ಗ್ಯಾರಂಟಿ ಯೋಜನೆಗಳನ್ನು ಬಂದ್ ಮಾಡುವ ಧೈರ್ಯ ಬಿಜೆಪಿಯವರಿಗಿಲ್ಲ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

RELATED POSTS

ಚಿಕ್ಕಮಗಳೂರು(www.thenewzmirror.com): ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಶಕ್ತಿ ಕೊಡುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಮಹಿಳೆಯರು ಹಾಗೂ‌ ಬಡವರ ಮೇಲೆ ಕಾಳಜಿ ಹೊಂದಿರುವ ಪಕ್ಷ ಕಾಂಗ್ರೆಸ್ ಆಗಿದ್ದು,ನಮ್ಮಪಂಚ ಗ್ಯಾರಂಟಿ ಯೋಜನೆಗಳಿಂದ ನಾಡಿನ ಜನತೆಯ ಬದುಕು ಸಂಜೀವಿನಿಯಾಗಿದೆ ಹಾಗಾಗಿ ಗ್ಯಾರಂಟಿ ಯೋಜನೆಗಳನ್ನು ಬಂದ್ ಮಾಡುವ ಧೈರ್ಯ ಬಿಜೆಪಿಯವರಿಗಿಲ್ಲ, ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು. ‌

ಚಿಕ್ಕಮಗಳೂರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ವತಿಯಿಂದ ಕುವೆಂಪು ಕಲಾಮಂದಿರದಲ್ಲಿ ಶನಿವಾರ ನಡೆದ ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶದಲ್ಲಿ ಮಾತನಾಡಿದ ಸಚಿವರು, ಚುನಾವಣೆ ಪೂರ್ವ ರಾಜ್ಯದ ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ. ಕೊರೋನಾ ಬಂದು ಹೋದ ಮೇಲೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿತು, ರೈತರು ಉಪಯೋಗಿಸುವ ರಸಗೊಬ್ಬರ, ಸಿಲಿಂಡರ್, ದಿನ ಬಳಕೆ ವಸ್ತುಗಳನ್ನು ಕೊಂಡುಕೊಳ್ಳುವುದೇ ದುಸ್ತರವಾಗಿತ್ತು.‌ ಗೃಹಲಕ್ಷ್ಮಿ ಯೋಜನೆಯ ಮೂಲಕ ನೀಡುವ ಎರಡು ಸಾವಿರ ರೂಪಾಯಿ ಎಷ್ಟೋ ಕುಟುಂಬಗಳಿಗೆ ಅನುಕೂಲವಾಗಿದೆ ಎಂದು ಸಚಿವರು ಹೇಳಿದರು. 

ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ರಾಜ್ಯದ ಸಿಎಂ ಹಾಗೂ  ಡಿಸಿಎಂ ಯಜಮಾನಿಯರು ಅಂತ ಹೆಸರಿಟ್ಟರು. ಈಗಾಗಲೇ 19 ತಿಂಗಳ ಹಣ ಫಲಾನುಭವಿಗಳಿಗೆ ತಲುಪಿದೆ. ಜನರಿಗೆ ಆಶ್ರಯ‌ ನೀಡಿದ್ದು, ಆಸ್ಪತ್ರೆ, ಸ್ಕೂಲ್‌, ಅಂಗನವಾಡಿ ಆರಂಭಿಸಿದ್ದು ಕಾಂಗ್ರೆಸ್ ಸರ್ಕಾರಗಳು. ಬಡವರಿಗಾಗಿ ಸಾಕಷ್ಟು ಯೋಜನೆಗಳನ್ನು ರೂಪಿಸಿದ್ದೇ ಕಾಂಗ್ರೆಸ್ ಎಂದು ಹೇಳಿದರು. 

ರಾಜಕೀಯವಾಗಿ ಇಂದಿರಾಗಾಂಧಿ ಅವರಿಗೆ ಪುನರ್ಜನ್ಮ ನೀಡಿದ್ದು ಚಿಕ್ಕಮಗಳೂರು ಜಿಲ್ಲೆ, ಐವತ್ತು ವರ್ಷಗಳ ಹಿಂದೆ ಅಂಗನವಾಡಿ ಆರಂಭಿಸಿದ್ದು ಕಾಂಗ್ರೆಸ್ ಸರ್ಕಾರ. ಇದೇ ವರ್ಷದ ಅಕ್ಟೋಬರ್ ತಿಂಗಳಲ್ಲಿ ಬೆಂಗಳೂರು ಅಥವಾ ಮೈಸೂರಿನಲ್ಲಿ ಅದ್ದೂರಿಯಾಗಿ ಸುವರ್ಣ ಮಹೋತ್ಸವ ಮಾಡಲಾಗುವುದು ಎಂದರು.  

