ನೆಲಮಂಗಲ(www.thenewzmirror.com): “ರೈತರ ಬದುಕನ್ನು ಹಸನು ಮಾಡುವುದೇ ನಮ್ಮ ಸಂಕಲ್ಪ. ಅಧಿಕಾರವಧಿಯಲ್ಲಿ ರೈತನ ಪರವಾಗಿ ನಾವು ಕೆಲಸಮಾಡುತ್ತೇವೆ, ಕೊಟ್ಟ ಮಾತು ತಪ್ಪುವುದಿಲ್ಲ, ರೈತರನ್ನು ಕಾಪಾಡುತ್ತೇವೆ. ನಾವು ವೃಷಭಾವತಿಯಿಂದ ಕೊಳಚೆ ನೀರು ನೀಡುತ್ತಿಲ್ಲ. ರೈತರ ಬದುಕಿಗೆ ಆಧಾರವಾಗಿದ್ದೇವೆ” ಶುದ್ಧೀಕರಿಸಿ ನೀಡುತ್ತಿರುವ ನೀರನ್ನು ಕುಡಿಯಲು ಆಗುವುದಿದ್ದರೂ ಈ ನೀರು ರೈತರ ಬದುಕಿಗೆ ಆಧಾರವಾಗುತ್ತದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ವೃಷಭಾವತಿ ಏತ ನೀರಾವರಿ ಯೋಜನೆಯಡಿ 240 ಎಂಎಲ್ ಡಿ ನೀರನ್ನು ಶುದ್ಧೀಕರಿಸಿ ಬೆಂಗಳೂರು ನಗರ, ಗ್ರಾಮಾಂತರ, ತುಮಕೂರಿನ 70 ಕೆರೆಗಳನ್ನು ತುಂಬಿಸುವ ಕಾಮಗಾರಿಗೆ ಭೂಮಿಪೂಜೆ ಸಲ್ಲಿಸಿದ ನಂತರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು,”ಶೀಘ್ರದಲ್ಲಿಯೇ ಎತ್ತಿನಹೊಳೆಯಿಂದ ಈ ಭಾಗಕ್ಕೆ ಕುಡಿಯುವ ನೀರು ನೀಡಲಾಗುತ್ತದೆ. ಆ ನೀರಿನಿಂದ ಕೆರೆಗಳನ್ನು ತುಂಬಿಸಿ ಅಂತರ್ಜಲವು ಸಹ ಹೆಚ್ಚಳವಾಗಲಿದೆ. ಇದೆಲ್ಲವು ರೈತರಿಗಾಗಿ ನಮ್ಮ ಸರ್ಕಾರ ಮಾಡುತ್ತಿರುವ ಸೇವೆ. ವೃಷಭಾವತಿ ನದಿಯ ನೀರನ್ನು ನಾಯಂಡಹಳ್ಳಿ ಬಳಿ ಶುದ್ಧೀಕರಣ ಮಾಡಿದ ನಂತರ ನೆಲಮಂಗಲ ತಾಲ್ಲೂಕಿನ ಕೆರೆಗಳಿಗೆ ಹರಿಸಲಾಗುತ್ತದೆ. ಕೆರೆಯಲ್ಲಿಯೂ ಸಹ ಭೂಮಿಗೆ ಇಂಗುವಾಗಲೂ ಶುದ್ಧವಾಗುತ್ತದೆ” ಎಂದರು.
“ಶುದ್ಧೀಕರಿಸಿ ನೀಡುತ್ತಿರುವ ನೀರನ್ನು ಕುಡಿಯಲು ಆಗುವುದಿಲ್ಲ. ಆದರೆ ಈ ನೀರು ಬದುಕಿಗೆ ಆಧಾರವಾಗುತ್ತದೆ. ಇತ್ತೀಚೆಗೆ ದುಬೈಗೆ ತೆರಳಿದಾಗ ವಿಲಾಸ್ ರಾವ್ ದೇಶಮುಖ್ ಅವರ ಮಗ ನಮ್ಮ ದೇಶದಿಂದ ಉತ್ತಮ ಗುಣಮಟ್ಟದ ಬೆರಣಿ ರಫ್ತಾಗುತ್ತಿದೆ ಎಂದರು. ಇದರಿಂದ ಖರ್ಜೂರ ಚೆನ್ನಾಗಿ ಬೆಳೆಯುತ್ತದೆ. ನಮ್ಮ ಹಳ್ಳಿಯ ವಸ್ತು ಅಂತರರಾಷ್ಟ್ರೀಯ ಮಟ್ಟಕ್ಕೆ ಹೋಗಿದೆ” ಎಂದರು.
“ಒಂದಷ್ಟು ಅರಣ್ಯ ಭೂಮಿಯ ಕಾರಣಕ್ಕೆ ರಾಜ್ಯದ ಒಂದಷ್ಟು ನೀರಾವರಿ ಕಾಮಗಾರಿಗಳು ಕುಂಠಿತವಾಗಿದೆ. ಈ ಬಗ್ಗೆ ಬುಧವಾರ ಕೇಂದ್ರ ಪರಿಸರ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಿದ್ದೇನೆ. ಅವರು ಎತ್ತಿನಹೊಳೆ, ಮಹದಾಯಿ ಯೋಜನೆಯ ಅರಣ್ಯ ಭೂಮಿ ಅಡೆತಡೆಗಳನ್ನು ನಿವಾರಣೆ ಮಾಡುವುದಾಗಿ ಹೇಳಿದ್ದಾರೆ” ಎಂದರು.
“ಸತ್ಯಕ್ಕೂ ಸುಳ್ಳಿಗು ಎಷ್ಟು ಅಂತರ ಎಂದು ಅಕ್ಬರ್ ಬೀರ್ ಬಲ್ ಗೆ ಕೇಳುತ್ತಾನೆ. ಆಗ ಬೀರ್ ಬಲ್ ನಾಲ್ಕು ಬೆರಳಿನ ಅಂತರ ಎನ್ನುತ್ತಾನೆ. ಏಕೆಂದರೆ ಕಣ್ಣಲ್ಲಿ ನೋಡುವುದು ನಿಜ, ಕಿವಿಯಲ್ಲಿ ಕೇಳುವುದು ಸುಳ್ಳು ಎನ್ನುತ್ತಾರೆ. ಅದೇ ರೀತಿ ಕಾಂಗ್ರೆಸ್ ಸರ್ಕಾರದ ಕೆಲಸಗಳನ್ನು ಕಣ್ಣಿನಲ್ಲಿ ನೋಡುವುದು, ಕಿವಿಯಲ್ಲಿ ಕೇಳುವುದಲ್ಲ. ಬಿಜೆಪಿಯವರು ಜಾತಿ, ಧರ್ಮದ ಮೇಲೆ ರಾಜಕಾರಣ ಮಾಡುತ್ತಾರೆ. ನಾವು ಹುಟ್ಟುವಾಗ ಇದೇ ಜಾತಿಯಲ್ಲಿ ಹುಟ್ಟಬೇಕು ಎಂದು ಹುಟ್ಟುವುದಿಲ್ಲ. ನಮ್ಮದು ಮಾನವ ಜಾತಿ” ಎಂದರು.
“ನೆಲಮಂಗಲ ಜನತೆಯ ಹೂವಿನ ಹಾರ, ಸೇಬಿನ ಹಾರ, ಜೈಕಾರ ಹಾಕಿಸಿಕೊಳ್ಳಲು ಬಂದಿಲ್ಲ. ಬದಲಾಗಿ ನಮ್ಮ ಮೇಲೆ ನಂಬಿಕೆಯಿಟ್ಟು ಕಾಂಗ್ರೆಸ್ ಶಾಸಕನನ್ನು ಆಯ್ಕೆ ಮಾಡಿದ ಕಾರಣಕ್ಕೆ ನಿಮ್ಮ ಋಣ ತೀರಿಸಲು ಬಂದಿದ್ದೇನೆ” ಎಂದು ತಿಳಿಸಿದರು.
