ತುರ್ತು ಆರೋಗ್ಯ ವ್ಯವಸ್ಥೆಗಳ ಸನ್ನದ್ಧತೆಯ ಕುರಿತು ಉನ್ನತ ಮಟ್ಟದ ಪರಿಶೀಲನಾ ಸಭೆ ನಡೆಸಿದ ಜೆಪಿ ನಡ್ಡಾ

RELATED POSTS

ನವದೆಹಲಿ(www.thenewzmirror.com):ಕೇಂದ್ರ ಆರೋಗ್ಯ ಸಚಿವ ಜೆ ಪಿ ನಡ್ಡಾ ಅವರ ಅಧ್ಯಕ್ಷತೆಯಲ್ಲಿ ತುರ್ತು ಆರೋಗ್ಯ ವ್ಯವಸ್ಥೆಗಳ ಸನ್ನದ್ಧತೆಯನ್ನು ಪರಿಶೀಲಿಸಲು ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಯಿತು.

ತುರ್ತು ಪ್ರಕರಣಗಳನ್ನು ಎದುರಿಸಲು ವೈದ್ಯಕೀಯ ಸನ್ನದ್ಧತೆಯ ಪ್ರಸ್ತುತ ಸ್ಥಿತಿಯ ಬಗ್ಗೆ ಅವರಿಗೆ ವಿವರಿಸಲಾಯಿತು. ಆಂಬ್ಯುಲೆನ್ಸ್‌ ಗಳ ನಿಯೋಜನೆ, ಉಪಕರಣಗಳು, ಔಷಧಿಗಳು, ರಕ್ತದ ಬಾಟಲಿಗಳು ಮತ್ತು ಮತ್ತಿತರ ಅಗತ್ಯ ವಸ್ತುಗಳು ಸೇರಿದಂತೆ ವೈದ್ಯಕೀಯ ಸರಬರಾಜುಗಳ ಸಮರ್ಪಕ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವುದು, ಹಾಸಿಗೆಗಳು, ಐಸಿಯು ಮತ್ತು ಎಚ್‌ ಡಿ ಯು ವಿಷಯದಲ್ಲಿ ಆಸ್ಪತ್ರೆ ಸಿದ್ಧತೆ; ಬಿ ಎಚ್‌ ಐ ಎಚ್‌ ಎಂ ಕ್ಯೂಬ್‌ ಗಳ ನಿಯೋಜನೆ, ಸುಧಾರಿತ ಸಂಚಾರಿ ಆಘಾತ ಆರೈಕೆ ಘಟಕಗಳು ಇತ್ಯಾದಿಗಳ ಕುರಿತು ತೆಗೆದುಕೊಂಡ ಕ್ರಮಗಳ ಬಗ್ಗೆ ಸಚಿವರಿಗೆ ವಿವರಿಸಲಾಯಿತು.

ಆಸ್ಪತ್ರೆಗಳು ಮತ್ತು ವೈದ್ಯಕೀಯ ಸಂಸ್ಥೆಗಳು ಅಗತ್ಯ ಔಷಧಗಳು, ರಕ್ತ, ಆಮ್ಲಜನಕ, ಆಘಾತ ಆರೈಕೆ ಕಿಟ್‌ ಗಳು ಇತ್ಯಾದಿಗಳ ಸಮರ್ಪಕ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಸೂಚಿಸಲಾಗಿದೆ. ಏಮ್ಸ್ ನವದೆಹಲಿ ಮತ್ತು ಇತರ ಕೇಂದ್ರ ಸರ್ಕಾರಿ ಆಸ್ಪತ್ರೆಗಳು ವೈದ್ಯರು ಮತ್ತು ದಾದಿಯರನ್ನು ಸಜ್ಜುಗೊಳಿಸಿವೆ ಮತ್ತು ನಿಯೋಜನೆಗೆ ಬೇಕಾದ ಸಾಮಗ್ರಿಗಳನ್ನು ಒದಗಿಸಿವೆ. ತುರ್ತು ಪ್ರತಿಕ್ರಿಯೆ ಜಾಲವನ್ನು ಸಹಯೋಗದ ರೀತಿಯಲ್ಲಿ ಬಲಪಡಿಸಲು ರಾಜ್ಯ ಮತ್ತು ಜಿಲ್ಲಾಡಳಿತ, ಸಶಸ್ತ್ರ ಪಡೆಗಳು ಮತ್ತು ವೈದ್ಯರು, ದಾದಿಯರು, ಅರೆವೈದ್ಯರು, ಖಾಸಗಿ ವಲಯದ ಆಸ್ಪತ್ರೆಗಳು, ದತ್ತಿ ಸಂಸ್ಥೆಗಳು ಇತ್ಯಾದಿ ಪ್ರಾದೇಶಿಕ ಸಂಘಟನೆಗಳೊಂದಿಗೆ ಸಮನ್ವಯ ಸಾಧಿಸುವಂತೆ ಅವರಿಗೆ ಸೂಚಿಸಲಾಯಿತು.

ಹೆಚ್ಚುವರಿಯಾಗಿ, ಏಮ್ಸ್, ಪಿಜಿಐಎಂಇಆರ್, ಜಿಪ್ಮರ್ ಮತ್ತು ಇತರ ಪ್ರಮುಖ ಆಸ್ಪತ್ರೆಗಳಲ್ಲಿ ವಿಪತ್ತು ಸನ್ನದ್ಧತೆಗಾಗಿ ದೇಶಾದ್ಯಂತ ಅಣಕು ಪ್ರದರ್ಶನಗಳನ್ನು ನಡೆಸಲಾಗಿದೆ. ತುರ್ತು ಆರೋಗ್ಯ ಸೇವೆಯಲ್ಲಿ ಸಾಮರ್ಥ್ಯ ವೃದ್ಧಿಗಾಗಿ, ಭಾರತೀಯ ರೆಡ್ ಕ್ರಾಸ್ ಸೊಸೈಟಿ, ರಾಷ್ಟ್ರೀಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆ (ಎನ್‌ ಐ ಎಚ್‌ ಎಫ್‌ ಡಬ್ಲ್ಯು), ಏಮ್ಸ್ ನವದೆಹಲಿ ಮತ್ತು iGOT ಸಹಯೋಗದೊಂದಿಗೆ ಪ್ರಾಣವುಳಿಸಲು ಸಿಪಿಆರ್, ಪ್ರಥಮ ಚಿಕಿತ್ಸೆ ಮತ್ತು ಮೂಲಭೂತ ನೆರವಿಗಾಗಿ ಹೆಚ್ಚುವರಿ ತರಬೇತಿ ಮಾಡ್ಯೂಲ್‌ ಗಳನ್ನು ಪರಿಚಯಿಸಲಾಗುತ್ತಿದೆ. ಪರಿಣಾಮಕಾರಿ ಪ್ರತಿಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಮತ್ತು ರಾಜ್ಯದೊಳಗಿನ ಸಂಬಂಧಿತ ಪಾಲುದಾರರೊಂದಿಗೆ ಸುಗಮ ಸಮನ್ವಯಕ್ಕಾಗಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರ ಸರ್ಕಾರಿ ಆಸ್ಪತ್ರೆಗಳು ಮತ್ತು ಆರೋಗ್ಯ ಸಂಸ್ಥೆಗಳೊಂದಿಗೆ ನಡೆಸಿದ ಸರಣಿ ಸಭೆಗಳ ಬಗ್ಗೆ ಕೇಂದ್ರ ಆರೋಗ್ಯ ಕಾರ್ಯದರ್ಶಿ ಮಾಹಿತಿ ನೀಡಿದರು.

ಎಲ್ಲಾ ವೈದ್ಯಕೀಯ ತುರ್ತು ಪ್ರತಿಕ್ರಿಯೆ ಆರೋಗ್ಯ ವ್ಯವಸ್ಥೆಗಳು ಸಮರ್ಪಕವಾಗಿ ಸಜ್ಜುಗೊಂಡಿವೆ ಮತ್ತು ಎಲ್ಲಾ ಸಮಯದಲ್ಲೂ ಕಾರ್ಯನಿರ್ವಹಿಸುತ್ತಿವೆ ಎಂದು ಖಚಿತಪಡಿಸಿಕೊಳ್ಳಲು ಕೇಂದ್ರ ಆರೋಗ್ಯ ಸಚಿವರು ನಿರ್ದೇಶನ ನೀಡಿದರು. ಅಗತ್ಯವಿದ್ದಾಗ ತ್ವರಿತ ತುರ್ತು ಆರೋಗ್ಯ ಸೇವೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ರಾಜ್ಯ ಸರ್ಕಾರಗಳೊಂದಿಗೆ, ವಿಶೇಷವಾಗಿ ಜಿಲ್ಲಾ ಮಟ್ಟದಲ್ಲಿ, ವಿಶೇಷವಾಗಿ ಗಡಿ ರಾಜ್ಯಗಳೊಂದಿಗೆ ಪರಿಣಾಮಕಾರಿ ತಳಮಟ್ಟದ ಸಂಪರ್ಕಗಳನ್ನು ಸ್ಥಾಪಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ಅವರು ನಿರ್ದೇಶನ ನೀಡಿದರು. 

ಸಚಿವಾಲಯದಲ್ಲಿರುವ 24×7 ನಿಯಂತ್ರಣ ಮತ್ತು ಕಮಾಂಡ್ ಕೇಂದ್ರವು ನಡೆಯುತ್ತಿರುವ ಪ್ರಯತ್ನಗಳನ್ನು ಮೇಲ್ವಿಚಾರಣೆ ಮಾಡಬೇಕು ಮತ್ತು ಪ್ರಸ್ತುತ ಪರಿಸ್ಥಿತಿಯಲ್ಲಿ ರಾಜ್ಯಗಳನ್ನು ಬೆಂಬಲಿಸಬೇಕು ಎಂದು ಸಚಿವರು ನಿರ್ದೇಶನ ನೀಡಿದರು.

ಕೇಂದ್ರ ಆರೋಗ್ಯ ಸಚಿವಾಲಯವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಮತ್ತು ಎಲ್ಲಾ ವಲಯಗಳಲ್ಲಿ ನಿರಂತರ ಆರೋಗ್ಯ ಸೇವೆಗಳು ಮತ್ತು ತುರ್ತು ಪ್ರತಿಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ಬದ್ಧವಾಗಿದೆ.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist