ಉರ್ದು ಭಾಷೆಗೆ ಹೆಚ್ಚಿನ ಅನುದಾನ ನೀಡಿದೆ ಎನ್ನುವ ಬಿಜೆಪಿ ಆರೋಪ ಸುಳ್ಳು: ಸಿಎಂ

RELATED POSTS

ಬೆಂಗಳೂರು(www.thenewzmirroe.com):ಕನ್ನಡ ಭಾಷೆಗಾಗಿ ಕೇವಲ 32 ಕೋಟಿ ರೂಪಾಯಿ ನೀಡಲಾಗಿದೆ ಎಂಬ ಸುಳ್ಳು ಸುದ್ದಿಯನ್ನು  ರಾಜ್ಯ ಬಿಜೆಪಿ ಹಂಚಿಕೊಂಡು ಜನರನ್ನು ತಪ್ಪು ದಾರಿಗೆಳೆಯುತ್ತಿರುವುದು ಅಕ್ಷಮ್ಯ ಅಪರಾಧ ಮತ್ತು ಕನ್ನಡ ನಾಡು ಮತ್ತು ನುಡಿಗೆ ಬಗೆವ ದ್ರೋಹವಾಗಿದೆ. ಕೂಡಲೇ ಬಿಜೆಪಿ ತಮ್ಮಿಂದ ಆಗಿರುವ ತಪ್ಪಿಗೆ ರಾಜ್ಯದ ಜನತೆಯ ಕ್ಷಮೆ ಕೇಳಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು,ಕನ್ನಡ ಭಾಷೆಯನ್ನು ನಿರ್ಲಕ್ಷಿಸಿ ಉರ್ದು ಭಾಷೆಗೆ ರಾಜ್ಯ ಸರ್ಕಾರ ಹೆಚ್ಚಿನ ಅನುದಾನ ನೀಡುತ್ತಿದೆ ಎಂದು ರಾಜ್ಯ ಬಿಜೆಪಿ ಮಾಡುತ್ತಿರುವ ಅಪಪ್ರಚಾರ ಸಂಪೂರ್ಣ ಸತ್ಯಕ್ಕೆ ದೂರವಾಗಿದ್ದು, ಕೋಮುವೈಷಮ್ಯ ಹುಟ್ಟಿಸುವ ದುರುದ್ದೇಶದಿಂದ ಕೂಡಿದ್ದಾಗಿದೆ. ಒಂದು ರಾಷ್ಟ್ರೀಯ ಪಕ್ಷ ಇಷ್ಟೊಂದು ಬೇಜವಾಬ್ದಾರಿತನದಿಂದ ಕಿಡಿಗೇಡಿ ಟ್ರೋಲರ್ ಗಳ ರೀತಿ ಸುಳ್ಳು ಸುದ್ದಿಯನ್ನು ಪ್ರಚಾರ ಮಾಡುತ್ತಿರುವುದು ವಿಷಾದನೀಯ ಎಂದಿದ್ದಾರೆ.

2025-26ನೇ ಸಾಲಿನಲ್ಲಿ ರಾಜ್ಯ ಸರ್ಕಾರವು ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣ ಇಲಾಖೆಗೆ ₹34,438 ಕೋಟಿ ಮತ್ತು ಸಮಾಜ ಕಲ್ಯಾಣ ಮತ್ತಿತರ ಇಲಾಖೆಗಳಿಗೆ ಸೇರಿದ ಶಾಲೆಗಳಿಗೆ ₹4,150 ಕೋಟಿ ಹೀಗೆ ಕನ್ನಡ ಭಾಷೆಯ ಶಾಲೆಗಳಿಗಾಗಿಯೇ ರಾಜ್ಯ ಸರ್ಕಾರ ಒಟ್ಟು 38,688 ಕೋಟಿ ರೂ.ಗಳನ್ನು ನೀಡಿದೆ.

ಇದರ ಜೊತೆಯಲ್ಲಿ ಸರ್ಕಾರಿ ಶಾಲೆಗಳ ನಿರ್ವಹಣೆ ಮತ್ತು ಮೂಲಭೂತ ಸೌಕರ್ಯಗಳ ನಿರ್ಮಾಣಕ್ಕಾಗಿ ಒಟ್ಟು 999.30 ಕೋಟಿ ರೂ.ಗಳ ಅನುದಾನವನ್ನು ಒದಗಿಸಲಾಗಿದೆ. ಈ ಒಟ್ಟು ಅನುದಾನ ಕನ್ನಡ ಭಾಷೆಯ ಅಭಿವೃದ್ದಿಗಾಗಿಯೇ ವ್ಯಯವಾಗಲಿದೆ. ಹೀಗಿರುವಾಗ  ಕನ್ನಡ ಭಾಷೆಗೆ ರಾಜ್ಯ ಸರ್ಕಾರ ಕೇವಲ 32 ಕೋಟಿ ರೂಪಾಯಿ ಅನುದಾನ ನೀಡುತ್ತಿದೆ ಎಂಬ ಮಾಹಿತಿಯ ಪ್ರಸಾರದ ಹಿಂದೆ ರಾಜಕೀಯ ದುರುದ್ದೇಶ ಇರುವುದು ಸ್ಪಷ್ಟವಾಗುತ್ತದೆ‌ ಎಂದು ತಿಳಿಸಿದ್ದಾರೆ.

ಅತಿ ಹೆಚ್ಚು ವಿದ್ಯಾರ್ಥಿಗಳ ದಾಖಲಾತಿ ಇರುವ ರಾಜ್ಯದ ಉರ್ದು ಮಾಧ್ಯಮ ಶಾಲೆಗಳಿಗೆ ಕರ್ನಾಟಕ ಪಬ್ಲಿಕ್ ಶಾಲೆ ಮಾದರಿಯಲ್ಲಿ ಮೂಲಸೌಕರ್ಯಗಳನ್ನು ಒದಗಿಸಿ ಬೋಧನೆಯ ಗುಣಮಟ್ಟವನ್ನು ಹೆಚ್ಚಿಸುವ ಹಾಗೂ ಮೌಲಾನ ಪಬ್ಲಿಕ್ ಶಾಲೆಗಳನ್ನಾಗಿ ಉನ್ನತೀಕರಿಸುವ ಉದ್ದೇಶದಿಂದ ಪ್ರಸಕ್ತ ಹಣಕಾಸು ವರ್ಷದಲ್ಲಿ 100 ಕೋಟಿ ರೂ.ಗಳನ್ನು ಅಲ್ಪಸಂಖ್ಯಾತ ಇಲಾಖೆಯಡಿ ಒದಗಿಸಲಾಗಿದೆ.

ಈ ಅನುದಾನವನ್ನು ಕೇವಲ ಭಾಷಾ ಕಲಿಕೆಗೆ ಮಾತ್ರವಲ್ಲ ಶಾಲಾ ಮೂಲಸೌಕರ್ಯ, ಶಿಕ್ಷಕರ ನೇಮಕಾತಿಗಾಗಿ, ಪಠ್ಯಪುಸ್ತಕಗಳು ಮತ್ತು ಹೊಸ ಶಾಲಾ ಕಟ್ಟಡಗಳ ನಿರ್ಮಾಣಕ್ಕೂ ಬಳಸಲಾಗುವುದು ಎಂದಿದ್ದಾರೆ.

ಕನ್ನಡ, ಉರ್ದು ಭಾಷೆಗಳು ಸೇರಿದಂತೆ ಯಾವುದೇ ಭಾಷೆಯನ್ನು ನಿರ್ದಿಷ್ಠ ಜಾತಿ, ಧರ್ಮದ ಜೊತೆ  ಜೋಡಿಸುವುದು ಆ ಭಾಷೆಗಳಿಗೆ ತೋರುವ ಅಗೌರವವಾಗುತ್ತದೆ. ನಮ್ಮ ಸರ್ಕಾರ ರಾಜ್ಯದಲ್ಲಿ ಬಳಕೆಯಲ್ಲಿರುವ ಎಲ್ಲ ಭಾಷೆಗಳ ಬಗ್ಗೆ ಸಮಾನ ಕಾಳಜಿಯನ್ನು ಹೊಂದಿದೆ. ಇದೇ ಸದುದ್ದೇಶದಿಂದ ರಾಜ್ಯದಲ್ಲಿ ಬಳಕೆಯಲ್ಲಿರುವ ತುಳು, ಕೊಂಕಣಿ, ಅರೆಬಾಸೆ, ಕೊಡವ ಭಾಷೆಗಳಿಗಾಗಿಯೇ ಪ್ರತ್ಯೇಕ ಅಕಾಡೆಮಿಗಳನ್ನು ಸ್ಥಾಪಿಸಲಾಗಿದ್ದು, ಇವುಗಳಿಗೆ ವಾರ್ಷಿಕ 80 ಲಕ್ಷ ರೂಪಾಯಿಗಳ ಅನುದಾನವನ್ನು ನೀಡಲಾಗುತ್ತದೆ. ಇದರ ಜೊತೆಗೆ ವಿಶೇಷ ಕಾರ್ಯಕ್ರಮಗಳಿಗಾಗಿ ಹೆಚ್ಚುವರಿ ಅನುದಾನವನ್ನು ನೀಡಲಾಗುತ್ತದೆ‌ ಎಂದು ಸ್ಪಷ್ಟಪಡಿಸಿದ್ದಾರೆ.

ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ಪ್ರೋತ್ಸಾಹ ನೀಡುವ ಉದ್ದೇಶಕ್ಕಾಗಿಯೇ ಪ್ರತ್ಯೇಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇದೆ. ಇದರಡಿಯಲ್ಲಿ 14 ಅಕಾಡೆಮಿಗಳು, 3 ಪ್ರಾಧಿಕಾರ ಮತ್ತು ಸಾಹಿತಿಗಳ ಹೆಸರಿನ 24 ಟ್ರಸ್ಟ್ ಗಳು ಕಾರ್ಯನಿರ್ವಹಿಸುತ್ತಿವೆ. ಇವೆಲ್ಲವೂ ಕನ್ನಡ, ಕನ್ನಡಿಗ ಮತ್ತು ಕರ್ನಾಟಕಕ್ಕೆ ಮೀಸಲಾಗಿವೆ.

ಕನ್ನಡ ಭಾಷೆಗೆ ಕನ್ನಡಿಗರೆಲ್ಲರೂ ತಾಯಿಯ ಸ್ಥಾನವನ್ನು ನೀಡಿದ್ದು ಇದೇ ಗೌರವವನ್ನು ನಮ್ಮ ಸರ್ಕಾರ ಕೂಡಾ ಹೊಂದಿದೆ. ನೆಲ-ಜಲ-ಭಾಷೆಯ ರಕ್ಷಣೆಯ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎನ್ನುವುದನ್ನು ನಾನು ಪದೇ ಪದೇ ಹೇಳಿಕೊಂಡು ಬಂದಿದ್ದೇನೆ. ಇದೇ ರೀತಿ ನಾಡು-ನುಡಿಗೆ ಬಗೆವ ಅವಮಾನವನ್ನು ಕೂಡಾ ನಮ್ಮ ಸರ್ಕಾರ ಸಹಿಸುವುದಿಲ್ಲ‌‌ ಎಂದರು.

ಕನ್ನಡ ಭಾಷೆಗಾಗಿ ಕೇವಲ 32 ಕೋಟಿ ರೂಪಾಯಿ ನೀಡಲಾಗಿದೆ ಎಂಬ ಸುಳ್ಳು ಸುದ್ದಿಯನ್ನು  ರಾಜ್ಯ ಬಿಜೆಪಿ ಹಂಚಿಕೊಂಡು ಜನರನ್ನು ತಪ್ಪು ದಾರಿಗೆಳೆಯುತ್ತಿರುವುದು ಅಕ್ಷಮ್ಯ ಅಪರಾಧ ಮಾತ್ರವಲ್ಲ ಕನ್ನಡ ನಾಡು ಮತ್ತು ನುಡಿಗೆ ಬಗೆವ ದ್ರೋಹವಾಗಿದೆ. ರಾಜ್ಯ ಬಿಜೆಪಿ ತಕ್ಷಣ ಸ್ಪಷ್ಟೀಕರಣದ ಮೂಲಕ ಸತ್ಯ ಸಂಗತಿಯನ್ನು ತಿಳಿಸುವ ಜೊತೆಯಲ್ಲಿ ತಮ್ಮಿಂದ ಆಗಿರುವ ತಪ್ಪಿಗೆ ರಾಜ್ಯದ ಜನತೆಯ ಕ್ಷಮೆ ಕೇಳಬೇಕೆಂದು ಆಗ್ರಹಿಸಿದ್ದಾರೆ.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist