ಬೆಂಗಳೂರು(www.thenewzmirror.com):ಕೌನ್ಸಿಲ್ ಆಫ್ ಆರ್ಕಿಟೆಕ್ಚರ್ ನಡೆಸುವ ರಾಷ್ಟ್ರ ಮಟ್ಟದ ಅರ್ಹತಾ ಪರೀಕ್ಷೆಯ (ಪಿಜಿಇಟಿಎ- Post Graduation Entrance Test for Architecture)) ಅಂಕಗಳ ಆಧಾರದ ಮೇಲೆಯೇ ಸ್ನಾತಕೋತ್ತರ ಆರ್ಕಿಟೆಕ್ಚರ್ ಪದವಿಗೆ ರಾಜ್ಯದಲ್ಲಿ ಪ್ರವೇಶ ನೀಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತೀರ್ಮಾನಿಸಿದೆ.
ಇದುವರೆಗೂ ಪ್ರಾಧಿಕಾರವೇ ಪ್ರವೇಶ ಪರೀಕ್ಷೆ (ಪಿಜಿಸಿಇಟಿ) ಮಾಡಿ, ಅದರಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಸೀಟು ಹಂಚಿಕೆ ಮಾಡಲಾಗುತ್ತಿತ್ತು. ಈ ವರ್ಷದಿಂದ ನಿಯಮ ಬದಲಿಸಿದ್ದು, ಆಸಕ್ತರು ರಾಷ್ಟ್ರ ಮಟ್ಟದ ಪರೀಕ್ಷೆ ತೆಗೆದುಕೊಂಡು, ಇಲ್ಲಿನ ಸೀಟು ಹಂಚಿಕೆ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಸಂಬಂಧ ಪ್ರಾಧಿಕಾರ ಯಾವುದೇ ಪ್ರವೇಶ ಪರೀಕ್ಷೆ ನಡೆಸುವುದಿಲ್ಲ. ಹೀಗಾಗಿ ಆಸಕ್ತರು ರಾಷ್ಟ್ರ ಮಟ್ಟದ ಪರೀಕ್ಷೆ ತೆಗೆದುಕೊಳ್ಳಲು ಕೋರಲಾಗಿದೆ ಎಂದು ಅವರು
ವಿವರಿಸಿದ್ದಾರೆ.
ಕಳೆದ ವರ್ಷ ಈ ಕೋರ್ಸ್ ನಲ್ಲಿ 136 ಸೀಟು ಲಭ್ಯ ಇದ್ದವು. ಅವುಗಳಿಗಾಗಿ 127 ಮಂದಿ ಅರ್ಜಿ ಸಲ್ಲಿಸಿದ್ದರು. ಆದರೆ ಪ್ರವೇಶ ಪಡೆದಿದ್ದು ಕೇವಲ 28 ಮಂದಿ ಎಂದು ಅವರು ವಿವರಿಸಿದ್ದಾರೆ.