ಜಾತಿ ವಿಷಬೀಜ ಬಿತ್ತುವ ಕಾಂಗ್ರೆಸ್ ಸರ್ಕಾರದ ಕುತಂತ್ರಕ್ಕೆ ಕೇಂದ್ರದ ಜಾತಿಗಣತಿ ನಿರ್ಧಾರದಿಂದ ಇತಿಶ್ರೀ: ಬಿ.ವೈ.ವಿಜಯೇಂದ್ರ

RELATED POSTS

ಬೆಂಗಳೂರು(www.thenewzmirror.com): ಜಾತಿಗಣತಿ ಹೆಸರಿನಲ್ಲಿ ರಾಜ್ಯದಲ್ಲಿ ಜಾತಿ ವಿಷಬೀಜ ಬಿತ್ತುವ ಕುತಂತ್ರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾಡುತ್ತಿದ್ದರು ಆದರೆ ಈಗ ಕೇಂದ್ರ ಸರಕಾರ ಜಾತಿಗಣತಿ ನಿರ್ಧಾರ ಕೈಗೊಂಡಿದ್ದರಿಂದ ಇವೆಲ್ಲಕ್ಕೂ ಇತಿಶ್ರೀ ಆಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ.ವಿಜಯೇಂದ್ರ ಅವರು ವಿಶ್ಲೇಷಿಸಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನರೇಂದ್ರ ಮೋದಿ  ನೇತೃತ್ವದ ಕೇಂದ್ರ ಸರಕಾರವು ಬಹಳ ಉತ್ತಮ ನಿರ್ಧಾರ ಕೈಗೊಂಡಿದೆ. ನಿನ್ನೆಯ ಸಂಪುಟ ಸಭೆಯಲ್ಲಿ ಜನಗಣತಿ ಜೊತೆಗೆ ಜಾತಿ ಜನಗಣತಿ ಮಾಡುವ ಪ್ರಮುಖ ನಿರ್ಧಾರ ಮಾಡಿದ್ದು ಸ್ವಾಗತಾರ್ಹ.ಭಾರತದಲ್ಲಿ 1931ರ ನಂತರ ಯಾವತ್ತೂ ಜಾತಿ ಜನಗಣತಿ ಆಗಿರಲಿಲ್ಲ; ಈ ದೇಶದ ಪ್ರತಿಯೊಬ್ಬ ಪ್ರಜೆಗೂ ನ್ಯಾಯ ಸಿಗಬೇಕು; ಎಲ್ಲ ಸಮುದಾಯಗಳಿಗೂ ಸವಲತ್ತು ಸಿಗಬೇಕೆಂಬುದೇ ನರೇಂದ್ರ ಮೋದಿ ಅವರ ಇಚ್ಛೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಬೇಕೆಂಬ ಧ್ಯೇಯೋದ್ದೇಶದೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸೇವೆ ಸಲ್ಲಿಸುತ್ತಿದ್ದಾರೆ ಅದಕ್ಕಾಗಿಯೇ ಈ ನಿರ್ಧಾರವಾಗಿದೆ ಎಂದು ವಿವರಿಸಿದರು.

ಜನಗಣತಿ ಜೊತೆ ಜಾತಿ ಗಣತಿ ಮಾಡುವ ನಿರ್ಧಾರವನ್ನು ಎಲ್ಲರೂ ಸ್ವಾಗತಿಸಿದ್ದಾರೆ. ನಮ್ಮ ರಾಜ್ಯದಲ್ಲಿ ಆಡಳಿತ ನಡೆಸುವ ಕಾಂಗ್ರೆಸ್ ಪಕ್ಷವು ಜಾತಿ- ಜಾತಿಗಳ ನಡುವೆ ವಿಷಬೀಜ ಬಿತ್ತುವ ಮೂಲಕ ಸಮಾಜ ಒಡೆಯುವ ಕೆಲಸ ಮಾಡುತ್ತಿದೆ. ಕೇಂದ್ರದ ಈ ನಿರ್ಧಾರದಿಂದ ಅವರಿಗೂ ಆಶ್ಚರ್ಯವಾಗಿದೆ. ಕೇಂದ್ರದಲ್ಲಿ ಸ್ವಾತಂತ್ರ್ಯಾನಂತರ ಇಷ್ಟು ವರ್ಷ ಆಡಳಿತ ನಡೆಸಿದ್ದ ಕಾಂಗ್ರೆಸ್ ಪಕ್ಷವು ಜಾತಿ ಜನಗಣತಿ ಕಾರ್ಯಕ್ಕೆ ಕೈ ಹಾಕಿರಲಿಲ್ಲ ಎಂದು ಟೀಕಿಸಿದರು.

