ಬೆಂಗಳೂರು(www.thenewzmirror.com): ನಮ್ಮ ದೇಶದ ಮೇಲೆ ಭಯೋತ್ಪಾದನೆಯ ದಾಳಿ ನಡೆದ ಸಂದರ್ಭದಲ್ಲಿ ಭಾರತ ಪಾಕ್ ನಡುವೆ ಯುದ್ದದ ಕಾರ್ಮೋಡ ದಟ್ಟವಾಗಿರುವಾಗ ಕಾಂಗ್ರೆಸ್ ನ ಹಿರಿಯ ನಾಯಕರ ಹೇಳಿಕೆ ನೋಡಿದಾಗ ಇವರು ಈ ದೇಶವನ್ನು 55 ವರ್ಷ ಆಳಿದ್ದಾರೊ ಇಲ್ಲವೊ ಎಂಬ ಸಂಶಯ ಮೂಡುತ್ತದೆ. ಕಾಂಗ್ರೆಸ್ ಪಕ್ಷದ ರಾಷ್ಟ್ರ ಪ್ರೇಮ ಅಧಪತನವಾಗಿರುವುದು ಸ್ಪಷ್ಟ ವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಕಾಂಗ್ರೆಸ್ ಆಡಳಿತ ಅವಧಿಯಲ್ಲಿ ಚೀನಾ ಯುದ್ದದಲ್ಲಿ ಭಾರತಕ್ಕೆ ಸೋಲುಂಟಾಗಿರುವುದು ಮತ್ತು ಭಾರತದಲ್ಲಿ ಮುಂಬೈ, ದೆಹಲಿ, ಬೆಂಗಳೂರು, ಹೈದರಾಬಾದ್ ಸೇರಿದಂತೆ ಹಲವಾರು ಕಡೆ ಭಯೋತ್ಪಾದಕ ದಾಳಿಗಳು ನಡೆದಾಗ ಕ್ರಮ ತೆಗೆದುಕೊಳ್ಳದಿರುವುದು, ಮುಂಬೈ ಮೇಲೆ 2008 ರಲ್ಲಿ ನಡೆದ 26/11 ದಾಳಿಯಲ್ಲಿ 130 ಅಮಾಯಕರ ಸಾವುಂಟಾದಾಗ ಘಟನೆ ಪೂರ್ವದಲ್ಲಿ ಇಂಟಲಿಜೆನ್ಸ್ ವೈಫಲ್ಯ ಆಗಿದ್ದು, ಘಟನೆ ನಂತರ ಉಗ್ರರ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ ಎನ್ನುವ ತೀರ್ಮಾನ ತೆಗೆದುಡಿದ್ದನ್ನು ಕಾಂಗ್ರೆಸ್ ನಾಯಕರು ಮರೆತಂತಿದೆ. ಕನಿಷ್ಠ ಅವರ ಪ್ರಧಾನಮಂತ್ರಿ ಇಂದಿರಾ ಗಾಂಧಿ ಯುದ್ದ ಮಾಡುವಾಗ ಅಂದಿನ ಸೇನೆಯ ಮುಖ್ಯಸ್ಥ ಮಾಣಿಕ್ ಷಾ ಅವರ ಮಾತು ಹೇಗೆ ಕೇಳಿದರೊ ಆ ಸಂದರ್ಭದಲ್ಲಿ ಎಲ್ಲ ವಿರೋದ ಪಕ್ಷಗಳು ಸರ್ಕಾರದ ಪರವಾಗಿ ನಿಂತಿರುವುದು ನೆನಪಿನಲ್ಲಿ ಇಷ್ಟುಕೊಳ್ಳದೆ ಅತ್ಯಂತ ಬೇಜವಾಬ್ದಾರಿ ವಿರೋಧ ಪಕ್ಷವಾಗಿ ನಡೆದುಕೊಳ್ಳುತ್ತಿರುವುದು ಕಾಂಗ್ರೆಸ್ ಪಕ್ಷದ ರಾಷ್ಟ್ರ ಪ್ರೇಮ ಅಧಃಪತನವಾಗಿರುವುದು ಸ್ಪಷ್ಟವಾಗಿದೆ ಎಂದು ಟೀಕಿಸಿದರು.
ಇಂಥ ಸಂದರ್ಭದಲ್ಲಿ ರಾಜಕಾರಣ ಮಾಡುತ್ತಿರುವ ಕಾಂಗ್ರೆಸ್ ಬರುವ ದಿನಗಳಲ್ಲಿ ಜನರಿಗೆ ಉತ್ತರಿಸಬೇಕಾಗುತ್ತದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಎಲ್ಲ ಆಯಾಮಗಳನ್ನು ಮನಗಂಡು ಯುದ್ದಕ್ಕೆ ಬೇಕಾಗಿರುವ ತಯಾರಿ ಮಾಡಿ ಸರಿಯಾದ ಸಮಯದಲ್ಲಿ ಸರಿಯಾದ ನಿರ್ಣಯ ತೆಗೆದುಕೊಳ್ಳಲು ಈಗಾಗಲೇ ಮೂರು ಸೇನಾಪಡೆಗಳಿಗೆ ಅಧಿಕಾರ ಕೊಟ್ಡಿರುವುದು ನಾವೆಲ್ಲ ನೋಡಿದ್ದೇವೆ. ಇಡೀ ರಾಷ್ಟ್ರ ಒಂದಾಗಿ ಪ್ರಧಾನಿ ನರೇಂದ್ರ ಮೋದಿಯವರ ಜೊತೆ ನಿಲ್ಲುವುದು ಕರ್ತವ್ಯ. ಕಾಂಗ್ರೆಸ್ ಕನಿಷ್ಠ ಜವಾಬ್ದಾರಿಯನ್ನಾದರೂ ಅರ್ಥಮಾಡಿಕೊಳ್ಳಲಿ. ಅವರ ಪ್ರತಿಯೊಂದು ಹೇಳಿಕೆಗಳಿಂದ ಪಾಕಿಸ್ತಾನಕ್ಕೆ ಪುಷ್ಠಿ ಕೊಡುತ್ತಿರುವುದು ಕಾಂಗ್ರೆಸ್ ಪಕ್ಷ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.