ಬೆಂಗಳೂರು(www.thenewzmirror.com):ಮಂಗಳೂರಿನಲ್ಲಿ ನಿನ್ನೆ ನಡೆದ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂತಹ ದುಷ್ಕೃತ್ಯಗಳನ್ನು ನಮ್ಮ ಸರ್ಕಾರ ಯಾವುದೇ ಕಾರಣಕ್ಕು ಸಹಿಸುವುದಿಲ್ಲ. ಕೃತ್ಯ ಎಸಗಿದ ಆರೋಪಿಗಳ ವಿರುದ್ಧ ಮುಲಾಜಿಲ್ಲದೇ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ತಿಳಿಸಿದ್ದಾರೆ.
ಮಾಧ್ಯಮಗಳ ಜತೆ ಮಾತನಾಡಿದ ಅವರು, ಕಾನೂನು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು (ಎಡಿಜಿಪಿ) ಮಂಗಳೂರಿನಲ್ಲಿ ಬೀಡುಬಿಟ್ಟಿದ್ದಾರೆ. ಕೃತ್ಯ ಎಸಗಿದ ಆರೋಪಿಗಳ ಪತ್ತೆಗಾಗಿ ನಾಲ್ಕು ವಿಶೇಷ ತಂಡಗಳನ್ನು ರಚಿಸಿ, ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಪ್ರಕರಣದ ತನಿಖೆಯನ್ನು ನಿಷ್ಪಕ್ಷಪಾತವಾಗಿ ನಡೆಸಿ, ದುಷ್ಕರ್ಮಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸುವಂತೆ ಸೂಚಿಸಿದ್ದೇನೆ ಎಂದರು.
ಆರೋಪಿಗಳು ಯಾರೇ ಆಗಿದ್ದರು ಕಾನೂನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಸುಹಾಸ್ ಶೆಟ್ಟಿ ಸಾವಿಗೆ ನ್ಯಾಯ ಒದಗಿಸಲಾಗುವುದು. ಇಂತಹ ಕೃತ್ಯಗಳನ್ನು ಹತ್ತಿಕ್ಕಲು ಎಲ್ಲ ರೀತಿಯ ಕ್ರಮ ವಹಿಸಲಾಗಿದೆ. ಇನ್ನು ಮುಂದೆಯೂ ಇಂತಹ ಘಟನೆಗಳು ಜರುಗದಂತೆ ಅಗತ್ಯ ಕಾನೂನು ಕೈಗೊಳ್ಳಲಾಗಿದೆ ಎಂದರು.
ಮಂಗಳೂರಿನ ಘಟನೆಯನ್ನು ಮುಂದಿಟ್ಟುಕೊಂಡು ಬಿಜೆಪಿ ಮುಖಂಡರು ತಮ್ಮ ಸ್ವಾರ್ಥಕ್ಕಾಗಿ ರಾಜಕೀಯ ಲಾಭ ಪಡೆದುಕೊಳ್ಳಲು, ಜಾತಿ, ಧರ್ಮದ ಹೆಸರಿನಲ್ಲಿ ಜನರ ಮನಸ್ಸುಗಳಿಗೆ ಹುಳಿ ಹಿಂಡುವ ಕೆಲಸ ಸರಿಯಲ್ಲ. ಇದಕ್ಕೆ ಆಸ್ಪದ ನೀಡುವುದು ಬೇಡ ಎಂಬುದು ರಾಜ್ಯದ ಜನತೆಗೆ ನನ್ನ ಮನವಿ. ಪೊಲೀಸ್ ಇಲಾಖೆಯು ಎಲ್ಲ ಸಂದರ್ಭಗಳಲ್ಲಿಯೂ ನಿಮ್ಮ ಜೊತೆಗೆ ಇದೆ. ಮುಂದೆಯೂ ಇರುತ್ತದೆ. ಜನರ ಸುರಕ್ಷತೆ ಮತ್ತು ರಕ್ಷಣೆ ನೀಡುವುದು ನಮ್ಮ ಸರ್ಕಾರದ ಮುಖ್ಯ ಜವಾಬ್ಧಾರಿ ಎಂದರು.
ರಾಜಕೀಯ ಪ್ರತಿಷ್ಠೆಗಾಗಿ ಇಂತಹ ದುಷ್ಕೃತ್ಯಗಳಿಗೆ ಬಣ್ಣ ಕಟ್ಟುತ್ತಿರುವ ಬಿಜೆಪಿ ಮುಖಂಡರ ನಡೆಯನ್ನು ಖಂಡಿಸುತ್ತೇನೆ. ಜನರ ಮನಸ್ಸಿನಲ್ಲಿ ದ್ವೇಷದ ಬೀಜ ಬಿತ್ತಬೇಡಿ. ಇದರಿಂದ ಸಾಮಾಜಿಕ ಸಾಮರಸ್ಯ, ಜನರ ನೆಮ್ಮದಿ, ಶಾಂತಿ, ಸೌಹಾರ್ದತೆ ಹಾಳಾಗುತ್ತದೆ. ಇದು ಒಳ್ಳೆಯ ಬೆಳವಣಿಗೆಯೂ ಅಲ್ಲ. ಜನರ ಮನಸ್ಸನ್ನು ಒಡೆಯುವುದರಿಂದ ಯಾರಿಗೂ ಶ್ರೇಯಸ್ಸಾಗುವುದಿಲ್ಲ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.