ಬೆಂಗಳೂರು(www.thenewzmirror.com): ಲಲಿತಕಲಾ ಅಕಾಡೆಮಿ ಹೆಸರು ಬದಲಾಯಿಸಲು ನಮ್ಮ ವಿರೋಧ ಇಲ್ಲ ಆದರೆ ಅಕಾಡೆಮಿ ಹಾಗೂ ಸದಸ್ಯರು ಒಂದು ಒಕ್ಕೊರಲಿನ ಹೆಸರು ಶಿಫಾರಸು ಮಾಡಿದರೆ, ಮುಖ್ಯಮಂತ್ರಿಗಳ ಗಮನಕ್ಕೆ ತಂದು ಹೆಸರು ಬದಲಾಯಿಸಲಾಗುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ಎಸ್.ತಂಗಡಗಿ ಅವರು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಲಲಿತಕಲಾ ಅಕಾಡೆಮಿ ವತಿಯಿಂದ ಆಯೋಜಿಸಿದ್ದ ಗೌರವ ಪ್ರಶಸ್ತಿ, ವರ್ಣಶ್ರೀ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು,ಸಾವಿರ ಪದಗಳಲ್ಲಿ ಹೇಳಲಾಗದ್ದನ್ನು ಒಂದು ಚಿತ್ರ ಸರಳವಾಗಿ ಹೇಳುತ್ತದೆ. ಹೀಗಾಗಿ ಚಿತ್ರ ಕಲೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಕಲೆಗಳು ಸಂಪೂರ್ಣ ಚಿತ್ರಣ ಕಟ್ಟಿಕೊಡುವ ಶಕ್ತಿ ಹೊಂದಿವೆ ಎಂದರು.
ಒಂದು ನಾಡಿನ ಅಭಿವೃದ್ಧಿಗೆ ಕಲೆ, ಸಂಸ್ಕೃತಿ ಮತ್ತು ಸಾಹಿತ್ಯಗಳು ಆತ್ಮವಿದ್ದಂತೆ. ಕಲೆ, ಸಂಸ್ಕೃತಿಗೆ ನಮ್ಮ ಸರ್ಕಾರ ನಿರಂತರವಾಗಿ ಪ್ರೋತ್ಸಾಹ ನೀಡುತ್ತಿದೆ. ನಮ್ಮ ಕನ್ನಡದ ಅದ್ಭುತ ಮತ್ತು ಶ್ರೀಮಂತ ಲಲಿತಕಲೆಗಳ ಪರಂಪರೆಯನ್ನು ಉಳಿಸಿ, ಬೆಳೆಸುವ ಉದ್ದೇಶದೊಂದಿಗೆ 1961ರಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿಯು ಬೆಂಗಳೂರಿನಲ್ಲಿ ಅಸ್ತಿತ್ವಕ್ಕೆ ಬಂದಿತು. ರಾಜ್ಯ ಸರ್ಕಾರ ಲಲಿತಕಲಾ ಅಕಾಡೆಮಿಯನ್ನು ಅಧಿಕೃತವಾಗಿ ಸ್ಥಾಪಿಸಿ, ಎಸ್.ಆರ್.ಕಂಠಿ ಅವರು ಇದರ ಮೊದಲ ಅಧ್ಯಕ್ಷರಾಗಿದ್ದರು ಎಂದು ಸಚಿವರು ನೆನೆದರು.
ಅಕಾಡೆಮಿಗಳಿಗೆ ಒಂದು ಕೋಟಿ ಅನುದಾನ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ 14 ಅಕಾಡೆಮಿಗಳು ಕಾರ್ಯ ನಿರ್ವಹಿಸುತ್ತಿದ್ದು, ಪ್ರತಿಯೊಂದು ಅಕಾಡೆಮಿಗಳಿಗೂ ಒಂದು ಕೋಟಿ ಅನುದಾವನ್ನು ನೀಡಲು ಕ್ರಮಕೈಗೊಳ್ಳಲಾಗಿದೆ ಎಂದರು.
ಹಿಂದಿನ ಸರ್ಕಾರ ಅಕಾಡೆಮಿ ಮತ್ತು ಪ್ರಾಧಿಕಾರಿಗಳಿಗೆ ಅಧ್ಯಕ್ಷರು ಹಾಗೂ ನಿರ್ದೇಶಕರನ್ನು ನೇಮಕ ಮಾಡದೆ ಹಾಗೆಯೇ ಕೈ ಬಿಟ್ಟಿತ್ತು. ನಾವು ಅಧಿಕಾರಕ್ಕೆ ಬಂದ ಕೂಡಲೇ ಅಕಾಡೆಮಿ ಮತ್ತು ಪ್ರಾಧಿಕಾರಗಳಿಗೆ ನೇಮಕ ಮಾಡಲಾಗಿದೆ. ಪರಿಣಾಮ ಕಾರ್ಯ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿವೆ ಎಂದು ತಿಳಿಸಿದರು.
ಒಕ್ಕೊರಲಿನ ಹೆಸರು ನೀಡಿದ್ರೆ ನಮ್ಮ ಸಮ್ಮತ:
ಲಲಿತಕಲಾ ಅಕಾಡೆಮಿಯ ಹೆಸರನ್ನು ಬದಲಾಯಿಸುವಂತೆ ಅಕಾಡೆಮಿಯ ಅಧ್ಯಕ್ಷರು ಹಾಗೂ ಹಿರಿಯ ಕಲಾವಿದರು ವೇದಿಯಲ್ಲಿ ಸಚಿವರಿಗೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಹೆಸರು ಬದಲಾಯಿಸಲು ನಮ್ಮ ವಿರೋಧ ಇಲ್ಲ. ಅಕಾಡೆಮಿ ಹಾಗೂ ಸದಸ್ಯರು ಒಂದು ಒಕ್ಕೊರಲಿನ ಹೆಸರು ಶಿಫಾರಸು ಮಾಡಿದರೆ, ಮುಖ್ಯಮಂತ್ರಿಗಳ ಗಮನಕ್ಕೆ ತಂದು ಕ್ರಮ ಕೈಗೊಳ್ಳಲಾಗುವುದು ಎಂದರು.
ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಮಾತನಾಡಿ, ಅಕ್ಷರ ಲಿಪಿ ಹುಟ್ಟುವುದಕ್ಕೂ ಮುನ್ನವೇ ಚಿತ್ರಲಿಪಿ ಹುಟ್ಟಿತ್ತು. ಚಿತ್ರಕಲೆಗೆ ಇರುವ ಶಕ್ತಿಯನ್ನು ಹೇಳತೀರದು ಎಂದರು.
ಬಣ್ಣಕ್ಕೆ ಅದರದ್ದೆ ಆದ ಭಾವ ಇರುತ್ತದೆ. ಸಾಹಿತ್ಯಕ್ಕೂ ಮತ್ತು ಚಿತ್ರಕಲೆಗೂ ಸಂಬಂಧವಿದೆ. ನಾವು ಯಾವುದೇ ಪುಸ್ತಕ ರಚಿಸಿದರೂ ಅದಕ್ಕೆ ಮುಖಪುಟವನ್ನು ಚಿತ್ರದ ಮೂಲಕ ಸಿದ್ಧಪಡಿಸಬೇಕಾಗುತ್ತದೆ. ಚಿತ್ರಗಳ ಮೂಲಕವೇ ಕಥೆಯನ್ನು ಹೇಳಲಾಗುತ್ತದೆ. ಪಠ್ಯ ಪುಸ್ತಕದಲ್ಲಿ ಚಿತ್ರಕಲೆಯ ಮಹತ್ವ ಹೆಚ್ಚಿದೆ. ಯಾವುದೇ ಒಂದು ಪುಸ್ತಕ ತೆಗೆದುಕೊಳ್ಳಿ ಅದಕ್ಕೆ ಛಾಯಚಿತ್ರ ಬೇಕೇ ಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಲಲಿತಾಕಲಾ ಅಕಾಡೆಮಿ ಅಧ್ಯಕ್ಷ ಪ.ಸ.ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ವೆಂಕಟೇಶ್, ಇಲಾಖೆ ನಿರ್ದೇಶಕಿ ಕೆ.ಎಂ.ಗಾಯಿತ್ರಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಗೌರವ ಪ್ರಶಸ್ತಿ: ಬಿ.ಪಿ.ಕಾರ್ತಿಕ್, ಕಮಲ್ ಅಹ್ಮದ್ ಎಂ, ಸಿ.ಎಸ್.ನಿರ್ಮಲಾ ಕುಮಾರಿ ಅವರಿಗೆ 2022-23ನೇ ಸಾಲಿನ ಗೌರವ ಪ್ರಶಸ್ತಿ ಹಾಗೂ ನಿಜಲಿಂಗಪ್ಪ ಬ.ಹಾಲ್ವಿ, ಡಾ.ವಿಠಲರಡ್ಡಿ ಫ.ಚುಳಕಿ ಹಾಗೂ ಹೆಚ್. ಬಾಬುರಾವ್ ಅವರಿಗೆ 2023-24ನೇ ಸಾಲಿನ ಗೌರವ ಪ್ರಶಸ್ತಿ ಪ್ರದಾನ ಮಾಡಲಾಯಿತು.
ವರ್ಣಶ್ರೀ ಪ್ರಶಸ್ತಿ: ವೀಣಾಶ್ರೀನಿವಾಸ್, ಪರಮೇಶ್ ಡಿ.ಜೋಳದ, ಪಿ.ಎ.ಬಿ.ಈಶ್ವರ್, ಕೂಡಲಯ್ಯ ಹಿರೇಮಠ, ಅಶೋಕ್ ಕಲಶೆಟ್ಟಿ, ನಂದಬಸಪ್ಪ ವಾಡೆ, ಕೆ.ಜಿ.ಲಿಂಗದೇವರು, ಬಿ.ಎಲ್.ಮಹೇಶ್, ಶಂಕುತಲಾ ವರ್ಣೇಕರ್, ಮಂಜುನಾಥ ಗೋವಿಂದವಾಡ ಅವರಿಗೆ 2021-22ನೇ ಸಾಲಿನ ಪ್ರಶಸ್ತಿ ಹಾಗೂ ಪ್ರಕಾಶ್ ಜಿ.ನಾಯಕ್, ಬಸವರಾಜ ಸಿ.ಕುತ್ನಿ, ಜಗದೀಶ್ ಎಂ.ಕಾಂಬಳೆ, ಟಿ.ಎಸ್.ಜಯದೇವಣ್ಣ, ಶ್ರೀಶೈಲ ಎಸ್.ಧೋತ್ರೆ, ಎ.ಮಹದೇವಸ್ವಾಮಿ, ಮೀನಾಕ್ಷಿ ಸದಲಗಿ, ಕೆ.ಎಂ.ರವೀಶ್, ಎಫ್.ವಿ.ಚಿಕ್ಕಮಠ, ಸೈಯದ್ ಆಸೀಫ್ ಅಲಿ ಅವರಿಗೆ 2022-23ನೇ ಸಾಲಿನ ಪ್ರಶಸ್ತಿ ನೀಡಿ ಗೌರವಿಸಲಾಯಿತು.