ಹೊಸಪೇಟೆ(www.thenewzmirror.com):ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಳೆಹಾನಿ ಪರಿಸ್ಥಿರಿಯನ್ನು ಸಮರ್ಥವಾಗಿ ನಿರ್ವಹಣೆ ಮಾಡಿದ್ದು,ಮಹಾನಗರದಲ್ಲಿ ಮಳೆ ನೀರುಗಾಲುವೆಯನ್ನು ಶಾಶ್ವತವಾಗಿ ರೂಪಿಸಲು ಯೋಜನೆ ರೂಪಿಸಲಾಗಿದೆ, ಇದಕ್ಕಾಗಿ ವಿಶ್ವಬ್ಯಾಂಕಿನಿಂದ ಹಾಗೂ ವಿಪತ್ತು ನಿರ್ವಹಣಾ ಇಲಾಖೆಯಿಂದ 2 ಸಾವಿರ ಕೋಟಿಯಷ್ಟು ನೆರವು ಪಡೆಯಲಾಗುತ್ತಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ರಾಜ್ಯ ಸರಕಾರಕ್ಕೆ ಎರಡು ವರ್ಷ ತುಂಬಿರುವ ಹಿನ್ನೆಲೆಯಲ್ಲಿ ವಿಜಯನಗರದ ಹೊಸಪೇಟೆಯಲ್ಲಿ ನಡೆಯಲಿರುವ ಸಾಧನೆ ಸಮಾವೇಶದ ಪೂರ್ವಸಿದ್ಧತೆ ಪರಿಶೀಲನೆ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಅವರು,ಮಳೆಯಿಂದಾಗಿ ಬೆಂಗಳೂರಿನ ರಸ್ತೆಗಳು ಜಲಾವೃತವಾಗಿದೆ ಎಂದು ಕೇಳಿದಾಗ, “ಮಳೆ ಬರಬೇಕು. ಹೆಚ್ಚಿಗೆ ಮಳೆ ಬಂದಷ್ಟು ಸರ್ಕಾರಕ್ಕೆ ಲಾಭ. ಭಾನುವಾರ ರಾತ್ರಿ ಸುರಿದ ಮಳೆಯಿಂದ ಗೋಡೆ ಕುಸಿದು ಒಂದು ಸಾವಾಗಿದೆ ಎಂದು ಮಾಹಿತಿ ಬಂದಿದೆ. ಉಳಿದಂತೆ ಯಾವುದೇ ಅವಘಡ ಸಂಭವಿಸಿಲ್ಲ. ನಮ್ಮ ಅಧಿಕಾರಿಗಳ ಪರಿಸ್ಥಿತಿಯನ್ನು ನಿಭಾಯಿಸುತ್ತಿದ್ದಾರೆ. ಕೆಲವು ತಗ್ಗು ಪ್ರದೇಶಗಳಲ್ಲಿ ಮನೆ ಕಟ್ಟಿಕೊಂಡಿರುವ ಜಾಗದಲ್ಲಿ ನೀರು ನುಗ್ಗಿದೆ. ಮಳೆ ಹಾನಿ ಪ್ರದೇಶಕ್ಕೆ ನಾನು ಮುಖ್ಯಮಂತ್ರಿಗಳು ಭೇಟಿ ನೀಡಿ ಪರಿಶೀಲನೆ ಮಾಡುತ್ತೇವೆ” ಎಂದರು.
ಕುಮಾರಸ್ವಾಮಿ ಅವರು ಟೀಕೆ ಮಾಡಿರುವ ಬಗ್ಗೆ ಕೇಳಿದಾಗ, “ನಾನು ಇಲ್ಲಿಗೆ ಪ್ರವಾಸ ಮಾಡುವುದಕ್ಕೆ ಬಂದಿದ್ದೇನೆಯೇ? ಜನರ ಬದುಕು ಸರಿ ಮಾಡುವ ಉದ್ದೇಶದೊಂದಿಗೆ ಬಂದಿದ್ದೇನೆ. ಅವರು ವಿರೋಧ ಪಕ್ಷದಲ್ಲಿದ್ದಾರೆ ಅವರಿಗೆ ಮತ್ತು ಆರ್.ಅಶೋಕ್ ಅವರಿಗೆ ಸರ್ಕಾರದ ವಿರುದ್ಧ ಟೀಕೆ ಮಾಡದಿದ್ದರೆ ಅವರಿಗೆ ಸಮಾಧಾನ ಆಗುವುದಿಲ್ಲ. ಅವರ ಸ್ಥಾನಕ್ಕೆ ಧಕ್ಕೆಯಾಗುತ್ತದೆ. ಹೀಗಾಗಿ ನಾಲ್ಕು ಮಾತು ಆಡಿದ್ದಾರೆ” ಎಂದರು.
