BJP delegation met CM, release of grant, by vijayendra, siddaramaiah, govt, bangalore
ಬೆಂಗಳೂರು: ಬೆಂಗಳೂರು ಮಹಾನಗರದ ಅಭಿವೃದ್ಧಿ ದೃಷ್ಟಿಯಿಂದ ಶಾಸಕರಿಗೆ ಹೆಚ್ಚು ಅನುದಾನವನ್ನು ನೀಡಬೇಕು ಹಾಗೂ ಬಜೆಟ್‍ನಲ್ಲಿ 6ರಿಂದ 8 ಸಾವಿರ ಕೋಟಿ ಕೊಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದ ಬಿಜೆಪಿ ನಿಯೋಗ ಮನವಿ ಮಾಡಿದೆ.
ಸಿಎಂ ಅಧಿಕೃತ ನಿವಾಸ ಕಾವೇರಿ ನಿವಾಸಕ್ಕೆ ಭೇಟಿ ನೀಡಿ ಮನವಿ ಸಲ್ಲಿಸಿದ ನಂತರ ಮಾಧ್ಯಮ ಪ್ರತಿನಿಧಿಗಳ ಜೊತೆ ಇಂದು ಮಾತನಾಡಿದ ವಿಜಯೇಂದ್ರ, ಸಿಲಿಕಾನ್ ಸಿಟಿ ಬೆಂಗಳೂರಿನ ಮೂಲಸೌಕರ್ಯ ವೃದ್ಧಿಗೆ ಸಂಬಂಧಿಸಿದ ಯೋಜನೆಗಳಿಗೆ ಹಣ ಕೊಡಬೇಕಿದೆ. ಫ್ಲೈಓವರ್, ವಿವಿಧ ಯೋಜನೆಗಳು ನಿಧಾನಗತಿಯಲ್ಲಿ ಸಾಗುತ್ತಿವೆ. ಅವುಗಳಿಗೆ ಹೆಚ್ಚು ಅನುದಾನ ನೀಡಿ ಹೆಚ್ಚು ಒತ್ತು ಕೊಡಬೇಕೆಂದು ಕೋರಿರುವುದಾಗಿ ತಿಳಿಸಿದರು.
ಸಂಸದರಾದ ಪಿ.ಸಿ.ಮೋಹನ್, ತೇಜಸ್ವಿ ಸೂರ್ಯ ಅವರು ಕೂಡ ಸಿಎಂಗೆ ಮನವಿ ಮೂಲಕ ಮೆಟ್ರೋ ಪ್ರಯಾಣ ದರ ಜಾಸ್ತಿ ಆಗಿದ್ದು ಅದನ್ನು ಕಡಿಮೆ ಮಾಡುವ ಕುರಿತಂತೆ ಸಲಹೆಗಳನ್ನು ನೀಡಿದ್ದಾರೆ ಎಂದು ತಿಳಿಸಿದರು. ಅಭಿವೃದ್ಧಿಗೆ ಅನುದಾನ ಮಾತ್ರವಲ್ಲದೆ, ಮೊದಲ ಬಾರಿ ಗೆದ್ದ ಶಾಸಕರಿಗೆ ಅನುದಾನ ಕೊಡುವಂತೆ ಮನವಿಯಲ್ಲಿ ತಿಳಿಸಲಾಗಿದೆ. ಹಿಂದೆ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿಗಳಾಗಿದ್ದಾಗ ಪ್ರತಿಸಾರಿಯೂ ಬೆಂಗಳೂರು ಮಹಾನಗರದ ಅಭಿವೃದ್ಧಿಗೆ ಸಂಬಂಧಿಸಿ ಬಿಬಿಎಂಪಿಗೆ 6 ರಿಂದ 8 ಸಾವಿರ ಕೋಟಿ ಅನುದಾನವನ್ನು ಬಜೆಟ್‍ನಲ್ಲಿ ನೀಡುತ್ತಿದ್ದರು. ಆದರೆ, ಕಳೆದೆರಡು ವರ್ಷಗಳಿಂದ ಬೆಂಗಳೂರಿನ ಅಭಿವೃದ್ಧಿಗೆ ಅನುದಾನ ನೀಡಿಲ್ಲ ಎನ್ನುವುದನ್ನು ಗಮನಕ್ಕೆ ತಂದಿದ್ದು,
ಇದಕ್ಕೆಲ್ಲಾ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ತಮ್ಮ ಇತಿಮಿತಿಯೊಳಗೆ ಎಷ್ಟು ಅನುದಾನ ಕೊಡಲು ಸಾಧ್ಯವೋ ಆ ಕಡೆ ಗಮನ ಹರಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಹೇಳಿದರು.
ಶೀಘ್ರವೇ ಬಿಬಿಎಂಪಿ ಚುನಾವಣೆ ನಡೆಸಲು ಒತ್ತಾಯಿಸಲಾಗಿದೆ.
ಗ್ರೇಟರ್ ಬೆಂಗಳೂರಿನ ಹೆಸರಿನಲ್ಲಿ ಬಿಬಿಎಂಪಿ ಚುನಾವಣೆ ಮುಂದೂಡಬಾರದು ಎಂಬ ಕುರಿತು ನಾವು ಸದನದಲ್ಲೂ ಚರ್ಚೆ ಮಾಡುತ್ತೇವೆ. ಅವೈಜ್ಞಾನಿಕ ಟನೆಲ್ ರಸ್ತೆ ಕುರಿತು ಕೂಡ ಸದನದಲ್ಲಿ ಪ್ರಸ್ತಾಪಿಸಲಿದ್ದೇವೆ ಎಂದರು.
ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಮಾತನಾಡಿ, ಬೆಂಗಳೂರಿನ ರಸ್ತೆಗಳ ಅವ್ಯವಸ್ಥೆ, ಕಾಮಗಾರಿಗಳು ಆರಂಭವಾಗದೆ ಇರುವುದು, ಪಾರ್ಕಿನ ವಾಚ್‍ಮೆನ್‍ಗೆ ಹಣ ಕೊಡಲೂ ಸಾಧ್ಯ ಆಗದೆ ಇರುವುದನ್ನು ನೋಡಿ, ಎರಡು ವರ್ಷ ಕಾದು ವಿಧಿಯಿಲ್ಲದೆ ಸಿಎಂ ಭೇಟಿ ಮಾಡಿದ್ದೇವೆ. ಬೆಂಗಳೂರಿನ ಅಭಿವೃದ್ಧಿ ಕುಂಠಿತವಾದ ಕುರಿತು ಗಮನ ಸೆಳೆದಿದ್ದೇವೆ ಎಂದರು.
ಒಂದೆಡೆ ಬೆಲೆ ಏರಿಕೆ, ಇನ್ನೊಂದೆಡೆ ಅಭಿವೃದ್ಧಿಯೂ ಕುಂಠಿತವಾಗಿದೆ ಹಾಗಾಗಿ ಬೆಂಗಳೂರಿಗೆ ಅನುದಾನ ಕೊಡಿ, ರಾಜ್ಯದ ಎಲ್ಲ ಬಿಜೆಪಿ ಶಾಸಕರಿಗೆ ಅನುದಾನ ಕೊಡಿ ಎಂದು ಕೇಳಿದ್ದೇವೆ. ವಿಪಕ್ಷಗಳಿಗೆ ಅನ್ಯಾಯ ಮಾಡದಿರಿ; ರಾಜ್ಯದ ಸಮಗ್ರ ಬೆಳವಣಿಗೆಗೆ ಅನುದಾನ ನೀಡಿ ಎಂದು ಕೇಳಿದ್ದಾಗಿ ವಿವರಿಸಿದರು.