ಬೆಂಗಳೂರು(www.thenewzmirror.com): ಎಂ.ಬಿ.ಎ ಕೋರ್ಸ್ ಪ್ರವೇಶ ಸಂದರ್ಭದಲ್ಲಿ ಹೆಚ್ಚುವರಿಯಾಗಿ ಸಂಗ್ರಹಿಸಿರುವ 88,310 ರೂಪಾಯಿ ಶುಲ್ಕವನ್ನು ಎರಡನೇ ವರ್ಷದ ಶುಲ್ಕಕ್ಕೆ ಹೊಂದಾಣಿಕೆ ಮಾಡಿಕೊಳ್ಳಲು ಶುಲ್ಕ ನಿಯಂತ್ರಣ ಸಮಿತಿ ಅಧ್ಯಕ್ಷ ನ್ಯಾಯಮೂರ್ತಿ ಬಿ.ಶ್ರೀನಿವಾಸಗೌಡ ಅವರು ವೆಂಕಟಗಿರಿಕೋಟೆಯ ರೀಜಿನಲ್ ಕಾಲೇಜ್ ಆಫ್ ಮ್ಯಾನೇಜ್ಮೆಂಟ್ ಸಂಸ್ಥೆಗೆ ಸೂಚಿಸಿದ್ದಾರೆ.
ವಿದ್ಯಾರ್ಥಿಗಳಾದ ಜೆ.ವೇಣು, ಆರ್.ಎಚ್.ಹೇಮಂತ್, ಎನ್.ದೀಪಕ ಎಂಬುವರು ಮೊದಲನೇ ವರ್ಷಕ್ಕೆ ಪ್ರವೇಶ ಪಡೆದಿದ್ದು, ನಿಗದಿಗಿಂತ ಹೆಚ್ಚು ಶುಲ್ಕ ವಸೂಲಿ ಮಾಡಿದ್ದಾರೆ ಎಂದು ಸಮಿತಿಗೆ ದೂರು ನೀಡಿದ್ದರು. ಕಾಲೇಜಿನ ಆಡಳಿತ ಮಂಡಳಿಯ ಪ್ರತಿನಿಧಿಗಳನ್ನು ಕರೆಸಿ ಮಾತನಾಡಿದ ನಂತರ ಆಗಿರುವ ತಪ್ಪು ಒಪ್ಪಿ, ಮುಂದಿನ ವರ್ಷದ ಶುಲ್ಕಕ್ಕೆ ಅದನ್ನು ಹೊಂದಾಣಿಕೆ ಮಾಡಿಕೊಳ್ಳಲು ಸೂಚಿಸಿದರು. ಈ ಸಂಬಂಧ ವಿದ್ಯಾರ್ಥಿಗಳು ಹಾಗೂ ಕಾಲೇಜಿನ ಆಡಳಿತ ಮಂಡಳಿಯವರು ತಮ್ಮ ಮುಂದೆ ಒಪ್ಪಂದಕ್ಕೆ ಸಹಿ ಕೂಡ ಹಾಕಿದ್ದಾರೆ ಎಂದು ಶ್ರೀನಿವಾಸಗೌಡ ತಿಳಿಸಿದರು.