ಮಂಗಳೂರು(www.thenewzmirror.com): ನಮ್ಮ ಸಮಾಜದಲ್ಲಿ ಪುರುಷಗಿಂತ ಮಹಿಳೆಯರಲ್ಲಿ ಆರ್ಥಿಕ ಶಿಸ್ತು ಹೆಚ್ಚಾಗಿರುತ್ತದೆ, ನೂರು ರೂಪಾಯಿ ಕೊಟ್ಟರೂ ಅಷ್ಟೆ, ಒಂದು ಲಕ್ಷ ರೂಪಾಯಿ ಕೊಟ್ಟರೂ ಅಷ್ಟೇ, ಸಂಸಾರವನ್ನು ಅತ್ಯಂತ ವ್ಯವಸ್ಥಿತವಾಗಿ ನಿಭಾಯಿಸಿಕೊಂಡು ಹೋಗುವ ಜಾಣ್ಮೆ ಮಹಿಳೆಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಮಂಗಳೂರಿನ ಬಂಗ್ರ ಕೂಳೂರು ಗೋಲ್ಡನ್ ಫಿಂಚ್ ಸಿಟಿಯಲ್ಲಿ ಶನಿವಾರ ನಡೆದ ನವೋದಯ ಸ್ವ-ಸಹಾಯ ಗುಂಪುಗಳ ರಜತ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಿಳೆಯರನ್ನು ಎಲ್ಲಿ ಗೌರವಿಸುತ್ತಾರೋ, ಪೂಜಿಸುತ್ತಾರೋ ಆ ಜಾಗ ಅಭಿವೃದ್ಧಿ ಕಾಣುತ್ತದೆ.ನವೋದಯ ಗ್ರಾಮೀಣ ವಿಕಾಸ ಸಂಸ್ಥೆ ಇವತ್ತು ಹೆಮ್ಮರವಾಗಿ ಬೆಳೆದಿದೆ. 8 ಜಿಲ್ಲೆಗಳಿಗೆ ಕಾರ್ಯಚಟುವಟಿಕೆ ವಿಸ್ತರಣೆ ಮಾಡಿಕೊಂಡು ಈಗ ರಾಜ್ಯ ಮಟ್ಟದ ಸಂಸ್ಥೆಯಾಗಿ ಬೆಳೆಸುತ್ತಿರುವುದು ನಿಜಕ್ಕೂ ಪ್ರಶಂಸಾರ್ಹವಾಗಿದೆ. ರಾಜೇಂದ್ರ ಕುಮಾರ್ ಅವರು ಈ ಎರಡೂ ಕ್ಷೇತ್ರಗಳನ್ನು ಅತ್ಯಂತ ಜಾಣ್ಮೆಯಿಂದ ಸುಮಾರು 3 ದಶಕಗಳಿಂದ ಸ್ವಲ್ಪವೂ ವಿಶ್ವಾಸ ಕಳೆದುಕೊಳ್ಳದೆ ಮುನ್ನಡೆಸುವ ಮೂಲಕ ಸಹಕಾರಿ ಕ್ಷೇತ್ರದ ಭೀಷ್ಮ ಎನಿಸಿಕೊಂಡಿದ್ದಾರೆ ಎಂದು ಸಚಿವರು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಬ್ಯಾಂಕ್ ಬಗ್ಗೆ ನನಗೆ ತುಂಬಾ ಚೆನ್ನಾಗಿ ಗೊತ್ತಿದೆ. ಇಡೀ ರಾಜ್ಯದಲ್ಲಿ ಅಪೆಕ್ಸ್ ಬ್ಯಾಂಕ್ ಬಿಟ್ಟರೆ, ಜಿಲ್ಲಾ ಸಹಕಾರಿ ಬ್ಯಾಂಕ್‌ಗಳ ಪೈಕಿ ಅತಿದೊಡ್ಡ ಮಟ್ಟದಲ್ಲಿ ಬೆಳೆದು ನಿಂತಿರುವ ಬ್ಯಾಂಕ್ ಅಂದರೆ ಅದು ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಬ್ಯಾಂಕ್. ಇದರ ಹಿಂದಿನ ರೂವಾರಿಯೇ ರಾಜೇಂದ್ರ ಕುಮಾರ್ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಶ್ಲಾಘಿಸಿದರು.
ಬ್ಯಾಂಕ್ ವ್ಯವಹಾರಗಳು, ಪಾರದರ್ಶಕವಾಗಿರಬೇಕು. ಬ್ಯಾಂಕ್ ವ್ಯವಹಾರದಲ್ಲೂ ರಾಜೇಂದ್ರ ಕುಮಾರ್ ಅವರು ತೊಡಗಿಸಿಕೊಂಡು, ಇದರ ಜೊತೆಗೆ ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣ ಮಾಡುವ ಉದ್ದೇಶದಿಂದ 8 ಜಿಲ್ಲೆಗಳಲ್ಲಿ ನವೋದಯ ಸ್ವ-ಸಹಾಯ ಗುಂಪುಗಳನ್ನು ರಚಿಸುವ ಮೂಲಕ ನೆರವಾಗುತ್ತಿದ್ದಾರೆ ಎಂದು ಹೇಳಿದರು.
ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣ ಮಾಡುವುದೇ ನಮ್ಮ ಸರ್ಕಾರದ ಮೂಲ ಉದ್ದೇಶ. ಇದಕ್ಕಾಗಿಯೇ ಗೃಹಲಕ್ಷ್ಮೀ ಯೋಜನೆಗೆ ವಾರ್ಷಿಕ 28 ಸಾವಿರ ಕೋಟಿ ರೂಪಾಯಿಗಳನ್ನು ನೀಡಲಾಗುತ್ತಿದೆ. ನೇರವಾಗಿ ಮಹಿಳೆಯರ ಬ್ಯಾಂಕ್ ಖಾತೆಗೆ ಹಣ ಹಾಕಲಾಗುತ್ತಿದೆ. ಮಹಿಳೆ ಸದೃಢವಾಗಿ ಬೆಳೆಯಬೇಕು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕರೆ ನೀಡಿದರು.
ರಾಜೇಂದ್ರ ಕುಮಾರ್ ಅವರ ಸಾಧನೆಗೆ ಪತ್ನಿಯೇ ಸ್ಫೂರ್ತಿ:
ಪ್ರತಿಯೊಂದು ಮನೆಯನ್ನೂ ಬೆಳೆಗುವವಳು ಹೆಣ್ಣುಮಗಳು, ರಾಜೇಂದ್ರ ಕುಮಾರ್ ಅವರು ಇಷ್ಟು ದೊಡ್ಡ ಸಾಧನೆ ಮಾಡಲು ಮೂಲ ಪ್ರೇರಣೆಯೇ ಅವರ ಧರ್ಮಪತ್ನಿ. ತಮ್ಮ ಮೂರು ಮಕ್ಕಳ ಜೊತೆಗೆ ಮನೆಯ ಜವಾಬ್ದಾರಿಯನ್ನು ಅವರು ಸಮರ್ಥವಾಗಿ ನಿಭಾಸಿದ ಫಲವಾಗಿ, ರಾಜೇಂದ್ರ ಕುಮಾರ್ ಅವರು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಯಿತು ಎಂದು ಸಚಿವರು ಹೇಳಿದರು.
ಸಮಾರಂಭದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ವಿರೇಂದ್ರ ಹೆಗ್ಗಡೆ, ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಗಳು, ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೊಟ್, ಸಭಾಧ್ಯಕ್ಷರಾದ ಯು.ಟಿ.ಖಾದರ್, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ದಿನೇಶ್ ಗುಂಡೂರಾವ್, ಆರ್.ಬಿ.ತಿಮ್ಮಾಪುರ, ಕೆ.ಎನ್.ರಾಜಣ್ಣ, ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸದಸ್ಯರಾದ ಕೋಟಾ ಶ್ರೀನಿವಾಸ್ ಪೂಜಾರಿ, ಕಾರ್ಯಕ್ರಮದ ರೂವಾರಿಗಳಾದ ಡಾ.ಎಂ.ಎನ್.ರಾಜೇಂದ್ರ ಕುಮಾರ್, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಶಾಸಕರು, ವಿಧಾನ ಪರಿಷತ್ ಸದಸ್ಯರು, ನವೋದಯ ಸ್ವ-ಸ್ವಹಾಯ ಗುಂಪುಗಳ ಸದಸ್ಯರು ಹಾಗೂ ಬೃಹತ್ ಸಂಖ್ಯೆಯಲ್ಲಿ ಮಹಿಳೆಯರು ಉಪಸ್ಥಿತರಿದ್ದರು