ಜನರ ಅಭಿವೃದ್ಧಿಗಾಗಿ ಗೃಹಲಕ್ಷ್ಮಿ ಯೋಜನೆಯ ಮೂಲಕ ಪ್ರತಿ ತಿಂಗಳು ಎರಡು ಸಾವಿರ ರೂಪಾಯಿ ಹಾಕಲಾಗುತ್ತಿದೆ. ನೇರವಾಗಿ ಎರಡು ಸಾವಿರ ರೂ ಜನರಿಗೆ ತಲುಪುತ್ತಿದೆ, ಗ್ಯಾರಂಟಿ ಹೆಸರನ್ನು ಕೆಡಿಸಲು ವಿರೋಧ ಪಕ್ಷಗಳಿಂದ ಅಪಪ್ರಚಾರ ನಡೆಯಿತು. ಗ್ಯಾರಂಟಿ ಯೋಜನೆಗಳನ್ನು ಬಂದ್ ಮಾಡುವ ಧೈರ್ಯ ಬಿಜೆಪಿಯವರಿಗಿಲ್ಲ, ಇದೇ ಬಿಜೆಪಿಯವರು ಮಹಾರಾಷ್ಟ್ರ, ದೆಹಲಿ,‌ ಯುಪಿಯಲ್ಲಿ ನಮ್ಮ ಯೋಜನೆಗಳನ್ನು ನಕಲು ಮಾಡುತ್ತಿದ್ದಾರೆ ಆದರೂ ಮಹಾರಾಷ್ಟ್ರದಲ್ಲಿ ಇದುವರೆಗೂ ಒಂದು ಕಂತಿನ‌ ಲಾಡ್ಲಿ ಬೆಹನ್ ಯೋಜನೆಯ ಹಣ ಕೊಟ್ಟಿಲ್ಲ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು. 

ಚಿಕ್ಕಮಗಳೂರು ಜಿಲ್ಲೆಯಲ್ಲಿ ನೂತನವಾಗಿ 160 ಅಂಗನವಾಡಿ ಶಿಕ್ಷಕಿಯರ ನೇಮಕ ಮಾಡಲಾಗಿದ್ದು, ಸಂಪೂರ್ಣ ಅಧಿಕಾರಿಗಳಿಂದ ನೇಮಕ ಮಾಡಲಾಗಿದೆ. ಜಿಲ್ಲೆಯಲ್ಲಿ ಶೀಘ್ರದಲ್ಲೇ 130 ಅಂಗನವಾಡಿ ಕೇಂದ್ರಗಳಲ್ಲಿ ಪೂರ್ವ ಪ್ರಾಥಮಿಕ ತರಗತಿ ಆರಂಭಿಸಲಾಗುವುದು. ಊಟದ ಜೊತೆ ಉತ್ತಮ ಶಿಕ್ಷಣ ನೀಡುವುದೇ ನಮ್ಮ ಉದ್ದೇಶ ಎಂದರು. 

ಈ ವೇಳೆ ಚಿಕ್ಕಮಗಳೂರು ಕ್ಷೇತ್ರದ ಶಾಸಕರಾದ ಎಚ್.ಡಿ.ತಮ್ಮಯ್ಯ, ರಾಜೇಗೌಡ, ನಯನಾ ಮೋಟಮ್ಮ, ಕರ್ನಾಟಕ ರಾಜ್ಯ ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮದ ಅಧ್ಯಕ್ಷರಾದ ಬಿ.ಎಚ್.ಹರೀಶ್, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಎಂ.ಸಿ.ಶಿವಾನಂದಸ್ವಾಮಿ, ಜಿಲ್ಲಾಧಿಕಾರಿ ಮೀನಾ ನಾಗರಾಜ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಕೀರ್ತನಾ, ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ್ ಅಮಟೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist