ಕಲಬುರಗಿ(www.thenewzmirror.com):ಭಯೋತ್ಪಾದಕ ತಾಣಗಳನ್ನು ನಮ್ಮ ಸೈನಿಕರು ಧ್ವಂಸ ಮಾಡಿದ್ದಾರೆ. ಆದರೆ, ಕೇಂದ್ರ ಸರ್ಕಾರ ಕದನ ವಿರಾಮದ ನಿರ್ಧಾರದಿಂದ ಸೇನೆಗೆ ಹಾಗೂ ಭಾರತೀಯ ಸಾಮಾನ್ಯ ನಾಗರಿಕರಿಗೆ ನಿರಾಸೆ ತಂದಿದೆ ಎಂದು ಗಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಕಲಬುರಗಿ ಯಲ್ಲಿ ಮಾಧ್ಯಮದ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಅವರ ಪಾಕಿಸ್ತಾನ ನಂಬಿಕೆಗೆ ಅರ್ಹ ರಾಷ್ಟ್ರವಲ್ಲ. ನಮ್ಮ ನಾಗರಿಕರ ಮೇಲೆ ದಾಳಿ ಮಾಡಿದ ಭಯೋತ್ಪಾದಕರ ನೆಲೆಗಳ ಮೇಲೆ ಸೈನಿಕರು ದಾಳಿ ಮಾಡಿ ನಾಶ ಮಾಡಿದ್ದಾರೆ. ಆದರೆ, ಕದನ ವಿರಾಮ ಘೋಷಿಸಲಾಗಿದೆ. ಅದನ್ನು ಯಾರು ಘೋಷಿಸಬೇಕು.? ಯಾವ ಮಾನದಂಡಗಳ ಅಡಿಯಲ್ಲಿ ಮಾಡಲಾಗಿದೆ? ಕದನ ವಿರಾಮ ಉಲ್ಲಂಘನೆ ಮಾಡಿದರೆ ಯಾವ ಕ್ರಮ ಕೈಗೊಳ್ಳಬೇಕು ? ಎನ್ನುವ ಬಗ್ಗೆ ಸರ್ಕಾರ ಅಧಿವೇಶನ ಕರೆದು ರಾಷ್ಟ್ರದ ಜನರಿಗೆ ವಾಸ್ತವ ತಿಳಿಸಲಿ ಎಂದು ಒತ್ತಾಯಿಸಿದರು.
“ಕಾಶ್ಮೀರ ವಿಚಾರ ದ್ವೀಪಕ್ಷೀಯ ವಿಷಯವಾಗಿದ್ದು ಪಾಕಿಸ್ತಾನ ಹಾಗೂ ಭಾರತ ನಡುವಿನ ವಿಚಾರವನ್ನು ಈಗ ಅಮೇರಿಕಾ ಮಧ್ಯೆ ಪ್ರವೇಶಿಸುವ ಮೂಲಕ ಅಂತರಾಷ್ಟ್ರೀಯ ವಿಚಾರವನ್ನಾಗಿ ಮಾಡಲಾಗಿದೆ. ಕದನ ವಿರಾಮ ಘೋಷಣೆ ಮಾಡಲು ಟ್ರಂಪ್ ಯಾರು ? ಅವರ ಟ್ವಿಟ್ ನಲ್ಲಿರುವ ಅಂಶಗಳನ್ನು ಗಮನಿಸಿದ್ದೀರಾ? ಕಾಮನ್ ಸೆನ್ಸ್ ಎನ್ನುವ ಪದ ಬಳಸಿ, ಭಾರತಕ್ಕೆ ಬುದ್ದಿ ಹೇಳಿರುವ ರೀತಿಯಲ್ಲಿ ಟ್ವಿಟ್ ಮಾಡಿದ್ದಾರೆ. ಈ ಬಗ್ಗೆ ಪ್ರಧಾನಿ, ವಿದೇಶಾಂಗ ಸಚಿವರು ಹಾಗೂ ರಾಷ್ಟ್ರೀಯ ಭದ್ರತೆ ಸಲಹೆಗಾರರು ಕದನ ವಿರಾಮದ ಬಗ್ಗೆ ಯಾಕೆ ಜನರಿಗೆ ವಾಸ್ತವ ತಿಳಿಸುತ್ತಿಲ್ಲ” ಎಂದು ಅಸಮಧಾನ ವ್ಯಕ್ತಪಡಿಸಿದರು.
ವಿದೇಶಾಂಗ ನೀತಿಗಳು ಬಲಿಷ್ಠಗೊಳ್ಳಬೇಕಾದರೆ ಪ್ರಧಾನಿ ಗಳು ಹೊರದೇಶದ ಪ್ರಧಾನ ಮಂತ್ರಿಗಳನ್ನು ಅಪ್ಪಿಕೊಂಡರೆ ಸಾಲದು, ಅವರೊಂದಿಗೆ ಮಾತುಕತೆ ನಡೆಸಬೇಕಾಗುತ್ತದೆ. ಭಯೋತ್ಪಾದಕ ಕೃತ್ಯವನ್ನು ಅಮೇರಿಕಾ ಖಂಡಿಸಿಲ್ಲ. ಚೀನಾ ಹಾಗೂ ಟರ್ಕಿ ಪಾಕಿಸ್ತಾನಕ್ಕೆ ಬೆಂಬಲ ವ್ಯಕ್ತಪಡಿಸಿವೆ. ಈ ನಡುವೆ ಅಂತರಾಷ್ಟ್ರೀಯ ವಿತ್ತೀಯ ನಿಧಿ ( IMF) ಪಾಕಿಸ್ತಾನಕ್ಕೆ ಸಾಲ ಘೋಷಿಸಿದೆ ಎಂದರೆ ಭಾರತ ಸರ್ಕಾರ ಭಯೋತ್ಪಾದನೆಗೆ ಬೆಂಬಲವಾಗಿರುವ ಪಾಕಿಸ್ತಾನಕ್ಕೆ ಸಾಲ ನೀಡದಂತೆ ಮನವರಿಕೆ ಮಾಡಲು ವಿಫಲವಾಗಿದೆ. ಇದು ವಿದೇಶಾಂಗ ನೀತಿಗಳು ಎಡವುತ್ತಿವೆ ಎನ್ನುವ ಅಭಿಪ್ರಾಯ ಮೂಡುತ್ತಿದೆ.
ಕಾಂಗ್ರೆಸ್ ಪಕ್ಷದ ದೇಶದ ಹಿತಾಸಕ್ತಿ ಕಾಪಾಡಲು ಕೇಂದ್ರ ಸರ್ಕಾರಕ್ಕೆ ಬೆಂಬಲ ಘೋಷಿಸಿದೆ. ಪಹಲ್ಗಾಂ ದಾಳಿಯ ಭಯೋತ್ಪದಾಕರು ಏನಾದರು?; ಈಗ ಎಲ್ಲಿದ್ದಾರೆ ಎಂದು ಪ್ರಶ್ನಿಸಿದ ಸಚಿವರು, ಭಯೋತ್ಪಾದಕ ದಾಳಿ, ಹಾಗೂ ಕದನ ವಿರಾಮದ ಬಗ್ಗೆ ಪ್ರಧಾನಿ ಸಂಸತ್ತಿನ ಅಧಿವೇಶನ ಕರೆದು ದೇಶದ ನಾಗರಿಕರಿಗೆ ತಿಳಿಸಲಿ ಎಂದು ಒತ್ತಾಯಿಸಿದರು.
ಮಾಧ್ಯಮಗಳಲ್ಲಿ ಯುದ್ಧದ ರಂಜನೀಯ ಸುದ್ದಿಗಳನ್ನು ಪ್ರಸಾರ ಮಾಡುತ್ತಿರುವುದಕ್ಕೆ ಅಸಮಧಾನ ವ್ಯಕ್ತಪಡಿಸಿದ ಖರ್ಗೆ, ದೇಶದ ಹಿತಾಸಕ್ತಿ ಹಾಗೂ ವಾಸ್ತವಾಂಶಗಳಿಗಿಂತ ವ್ಯಕ್ತಿಯ ವೈಭವೀಕರಣವಾಗುತ್ತಿದೆ. ಮಾಧ್ಯಮಗಳಲ್ಲಿ ತಪ್ಪು ಮಾಹಿತಿ ಪ್ರಸಾರ ವಾಗುತ್ತಿದೆ. ಪಾನೆಲ್ ಚರ್ಚೆಯಲ್ಲಿ ಭಾಗವಹಿಸುವವರು ಹಾಗೂ ಬಿಜೆಪಿಯ ಬಾಡಿಗೆ ಭಾಷಣಕಾರರು ತಪ್ಪು ಮಾಹಿತಿಯನ್ನೇ ಹೇಳುತ್ತಿದ್ದಾರೆ. ಕರಾಚಿಯನ್ನು ವಶಪಡಿಸಿಕೊಳ್ಳಲಾಗುತ್ತಿದೆ, ಪಾಕಿಸ್ತಾನ ನಾಲ್ಕು ಭಾಗವಾಗುತ್ತದೆ ಎಂದು ಹೇಳಿದ್ದರು ಎಂದರು.
ಜಿಲ್ಲೆಯಲ್ಲಿ ಎಸ್ ಎಸ್ ಎಲ್ ಸಿ ಯ ಫಲಿತಾಂಶ ಕುಸಿಯುತ್ತಿರುವುದಕ್ಕೆ ತಾವು ಹೊಣೆಗಾರರಾಗುವುದಾಗಿ ಹೇಳಿದ ಸಚಿವರು, ಶೈಕ್ಷಣಿಕ ಗುಣಮಟ್ಟ ಅಭಿವೃದ್ದಿ ಪಡಿಸುವ ನಿಟ್ಟಿನಲ್ಲಿ ನೀಲ ನಕ್ಷೆ ತಯಾರಿಸಲಾಗುತ್ತಿದ್ದು ಬೆಂಗಳೂರು ಮೂಲದ ಎರಡು ಎನ್ ಜಿ ಓ ಗಳೊಂದಿಗೆ ಈಗಾಗಲೇ ಚರ್ಚೆ ನಡೆಸಲಾಗಿದೆ. ಇದರ ಫಲಿತಾಂಶ ಮುಂದಿನ ಮಾರ್ಚ್ ತಿಂಗಳಲ್ಲಿ ಗೊತ್ತಾಗಲಿದೆ ಎಂದರು.
ಬೆಳೆ ವಿಮೆ ಉತ್ತೇಜನಕ್ಕೆ ಅಗತ್ಯ ಕ್ರಮವಹಿಸಿ:
ಮುಂಗಾರು ಆರಂಭದಲ್ಲಿಯೇ ರಾಜ್ಯದ ರೈತರಿಗೆ ಬೆಳೆ ವಿಮೆಮ ಅಗತ್ಯ ಹಾಗೂ ಅನುಕೂಲತೆಗಳ ಬಗ್ಗೆ ಮನವರಿಕೆ ಮಾಡಿಕೊಡಬೇಕು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಸೂಚಿಸಿದರು.
ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಕಲಬುರಗಿ ನಗರದ ಕೃಷಿ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ 2025-26 ರ ಸಾಲಿನ ಮುಂಗಾರು ಹಂಗಾಮಿನ ಪೂರ್ವಸಿದ್ದತೆ ಕಾರ್ಯಾಗಾರದ ಉದ್ಘಾಟನೆ ಯನ್ನು ನೆರವೇರಿಸಿದರು.ಇದಕ್ಕೂ ಮುನ್ನ, ಇಲಾಖೆಯ ಅಡಿಯಲ್ಲಿ ಆಯೋಜಿಸಲಾಗಿದ್ದ ಕೃಷಿ ಅಭಿಯಾನ ಉದ್ಘಾಟಿಸಿದರು.
ನಂತರ ಮಾತನಾಡಿದ ಸಚಿವರು,ಬೆಳೆ ವಿಮೆ ಹೆಚ್ಚಿಸುವ ನಿಟ್ಟಿನಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳು ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸಿ ರೈತರಿಗೆ ಬೆಳೆ ವಿಮೆಮ ಅಗತ್ಯ ಹಾಗೂ ಅನುಕೂಲತೆಗಳ ಬಗ್ಗೆ ಮನವರಿಕೆ ಮಾಡಿಕೊಡಬೇಕು ಎಂದು ಸೂಚಿಸಿದರು.