ಆಲಮಟ್ಟಿ ಅಣೆಕಟ್ಟು ಎತ್ತರ 524 ಮೀಟರ್ ಗೆ ಎತ್ತರಿಸಲು ಸಂಕಲ್ಪ: ಡಿಸಿಎಂ ಡಿ.ಕೆ. ಶಿವಕುಮಾರ್

RELATED POSTS

ವಿಜಯಪುರ(www.thenewzmirror.com):ಆಲಮಟ್ಟಿ ಅಣೆಕಟ್ಟಿನ ಎತ್ತರವನ್ನು 524 ಮೀಟರ್ ಗೆ ಎತ್ತರಿಸಲು ನಮ್ಮ ಸರ್ಕಾರ ಸಂಕಲ್ಪ ಮಾಡಿದ್ದು,ಈ ಸಂಬಂಧ ಅಧಿಸೂಚನೆ ಹೊರಡಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕುತ್ತಿದ್ದೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ವಿಜಯಪುರ ಜಿಲ್ಲೆಯ ಕೊಲ್ಹಾರದಲ್ಲಿ ನಾನಾ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನು ನೆರವೇರಿಸಿ ಮಾತನಾಡಿದ ಅವರು,”ಆಲಮಟ್ಟಿ ಅಣೆಕಟ್ಟಿನ ಎತ್ತರವನ್ನು 524 ಮೀಟರ್ ಗೆ ಎತ್ತರಿಸಲು ನಮ್ಮ ಸರ್ಕಾರ ಸಂಕಲ್ಪ ಮಾಡಿದೆ. ಈ ವಿಚಾರವಾಗಿ ಶಾಸಕರ ಜತೆ ಚರ್ಚೆ ಮಾಡಿದ್ದು, ಭೂಸ್ವಾಧೀನ ಪ್ರಕ್ರಿಯೆ ಮುಂದುವರಿಸಲು ತೀರ್ಮಾನಿಸಿದ್ದೇವೆ. ಇತ್ತೀಚೆಗೆ ನಾನು ಹಾಗೂ ಸಿಎಂ ಕೇಂದ್ರದ ಮಂತ್ರಿಗಳನ್ನು ಭೇಟಿ ಮಾಡಿ ಈ ಬಗ್ಗೆ ಅಧಿಸೂಚನೆ ಹೊರಡಿಸಲು ಒತ್ತಡ ಹಾಕಿದ್ದೇವೆ. ಇದಕ್ಕಾಗಿ ಕೇಂದ್ರ ಸಚಿವರು ಸಭೆಯನ್ನು ಕರೆದಿದ್ದರು. ಆದರೆ ಕಾರಣಾಂತರಗಳಿಂದ ಅದನ್ನು ಮುಂದಕ್ಕೆ ಹಾಕಲಾಗಿದೆ” ಎಂದು ಮಾಹಿತಿ ನೀಡಿದರು.

“ಮಂಡ್ಯ ನಂತರ ಈ ಭಾಗದ ಜಿಲ್ಲೆಗಳು ಸಕ್ಕರೆ ನಾಡಾಗಿ ಮಾರ್ಪಟ್ಟಿವೆ. ಈ ಭಾಗದ ರೈತರ ಬದುಕು ಹಸನಾಗಿಸಲು ನಾವು ಬದ್ಧರಾಗಿದ್ದೇವೆ. ಈ ಭಾಗದಲ್ಲಿ ಕಾರ್ಖಾನೆಗಳು ಆರಂಭವಾಗಿ, ಉದ್ಯೋಗಗಳು ಸೃಷ್ಟಿಯಾಗುತ್ತಿವೆ” ಎಂದರು.

“ಬಿಜೆಪಿ ಸರ್ಕಾರದ ಅವಧಿಯಲ್ಲಿ ನೀವೆಲ್ಲರೂ ಬೆಲೆ ಏರಿಕೆ ಸೇರಿದಂತೆ ಅನೇಕ ಸಮಸ್ಯೆಗಳಿಂದ ತತ್ತರಿಸಿದ್ದೀರಿ. ನಿಮಗೆ ಸಹಾಯ ಮಾಡಲು ಗ್ಯಾರಂಟಿ ಯೋಜನೆ ತರಲಾಗಿದೆ. ಬಡ ಕುಟುಂಬದ ಮಹಿಳೆಗೆ 2 ಸಾವಿರ, 200 ಯೂನಿಟ್ ವರೆಗೂ ಉಚಿತ ವಿದ್ಯುತ್, ಉಚಿತ ಬಸ್ ಪ್ರಯಾಣ, 10 ಕೆ.ಜಿ ಅಕ್ಕಿ, ನಿರುದ್ಯೋಗ ಭತ್ಯೆ ನೀಡಿದ್ದೇವೆ. ಆ ಮೂಲಕ ಬಸವಣ್ಣನವರ ಮಾರ್ಗದರ್ಶನದಂತೆ ನುಡಿದಂತೆ ನಡೆದಿದ್ದೇವೆ. ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ” ಎಂದು ಹೇಳಿದರು. 

“ವಿರೋಧ ಪಕ್ಷದವರು ಅಭಿವೃದ್ಧಿ ಆಗಿಲ್ಲ ಎಂದು ಟೀಕೆ ಮಾಡುತ್ತಿದ್ದಾರೆ.  ನಾವು ಈ ಭಾಗದ ಅಭಿವೃದ್ಧಿಗೆ ಅನೇಕ ಕಾರ್ಯಕ್ರಮ ರೂಪಿಸಿದ್ದೇವೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಪ್ರತಿ ವರ್ಷ 5 ಸಾವಿರ ಕೋಟಿ, ಬೀದರ್ ಜಿಲ್ಲೆಯ ಅಭಿವೃದ್ಧಿಗೆ ₹ 2025 ಕೋಟಿ ಮೊತ್ತದ ವಿವಿಧ ಯೋಜನೆಗೆ ಚಾಲನೆ ನೀಡಿದ್ದೇವೆ. ಈ ಭಾಗದಲ್ಲಿ ಈ ವರ್ಷ ಎರಡನೇ ಬೆಳೆಗೆ ನೀರನ್ನು ಕೊಟ್ಟಿದ್ದೇವೆ.ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸುವುದು ಈ ಸರ್ಕಾರದ ಸಂಕಲ್ಪ. ಇದನ್ನು ರಾಷ್ಟ್ರೀಯ ಯೋಜನೆ ಮಾಡಬೇಕು ಎಂದು ನಮ್ಮ ಸರ್ಕಾರ ಒತ್ತಡ ಹಾಕುತ್ತಿದೆ” ಎಂದು ತಿಳಿಸಿದರು.

“ಬಿಜೆಪಿ ಸರ್ಕಾರ ತಾನು ಕೊಟ್ಟ ಮಾತನ್ನು ಉಳಿಸಿಕೊಳ್ಳಲಿಲ್ಲ. ಭದ್ರಾ ಮೇಲ್ದಂಡೆ ಯೋಜನೆಗೆ ಬಜೆಟ್ ನಲ್ಲಿ ಘೋಷಿಸಿದ ರೂ.5,300 ಕೋಟಿ ಅನುದಾನವನ್ನು ನೀಡಲಿಲ್ಲ. ನೀರಾವರಿ ಯೋಜನೆಗಳಿಗೆ ಸಹಾಯ ಮಾಡಲಿಲ್ಲ. ಆದರೂ ನಮ್ಮ ರಾಜ್ಯದ ಅಭಿವೃದ್ಧಿ ನಿಮ್ಮ ಸರ್ಕಾರದ ಗುರಿ. ನಮ್ಮ ಸರ್ಕಾರ 2 ವರ್ಷ ಪೂರೈಸಿದ ಸಂದರ್ಭದಲ್ಲಿ 1,11,111 ಕುಟುಂಬಗಳ ಜಮೀನಿಗೆ ಪಟ್ಟಾ ಖಾತೆ ನೀಡಿ ಭೂ ಗ್ಯಾರಂಟಿ ಯೋಜನೆ ನೀಡಿದ್ದೇವೆ” ಎಂದು ಹೇಳಿದರು.

“ಮುಂದಿನ ಮೂರು ವರ್ಷಗಳ ನಂತರ ನಡೆಯಲಿರುವ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ. ಶಿವಾನಂದ ಪಾಟೀಲ್ ಅವರು ವಹಿಸಿಕೊಂಡಿರುವ ಇಲಾಖೆಗಳನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಅವರು ಉಸ್ತುವಾರಿ ಹೊತ್ತಿರುವ ಹಾವೇರಿ ಜಿಲ್ಲೆಯಲ್ಲಿ ನಡೆದ ಉಪಚುನಾವಣೆಯಲ್ಲಿ ಮಾಜಿ ಸಿಎಂ ಬೊಮ್ಮಾಯಿ ಅವರ ಸುಪುತ್ರನ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಶಿವಾನಂದ ಪಾಟೀಲ್ ಅವರ ನೇತೃತ್ವದಲ್ಲಿ ಅನೇಕ ಕೆಲಸಗಳು ನಡೆಯುತ್ತಿವೆ” ಎಂದು ತಿಳಿಸಿದರು.

“ಬಂಜಾರ ಸಮುದಾಯ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ. ನಿಮ್ಮ ನೋವು ನಮಗೆ ಅರ್ಥವಾಗುತ್ತದೆ. ನೀವು ಯಾವುದೇ ಅಪಪ್ರಚಾರಕ್ಕೆ ಈಡಾಗಬೇಡಿ. ರಾಜ್ಯದಲ್ಲಿ ಬಲಿಷ್ಠ ಸರ್ಕಾರ ಅಧಿಕಾರದಲ್ಲಿದೆ. ಎಲ್ಲಾ ಸಮಾಜಕ್ಕೂ ನ್ಯಾಯವನ್ನು ಒದಗಿಸುವ ಕೆಲಸವನ್ನು ನಾವು ಮಾಡುತ್ತೇವೆ. ಎಲ್ಲರಿಗೂ ಸಮಾನತೆ ಶಕ್ತಿ ತುಂಬುವ ಕೆಲಸ ಮಾಡುತ್ತೇವೆ. ಹೀಗಾಗಿ ಯಾರೂ ಚಿಂತಿಸುವ ಅಗತ್ಯವಿಲ್ಲ” ಎಂದು ಭರವಸೆ ತುಂಬಿದರು.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist