವದರ್ಜೆಯ ಮೂಲಸೌಕರ್ಯ ಮತ್ತು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಒದಗಿಸುವ ಮೂಲಕ, ದಕ್ಷ ಮತ್ತು ಸುಗಮ ಸರಕು ಸಾಗಣೆಯನ್ನು ಸಾಧ್ಯವಾಗಿಸಲು, ಸ್ಥಳೀಯ ಉದ್ದಿಮೆಗಳ ಬೆಳವಣಿಗೆಗೆ ನೆರವು ಒದಗಿಸಲು ಮತ್ತು ಬೆಂಗಳೂರನ್ನು ಪ್ರಮುಖ ಲಾಜಿಸ್ಟಿಕ್ಸ್ ಮತ್ತು ಉದ್ಯಮ ಕೇಂದ್ರವಾಗಿ ರೂಪಿಸಲು ನಾವು ಬದ್ಧರಾಗಿದ್ದೇವೆ” ಎಂದು ಹೇಳಿದರು.

ಬೆಂಗಳೂರು ಇಂಟರ್‌ ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್ (ಬಿಐಎಎಲ್) ನ ಎಂಡಿ ಮತ್ತು ಸಿಇಓ ಆದ ಹರಿ ಮಾರಾರ್ ಅವರು ಮಾತನಾಡಿ, “ಈ ಯೋಜನೆಯ ರೂಪುಗೊಳ್ಳುವಿಕೆಗೆ ಎಐಸ್ಯಾಟ್ಸ್ ಜೊತೆಗೆ ಸಹಭಾಗಿತ್ವ ಮಾಡಿಕೊಂಡಿರುವುದಕ್ಕೆ ನಾವು ಸಂತೋಷ ಹೊಂದಿದ್ದೇವೆ. ಎಐಸ್ಯಾಟ್ಸ್ ಬೆಂಗಳೂರು ಲಾಜಿಸ್ಟಿಕ್ಸ್ ಪಾರ್ಕ್ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಮ್ಮ ಬೆಳೆಯುತ್ತಿರುವ ಸರಕು ಸಾಗಾಣಿಕಾ ವ್ಯವಸ್ಥೆಗೆ ಒಂದು ಮಹತ್ವದ ಸೇರ್ಪಡೆಯಾಗಿದೆ. ಬೆಂಗಳೂರು ವಿಮಾನ ನಿಲ್ದಾಣವು ಈಗಾಗಲೇ ದೇಶದ ಪ್ರಮುಖ ರಫ್ತುದಾರರಾಗಿ ಮೂಡಿಬಂದಿದೆ ಮತ್ತು ವಿನ್ಯಾಸ ಸಾಮರ್ಥ್ಯದಿಂದ ದೇಶದ ಅತಿದೊಡ್ಡ ದೇಶೀಯ ಸರಕು ಟರ್ಮಿನಲ್‌ ಅನ್ನು ಹೊಂದಿದೆ. ಈ ಸಹಯೋಗವು ದೇಶೀಯ ಅಭಿವೃದ್ಧಿ ಮತ್ತು ಜಾಗತಿಕ ವ್ಯಾಪಾರಕ್ಕೆ ನೆರವು ಒದಗಿಸುವ ಭವಿಷ್ಯ-ಸಿದ್ಧ, ದಕ್ಷ ಮತ್ತು ಸಂಪರ್ಕಿತ ಲಾಜಿಸ್ಟಿಕ್ಸ್ ವ್ಯವಸ್ಥೆಯನ್ನು ಸ್ಥಾಪಿಸುವ ನಮ್ಮ ಹಂಚಿಕೆಯ ದೃಷ್ಟಿಕೋನಕ್ಕೆ ಸೂಕ್ತ ರೀತಿಯಲ್ಲಿ ಹೊಂದಿಕೊಳ್ಳುತ್ತದೆ” ಎಂದು ತಿಳಿಸಿದರು.

ಎಐಸ್ಯಾಟ್ಸ್ ಬೆಂಗಳೂರು ಲಾಜಿಸ್ಟಿಕ್ಸ್ ಪಾರ್ಕ್ ಎಐಸ್ಯಾಟ್ಸ್ ನ ರಾಷ್ಟ್ರೀಯ ವಿಸ್ತರಣಾ ಕಾರ್ಯತಂತ್ರಕ್ಕೆ ಪೂರಕವಾಗಿ ರೂಪುಗೊಂಡಿದ್ದು, ಈ ಪಾರ್ಕ್ ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಥಾಪಿಸಲಾಗುತ್ತಿರುವ ಮಲ್ಟಿ-ಮಾಡೆಲ್ ಕಾರ್ಗೋ ಹಬ್ (ಎಂಎಂಸಿಎಚ್) ಗೆ ಪೂರಕವಾಗಿ ರೂಪುಗೊಂಡಿದೆ. ಭಾರತದಾದ್ಯಂತ ದೃಢವಾದ, ಸಂಯೋಜಿತ ಲಾಜಿಸ್ಟಿಕ್ಸ್ ಮೂಲಸೌಕರ್ಯವನ್ನು ಸ್ಥಾಪಿಸುವ ಎಐಸ್ಯಾಟ್ಸ್ ನ ಬದ್ಧತೆಯನ್ನು ಈ ಹೊಸ ಪಾರ್ಕ್ ಸಾರಿದೆ.

ಎಐಸ್ಯಾಟ್ಸ್ ಕಾರ್ಯತಂತ್ರದ ಮೂಲಸೌಕರ್ಯ ಯೋಜನೆಗಳು, ಡಿಜಿಟಲ್ ಆವಿಷ್ಕಾರ ಮತ್ತು ಸುಸ್ಥಿರ ಲಾಜಿಸ್ಟಿಕ್ಸ್ ವ್ಯವಸ್ಥೆಗಳ ಮೂಲಕ ಹೊಸ ಉದ್ಯಮ ಮಾನದಂಡಗಳನ್ನು ಸ್ಥಾಪಿಸುವ ಕಡೆಗೆ ಗಮನ ಕೇಂದ್ರೀಕರಿಸುತ್ತಿದೆ ಮತ್ತು ಜಾಗತಿಕ ಲಾಜಿಸ್ಟಿಕ್ಸ್ ನಾಯಕನಾಗಿ ಭಾರತದ ಸ್ಥಾನವನ್ನು ಮತ್ತಷ್ಟು ಬಲಪಡಿಸುತ್ತಿದೆ.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist