ಚನ್ನಪಟ್ಟಣ(www.thenewzmirror.com):ಬಿಡದಿ ಸೇರಿದಂತೆ ಇತರೇ ಟೌನ್ ಶಿಪ್ ಗಳ ನೋಟಿಫಿಕೇಷನ್ ಮಾಡಲ್ಲ, ನಾನು ಇರುವ ತನಕ ಇದನ್ನು ಪ್ರಗತಿ ಮಾಡುತ್ತೇವೆ. ಜಯನಗರ, ಸದಾಶಿವ ನಗರ ಮಾದರಿ ಎಂದು ಹೇಳುತ್ತಾರಲ್ಲ. ಅದಕ್ಕಿಂತ ಒಳ್ಳೇ ಪರಿಸರವನ್ನು ಬಿಡದಿ ಟೌನ್ ಶಿಪ್ ನಲ್ಲಿ ಸೃಷ್ಟಿ ಮಾಡುತ್ತೇವೆ” ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಚನ್ನಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಡದಿ ಟೌನ್ ಶಿಪ್ ನಾನು ಮಾಡಿದ್ದಲ್ಲ. ಬಿಡದಿ ಸೇರಿದಂತೆ ಇತರೇ ಟೌನ್ ಶಿಪ್ ಗಳ ನೋಟಿಫಿಕೇಷನ್ ಮಾಡಿದವರು ಕುಮಾರಸ್ವಾಮಿ. ಅವರೆ ಡಿ ನೋಟಿಫಿಕೇಷನ್ ಮಾಡಬಹುದಿತ್ತು, ನಾವು ಈಗ ಅದನ್ನು ಮಾಡಲು ಹೋಗುವುದಿಲ್ಲ. ನಮ್ಮ ಜಿಲ್ಲೆಯ ಜನ ಆಸ್ತಿ ಕಳೆದುಕೊಳ್ಳುತ್ತಾರೆ. ಆದರೆ ಅವರು ಏನು ಆಲೋಚನೆ ಮಾಡಿದ್ದಾರೋ ಅದಕ್ಕಿಂತ ಎರಡು, ಮೂರು ಪಟ್ಟು ಬೆಲೆ ಸಿಗುವಂತಹ ಕೆಲಸ ನಾನು ಮಾಡುತ್ತೇನೆ. ಜಯನಗರ, ಸದಾಶಿವ ನಗರ ಮಾದರಿ ಎಂದು ಹೇಳುತ್ತಾರಲ್ಲ. ಅದಕ್ಕಿಂತ ಒಳ್ಳೇ ಪರಿಸರ ಸೃಷ್ಟಿ ಮಾಡುತ್ತೇವೆ” ಎಂದರು.
ಬೆಂಗಳೂರು ಗ್ರಾಮಾಂತರ ಸಂಸದರು ಹಾಗೂ ಎಚ್.ಡಿ.ದೇವೇಗೌಡರು ಈ ಯೋಜನೆಯನ್ನು ಕೈ ಬಿಡಿ ಎಂದು ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಬಗ್ಗೆ ಕೇಳಿದಾಗ, “ಅವರು ಏನು ಬೇಕಾದರೂ ಮಾಡಿಸಿಕೊಳ್ಳಲಿ. ಸಿದ್ದರಾಮಯ್ಯ ಅವರಿಗೂ ನನಗೂ ಇದನ್ನು ಕೈ ಬಿಡುವ ಹಕ್ಕಿಲ್ಲ. ನಾನು ಇರುವ ತನಕ ಇದನ್ನು ಪ್ರಗತಿ ಮಾಡುತ್ತೇವೆ. ಇದನ್ನು ಡಿ ನೋಟಿಫಿಕೇಷನ್ ಮಾಡಲು ಬರುವುದಿಲ್ಲ” ಎಂದರು.
ರೈತರ ಬಳಿ ಮಾತನಾಡುತ್ತೇನೆ:
ಯೋಜನೆ ವಿರೋಧಿಸಿ ರೈತರ ಹೋರಾಟದ ಬಗ್ಗೆ ಕೇಳಿದಾಗ, “ಹೋರಾಟ ಮಾಡಲಿ. ಹೋರಾಟ ಮಾಡುವುದನ್ನು ತಪ್ಪು ಎನ್ನಲು ಆಗುವುದಿಲ್ಲ. ಜಾಸ್ತಿ ಪರಿಹಾರ ಕೇಳಿದರೆ ತಪ್ಪೇನಿಲ್ಲ. ಅವರ ಮಕ್ಕಳ ಕಾಲಕ್ಕೆ ಡಿ.ಕೆ.ಶಿವಕುಮಾರ್ ಒಳ್ಳೇ ಕೆಲಸ ಮಾಡಿದ್ದಾರೆ ಎಂದು ಅವರಿಗೆ ಅರ್ಥವಾಗುತ್ತದೆ. ರಾಮನಗರಕ್ಕೆ ಬಂದು ರೈತರ ದುಃಖ, ದುಮ್ಮಾನ, ನೋವು ನಲಿವು ಕೇಳುತ್ತೇನೆ” ಎಂದರು.
ನಾನು ಏನೂ ಮಾಡಿಲ್ಲ, ಎಲ್ಲಾ ಅವರದ್ದೇ:
ಜಿಲ್ಲೆಗೆ ತಂದಿರುವ ಯೋಜನೆಗಳನ್ನು ಕುಮಾರಸ್ವಾಮಿ ನಾನು ಮಾಡಿರುವುದು ಎಂದು ಹೇಳುತ್ತಿದ್ದಾರೆ ಎಂದಾಗ, “ನಾನು ಹಾಗೂ ಯೋಗೇಶ್ವರ್ ಏನೂ ಕೆಲಸ ಮಾಡಿಲ್ಲ, ಎಲ್ಲಾ ಅವರದ್ದೇ” ಎಂದರು.
ಬೆಂಗಳೂರು ದಕ್ಷಿಣ ಜಿಲ್ಲೆ ನಾಮಕರಣ ಎಲ್ಲಿಗೆ ಬಂತು ಎಂದು ಕೇಳಿದಾಗ, “ಮುಹೂರ್ತ ನಿಗಧಿ ಮಾಡುತ್ತಿದ್ದೇನೆ” ಎಂದರು.