ರಾಜ್ಯದಲ್ಲಿ ಜಾತಿಗಣತಿ ಕುರಿತಂತೆ ಮುಖ್ಯಮಂತ್ರಿಗಳೇ ಒಂದು ನಿರ್ಧಾರ ಕೈಗೊಂಡಿಲ್ಲ. ಹಿಂದಿನ ಅವಧಿಯಲ್ಲೇ ಹಿಂದುಳಿದ ಸಮುದಾಯಗಳ ಸಮೀಕ್ಷೆ ಕೈಗೊಂಡಿದ್ದು, ಈಗ ಜಾತಿ ಜನಗಣತಿ ಎಂದು ಅವರೇ ಹೇಳುತ್ತಿದ್ದಾರೆ. ರಾಜ್ಯ ಸರಕಾರಕ್ಕೆ ಜಾತಿ ಜನಗಣತಿ ಮಾಡುವ ಅವಕಾಶ ಇಲ್ಲ; ಕೇಂದ್ರ ಸರಕಾರಕ್ಕೆ ಮಾತ್ರ ಈ ಅಧಿಕಾರ ಇದೆ. ಇದೆಲ್ಲ ಗೊತ್ತಿದ್ದು ಕೂಡ ಜಾತಿ ವಿಷಬೀಜ ಬಿತ್ತುವ ಕೆಲಸವನ್ನು ಕಾಂಗ್ರೆಸ್ ಸರಕಾರ ಮಾಡುತ್ತಿತ್ತು ಎಂದು ಆಕ್ಷೇಪಿಸಿದರು.

ರಾಜ್ಯದಲ್ಲಿ ಜಾತಿ ಜನಗಣತಿ ಮಾಡಿ 10 ವರ್ಷ ಕಳೆದಿದ್ದು, ಅವಧಿ ಮೀರಿದೆ ಎಂದು ಕಾಂಗ್ರೆಸ್ಸಿನ ಹಿರಿಯ ನಾಯಕ ವೀರಪ್ಪ ಮೊಯಿಲಿ ಅವರೇ ಹೇಳಿದ್ದರು. ಸರಕಾರದ ಬಳಿ ಕಾಂತರಾಜು ಅವರು ನೀಡಿದ್ದ ವರದಿಯೇ ಇಲ್ಲ; ವರದಿ ಇಲ್ಲದೇ ಇದ್ದರೂ ಸಮಾಜಗಳ ನಡುವೆ ಗೊಂದಲ ಸೃಷ್ಟಿಸಲು ಹಾಗೂ ಕಂದಕ ಸೃಷ್ಟಿ ಮಾಡುವ ಕೆಲಸವನ್ನು ಸಿದ್ದರಾಮಯ್ಯರ ನೇತೃತ್ವದ ಕಾಂಗ್ರೆಸ್ ಸರಕಾರ ಮಾಡುತ್ತಿತ್ತು ಎಂದು ಟೀಕಿಸಿದರು. ಈಗಲಾದರೂ ಇದಕ್ಕೆ ಇತಿಶ್ರೀ ಹಾಡುವ ವಿಶ್ವಾಸ ನನಗಿದೆ ಎಂದು ತಿಳಿಸಿದರು.

ಎಲ್ಲ ಹಿಂದುಳಿದ ಸಮುದಾಯಗಳಿಗೂ ನ್ಯಾಯ ಕೊಡಬೇಕು; ಆ ದೃಷ್ಟಿಕೋನದಿಂದಲೇ ಪ್ರಧಾನಿಯವರು ನಿರ್ಧಾರ ಮಾಡಿದ್ದಾರೆ. ಅದನ್ನು ಸಿದ್ದರಾಮಯ್ಯರಿಂದ ಕಲಿಯುವ ಅವಶ್ಯಕತೆ ಇಲ್ಲ ಎಂದು ಇನ್ನೊಂದು ಪ್ರಶ್ನೆಗೆ ಉತ್ತರ ಕೊಟ್ಟರು. ರಾಜ್ಯದಲ್ಲಿ ಜಾತಿಗಣತಿ ಕುರಿತು ಬೊಬ್ಬೆ ಹೊಡೆಯುತ್ತಿರುವ ಕಾಂಗ್ರೆಸ್ಸಿನವರ ಬಳಿ ಯಾವುದೇ ವರದಿ ಇಲ್ಲ ಎಂದರು.

ಕಾಂತರಾಜು ವರದಿಯ ಪ್ರತಿಯೇ ಇಲ್ಲ; ಜಯಪ್ರಕಾಶ್ ಹೆಗ್ಡೆ ಅವರು ಯಾವ ವರದಿ ಆಧಾರದ ಮೇಲೆ ವರದಿ ನೀಡಿದ್ದಾರೆ ಎಂದು ಪ್ರಶ್ನಿಸಿದರು. ಜಯಪ್ರಕಾಶ್ ಹೆಗ್ಡೆ ಅವರೇ ಸರಕಾರಕ್ಕೆ ಪತ್ರ ಬರೆದು ಮೂಲ ವರದಿ ಇಲ್ಲದೇ ಯಾವ ಆಧಾರದಲ್ಲಿ ವರದಿ ಕೊಡಬೇಕೆಂದು ಪ್ರಶ್ನಿಸಿದ್ದರು. ಸರ್ವೇಗೆ ಎಷ್ಟು ಕೋಟಿ ಖರ್ಚಾಗಿದೆ ಎಂದು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು. ಸಿದ್ದರಾಮಯ್ಯನವರ ಸರಕಾರಕ್ಕೆ ಸದುದ್ದೇಶ ಇಲ್ಲ; ಸಮಾಜಗಳ ನಡುವೆ ಒಡಕನ್ನು ಸೃಷ್ಟಿಸುವ ದುರುದ್ದೇಶ ಬಿಟ್ಟಲ್ಲಿ ಯಾವುದೇ ಒಳ್ಳೆಯ ಉದ್ದೇಶ ಇಲ್ಲ ಎಂದು ನುಡಿದರು.

ಪೆಹಲ್ಗಾಂ ಭಯೋತ್ಪಾದಕರ ದಾಳಿ ವಿಷಯದಲ್ಲಿ ಪ್ರಚಾರದ ಹುಚ್ಚಿಗಾಗಿ ಕೆಲವರು ಹೇಳಿಕೆ ಕೊಡುತ್ತಿದ್ದಾರೆ. ಅದೆಲ್ಲಕ್ಕೂ ಪ್ರತಿಕ್ರಿಯೆ ನೀಡುವ ಅವಶ್ಯಕತೆ ಇಲ್ಲ ಎಂದು ಪ್ರಶ್ನೆಗೆ ಉತ್ತರ ನೀಡಿದ ಅವರು, ಪೆಹಲ್ಗಾಂ ದುರ್ಘಟನೆ ವಿಷಯದಲ್ಲಿ ಪ್ರತಿಯೊಬ್ಬ ಭಾರತೀಯರೂ ಒಂದಾಗಿದ್ದಾರೆ. ಭಯೋತ್ಪಾದಕರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕೆಂಬ ಅಪೇಕ್ಷೆ ದೇಶದ ಜನತೆಯಲ್ಲಿದೆ ಎಂದು ತಿಳಿಸಿದರು.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist