ಹೆಬ್ಬಾಳ ಟು ಏರ್ ಪೋರ್ಟ್ ಹೊಸ ಫ್ಲೈಓವರ್: ಕೇಂದ್ರಕ್ಕೆ ಮನವಿ

RELATED POSTS

ನವದೆಹಲಿ(www.thenewzmirror.com): ಹೆಬ್ಬಾಳದಿಂದ ವಿಮಾನ ನಿಲ್ದಾಣಕ್ಕೆ ಪ್ರತ್ಯೇಕ ಮೇಲ್ಸೇತುವೆ,ಬೆಂಗಳೂರಿನ ಪ್ರಮುಖ ರಸ್ತೆ ಸೇರಿದಂತೆ ನಾನಾ ಯೋಜನೆಗಳ ಅನುಷ್ಠಾನಕ್ಕೆ ಅಗತ್ಯ ನೆರವು ಹಾಗೂ ಸಹಕಾರ ನೀಡುವಂತೆ ಕೇಂದ್ರಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಮನವಿ ಮಾಡಿದರು.

ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಅಭಿವೃದ್ಧಿ ಸಚಿವರಾದ ನಿತಿನ್ ಗಡ್ಕರಿ ಅವರನ್ನು ನವದೆಹಲಿಯಲ್ಲಿ ಬುಧವಾರ ಭೇಟಿ ಮಾಡಿ ಬೆಂಗಳೂರು- ಕನಕಪುರ ನಡುವಣ ರಸ್ತೆ ಆರು ಪಥಕ್ಕೆ ಉನ್ನತೀಕರಣ, ನೆನೆಗುದಿಗೆ ಬಿದ್ದಿರುವ ಕಗ್ಗಲಿಪುರ ಟೋಲ್ ವರೆಗಿನ ರಸ್ತೆ ಕಾಮಗಾರಿ ಪೂರ್ಣಗೊಳಿಸಲು, ಸ್ಯಾಟಲೈಟ್ ರಿಂಗ್ ರಸ್ತೆ ಯೋಜನೆಯಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಶೀಘ್ರ ಪರಿಹಾರ ಬಿಡುಗಡೆ, ಹೆಬ್ಬಾಳ ಜಂಕ್ಷನ್ ನಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರತ್ಯೇಕ ಮೇಲ್ಸೇತುವೆ ನಿರ್ಮಾಣ ಯೋಜನೆಗಳ ಅನುಷ್ಠಾನಕ್ಕೆ ಅಗತ್ಯ ನೆರವು ಹಾಗೂ ಸಹಕಾರ ನೀಡುವಂತೆ ಮನವಿ ಸಲ್ಲಿಸಿದರು.

ಹೆದ್ದಾರಿ 209ರ ಉನ್ನತೀಕರಣ:

ಹಾಲಿ ನಾಲ್ಕು ಪಥ ಇರುವ ಹೆದ್ದಾರಿ 209 (ಬೆಂಗಳೂರು-ಕನಕಪುರ) ಅನ್ನು  ಎರಡೂ ಬದಿಯಲ್ಲಿ ಸರ್ವಿಸ್ ರಸ್ತೆ ಜತೆಗೆ ಆರು ಪಥಗಳಿಗೆ ಉನ್ನತೀಕರಣಗೊಳಿಸಬೇಕು. ಹಾರೋಹಳ್ಳಿ ಕೈಗಾರಿಕಾ ಪ್ರದೇಶ ಸೇರಿದಂತೆ ಈ ಪ್ರದೇಶದ ಅಭಿವೃದ್ಧಿಯಿಂದ ಈ ಹೆದ್ದಾರಿಯಲ್ಲಿ ವಾಹನ ಸಂಚಾರ ಗಣನೀಯ ಏರಿಕೆ ಕಂಡಿದೆ. ಈ ಭಾಗದಲ್ಲಿ ಸಂಚಾರ ಸುಗಮಗೊಳಿಸಲು, ಸಂಚಾರಿ ಸುರಕ್ಷತೆ, ಕೈಗಾರಿಕಾ ಪ್ರದೇಶದ ವಾಹನಗಳ ಸುಗಮ ಸಂಚಾರಕ್ಕೆ ಈ ಯೋಜನೆಯನ್ನು ಕೈಗೆತ್ತಿಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ.

ಕಗ್ಗಲಿಪುರ ಟೋಲ್ ರಸ್ತೆ ಕಾಮಗಾರಿ ಪೂರ್ಣಗೊಳಿಸಬೇಕು:

ರಾಷ್ಟ್ರೀಯ ಹೆದ್ದಾರಿ 209ರಲ್ಲಿ ರವಿಶಂಕರ ಗುರೂಜಿ ಆಶ್ರಮದಿಂದ ಕಗ್ಗಲಿಪುರ ಟೋಲ್ ವರೆಗಿನ 7 ಕಿ.ಮೀ ಉದ್ದದ ರಸ್ತೆ ಕಾಮಗಾರಿ ಬಹುದಿನಗಳಿಂದ ನೆನೆಗುದಿಗೆ ಬಿದ್ದಿದೆ. ಈ ಯೋಜನೆಗೆ ಅಗತ್ಯ ಭೂಮಿಯನ್ನು ಸ್ವಾಧೀನಕ್ಕೆ ಪಡೆಯಲಾಗಿದ್ದು, ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (NGT) ಆಕ್ಷೇಪದಿಂದ ಈ ಯೋಜನೆ ಕಾಮಗಾರಿ ನಿಂತಿದೆ. ಈ ಹೆದ್ದಾರಿಯಲ್ಲಿ ಈ ಭಾಗ ಬಾಟಲ್ ನೆಕ್ ನಂತಾಗಿದ್ದು, ಸಂಚಾರ ದಟ್ಟಣೆ ಹೆಚ್ಚಾಗಿದೆ. ಹಾರೋಹಳ್ಳಿ ಕೈಗಾರಿಕಾ ಪ್ರದೇಶದಿಂದ ವಾಹನ ಸಂಚಾರ ಹೆಚ್ಚಾಗಿದ್ದು, ಈ ಭಾಗದಲ್ಲಿ ಸುಗಮ ಸಂಚಾರಕ್ಕೆ ಈ ಕಾಮಗಾರಿ ಪೂರ್ಣಗೊಳಿಸುವುದು ಅಗತ್ಯವಾಗಿದೆ. ಈ ಕಾಮಗಾರಿಗೆ ಎದುರಾಗಿರುವ ಅಡಚಣೆಯನ್ನು ನಿವಾರಿಸಿ, ಆದಷ್ಟು ಬೇಗ ಯೋಜನೆ ಪೂರ್ಣಗೊಳಿಸಲು ಸಚಿವಾಲಯವು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಲಾಯಿತು.

ಸ್ಯಾಟಲೈಟ್ ರಿಂಗ್ ರಸ್ತೆ ಯೋಜನೆಗೆ ಪರಿಹಾರ ನಿಧಿ ಬಿಡುಗಡೆ:

ಸ್ಯಾಟಲೈಟ್ ಟೌನ್ ರಿಂಗ್ ರೋಡ್ (STRR) ಯೋಜನೆ (NH 948A) ಡಾಬಸ್ ಪೇಟೆ, ಮಾಗಡಿ, ರಾಮನಗರ, ಹಾರೋಹಳ್ಳಿ ನಡುವೆ ಸಂಪರ್ಕ ವೃದ್ಧಿಸಲು ಹಾಗೂ ಮೂಲಸೌಕರ್ಯ ಒದಗಿಸಲು ಈ ಯೋಜನೆ ಮಹತ್ವದ್ದಾಗಿದೆ. ಈ ಯೋಜನೆಗೆ ಭೂಮಿ ಕಳೆದುಕೊಂಡಿರುವ ರೈತರಿಗೆ ಶೀಘ್ರವೇ ಪರಿಹಾರ ಮೊತ್ತ ಬಿಡುಗಡೆ ಮಾಡಬೇಕು. ಈ ಯೋಜನೆ 2019ರಲ್ಲಿ ಆರಂಭವಾಯಿತಾದರೂ ಪರಿಹಾರ ಬಿಡುಗಡೆ ತಡವಾಗಿರುವ ಹಿನ್ನೆಲೆಯಲ್ಲಿ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಯೋಜನೆ ಪ್ರಗತಿ ಕುಂಠಿತವಾಗಿದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.

ಹೆಬ್ಬಾಳದಿಂದ ವಿಮಾನ ನಿಲ್ದಾಣಕ್ಕೆ ಪ್ರತ್ಯೇಕ ಮೇಲ್ಸೇತುವೆ;

ಹೆಬ್ಬಾಳ ಜಂಕ್ಷನ್ ನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಡುವಣ 35 ಕಿ.ಮೀ ಉದ್ದದ ಪ್ರದೇಶದಲ್ಲಿ ಅಪಾರವಾದ ಅಭಿವೃದ್ಧಿಯಾಗಿದ್ದು, ಅನೇಕ ಕೈಗಾರಿಕೆ ಹಾಗೂ ವಾಣಿಜ್ಯ ಸಂಕೀರ್ಣಗಳು ಸ್ಥಾಪನೆಯಾಗಿವೆ. ಹೀಗಾಗಿ ಈ ಭಾಗದಲ್ಲಿ ಸಂಚಾರ ದಟ್ಟಣೆ ತೀವ್ರವಾಗಿದೆ. ಈಗಿರುವ ಎಲಿವೆಟೆಡ್ ಕಾರಿಡಾರ್ ನಡುವೆ ಟ್ರಾಫಿಕ್ ಸಿಗ್ನಲ್, ಪಾದಚಾರಿಗಳ ರಸ್ತೆ ದಾಟುವಿಕೆಯಿಂದ ಇಲ್ಲಿನ ಪ್ರಯಾಣಕ್ಕೆ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ  ಈ ಮಧ್ಯೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅತಿ ವೇಗವಾಗಿ ಬೆಳೆಯುತ್ತಿದ್ದು, ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ.ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ಹೆಬ್ಬಾಳ ಜಂಕ್ಷನ್ ನಿಂದ ವಿಮಾನ ನಿಲ್ದಾಣಕ್ಕೆ ಪ್ರತ್ಯೇಕ ಮೇಲ್ಸೇತುವೆ ನಿರ್ಮಾಣ ಮಾಡಬೇಕು. ಇದರಿಂದ ವಿಮಾನ ನಿಲ್ದಾಣ ಪ್ರಯಾಣಿಕರು, ಸ್ಥಳೀಯ ವಾಹನಗಳು, ಕೈಗಾರಿಕಾ ವಲಯದ ದೊಡ್ಡ ವಾಹನಗಳ ಸಂಚಾರ ಸುಗಮವಾಗಲಿದೆ ಎಂದು ಮನವಿ ಮಾಡಲಾಗಿದೆ.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist