ಕೊಪ್ಪಳ(www.thenewzmirror.com): ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳ ಮಹಾಪೂರವೇ ಹರಿದುಬಂದಿದ್ದು ಹಲವು ನೂತನ ಬಸ್ ನಿಲ್ದಾಣ, ಸಿಬ್ಬಂದಿಗಳ ವಸತಿಗೃಹ, ಘಟಕಗಳಿಗೆ ಶಂಕು ಸ್ಥಾಪನೆ ಮತ್ತು ಉದ್ಘಾಟನೆಯನ್ನು ನೆರವೇರಿಸಲಾಗಿದೆ.
ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಬೇವೂರಿನಲ್ಲಿ 1 ಎಕರೆ ವಿಸ್ತೀರ್ಣದಲ್ಲಿ ತಲೆ ಎತ್ತಲಿರುವ 450 ಲಕ್ಷಗಳ ವೆಚ್ಚದ ಬಸ್ ನಿಲ್ದಾಣದ ಶಂಕುಸ್ಥಾಪನೆ ಹಾಗೂ ಯಲಬುರ್ಗಾ ತಾಲ್ಲೂಕಿನ ಹಿರೇವಂಕಲಕುಂಟಾ ಗ್ರಾಮದಲ್ಲಿ 1 ಎಕರೆ ವಿಸ್ತೀರ್ಣದಲ್ಲಿ 300 ಲಕ್ಷಗಳ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಬಸ್ ನಿಲ್ದಾಣದ ಶಂಕು ಸ್ಥಾಪನೆಯನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನೆರವೇರಿಸಿದರು.
ವಿಜಯಪುರ ಜಿಲ್ಲೆಯ ನಾಗಠಾಣದಲ್ಲಿ 10 ಗುಂಟೆ ವಿಸ್ತೀರ್ಣದಲ್ಲಿ ರೂ.150 ಲಕ್ಷಗಳ ವೆಚ್ಚದಲ್ಲಿ ನಿರ್ಮಿಸಲಾದ ನೂತನ ಬಸ್ ನಿಲ್ದಾಣದ ಉದ್ಘಾಟನೆ ಹಾಗೂ ದೇವರ ಹಿಪ್ಪರಗಿಯಲ್ಲಿ 1.16 ಎಕರೆ ಪ್ರದೇಶದಲ್ಲಿ ಅಂದಾಜು ರೂ.400 ಲಕ್ಷಗಳ ವೆಚ್ಚದಲ್ಲಿ ನಿರ್ಮಿಸಲಾದ ನೂತನ ಬಸ್ ನಿಲ್ದಾಣದ ಉದ್ಘಾಟನೆ
ಮತ್ತು ಸಿಂದಗಿ ಘಟಕದ ಪಕ್ಕದಲ್ಲಿ ಸಿಬ್ಬಂದಿಗಳಿಗಾಗಿ 3.8 ಎಕರೆ ಪ್ರದೇಶದಲ್ಲಿ ಅಂದಾಜು ರೂ.250 ಲಕ್ಷಗಳ ವೆಚ್ಚದಲ್ಲಿ ನಿರ್ಮಿಸಲಾದ ನೂತನ ವಸತಿ ಗೃಹಗಳ ಉದ್ಘಾಟನೆ ನೆರವೇರಿಸಿದರು.
ಸಿಂದಗಿ ಬಸ್ ನಿಲ್ದಾಣಕ್ಕೆ ಪೂಜ್ಯ ಶ್ರೀ ಚನ್ನವೀರ ಸ್ವಾಮಿಜಿ ಬಸ್ ನಿಲ್ದಾಣ ಎಂದು ನಾಮಕರಣ ಮಾಡಿದ್ದು, ರಾಯಚೂರು ಜಿಲ್ಲೆಯ ಸಿರವಾರದಲ್ಲಿ 1 ಎಕರೆ ಪ್ರದೇಶದಲ್ಲಿ ಅಂದಾಜು ರೂ.250 ಲಕ್ಷಗಳ ವೆಚ್ಚದಲ್ಲಿ ನಿರ್ಮಿಸಿದ ನೂತನ ಬಸ್ ನಿಲ್ದಾಣದ ಉದ್ಘಾಟನೆ, ಯಾದಗಿರಿ ಜಿಲ್ಲೆಯ ಗುರುಮಿಠಕಲ್ ತಾಲ್ಲೂಕಿನ ಮಾದ್ವಾರದಲ್ಲಿ 1.03 ಗುಂಟೆ ವಿಸ್ತೀರ್ಣದಲ್ಲಿ ರೂ.50 ಲಕ್ಷಗಳ ವೆಚ್ಚದಲ್ಲಿ ನಿರ್ಮಿಸಿದ ನೂತನ ಬಸ್ ನಿಲ್ದಾಣದ ಉದ್ಘಾಟನೆ ನೆರವೇರಿಸಲಾಯಿತು.

ಇಂಡಿ ತಾಲೂಕಿನ ಬಬಲಾದ ಗ್ರಾಮದ ಒಡಲ ಧನಿ ಸ್ವಹಸಹಾಯ ಸಂಘದ ಭುವನೇಶ್ವರಿ ಕಾಂಬಳೆ ಇವರ ಮಾರ್ಗದರ್ಶನದಲ್ಲಿ ಮಹಿಳಾ ಸ್ವಸಹಾಯ ಸಂಘವು ಸಾವಯವ ಶೇಂಗಾ ಹೋಳಿಗೆ, ರೊಟ್ಟಿ ಇತ್ಯಾದಿ ಗ್ರಾಮೀಣ ಆಹಾರ ಪದಾರ್ಥಗಳು ಮಾರಾಟ ಮಾಡುವ ಯೋಜನೆಗೆ ಸ್ಥಳೀಯವಾಗಿ ಹಿನ್ನಡೆಯಾಗಿದ್ದ ಸಮಯದಲ್ಲಿ, ರಾಜ್ಯ ಸರ್ಕಾರದ ಶಕ್ತಿ ಯೋಜನೆಯಿಂದ ಬೆಂಗಳೂರಿನಲ್ಲಿ ನಡೆಯುತ್ತಿರುವ ರಾಗಿ ಕಣಜ, ಸಾವಯವ ಸಂತೆ ಇತ್ಯಾದಿ ಗುಂಪುಗಳಲ್ಲಿ ತಮ್ಮ ಸಾವಯವ ಶೇಂಗಾ ಹೋಳಿಗೆ ಇತ್ಯಾದಿಗಳನ್ನು ಮಾರಾಟ ಮಾಡಲು ಪ್ರಯತ್ನಿಸಿ,ಇದರಿಂದ ಬೆಂಗಳೂರಿನಲ್ಲಿ ಅತಿಹೆಚ್ಚಿನ ಬೇಡಿಕೆ ಬಂದು ಲಕ್ಷ ಲಕ್ಷ ರೂಪಾಯಿಗಳ ಆದಾಯಗಳಿಸಿರುತ್ತಾರೆ. ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ಸಮಾರಂಭಕ್ಕೆ ಆಗಮಿಸಿದ ಸಾರಿಗೆ ಮತ್ತು ಮುಜರಾಯಿ ಸಚಿವರಿಗೆ ಒಡಲ ಧ್ವನಿ ಸಂಘದ ಮಹಿಳೆಯರು ಸನ್ಮಾನ ಮಾಡಿ ಶೇಂಗಾ ಹೋಳಿಗಳನ್ನು ನೀಡಿ ಗೌರವಿಸಿದರು ಮತ್ತು ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಆಗುತ್ತಿರುವ ಉಪಯೋಗದ ಕುರಿತು ಹಾಗೂ ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರು ವಲಸೆ ಹೋಗದೆ ಉದ್ಯೋಗ ಮಾಡುತ್ತಿರುವ ಕುರಿತ ಮಾಹಿತಿಯನ್ನು ಹಂಚಿಕೊಂಡರು. ಮಹಿಳೆಯರ ಸನ್ಮಾನವನ್ನು ಸ್ವೀಕರಿಸಿದ ಸಚಿವ ರಾಮಲಿಂಗಾರೆಡ್ಡಿ ಸರ್ಕಾರವು ಜಾರಿಗೆ ತಂದ ಶಕ್ತಿ ಯೋಜನೆಯ ಉಪಯೋಗ ಪಡೆಯುತ್ತಿರುವ ಈ ಮಹಿಳೆಯರ ಕಾರ್ಯವನ್ನು ಪ್ರಶಂಶಿಸಿದರು.
ಈ ಸಂದರ್ಭದಲ್ಲಿ ರಾಯರೆಡ್ಡಿ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು ಹಾಗೂ ಶಾಸಕರು ಯಲಬುರ್ಗಾ ಕ್ಷೇತ್ರ, ರಾಜಶೇಖರ ಬಸವರಾಜ ಹಿಟ್ನಾಳ್ ಸಂಸದರು ಕೊಪ್ಪಳ ಲೋಕಸಭಾ ಕ್ಷೇತ್ರ, ರಾಧಾಕೃಷ್ಣ ದೊಡ್ಡಮನಿ ಸಂಸದರು,ಕಲ್ಬುರ್ಗಿ ಕ್ಷೇತ್ರ, ವಿಠ್ಠಲ ಕಟಕದೊಂಡ ಶಾಸಕರು ನಾಗಠಾಣ ಕ್ಷೇತ್ರ, ಭೀಮನಗೌಡ ಪಾಟೀಲ ಶಾಸಕರು ದೇವರಹಿಪ್ಪರಗಿ ಕ್ಷೇತ್ರ, ಅಶೋಕ ಮನಗೂಳಿ, ಶಾಸಕರು ಸಿಂದಗಿ ಕ್ಷೇತ್ರ, ಜಿ ಹಂಪಯ್ಯ ನಾಯಕ ಶಾಸಕರು ಮಾನ್ವಿ ಕ್ಷೇತ್ರ, ಶರಣಗೌಡ ಕಂದಕೂರ ಶಾಸಕರು, ಗುರಮಠಕಲ್ ಕ್ಷೇತ್ರ, ಹಾಗೂ ರಾಚಪ್ಪ,
ಕ ಆ ಸೇ, ವ್ಯವಸ್ಥಾಪಕ ನಿರ್ದೇಶಕರು, ಕಕರಸಾ ನಿಗಮ ರವರು ಉಪಸ್ಥಿತರಿದ್ದರು.