ಬೆಂಗಳೂರು(www.thenewzmirror.com):ಪ್ರಸ್ತುತ ದೇಶದ ಗಡಿಯಲ್ಲಿ ಯುದ್ಧದಂತಹ ಸನ್ನಿವೇಶ ನಿರ್ಮಾಣವಾಗಿರುವ ಹಿನ್ನಲೆಯಲ್ಲಿ ಹುಟ್ಟುಹಬ್ಬದ ಆಚರಣೆ ಬೇಡ ಎನ್ನುವ ನಿರ್ಧಾರಕ್ಕೆ ಬಂದಿರುವ ಡಿಸಿಎಂ ಡಿಕೆ ಶಿವಕುಮಾರ್,
“ಭಯೋತ್ಪಾದನೆ ವಿರುದ್ಧ ನಮ್ಮ ಯೋಧರು ಪ್ರಾಣ ಪಣಕ್ಕಿಟ್ಟು ಹೋರಾಡುತ್ತಿರುವ ಈ ಸೂಕ್ಷ್ಮ ಸಂದರ್ಭದಲ್ಲಿ ಮೇ 15 ರಂದು ಯಾರೂ ನನ್ನ ಜನ್ಮದಿನಾಚರಣೆ ಮಾಡುವುದು ಬೇಡ” ಎಂದು ಕಾರ್ಯಕರ್ತರು,ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.
“ನನ್ನ ಜನ್ಮದಿನದ ಹೆಸರಿನಲ್ಲಿ ಯಾರೊಬ್ಬರೂ ಸಂಭ್ರಮಾಚರಣೆ ಮಾಡಬಾರದು. ಅಂದು ನಾನು ಊರಿನಲ್ಲಿ ಇರುವುದಿಲ್ಲ. ಅಂದು ನನ್ನನ್ನು ಭೇಟಿ ಮಾಡಲು ಯಾರೂ ನನ್ನ ನಿವಾಸ, ಕಚೇರಿಗೆ ಬರುವುದು ಬೇಡ. ಯಾರೂ ಅನ್ಯತಾ ಭಾವಿಸಬಾರದು. ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಸಹಕರಿಸಬೇಕು” ಎಂದು ಡಿ ಕೆ ಶಿವಕುಮಾರ್ ಅವರು ಮಾಧ್ಯಮ ಹೇಳಿಕೆಯಲ್ಲಿ ವಿನಂತಿ ಮಾಡಿದ್ದಾರೆ.
ಜನ್ಮದಿನದ ಶುಭ ಕೋರುವ ಫ್ಲೆಕ್ಸ್, ಬ್ಯಾನರ್ ಗಳನ್ನು ಹಾಕುವುದಾಗಲಿ, ಜಾಹೀರಾತುಗಳನ್ನು ನೀಡುವುದಾಗಲಿ ಮಾಡಬಾರದು ಎಂದು ಅಭಿಮಾನಿಗಳು, ಪಕ್ಷದ ನಾಯಕರು ಹಾಗೂ ಕಾರ್ಯಕರ್ತರಲ್ಲಿ ಮನವಿ ಮಾಡಿದ್ದಾರೆ.
“ದೇಶದ ಐಕ್ಯತೆ, ಸಾರ್ವಭೌಮತೆ ರಕ್ಷಣೆಗೆ ನಾವು ಯೋಧರ ಜತೆ ನಿಲ್ಲಬೇಕು. ಅವರು ಸುರಕ್ಷಿತವಾಗಿ ಈ ಹೋರಾಟವನ್ನು ಗೆದ್ದು ಬರಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ” ಎಂದು ತಿಳಿಸಿದ್ದಾರೆ.