“ಸಾಧನೆ ಇಲ್ಲದೆ ಸತ್ತರೆ ಸಾವಿಗೆ ಅವಮಾನ, ಆದರ್ಶ ಇಲ್ಲದೇ ಬಾಳು ನಡೆಸಿದರೆ ಬದುಕಿಗೆ ಅವಮಾನ ಎಂದು ವಿವೇಕಾನಂದರು ಹೇಳಿದ್ದಾರೆ. ನಮ್ಮ ಜನರ ಆದಾಯ ಪಾತಾಳಕ್ಕೆ ಹೋಗಿತ್ತು. ಎಲ್ಲಾ ವಸ್ತುಗಳ ಬೆಲೆ ಗಗನಕ್ಕೆ ಹೋಗಿತ್ತು. ಇದನ್ನೆಲ್ಲಾ ಹೋಗಲಾಡಿಸಲು ಕಾಂಗ್ರೆಸ್ ಪಕ್ಷವೇ ಪರಿಹಾರ ಎಂದು ನಂಬಿದ ಮತದಾರನೇ ಈಶ್ವರ, ಮಿಕ್ಕಿದ್ದೆಲ್ಲಾ ನಶ್ವರ” ಎಂದರು.
“ನೆಲಮಂಗಲ ಶಾಸಕರಾದ ಶ್ರೀನಿವಾಸ್ ಅವರು ನನಗೆ ಹೇಳಿದರು. ಕೆರೆಗಳಿಗೆ ವೃಷಭಾವತಿ ನೀರು ಬಿಡುವುದರ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ಕೊಳಚೆ ನೀಡು ಬಿಡುತ್ತಿದ್ದಾರೆ ಎಂದು ಅನೇಕರು ಮಾಧ್ಯಮಗೋಷ್ಟಿ ನಡೆಸುತ್ತಿದ್ದಾರೆ ಎಂದರು. ಅದಕ್ಕೆ ನಾನು ‘ಟೀಕೆಗಳು ಸಾಗುತ್ತವೆ ಕೆಲಸಗಳು ಉಳಿಯುತ್ತವೆ’ ಎಂದು ಅವರಿಗೆ ಹೇಳಿದ್ದೇನೆ” ಎಂದು ತಿಳಿಸಿದರು.
“ನಮ್ಮ ಚನ್ನಪಟ್ಟಣ ಭಾಗದಲ್ಲಿ ಸ್ವಲ್ಪ ಜಾಗವಿದ್ದರೂ ತುಳಸಿ ಬೆಳೆದು ಜೀವನ ಮಾಡುತ್ತಿದ್ದಾರೆ. ಅರ್ಧ ಎಕರೆ ಜಾಗವಿದ್ದವರು ವೀಳ್ಯದೆಲೆ ಬೆಳೆಯುತ್ತಿದ್ದಾರೆ. ಕನಕಪುರದಲ್ಲಿ ಕನಕಾಂಬರ, ಕಾಕಡ ಹೂವು ಬೆಳೆದು ಜೀವನ ಮಾಡುತ್ತಿದ್ದಾರೆ” ಎಂದರು.
“ಮುನಿಯಪ್ಪ ಅವರು ಹಾಗೂ ಶ್ರೀನಿವಾಸ್ ಅವರು ವೃಷಭಾವತಿ ಮೂಲಕ ನಮ್ಮ ನೀರನ್ನು ಕದ್ದಿದ್ದಾರೆ. ಇದು ಇಲ್ಲಿಂದ ಅರ್ಕಾವತಿ ಸೇರುತ್ತಿತ್ತು. ನಾವು ಈ ಹಿಂದೆಯೇ ಈ ನದಿಯ ನೀರನ್ನು ಶುದ್ಧೀಕರಣ ಮಾಡಿ ಕೋಲಾರಕ್ಕೆ ಹರಿಸಿದ್ದೇವೆ” ಎಂದು ಹೇಳಿದರು.
“ನಮಗೆ ನೀರಿನ ಬೆಲೆ ಅರ್ಥವಾಗಬೇಕು ಎಂದರೆ ಕೋಲಾರ, ಚಿಕ್ಕಬಳ್ಳಾಪುರಕ್ಕೆ ಹೋಗಿ ನೋಡಬೇಕು. ಆದರೂ ರೇಷ್ಮೆ, ಹಾಲು ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಈಗ ತರಕಾರಿ ಬೆಳೆಯುತ್ತಿದ್ದಾರೆ. ದೇವನಹಳ್ಳಿ ಭಾಗದಲ್ಲಿ ಈ ಹಿಂದೆ ದ್ರಾಕ್ಷಿ ಬೆಳೆಯುತ್ತಿದ್ದರು. ರೇಷ್ಮೆಗೂ ಉತ್ತಮ ಬೆಲೆ ಬಂದಿದೆ. ಈಗ ಬಾಗಲಕೋಟೆ, ವಿಜಯಪುರ ಭಾಗದಲ್ಲಿಯೂ ರೇಷ್ಮೆ ಬೆಳೆಯುತ್ತಿದ್ದಾರೆ. ಹೂಗಳನ್ನು ಬೆಳೆದು ದೇವನಹಳ್ಳಿ ವಿಮಾನ ನಿಲ್ದಾಣದ ಮೂಲಕ ರಫ್ತು ಮಾಡುತ್ತಿದ್ದಾರೆ” ಎಂದು ತಿಳಿಸಿದರು.
“ನಮ್ಮ ಸರ್ಕಾರ ಎಲ್ಲಾ ರಂಗಗಳನ್ನೂ ಅಭಿವೃದ್ಧಿ ಮಾಡುತ್ತಿದೆ. ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನಕ್ಕೆ ಗ್ಯಾರಂಟಿಗಳನ್ನು ನೀಡುತ್ತಿದೆ. ಚಿನ್ನದ ಬೆಲೆ 30 ಸಾವಿರದಿಂದ ಒಂದು ಲಕ್ಷಕ್ಕೆ ಏರಿದೆ. ಬಡ ಹೆಣ್ಣು ಮಕ್ಕಳ ಮದುವೆಗೆ ತಾಳಿ ನೀಡಲು ಆಗುತ್ತಿಲ್ಲ. ಓಲೆ, ಜುಮುಕಿ ತೆಗೆದುಕೊಳ್ಳಲು ಆಗದಂತಹ ಪರಿಸ್ಥಿತಿ ಬಂದಿದೆ. ನಾವು ಹೆಣ್ಣುಮಕ್ಕಳ ಪರವಾಗಿ ನಿಂತಿದ್ದೇವೆ. ಉಚಿತ ಬಸ್, ಗೃಹಲಕ್ಷ್ಮೀ ಹಣ ನೀಡುತ್ತಿದ್ದೇವೆ. ಇದನ್ನು ದಳ, ಬಿಜೆಪಿಯವರು ಮಾಡಿದ್ದರೇ?” ಎಂದು ಟೀಕಿಸಿದರು.
“ನೆಲಮಂಗಲ ಶಾಸಕ ಶ್ರೀನಿವಾಸ್ ಬಹಳ ಪ್ರಗತಿಪರವಾಗಿ ಕೆಲಸಮಾಡುತ್ತಿರುವ ವ್ಯಕ್ತಿ. ನೆಲಮಂಗಲಕ್ಕೆ ಮೆಟ್ರೋ ಬರಬೇಕು, ಯುಜಿಡಿ ಬರಬೇಕು, ಅಂತರ್ಜಲ ಹೆಚ್ಚಳವಾಗಬೇಕು, ರೈತರ, ಜನಸಾಮಾನ್ಯರ ಬದುಕು ಹಸನಾಗಬೇಕು ಎಂದು ಕೆಲಸ ಮಾಡುತ್ತಿರುವ ವ್ಯಕ್ತಿ. ಇಡೀ ಸರ್ಕಾರವೇ ಅವರ ಪರವಾಗಿ ನಿಂತಿದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
“ಇತರೇ ಪಕ್ಷದ ಬೆಂಬಲಿಗರು ಬಂದು ನಿಮ್ಮ ಸರ್ಕಾರದಿಂದ ಉತ್ತಮ ಅನುಕೂಲವಾಗುತ್ತಿದೆ. ನಮ್ಮೆಲ್ಲರ ಭೂಮಿಯ ಮೌಲ್ಯ ಹೆಚ್ಚಾಗಿದೆ ನಾವು ನಿಮ್ಮ ಜೊತೆಯೇ ಬಂದು ಸೇರಿಕೊಳ್ಳುತ್ತೇವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅದಕ್ಕೆ ಶ್ರೀನಿವಾಸ್ ಅವರಿಗೆ ಎಲ್ಲರನ್ನೂ ಒಟ್ಟಾಗಿ ಕರೆದುಕೊಂಡು ಹೋಗಿ ಕೆಲಸ ಮಾಡಬೇಕು ಎಂದು ಸೂಚನೆ ನೀಡಿದ್ದೇನೆ” ಎಂದು ತಿಳಿಸಿದರು