ಶಾಶ್ವತ ಮಳೆನೀರು ಗಾಲುವೆಗೆ ಯೋಜನೆ:
ಬೆಂಗಳೂರು ಮಳೆ ಅವಾಂತರಕ್ಕೆ ಶಾಶ್ವತ ಪರಿಹಾರವೇ ಇಲ್ಲವೇ ಎಂದು ಕೇಳಿದಾಗ, “ಮಳೆ ಪ್ರಕೃತಿ, ಅದು ಯಾರ ನಿಯಂತ್ರಣದಲ್ಲೂ ಇಲ್ಲ. ಮಳೆ ಬೀಳುವ ಬಗ್ಗೆ ಹವಾಮಾನ ಇಲಾಖೆ ಮಾಹಿತಿ ನೀಡಿತ್ತು. ನಮ್ಮ ಅಧಿಕಾರಿಗಳು ನಾಲ್ಕು ದಿನಗಳಿಂದಲೇ ಸಕಲ ಸಿದ್ಧತೆ ಮಾಡಿಕೊಂಡಿದ್ದರು. ಬೆಂಗಳೂರಿನಲ್ಲಿ ಮಳೆನೀರುಗಾಲುವೆಯನ್ನು ಶಾಶ್ವತವಾಗಿ ರೂಪಿಸಲು ಯೋಜನೆ ರೂಪಿಸಲಾಗಿದ್ದು, ಇದಕ್ಕಾಗಿ ವಿಶ್ವಬ್ಯಾಂಕಿನಿಂದ ಹಾಗೂ ವಿಪತ್ತು ನಿರ್ವಹಣಾ ಇಲಾಖೆಯಿಂದ 2 ಸಾವಿರ ಕೋಟಿಯಷ್ಟು ನೆರವು ಪಡೆಯಲಾಗಿದೆ” ಎಂದರು.
ಡಿ.ಕೆ. ಶಿವಕುಮಾರ್ ಅವರು ದೇಶದ ನಂಬರ್ 1 ಶ್ರೀಮಂತರಾಗಲು ಗ್ರೇಟರ್ ಬೆಂಗಳೂರು ಜಾರಿ ಮಾಡಿದ್ದಾರೆ ಎಂಬ ಶ್ರೀರಾಮುಲು ಅವರ ಟೀಕೆ ಬಗ್ಗೆ ಕೇಳಿದಾಗ, “ಅವರ ಆಶೀರ್ವಾದ ನನ್ನ ಮೇಲಿರಲಿ. ಶ್ರೀರಾಮುಲು ಅವರಿಗಾಗಲಿ, ಅಶೋಕ್ ಅವರಿಗಾಗಲಿ ನಾನು ಈಗ ಇಲ್ಲಿ ಉತ್ತರ ನೀಡುವುದಿಲ್ಲ. ಬಿಜೆಪಿ ಹಾಗೂ ವಿರೋಧ ಪಕ್ಷದವರು ಹೊಸಪೇಟೆಯಲ್ಲಿ 1 ಕೋಟಿಗೂ ಹೆಚ್ಚು ಜನರಿಗೆ ನೀಡುತ್ತಿರುವ ಭೂ ಗ್ಯಾರಂಟಿ ಯೋಜನೆ ಬಗ್ಗೆ ಮಾತನಾಡಲಿ” ಎಂದು ತಿರುಗೇಟು ನೀಡಿದರು.
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ:
ಗ್ಯಾರಂಟಿಗಳಿಂದ ಅಭಿವೃದ್ಧಿಯಾಗುತ್ತಿಲ್ಲ ಎಂದು ಬಿಜೆಪಿ ಆರೋಪದ ಬಗ್ಗೆ ಕೇಳಿದಾಗ, “ನಮ್ಮದು ಕಾಂಗ್ರೆಸ್ ಗ್ಯಾರಂಟಿ. ಅವರು ಮೋದಿ ಗ್ಯಾರಂಟಿ ಎಂದರು. ಮಹಾರಾಷ್ಟ್ರ, ಮಧ್ಯಪ್ರದೇಶ, ದೆಹಲಿ, ಹರಿಯಾಣ ರಾಜ್ಯಗಳಲ್ಲಿ ಅವರು ಏನು ಮಾಡಿದ್ದಾರೆ? ನಮ್ಮ ಯೋಜನೆ ನಕಲು ಮಾಡಿದರು. ಇಡೀ ದೇಶಕ್ಕೆ ಕಾಂಗ್ರೆಸ್ ಆಡಳಿತ ಮಾದರಿಯಾಗಿದೆ. ಪ್ರತಿ ಹಂತದಲ್ಲೂ ನಮ್ಮ ಕಾರ್ಯಕ್ರಮ ಮಾದರಿಯಾಗಿದೆ. ಬಿಜೆಪಿಯವರು ನರೇಗಾ ಯೋಜನೆ ಬಗ್ಗೆ ಅನೇಕ ಟೀಕೆ ಮಾಡಿದರು. ಆದರೂ ನರೇಗಾ ಯೋಜನೆ ತೆಗೆಯಲು ಸಾಧ್ಯವಾಯಿತೇ? ನಾವು ಭೂ ಸುಧಾರಣಾ ಕಾಯ್ದೆ ಜಾರಿಗೆ ತಂದೆವು, ಅದನ್ನು ಬಿಜೆಪಿಯವರಿಂದ ತೆಗೆದು ಹಾಕಲು ಸಾಧ್ಯವಾಯಿತೇ? ಯುಪಿಎ ಸರ್ಕಾರದಲ್ಲಿ ಬುಡಕಟ್ಟು ಜನರಿಗೆ ಭೂಮಿ ಕೊಟ್ಟೆವು. ಆಹಾರ ಭದ್ರತೆ ಕಾಯ್ದೆ ಜಾರಿಗೆ ತಂದೆವು, ಶೈಕ್ಷಣಿಕ ಹಕ್ಕು ಕಾಂಗ್ರೆಸ್ ಜಾರಿಗೆ ತಂದಿತು. ಬಿಜೆಪಿ ಇಂತಹ ಯೋಜನೆ ಜಾರಿ ಮಾಡಿದೆಯೇ? ಇಲ್ಲ. ಅವರು ಕೇವಲ ಟೀಕೆ ಮಾಡುತ್ತಾರೆ. ಟೀಕೆ ಮಾಡುವವರನ್ನು ತಡೆಯಲಾಗದು. ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ” ಎಂದರು.
ಜನರ ಋಣ ತೀರಿಸಲು ಸರ್ಕಾರದಿಂದ ಯೋಜನೆ:
“ರಾಜ್ಯ ಸರ್ಕಾರ ಕೇವಲ ಎರಡು ವರ್ಷದ ಸಂಭ್ರಮಾಚರಣೆ ಮಾಡುತ್ತಿಲ್ಲ. ಜನರಿಗೆ ‘ಭೂ ಗ್ಯಾರಂಟಿ’ ಯೋಜನೆ ಮೂಲಕ 1 ಕೋಟಿಗೂ ಹೆಚ್ಚು ಜನರಿಗೆ ಭೂ ದಾಖಲಾತಿ ಪತ್ರ ನೀಡಿ ಅವರ ಋಣ ತೀರಿಸುವ ಕೆಲಸ ಮಾಡುತ್ತಿದ್ದೇವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
