ಬೆಂಗಳೂರು(www.thenewzmirror.com): ಇವತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) 2025- 26ರ ಬಜೆಟ್ ಮಂಡಿಸಿದೆ. ಇದು ಚಿಕ್ಕ ಮಕ್ಕಳಿಗೆ ಚಂದಮಾಮ ತೋರಿಸುವ ಬಜೆಟ್ ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್ ಟೀಕಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇದು ಡಿ.ಕೆ.ಶಿವಕುಮಾರ್ ಅವರ ಬ್ರ್ಯಾಂಡ್ ಬೆಂಗಳೂರು ಬಜೆಟ್. ಮೇಲುಗಡೆ ತೋರಿಸಿ ಚಂದಮಾಮ ಇದ್ದಾನೆ; ತಿನ್ನು ತಿನ್ನು ಎನ್ನುವ ಆಯವ್ಯಯ ಪತ್ರ ಇದು ಎಂದು ಆಕ್ಷೇಪಿಸಿದರು.
ಬೆಂಗಳೂರು ನಾಗರಿಕರಿಗೆ 6 ಸಾವಿರ ಕೋಟಿ ವರಮಾನ ಇರುವ ಬಜೆಟ್ ಇದು. ಸಾಲ ಮಾಡಿ ಬಜೆಟ್ ಅನ್ನು ಮಂಡಿಸಿದ್ದಾರೆ. ನಾಗರಿಕರಿಗೆ ಸ್ವರ್ಗ ಕೊಡುವ ಭರವಸೆ ಕೊಟ್ಟಿದ್ದಾರೆ. ಆದರೆ, ವಾಸ್ತವವಾಗಿ ನೋಡಿದರೆ ಇಲ್ಲಿ ತಿಳಿಸಿದ ಯಾವುದೇ ಯೋಜನೆಗಳು ಅನುಷ್ಠಾನಕ್ಕೆ ಬರುವುದಿಲ್ಲ. ಕಳೆದ ಎರಡು ವರ್ಷಗಳಿಂದ ಬ್ರ್ಯಾಂಡ್ ಬೆಂಗಳೂರಿನಡಿ ಒಂದೇ ಒಂದು ಗುಂಡಿ ಮುಚ್ಚಲೂ ಹಣ ಕೊಟ್ಟಿಲ್ಲ ಎಂದು ದೂರಿದರು.
ಒಂದೇ ಒಂದು ಹೊಸ ಯೋಜನೆ ಜಾರಿ ಮಾಡಿಲ್ಲ ಎಂದರು. ಜುಟ್ಟಿಗೆ ಮಲ್ಲಿಗೆ ಹೂ; ತಿನ್ನೋಕೆ ಹಿಟ್ಟಿಲ್ಲ ಎಂಬ ಮಾದರಿಯ ಆಯವ್ಯಯ ಪತ್ರ ಮಂಡಿಸಿದ್ದಾರೆ ಎಂದು ಆರೋಪಿಸಿದರು.
ಆಸ್ತಿ ತೆರಿಗೆ ಹೆಚ್ಚಳ ಮಾಡಿದ್ದು, ತ್ಯಾಜ್ಯದ ಮೇಲೆ ನಾಗರಿಕರಿಗೆ ಸೆಸ್ ಹಾಕಿದ್ದಾರೆ. ಆರೋಗ್ಯ, ಶಿಕ್ಷಣ, ರಸ್ತೆಯಂಥ ಮೂಲಸೌಕರ್ಯಕ್ಕೆ ಗಮನ ಕೊಟ್ಟಿಲ್ಲ ಎಂದು ಟೀಕಿಸಿದರು. ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ್ ಮತ್ತಿತರರು ಇದ್ದರು.