ಬೆಂಗಳೂರು(www.thenewzmirror.com):2024-25 ಹಾಗೂ 2025-2026 ನೇ ಸಾಲಿಗೆ ಸಂಬಂಧಿಸಿದಂತೆ ರಾಜ್ಯದ ಅಭಿವೃದ್ಧಿ ಕಾಮಗಾರಿಗಳಿಗೆ ಕೇಂದ್ರ ಸರ್ಕಾರದ ಅನುದಾನ ಬಿಡುಗಡೆ ಮಾಹಿತಿ ಕುರಿತಂತೆ ಕರ್ನಾಟಕ ಸರ್ಕಾರದ ನವ ದೆಹಲಿಯ ವಿಶೇಷ ಪ್ರತಿನಿಧಿ ಟಿ.ಬಿ ಜಯಚಂದ್ರ ಹಾಗೂ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ .ಆರ್ ಪಾಟೀಲ್ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಿತು.
ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿಜಲಸಂಪನ್ಮೂಲ , ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ , ಲೋಕೋಪಯೋಗಿ ವಾಣಿಜ್ಯ ಮತ್ತು ಕೈಗಾರಿಕೆ ನಗರಾಭಿವೃದ್ಧಿ ಮತ್ತು ಸಣ್ಣ ನೀರಾವರಿ ಇಲಾಖೆಯ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಸಂಪೂರ್ಣ ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ಕೇಂದ್ರ ಸರ್ಕಾರದ ಅನುದಾನ ಹಂಚಿಕೆ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಭಾಗಿತ್ವದ ಯೋಜನೆಗಳಿಗೆ ಕೇಂದ್ರ ಸರ್ಕಾರದ ಪಾಲಿನ ಅನುದಾನ ಹಂಚಿಕೆ ಬಗ್ಗೆ ಸಭೆಯಲ್ಲಿ ಮಾಹಿತಿ ಪಡೆಯಲಾಯಿತು .
ರಾಜ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಗೌರವ ಗುಪ್ತ ಅವರು ಮಾತನಾಡಿ ಕೇಂದ್ರ ಸರ್ಕಾರ ರೈಲ್ವೆ ಯೋಜನೆಗಳಿಗೆ ತನ್ನ ಬಜೆಟ್ ನಲ್ಲಿ ಪ್ರಸಕ್ತ ಸಾಲಿನಲ್ಲಿ 2.5 ಲಕ್ಷ ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದ್ದು ರಾಜ್ಯದ ರೈಲ್ವೆ ಯೋಜನೆಗಳಿಗೆ ಯಾವುದೇ ರೀತಿ ಹಣಕಾಸಿನ ಕೊರತೆ ಇಲ್ಲ. ಅದೇ ರೀತಿ ಕೇಂದ್ರ ಭೂಸಾರಿಗೆ ಹಾಗೂ ರಸ್ತೆ ಅಭಿವೃದ್ಧಿ ಇಲಾಖೆ ಸಹ ರಾಜ್ಯದ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ ಹಾಗೂ ಮೇಲ್ದರ್ಜೆಗೆ ಅಗತ್ಯದಷ್ಟು ಹಣವನ್ನು ಬಿಡುಗಡೆ ಮಾಡುತ್ತಿದೆ. ಈ ಎರಡು ಇಲಾಖೆಗಳಲ್ಲಿ ಯೋಜನೆಗಳನ್ನ ಕೈಗೆತ್ತಿಕೊಳ್ಳಲು ಹಣಕಾಸಿನ ಕೊರತೆ ಇಲ್ಲ. ಆದರೆ ಜಲಸಂಪನ್ಮೂಲ ಹಾಗೂ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಯೋಜನೆಗಳಿಗೆ ಕೇಂದ್ರದಿಂದ ಘೋಷಿತ ಅನುದಾನ ಬಿಡುಗಡೆ ಆಗುತ್ತಿಲ್ಲ. ಹೀಗಾಗಿ ರಾಜ್ಯದ ನೀರಾವರಿ ಯೋಜನೆಗಳು ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿವೆ. ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಕೇಂದ್ರ ಸರ್ಕಾರ ಘೋಷಣೆ ಮಾಡಿದರು ಸಹ ಯೋಜನೆಗೆ ಅಗತ್ಯವಿರುವ 5600 ಕೋಟಿಯಲ್ಲಿ ಒಂದು ರೂಪಾಯಿಯನ್ನು ಇದುವರೆಗೆ ಬಿಡುಗಡೆ ಮಾಡಿಲ್ಲ ಎಂದರು .
ಕೃಷ್ಣಾಹಾಗೂ ತುಂಗಭದ್ರಾ ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ನೆರೆಯ ತೆಲಂಗಾಣ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದು ಆಂಧ್ರಪ್ರದೇಶದ ಸರ್ಕಾರ ನಕಾರಾತ್ಮಕ ಧೋರಣೆ ತಾಳಿದೆ ಹೀಗಾಗಿ ನೀರಾವರಿ ಯೋಜನೆ ವಿಳಂಬವಾಗಿದೆ ಕೇಂದ್ರ ಜಲಸಂಪನ್ಮೂಲ ಸಚಿವರು ಸಭೆ ಕರೆದರು ಸಹ ಆಂಧ್ರಪ್ರದೇಶದಿಂದ ಯಾರು ಭಾಗವಹಿಸುವುದಿಲ್ಲ ಪ್ರಮುಖವಾಗಿ ಆಂಧ್ರಪ್ರದೇಶ ಮತ್ತು ತಮಿಳುನಾಡು ಕರ್ನಾಟಕದ ಯೋಜನೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಆಂಧ್ರಪ್ರದೇಶ ಹಾಗೂ ತಮಿಳುನಾಡು ಸರ್ಕಾರಗಳು ರಾಜ್ಯದ ಯೋಜನೆಗಳಿಗೆ ಒಪ್ಪಿಗೆ ಸೂಚಿಸುವಂತೆ ಮಾಡಬೇಕು ಎಂದರು .
ಇದೇ ವೇಳೆ ಮಾತನಾಡಿದ ಸಣ್ಣ ನೀರಾವರಿ ಇಲಾಖೆ ಕಾರ್ಯದರ್ಶಿಗಳು 2024 -25 ನೇ ಸಾಲಿಗೆ ಸಂಬಂಧಿಸಿದಂತೆ PMKSY ಯೋಜನೆಯಡಿ 1036 ಯೋಜನೆಗಳಿಗೆ 2434ಕೋಟಿ ಹಣವನ್ನ ಕೇಂದ್ರ ಸರ್ಕಾರ ನೀಡಬೇಕು .ಅಷ್ಟೇ ಅಲ್ಲ ರಾಜ್ಯ ಸರ್ಕಾರದ ಪ್ರಸ್ತಾವಿತ ಹೊಸ172 ಹೊಸ ಯೋಜನೆಗಳಿಗೆ 475 ಕೋಟಿ ಹಣ ಸಹ ಬರಬೇಕಾಗಿದೆ ಕೇಂದ್ರ ಸರ್ಕಾರ ಸಕಾಲದಲ್ಲಿ ಹಣ ಬಿಡುಗಡೆ ಮಾಡದ ಕಾರಣ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಭಾಗಿತ್ವದ ಯೋಜನೆಗಳಿಗೆ ಹಿನ್ನಡೆಯಾಗಿದೆ ಎಂದು ಹೇಳಿದರು.
ಲೋಕೋಪಯೋಗಿ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಶಾಂತಕುಮಾರ್ ಅವರು ಮಾತನಾಡಿ ರಾಜ್ಯದಲ್ಲಿ 28 ರಾಷ್ಟ್ರಿಯ ಹೆದ್ದಾರಿಗಳ ಅಭಿವೃದ್ಧಿ ಪ್ರಗತಿಯಲ್ಲಿದೆ. 13 ಕೈಗಾರಿಕಾ ವಲಯಗಳಿಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಗಳಿದ್ದು ಅವುಗಳನ್ನು ಸಹ ಮೇಲ್ದರ್ಜೆಗೆ ಏರಿಸಲಾಗುತ್ತಿದೆ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಯಾವುದೇ ಅನುದಾನದ ಕೊರತೆ ಇಲ್ಲ ಕೇಂದ್ರ ಸರ್ಕಾರ ನಿಗದಿತ ಸಮಯದಲ್ಲಿ ಹಣ ಬಿಡುಗಡೆ ಮಾಡುತ್ತಿದೆ. ಕೆಲವು ಭಾಗಗಳಲ್ಲಿ ಭೂಸ್ವಾಧೀನ ಸಮಸ್ಯೆಯಾಗಿದ್ದು ಕೆಲವು ಕಡೆ ರಸ್ತೆ ಅಭಿವೃದ್ಧಿ ಯೋಜನೆ ನಿಧನವಾಗುತ್ತಿದೆ ಎಂದರು.
ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ, ದೀಪ ಚೋಳನ್ ಅವರ ಮಾತನಾಡಿ ಕೇಂದ್ರ ಸರ್ಕಾರದ ಅಮೃತ್ ಯೋಜನೆ ಹಾಗೂ ಸ್ವಚ್ಛ ಭಾರತ್ ಮಿಷನ್ ಒಂದು ಹಾಗೂ ಎರಡು ಯೋಜನೆಗಳ ಅನುಷ್ಟಾನಕ್ಕೆ ರಾಜ್ಯ ಸರ್ಕಾರಕ್ಕೆ 5000 ಕೋಟಿ ರೂಪಾಯಿಗಳ ಅನುದಾನವನ್ನ ಐದು ವರ್ಷಗಳ ಅವಧಿಗೆ ಕೇಂದ್ರ ಸರ್ಕಾರ ನೀಡಿದ್ದು ಕಾಮಗಾರಿಗಳು ಪ್ರಗತಿಯಲ್ಲಿವೆ. ಕೆಲವು ನಗರ ಪ್ರದೇಶಗಳಲ್ಲಿ ಸ್ಥಳೀಯ ಸಮಸ್ಯೆಗಳಿಂದ ಕೆಲವು ಕಾಮಗಾರಿಗಳು ವಿಳಂಬವಾಗುತ್ತಿದೆ ರಾಜ್ಯ ಸರ್ಕಾರ ಕಳುಹಿಸಿರುವ ಪ್ರಸ್ತಾವನೆಗಳಿಗೆ ಕೇಂದ್ರ ಸರ್ಕಾರ ಅನುದಾನ ನೀಡಿದೆ ಎಂದು ಸಭೆಯಲ್ಲಿ ಹೇಳಿದರು .
ಇದೇ ವೇಳೆ ಮಾತನಾಡಿದ ದೆಹಲಿ ವಿಶೇಷ ಪ್ರತಿನಿಧಿ ಜಯಚಂದ್ರ ಅವರು ರಾಜ್ಯದಲ್ಲಿ ನಿರ್ಮಾಣ ಆಗುತ್ತಿರುವ 5 ಫುಡ್ ಪಾರ್ಕ್ ಗಳಿಗೆ ಅಗತ್ಯ ಹಣಕಾಸಿನ ನೆರವನ್ನು ನೀಡಿ ಯೋಜನೆಗಳನ್ನು ಪೂರ್ಣಗೊಳಿಸಬೇಕು . ಕಲ್ಬುರ್ಗಿ ಹಿರಿಯೂರು ಜೇವರ್ಗಿ ಗುಲ್ಬರ್ಗ ಮಾಲೂರು ಹಾಗೂ ಕೆ ಆರ್ ಪೇಟೆ ಯಲ್ಲಿ ನಿರ್ಮಾಣವಾಗುತ್ತಿರುವ ಪುಡ್ ಪಾರ್ಕ್ ಗಳ ಕಾಮಗಾರಿಗಳು ದಶಕದಿಂದ ನೆನೆಗುದಿಗೆ ಬಿದ್ದಿದೆ ಆದಷ್ಟು ಬೇಗ ಆ ಕಾಮಗಾರಿಗಳನ್ನು ಮುಗಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಅಧಿಕಾರಿಗಳಿಗೆ ಹೇಳಿದರು.
ಜಲಜೀವನ ಮಿಷನ್ ಯೋಜನೆಗೆ ಕೇಂದ್ರ ಸರ್ಕಾರದಲ್ಲಿ ಬಾಕಿ ಇರುವ ಹಣ ತರಲು ಕೇಂದ್ರ ಸಚಿವರ ಮೇಲೆ ಒತ್ತಡ ತರುವುದಾಗಿ ತಿಳಿಸಿದರು
ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ ಆರ್ ಪಾಟೀಲ್ ಅವರು ಮಾತನಾಡಿ ರಾಜ್ಯದ ಗಡಿ ಪ್ರದೇಶಗಳಿಗೆ ಹೊಂದಿಕೊಂಡಿರುವ ಎಲ್ಲ ರಾಷ್ಟ್ರೀಯ ಹೆದ್ದಾರಿಗಳನ್ನು ನಿಗದಿತ ಕಾಲಮಿತಿಯಲ್ಲಿ ಅಭಿವೃದ್ಧಿಪಡಿಸಬೇಕು .ಕೇಂದ್ರ ಸರ್ಕಾರದಿಂದ ಯಾವುದೇ ಯೋಜನೆಗಳಿಗೆ ಅನುದಾನ ನೀಡುವುದು ಬಾಕಿ ಇದ್ದರೆ ತಮ್ಮ ಗಮನಕ್ಕೆ ತಂದರೆ ತಾವು ಹಾಗೂ ದೆಹಲಿ ವಿಶೇಷ ಪ್ರತಿನಿಧಿ ಜಯಚಂದ್ರ ಅವರು ಕೇಂದ್ರ ಸಚಿವರಗಳನ್ನು ಭೇಟಿ ಮಾಡಿ ತ್ವರಿತವಾಗಿ ಅನುದಾನ ಬಿಡುಗಡೆ ಮಾಡಿಕೊಡಿಸುವುದಾಗಿ ಅಧಿಕಾರಿಗಳಿಗೆ ಸೂಚಿಸಿದರು.