“ನೂರು ವರ್ಷಗಳಲ್ಲಿ ಮಾಡಲಾಗದ ಕೆಲಸವನ್ನು ನಮ್ಮ ಸರ್ಕಾರ ಕಂದಾಯ ಇಲಾಖೆ ಮೂಲಕ ಮಾಡಿ, ಹೊಸ ಇತಿಹಾಸ ಬರೆಯುತ್ತಿದೆ. ಈ ಕಾರ್ಯಕ್ರಮದಲ್ಲಿ ಲೋಪದೋಷಗಳಿವೆಯೇ ಇಲ್ಲವೇ ಎಂದು ಅಧಿಕಾರಿಗಳ ಜತೆ ಭಾನುವಾರ ನಡೆಸಿದ ಸಭೆಯಲ್ಲಿ ಪರಿಶೀಲನೆ ಮಾಡಲಾಗಿದೆ. ಕಂದಾಯ ಇಲಾಖೆಯ ಮೂಲಕ ನೀಡುತ್ತಿರುವ ಈ ಭೂ ಗ್ಯಾರಂಟಿ ಇತಿಹಾಸದ ಪುಟ ಸೇರಲಿದೆ. ಪ್ರತಿಯೊಬ್ಬ ವ್ಯಕ್ತಿಗೂ ತಾನು ವಾಸವಿರುವ ಜಾಗವನ್ನು ತನ್ನದಾಗಿಸಿಕೊಳ್ಳುವ ಆಸೆ ಇರುತ್ತದೆ. ಪರಿಶಿಷ್ಟರು, ಹಿಂದುಳಿದವರು ಹಾಗೂ ಭೂರಹಿತವಾಗಿರುವವರು ಕಳೆದ ಹಲವು ವರ್ಷಗಳಿಂದ ದಾಖಲೆ ಇಲ್ಲದೆ ಮನೆ ಕಟ್ಟಿಕೊಂಡು ಪರದಾಡುತ್ತಿದ್ದರು. ಹೀಗಾಗಿ ನಮ್ಮ ಸರ್ಕಾರ ಇದಕ್ಕೆ ಪರಿಹಾರ ನೀಡಿದೆ” ಎಂದರು.
“ಬಿಜೆಪಿ ಸರ್ಕಾರ ಕಲಬುರ್ಗಿಯಲ್ಲಿ 20 ಕೋಟಿ ಖರ್ಚು ಮಾಡಿ ದಾಖಲೆ ನೀಡುತ್ತೇವೆ ಎಂದು ಕಾರ್ಯಕ್ರಮ ಮಾಡಿತ್ತಾದರೂ ಇದನ್ನು ಕಾರ್ಯರೂಪಕ್ಕೆ ಹೇಗೆ ತರಬೇಕು ಎಂದು ತಿಳಿಯದೇ ಯೋಜನೆ ಕೈಬಿಟ್ಟಿತ್ತು. ಸಚಿವ ಕೃಷ್ಣ ಭೈರೇಗೌಡರು ಹಾಗೂ ಅವರ ಅಧಿಕಾರಿಗಳ ತಂಡ ಅಧ್ಯಯನ ಮಾಡಿ ಇದಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. 4 ಸಾವಿರ ಅಡಿವರೆಗಿನ ಕಂದಾಯ ಅಥವಾ ಖಾಸಗಿ ಭೂಮಿಯಲ್ಲಿ ಅನೇಕ ವರ್ಷಗಳಿಂದ ವಾಸವಿರುವ ಜಾಗವನ್ನು ಸರ್ಕಾರದ ವಶಕ್ಕೆ ಪಡೆದು, ತಹಶೀಲ್ದಾರ್ ಅದರ ಮಾಲೀಕತ್ವರಾಗಿ, ನಂತರ ಅವರ ಮೂಲಕ ಉಪ ನೋಂದಣಿ ಕಚೇರಿಯಲ್ಲಿ ಕ್ರಯದ ರೂಪದಲ್ಲಿ ಜನರಿಗೆ ಈ ಭೂಮಿಯನ್ನು ಉಚಿತವಾಗಿ ನೀಡುವ ವ್ಯವಸ್ಥೆ ತರಲಾಗಿದೆ. 1,11,11,111 ಆಸ್ತಿ ದಾಖಲೆ ಸಿದ್ಧವಾಗಿದ್ದು, ಆಯಾ ತಾಲೂಕುಗಳಲ್ಲಿ ತಹಶೀಲ್ದಾರ್ ಅವರು ಆಸ್ತಿಯ ದಾಖಲೆ ನೀಡಲಿದ್ದಾರೆ. ಈ ರೀತಿ ದಾಖಲೆ ಪಡೆದ ಆಸ್ತಿಯನ್ನು ಯಾರೂ 15 ವರ್ಷಗಳ ಕಾಲ ಮಾರಾಟ ಮಾಡುವಂತಿಲ್ಲ. ಈ ದಾಖಲೆಗಳನ್ನು ತಹಶೀಲ್ದಾರ್ ಅವರು ನೋಂದಣಿ ಮಾಡಿ ಆಸ್ತಿ ಮಾಲೀಕರಿಗೆ ನೀಡುತ್ತಿದ್ದಾರೆ. ಪಿಡಿಒ ಇಲಾಖೆ ಜತೆಗೂಡಿ ಖಾತೆ ಮಾಡಿಸಿಕೊಡಲಾಗುವುದು. ಇದಕ್ಕೆ ನೀಡಬೇಕಾದ ಶುಲ್ಕ ಪಾವತಿಯನ್ನು ಮುಂದಕ್ಕೆ ಹಾಕಲಾಗಿದೆ” ಎಂದು ತಿಳಿಸಿದರು.
“ವಿಜಯನಗರ ಜಿಲ್ಲೆಯನ್ನು ಪೋಡಿ ಮುಕ್ತ ಜಿಲ್ಲೆಯನ್ನಾಗಿ ಮಾಡಿದ್ದು, 79 ಸಾವಿರ ರೈತರಿಗೆ ಪೋಡಿ ದಾಖಲೆ ನೀಡಲಾಗಿದೆ. ಇಡೀ ದೇಶಕ್ಕೆ ಇದು ಹೊಸ ಮಾದರಿ. ನಮ್ಮ ಸರ್ಕಾರ ಎರಡು ವರ್ಷ ಪೂರೈಸಿದ್ದು, ನಾವು ಕೇವಲ ಸಂಭ್ರಮಾಚರಣೆ ಮಾಡಲು ಈ ಕಾರ್ಯಕ್ರಮ ಮಾಡುತ್ತಿಲ್ಲ. ಜನರು ನಮಗೆ ಕೊಟ್ಟ ಅವಕಾಶ, ಆಶೀರ್ವಾದಕ್ಕೆ ಋಣ ತೀರಿಸಲು ಈ ಕಾರ್ಯಕ್ರಮ ಮಾಡುತ್ತಿದ್ದೇವೆ. ನಾವು ಕೇವಲ ಗ್ಯಾರಂಟಿ ಯೋಜನೆಗಳ ಮೇಲೆ, ಭಾವನೆಗಳ ಮೇಲೆ ರಾಜಕಾರಣ ಮಾಡುತ್ತಿಲ್ಲ. ಜನರ ಬದುಕು ಕಟ್ಟಿಕೊಟ್ಟು ರಾಜಕಾರಣ ಮಾಡುತ್ತಿದ್ದೇವೆ” ಎಂದು ಹೇಳಿದರು.
ಇಂದಿರಾಗಾಂಧಿ ಪುತ್ಥಳಿ ಅನಾವರಣ:
“ಈ ಕಾರ್ಯಕ್ರಮಕ್ಕೆ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಅವರು ಆಗಮಿಸಲಿದ್ದಾರೆ. ನಮ್ಮ ಸರ್ಕಾರದ ಮಂತ್ರಿಗಳು ಶಾಸಕರು ಭಾಗವಹಿಸಲಿದ್ದಾರೆ. ವಿರೋಧ ಪಕ್ಷದ ಶಾಸಕರಿಗೂ ಗೌರವಯುತ ಆಹ್ವಾನ ನೀಡಲಾಗಿದೆ. ಮುಖ್ಯಮಂತ್ರಿಗಳೇ ಖುದ್ದಾಗಿ ವಿರೋಧ ಪಕ್ಷದ ನಾಯಕರಿಗೆ ಆಹ್ವಾನ ನೀಡಿದ್ದಾರೆ. ಇಂದಿರಾಗಾಂಧಿ ಅವರು ಈ ಪುಣ್ಯ ಭೂಮಿಯಲ್ಲಿ ಬಂದು ಭಾಷಣ ಮಾಡಿದ್ದರು. ನಮ್ಮ ಜಿಲ್ಲಾ ಉಸ್ತುವಾರಿ ಸಚಿವರು ಇಂದಿರಾ ಗಾಂಧಿ ಅವರ ಪುತ್ಥಳಿ ನಿರ್ಮಿಸಿದ್ದಾರೆ. ಇದನ್ನು ಸಹ ಅನಾವರಣ ಮಾಡಲಾಗುವುದು” ಎಂದು ತಿಳಿಸಿದರು.